ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಆನ್‌ಲೈನ್ ಮತದಾರರ ನೋಂದಣಿ ‘ಫಾರ್ಮ್ 6’ ರಲ್ಲಿದ್ದ ಹೆಚ್ಚುವರಿ ಎಸ್‌ಐಆರ್-ಸಂಬಂಧಿತ ಸ್ವಯಂಘೋಷಣಾ ಪತ್ರವನ್ನು ಚುನಾವಣಾ ಆಯೋಗವು ಹಿಂಪಡೆದಿದೆ. ಈ ನಿಯಮವು ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಚುನಾವಣಾ ಆಯೋಗ ತೀರ್ಮಾನಿಸಿದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹೊಸ ಸ್ವಘೋಷಣಾ ಪತ್ರದಲ್ಲಿ, ಹೊಸದಾಗಿ ಅರ್ಜಿ ಸಲ್ಲಿಸುವ ಮತದಾರರು ತಮ್ಮನ್ನು ಅಥವಾ ತಮ್ಮ ಪೋಷಕರನ್ನು/ಅಜ್ಜ-ಅಜ್ಜಿಯಂದಿರನ್ನು ಹಿಂದಿನ ತೀವ್ರ ಪರಿಷ್ಕರಣೆಯ ಸಮಯದಲ್ಲಿ ತಯಾರಿಸಲಾದ ಮತದಾರರ ಪಟ್ಟಿಗೆ ಲಿಂಕ್ ಮಾಡುವ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿತ್ತು. ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪತ್ರವು ಆಯೋಗದ ಇಸಿಐನೆಟ್ ಪೋರ್ಟಲ್‌ನಲ್ಲಿ ಇಂದಿಗೂ ಲಭ್ಯವಿದೆ.
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಈ ಹೆಚ್ಚುವರಿ ಸ್ವಘೋಷಣಾ ಪತ್ರವನ್ನು ಇಸಿಐನೆಟ್ ಆ್ಯಪ್ ಮತ್ತು ಪೋರ್ಟಲ್‌ನಿಂದ ಹಾಗೂ ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಪೋರ್ಟಲ್‌ಗಳಿಂದ ತೆಗೆದುಹಾಕಲಾಗಿದೆ. ಪರಿಣಾಮವಾಗಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಯಸುವ ಅರ್ಜಿದಾರರು ಈಗ ‘ಎಲೆಕ್ಟರ್ಸ್ ರೂಲ್ಸ್, 1960’ ರ ಅಡಿಯಲ್ಲಿ ನಿಗದಿಪಡಿಸಲಾದ ಶಾಸನಬದ್ಧ ‘ಫಾರ್ಮ್ 6’ ಅನ್ನು ಮಾತ್ರ ಭರ್ತಿ ಮಾಡಿದರೆ ಸಾಕಾಗುತ್ತದೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರನ್ನೊಳಗೊಂಡ ಪೂರ್ಣ ಪ್ರಮಾಣದ ಆಯೋಗವು ಸೆಪ್ಟೆಂಬರ್ 26 ರಂದು ನಡೆಸಿದ ಸಭೆಯ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆಯ ನಂತರ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಫಾರ್ಮ್ 6 ರ ಜೊತೆ ಲಗತ್ತಿಸಲಾದ ಸ್ವಘೋಷಣಾ ಪತ್ರವು ಎಸ್‌ಐಆರ್ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿದ್ದು, “ಎಸ್‌ಐಆರ್ ಅಲ್ಲದ ಅವಧಿಯಲ್ಲಿ ನಿಯಮಗಳ ಪ್ರಕಾರ (ಎಲೆಕ್ಟರ್ಸ್ ರೂಲ್ಸ್, 1960) ಅನ್ವಯವಾಗುವ ಫಾರ್ಮ್‌ಗಳನ್ನೇ ಬಳಸಲಾಗುತ್ತದೆ” ಎಂದು ಸ್ಪಷ್ಟಪಡಿಸಿತ್ತು.
ಫಾರ್ಮ್ 6 ರಲ್ಲಿ ಮಾಡಲಾದ ಮಾರ್ಪಾಡುಗಳ ಕುರಿತು ಆಯುಕ್ತರಾದ ಸಂಧು ಮತ್ತು ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರೆಂಬ ವಿಷಯ ಹೊರಬಿದ್ದ ನಂತರ ಈ ವಿಚಾರವು ವಿವಾದಕ್ಕೆ ಕಾರಣವಾಗಿತ್ತು.
ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಸಲ್ಲಿಸುವ ಶಾಸನಬದ್ಧ ಅರ್ಜಿಯೇ ಫಾರ್ಮ್ 6. ನಿಯಮಗಳನ್ನು ತಿದ್ದುಪಡಿ ಮಾಡದೆ ‘ಎಲೆಕ್ಟರ್ಸ್ ರೂಲ್ಸ್, 1960’ ರ ಅಡಿಯಲ್ಲಿ ನಿಗದಿಪಡಿಸಲಾದ ಫಾರ್ಮ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಆಧಾರದ ಮೇಲೆ ಜೋಶಿ ಅವರು ಈ ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಧು ಅವರು ಕೂಡ ಜೋಶಿ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದರು.
ಇಸಿಐನೆಟ್‌ನಲ್ಲಿ ಆನ್‌ಲೈನ್ ಫಾರ್ಮ್ 6 ಪ್ರಕ್ರಿಯೆಯಲ್ಲಿ ಎಸ್‌ಐಆರ್ ಸಂಬಂಧಿತ ಸ್ವಘೋಷಣಾ ಪತ್ರವನ್ನು ಸೇರಿಸಿದ ನಂತರವೂ ಸಂಧು ಅವರು ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿ, ಈ ಬದಲಾವಣೆಯು “ಅನಧಿಕೃತ/ಅಕ್ರಮ” ಎಂದು ಹೇಳಿ, ಈ ನಿಯಮ ತೆಗೆದುಹಾಕುವಂತೆ ಆಗ್ರಹಿಸಿದ್ದರು.
ಆದರೆ ಸಾರ್ವಜನಿಕ ಪ್ರಕಟಣೆಗಳಲ್ಲಿ ಚುನಾವಣಾ ಆಯೋಗವು ಫಾರ್ಮ್ 6 ಅನ್ನು ತಿದ್ದುಪಡಿ ಮಾಡಲಾಗಿಲ್ಲ, ಬದಲಿಗೆ ಸ್ವಘೋಷಣಾ ಪತ್ರವು ಎಸ್‌ಐಆರ್‌ಗೆ ಮಾತ್ರ ಸಂಬಂಧಿಸಿದ ಹೆಚ್ಚುವರಿ ಅಗತ್ಯತೆಯಾಗಿತ್ತು ಎಂದು ಪ್ರತಿಪಾದಿಸಿದೆ. ಅಲ್ಲದೆ, ಬಿಹಾರ ಎಸ್‌ಐಆರ್ ಕುರಿತ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕೂಡ ಈ ಸ್ವಘೋಷಣಾ ಪತ್ರವನ್ನು ಎತ್ತಿಹಿಡಿದಿತ್ತು ಎಂದೂ ಸ್ಪಷ್ಟಪಡಿಸಿದೆ.
ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳು ತಮ್ಮ ಗಮನಕ್ಕೆ ತರದೆ ಅಥವಾ ಶಿಫಾರಸು ಇಲ್ಲದೆ ಹೊರಡಿಸಲಾಗಿದೆ ಎಂದು ಕಳೆದ 10 ತಿಂಗಳುಗಳಲ್ಲಿ ಸಂಧು ಮತ್ತು ಜೋಶಿ ಅವರು ಕನಿಷ್ಠ 14 ಬಾರಿ ಅಧಿಕೃತ ದಾಖಲೆಗಳಲ್ಲಿ ಆಕ್ಷೇಪಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದ ನಂತರ ಸೆಪ್ಟೆಂಬರ್ 26 ರ ಈ ನಿರ್ಧಾರಗಳು ಹೊರಬಿದ್ದಿವೆ.
ಸೆಪ್ಟೆಂಬರ್ 26 ರಂದು ನೀಡಿದ ಹೇಳಿಕೆಯಲ್ಲಿ, ಎಸ್‌ಐಆರ್‌ಗೆ ಸಂಬಂಧಿಸಿದ ಆದೇಶಗಳು ಮೂವರೂ ಚುನಾವಣಾ ಆಯುಕ್ತರ ಸರ್ವಾನುಮತದ ಒಪ್ಪಿಗೆಯನ್ನು ಹೊಂದಿವೆ ಎಂದು ಆಯೋಗವು ಸಮರ್ಥಿಸಿಕೊಂಡಿದೆ.


