ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ASA), ದಲಿತ ಸ್ಟೂಡೆಂಟ್ಸ್ ಯೂನಿಯನ್ (DSU), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಟ್ರೈಬಲ್ ಸ್ಟೂಡೆಂಟ್ಸ್ ಫೋರಂ (TSF) ಒಳಗೊಂಡ ಮೈತ್ರಿಕೂಟದ ಅಭ್ಯರ್ಥಿಯಾದ ದಿಲ್ಶಾದಾ ರೈಹಾನ್ ಅವರು 2026ರ ಸಾಲಿನ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಎಸ್‌ಎಫ್‌ಐ ನಾಯಕಿ ದಿಲ್ಶಾದಾ ರೈಹಾನ್ ಅವರ ಈ ಅದ್ಭುತ ಜಯವು ಮುಸ್ಲಿಂ ಹೆಣ್ಣು ಮಗಳು ವಿದ್ಯಾರ್ಥಿ ಸಂಘದ ನೇತೃತ್ವ ವಹಿಸುವಂತೆ ಮಾಡಿದೆ.
ಎಡ ವಿದ್ಯಾರ್ಥಿ ಸಂಘಗಳ ಮೈತ್ರಿಕೂಟವು ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನೂ ಗೆದ್ದುಕೊಂಡಿದೆ. ಟಿಎಸ್‌ಎಫ್‌ನ ಕೊರ್ರಾ ನಿತಿನ್ ಚೌಹಾಣ್ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಎಎಸ್‌ಎಯ ಪ್ರತೀಕ್ ಸಾಗರ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಗೆದ್ದುಕೊಂಡಿದ್ದಾರೆ.
ನರೇಶ್ ಪೋಡಿಶೆಟ್ಟಿ ಅವರು ಎಬಿವಿಪಿ-ಸೇವಲಾಲ್ ವಿದ್ಯಾರ್ಥಿ ದಳದ ಪ್ಯಾನಲ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI), ಫ್ರಟರ್ನಿಟಿ ಮೂವ್‌ಮೆಂಟ್, ಮುಸ್ಲಿಂ ಸ್ಟೂಡೆಂಟ್ಸ್ ಫ್ರಂಟ್ (MSF) ಮತ್ತು ಪ್ರೋಗ್ರೆಸಿವ್ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ (PDSU) ಒಳಗೊಂಡ ಮೈತ್ರಿಕೂಟದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕೆ. ನವೀನ್ ಕುಮಾರ್ ಕಣದಲ್ಲಿದ್ದರು.
ಮೂರು ಮೈತ್ರಿ ಪ್ಯಾನೆಲ್‌ಗಳ ಅಡಿಯಲ್ಲಿ ಪ್ರತೀಕ್ ಸಾಗರ್ ವಿರುದ್ಧ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮುಹಮ್ಮದ್ ಅಫ್ಲಾಹ್ ಕೆ.ಕೆ. ಮತ್ತು ವೆನಿಸಾ ಚೌಧರಿ ಕೂಡ ಸ್ಪರ್ಧಿಸಿದ್ದರು.
AISA–ASA–DSU–SFI–TSF ಮೈತ್ರಿ ಪ್ಯಾನೆಲ್‌ನಿಂದ ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ನ (AISA) ಸಿದ್ಧಾಂತ್ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಗೆದ್ದುಕೊಂಡಿದ್ದಾರೆ.


