ಜೆಡಿಯು ನಾಯಕ ನಿತೀಶ್ ಕುಮಾರ್ 2024ರಲ್ಲಿ ‘ಇಂಡಿಯಾ’ (INDIA) ಮೈತ್ರಿಕೂಟದಿಂದ ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಂತರಿಕ ಸಭೆಯಲ್ಲಿ ನಾಯಕರ ನಡುವೆ ಗಂಭೀರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ನಡುವೆ ಈ ವಿಚಾರವಾಗಿ ತೀವ್ರ ವಾಕ್ಸಮರ ನಡೆದಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
CWC ಸಭೆಯಲ್ಲಿ ನಿತೀಶ್ ಕುಮಾರ್ ರಾಜಕೀಯ ಚರ್ಚೆ
ಕಾಂಗ್ರೆಸ್ ಪಕ್ಷದ ಭವಿಷ್ಯದ ರಾಜಕೀಯ ಕಾರ್ಯತಂತ್ರ, ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಅಕ್ರಮಗಳ ಆರೋಪ ಹಾಗೂ ಕೇಂದ್ರ ಸರ್ಕಾರದ ವಿರುದ್ಧದ ಸಂಘರ್ಷದ ಕುರಿತು ಚರ್ಚಿಸಲು ಸಿಡಬ್ಲ್ಯುಸಿ ಸಭೆ ಕರೆಯಲಾಗಿತ್ತು. ಈ ವೇಳೆ ವಿಷಯ ಪ್ರಸ್ತಾಪಿಸಿದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, “ನಾವು ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದಿಂದ ಹೊರಹೋಗಲು ಬಿಡಬಾರದಿತ್ತು. ಅವರು ನಮ್ಮ ಜೊತೆಯಲ್ಲೇ ಉಳಿದುಕೊಂಡಿದ್ದರೆ ಇಂದಿನ ರಾಜಕೀಯ ಚಿತ್ರಣವೇ ಬೇರೆಯಾಗಿರುತ್ತಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇವರ ದಯೆಯಿಂದ ಸರಿಯಾದ ಸಮಯಕ್ಕೆ ತೊಲಗಿದರು: ಸೋನಿಯಾ
ದಿಗ್ವಿಜಯ್ ಸಿಂಗ್ ಹೇಳಿಕೆಗೆ ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, “ದೇವರ ದಯೆಯಿಂದ ನಿತೀಶ್ ಕುಮಾರ್ ಸರಿಯಾದ ಸಮಯಕ್ಕೇ ಮೈತ್ರಿಕೂಟದಿಂದ ಹೊರನಡೆದರು. ಅವರು ಮೊದಲಿನಿಂದಲೂ ಬಿಜೆಪಿಯತ್ತಲೇ ಹೋಗಲು ಬಯಸಿದ್ದರು. ಮೈತ್ರಿಕೂಟದಿಂದ ಹೊರಬರಲು ಅವರು ನಿರಂತರವಾಗಿ ಹೊಸ ನೆಪ ಮತ್ತು ಮಾರ್ಗಗಳನ್ನು ಹುಡುಕುತ್ತಿದ್ದರು ಹಾಗೂ ಅವರನ್ನು ಹಿಂದಿನಿಂದ ಬಿಜೆಪಿ ಸಂಪೂರ್ಣವಾಗಿ ನಿಯಂತ್ರಿಸುತ್ತಿತ್ತು” ಎಂದು ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಡೆಯಲಿರುವ ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ನಾಯಕರ ಸಭೆಗೆ ಮುನ್ನವೇ ಕಾಂಗ್ರೆಸ್‌ನ ಈ ಉನ್ನತ ಮಟ್ಟದ ಸಭೆಯಲ್ಲಿ ನಾಯಕರ ಅಭಿಪ್ರಾಯ ಭೇದಗಳು ಬಹಿರಂಗವಾಗಿವೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಜನವರಿ 2024ರಲ್ಲಿ ಮಹಾಘಟಬಂಧನ್ ಮೈತ್ರಿ ಬಿಟ್ಟು ಹೊರಬಂದಿದ್ದ ನಿತೀಶ್ ಕುಮಾರ್, ಬಿಜೆಪಿ ಬೆಂಬಲದೊಂದಿಗೆ 9ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.


