ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಯಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ (HCU) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಭಾರಿ ಹಿನ್ನಡೆಯಾಗಿದೆ. ಎಡಪಂಥೀಯ ಹಾಗೂ ದಲಿತ-ಬಹುಜನ ವಿದ್ಯಾರ್ಥಿ ಸಂಘಟನೆಗಳನ್ನೊಳಗೊಂಡ ಐಸಾ-ಎಎಸ್ಎ-ಡಿಎಸ್ಯು-ಎಸ್ಎಫ್ಐ-ಟಿಎಸ್ಎಫ್ (AISA-ASA-DSU-SFI-TSF) ಮೈತ್ರಿಕೂಟವು ಎಲ್ಲಾ ಪ್ರಮುಖ ಹುದ್ದೆಗಳನ್ನು ಭರ್ಜರಿಯಾಗಿ ಗೆದ್ದುಕೊಳ್ಳುವ ಮೂಲಕ ಎಬಿವಿಪಿಯಿಂದ (ABVP) ವಿದ್ಯಾರ್ಥಿ ಸಂಘದ ಅಧಿಕಾರವನ್ನು ಮರಳಿ ಕಸಿದುಕೊಂಡಿದೆ.
ಮೈತ್ರಿಕೂಟದ ಅಧ್ಯಕ್ಷ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್ಎಫ್ಐ (SFI) ನಾಯಕಿ ದಿಲ್ಶಾದಾ ರೈಹಾನ್ ಅವರು 2026ನೇ ಸಾಲಿನ ಹೈದರಾಬಾದ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷೆಯಾಗಿ ಭರ್ಜರಿ ಜಯಗಳಿಸಿದ್ದಾರೆ. ಎಬಿವಿಪಿ–ಸೇವಲಾಲ್ ವಿದ್ಯಾರ್ಥಿ ದಳ ಮೈತ್ರಿಕೂಟದ ನರೇಶ್ ಪೊಡಿಶೆಟ್ಟಿ ಹಾಗೂ ಎನ್ಎಸ್ಯುಐ-ಫ್ರಟರ್ನಿಟಿ ಮೂವ್ಮೆಂಟ್ ಮೈತ್ರಿಕೂಟದ ಕೆ. ನವೀನ್ ಕುಮಾರ್ ಅವರನ್ನು ಧೂಳಿಪಟ ಮಾಡುವ ಮೂಲಕ ದಿಲ್ಶಾದಾ ರೈಹಾನ್ ಗೆಲುವಿನ ಪತಾಕೆ ಹಾರಿಸಿದ್ದಾರೆ.
ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ ವಿದ್ಯಾರ್ಥಿ ಒಕ್ಕೂಟದ ಇತರ ಎಲ್ಲಾ ಪ್ರಮುಖ ಸ್ಥಾನಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳೇ ವಿಜಯಭೇರಿ ಬಾರಿಸಿದ್ದಾರೆ. ಟಿಎಸ್ಎಫ್ (TSF) ಸಂಘಟನೆಯ ಕೊರ್ರಾ ನಿತಿನ್ ಚೌಹಾಣ್ ಉಪಾಧ್ಯಕ್ಷರಾಗಿ, ಎಎಸ್ಎ (ASA) ಸಂಘಟನೆಯ ಪ್ರತೀಕ್ ಸಾಗರ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಜಂಟಿ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಐಸಾ (AISA) ಸಂಘಟನೆಯ ಸಿದ್ಧಾಂತ್ ಅವರು ಗೆಲುವು ಸಾಧಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಎಸ್ಎ ನಾಯಕ ಪ್ರತೀಕ್ ಸಾಗರ್ ಅವರು ಎದುರಾಳಿ ಮೈತ್ರಿಕೂಟಗಳ ಮುಹಮ್ಮದ್ ಅಫ್ಲಾಹ್ ಕೆ.ಕೆ. ಮತ್ತು ವೆನಿಸಾ ಚೌಧರಿ ಅವರನ್ನು ಹಿಮ್ಮೆಟ್ಟಿಸಿ ಜಯಗಳಿಸಿದ್ದಾರೆ. ಈ ಮೂಲಕ ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಎಡ, ದಲಿತ, ಬಹುಜನ ಮತ್ತು ಪ್ರಗತಿಪರ ವಿದ್ಯಾರ್ಥಿ ಶಕ್ತಿಗಳ ಒಗ್ಗಟ್ಟು ಮತ್ತೊಮ್ಮೆ ತನ್ನ ಪಾರಮ್ಯ ಮೆರೆದಿದೆ.


