ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
ಹೈಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು:
ರಾಜ್ಯ ಸಚಿವ ಸಂಪುಟದ ಸಲಹೆ ಮತ್ತು ಶಿಫಾರಸು ಇಲ್ಲದೆ ರಾಜ್ಯಪಾಲರು ಸಂವಿಧಾನದ 317(2)ನೇ ವಿಧಿಯಡಿ ಸಾಹುಕಾರ್ ಅವರನ್ನು ಅಮಾನತುಗೊಳಿಸಿದ್ದರು. ಹೀಗಾಗಿ 2026ರ ಜನವರಿ 10ರಂದು ಹೊರಡಿಸಲಾಗಿದ್ದ ಅಮಾನತು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಆದೇಶದ ಪ್ರತಿ ಸಿಕ್ಕ 7 ದಿನಗಳ ಒಳಗಾಗಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಮತ್ತೆ ಕೆಪಿಎಸ್ಸಿ ಅಧ್ಯಕ್ಷ ಹುದ್ದೆಗೆ ಮರುನಿಯೋಜಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಹುದ್ದೆ ಮರುಸ್ಥಾಪನೆಯಾದ ನಂತರ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅರ್ಹರಾಗಿದ್ದು, ಅಮಾನತು ಅವಧಿಯ ಎಲ್ಲಾ ಪೂರಕ ಸೇವಾ ಮತ್ತು ಆರ್ಥಿಕ ಸೌಲಭ್ಯಗಳನ್ನು ಪಡೆಯಲಿದ್ದಾರೆ.
ಇದೇ ವೇಳೆ, ತಮ್ಮ ಪುತ್ರಿಯರ ವಿರುದ್ಧ ಆಯೋಗ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಅಥವಾ ಪ್ರಭಾವ ಬೀರಬಾರದು ಎಂದು ಸಾಹುಕಾರ್ ಅವರಿಗೆ ನ್ಯಾಯಪೀಠ ಕಟ್ಟುನಿಟ್ಟಿನ ಷರತ್ತು ವಿಧಿಸಿದೆ.
ಹೈಕೋರ್ಟ್ನ ಈ ತೀರ್ಪು ಕೇವಲ ಅಮಾನತು ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸಿದೆಯೇ ಹೊರತು ಆರೋಪಗಳ ಸತ್ಯಾಸತ್ಯತೆಯನ್ನಲ್ಲ. ಆದ್ದರಿಂದ ಸರ್ಕಾರ ಬಯಸಿದರೆ ಸಂವಿಧಾನದ ನಿಯಮಾವಳಿಗಳ ಪ್ರಕಾರ, ಸಚಿವ ಸಂಪುಟದ ಸಲಹೆ ಪಡೆದು ಹೊಸದಾಗಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಲಾಗಿದೆ.
ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಇಬ್ಬರು ಪುತ್ರಿಯರ ನೇಮಕಾತಿ/ಆಯ್ಕೆ ಪ್ರಕ್ರಿಯೆಯಲ್ಲಿ ಕೆಪಿಎಸ್ಸಿ ಮೇಲೆ ಪ್ರಭಾವ ಬೀರಿದ್ದಾರೆ ಮತ್ತು ಸ್ವಜನಪಕ್ಷಪಾತ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.


