ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಹೆಸರಿನಲ್ಲಿ 6 ನಕಲಿ ಸರ್ಕಾರಿ ಕಚೇರಿಗಳನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನು ಲೂಟಿ ಮಾಡಿರುವುದು ಪತ್ತೆಯಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) 22.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ವರದಿಗಳ ಪ್ರಕಾರ, ಆರೋಪಿಗಳು ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ನಕಲಿ ಸಹಿ, ಸೀಲ್ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ದಾಹೋದ್ ಜಿಲ್ಲೆಯಲ್ಲಿ 6 ಕಚೇರಿಗಳನ್ನು ತೆರೆದಿದ್ದರು.
ಈ ನಕಲಿ ಕಚೇರಿಗಳ ಮೂಲಕ ಸುಮಾರು 121 ಕಾಮಗಾರಿಗಳಿಗೆ ಕಾನೂನು ಬಾಹಿರ ಮಂಜೂರಾತಿ ಪಡೆದು, ಸರ್ಕಾರದಿಂದ ಬರುವ ಅನುದಾನ ಮತ್ತು ಗ್ರಾಂಟ್‌ಗಳನ್ನು ಅಕ್ರಮವಾಗಿ ವಂಚಿಸಿ ಪಡೆದಿದ್ದಾರೆ.
ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ಮೊದಲು ನಕಲಿ ಕಚೇರಿಗಳ ಹೆಸರಿನಲ್ಲಿದ್ದ 9 ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿತ್ತು. ನಂತರ ಅದನ್ನು 18 ಮಧ್ಯವರ್ತಿ ಖಾತೆಗಳ ಮೂಲಕ ಇತರ 118 ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಲಾಗಿತ್ತು.
ಪ್ರಕರಣ ಮುಖ್ಯ ಆರೋಪಿ ಅಬೂಬಕರ್ ಝಾಕಿರ್ ಅಲೀ ಸೈಯದ್ ಮತ್ತು ಆತನ ಸಹಚರರಿಗೆ ಸೇರಿದ 7 ಜಮೀನುಗಳು, ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ 22.70 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ.
ಈ ಬೃಹತ್ ಹಗರಣದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಕೂಡ ಭಾಗಿಯಾಗಿದ್ದು, ಈ ಹಿಂದೆ ನಕಲಿ ಪ್ರಸ್ತಾವನೆಗಳನ್ನು ಅನುಮೋದಿಸಿದ್ದಕ್ಕಾಗಿ ಸರ್ದಾರ್ ಪಟೇಲ್ ಸಾರ್ವಜನಿಕ ಆಡಳಿತ ಸಂಸ್ಥೆ (ಎಸ್‌ಪಿಐಪಿಎ) ಉಪ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದರು.


