ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದಲಿತ ಸಮುದಾಯದ ಇಬ್ಬರಿಗೆ ಜಾತಿ ನಿಂದನೆ ಮಾಡಿದ್ದು, ಅವರು ಕುಳಿತಿದ್ದ ಕುರ್ಚಿಗಳನ್ನು ಖಾಲಿ ಮಾಡಿಸಿ ನೆಲದ ಮೇಲೆ ಕೂರಿಸಿದ್ದಾರೆ. ಈ ಬಗ್ಗೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 15 ರಂದು ಬಾಗೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಭಕ್ಲಿಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಭಕ್ಲಿಯಾ ಗ್ರಾಮದ ನಿವಾಸಿಗಳಾದ ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರಾದ ರಾಮೇಶ್ವರಲಾಲ್ ಬೈರ್ವಾ ಮತ್ತು ಗೋಪಿಲಾಲ್ ಬೈರ್ವಾ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್ ಪ್ರಕಾರ, ದೂರುದಾರರು ಗ್ರಾಮದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಸಮುದಾಯದ ಇತರ ಸದಸ್ಯರೊಂದಿಗೆ ಕುರ್ಚಿಗಳ ಮೇಲೆ ಕುಳಿತಿದ್ದಾಗ ಪ್ರಬಲ ಜಾತಿಗೆ ಸೇರಿದ ಐವರು ಜಾತಿ ಆಧಾರಿತ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಪರಿಶಿಷ್ಟ ವ್ಯಕ್ತಿಗಳು ಕುರ್ಚಿ ಮೇಲೆ ಕುಳಿತುಕೊಳ್ಳುವುದನ್ನು ವಿರೋಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರೋಪಿಗಳಾದ ಬಾಲು ವೈಷ್ಣವ್, ಹೀರಾಲಾಲ್ ಶರ್ಮಾ, ನಾರಾಯಣ್ ಜಾಟ್, ರಾಮೇಶ್ವರ್ ಜಾಟ್ ಮತ್ತು ಪ್ರಕಾಶ್ ಜಾಟ್, ಇವರೆಲ್ಲರೂ ಭಕ್ಲಿಯಾ ಗ್ರಾಮದ ನಿವಾಸಿಗಳಾಗಿದ್ದಾರೆ.
ಆರೋಪಿಗಳು ನಮ್ಮನ್ನು ನೆಲದ ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಿಸಿದರು. ನಮ್ಮ ಪಕ್ಕದಲ್ಲಿ ನೀವು ಕುರ್ಚಿ ಮೇಲೆ ಹೇಗೆ ಕುಳಿತುಕೊಳ್ಳಬಹುದು ಎಂದು ಪ್ರಶ್ನಿಸಿದರು ಎಂದು ದೂರುದಾರರು ಆರೋಪಿಸಿದ್ದಾರೆ. ದೂರುದಾರರು ಕುರ್ಚಿಗಳನ್ನು ಖಾಲಿ ಮಾಡಲು ನಿರಾಕರಿಸಿದಾಗ, ಆರೋಪಿಗಳು ಅವರನ್ನು ಬೆದರಿಸಿ ಬಲವಂತವಾಗಿ ಕುರ್ಚಿಗಳಿಂದ ಕೆಳಗಿಳಿಸಿದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಶಾಲಾ ಮಕ್ಕಳು, ಶಿಕ್ಷಕರು ಮತ್ತು ಇತರ ಗ್ರಾಮಸ್ಥರ ಸಮ್ಮುಖದಲ್ಲಿ ಈ ಘಟನೆ ಸಂಭವಿಸಿದ್ದು, ನಮಗೆ ಅವಮಾನ ಮತ್ತು ಮಾನಸಿಕ ತೊಂದರೆ ಉಂಟುಮಾಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯದ ಇಬ್ಬರು ಮಹಿಳೆಯರು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯಾಗಿ ಕೆಲಸ ಮಾಡುತ್ತಿರುವುದರಿಂದ ಸ್ಥಳೀಯ ಅಂಗನವಾಡಿ ಕೇಂದ್ರವನ್ನು ಮುಚ್ಚಲಾಗುವುದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತಾ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಉಪ ವರಿಷ್ಠಾಧಿಕಾರಿ ರಾಹುಲ್ ಜೋಶಿ ಅವರಿಗೆ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


