ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ನಕಲಿ ಔಷಧ ತಯಾರಿಕೆ ಹಾಗೂ ವಿತರಣೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಈ ಅಕ್ರಮ ಜಾಲವು ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ಐದು ರಾಜ್ಯಗಳಿಗೂ ಹರಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನ್ನೈ ಹಾಗೂ ಆಂಧ್ರಪ್ರದೇಶಗಳಲ್ಲಿ ಸಕ್ರಿಯವಾಗಿರುವ ಔಷಧ ಕಂಪನಿಗಳು ಹಾಗೂ ವಿತರಣಾ ಜಾಲದ ಕುರಿತು ತನಿಖಾಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.
ಅಂತರರಾಜ್ಯ ಮಟ್ಟದಲ್ಲಿ ವ್ಯಾಪಿಸಿರುವ ಈ ಜಾಲವನ್ನು ಭೇದಿಸಲು ಡ್ರಗ್ ಕಂಟ್ರೋಲ್ ಇಲಾಖೆಯಿಂದ ಐದು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಸಂಬಂಧಪಟ್ಟ ರಾಜ್ಯಗಳಿಗೆ ತೆರಳಿ ಅಲ್ಲಿನ ಔಷಧ ಉತ್ಪಾದನಾ ಕಂಪನಿಗಳು, ಪ್ಯಾಕಿಂಗ್ ಘಟಕಗಳು ಹಾಗೂ ಪೂರೈಕೆ ವ್ಯವಸ್ಥೆಯ ಕುರಿತು ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ದಾಖಲೆಗಳು ಮತ್ತು ಔಷಧ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಲಿವೆ.
ತನಿಖೆಯ ವೇಳೆ ಜಪ್ತಿ ಮಾಡಲಾದ ನಕಲಿ ಔಷಧಗಳ ಮೇಲೆ ಪ್ರಸಿದ್ಧ ಕಂಪನಿಗಳ ಹೆಸರಿನ ಲೇಬಲ್‌ಗಳು ಇರುವುದು ಕಂಡುಬಂದಿದೆ. ಈ ಲೇಬಲ್‌ಗಳನ್ನು ಕಂಪನಿಗಳ ಅಧಿಕೃತ ಅನುಮತಿ ಪಡೆದು ಬಳಸಲಾಗಿದೆಯೇ ಅಥವಾ ಅಕ್ರಮವಾಗಿ ನಕಲು (ಡುಪ್ಲಿಕೇಟ್) ಮಾಡಲಾಗಿದೆಯೇ ಎಂಬುದನ್ನು ತಿಳಿಯಲು ಇಲಾಖೆ ಮುಂದಾಗಿದೆ. ಈ ಐದೂ ರಾಜ್ಯಗಳಲ್ಲಿರುವ ಸಂಬಂಧಿತ ಔಷಧ ಕಂಪನಿಗಳಿಗೆ ನೋಟಿಸ್ ನೀಡಿ, ಕಂಪನಿಗಳ ಅಧಿಕೃತ ಲೆಟರ್‌ಹೆಡ್ ಹಾಗೂ ದಾಖಲೆಗಳ ಮೂಲಕ ಸ್ಪಷ್ಟನೆ ಪಡೆಯಲು ಸಿದ್ಧತೆ ನಡೆಸಲಾಗಿದೆ.
ಸಂಸ್ಥೆಗಳ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡು ಅನಧಿಕೃತವಾಗಿ ನಕಲಿ ಮಾತ್ರೆ ಹಾಗೂ ಔಷಧಗಳನ್ನು ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅಕ್ರಮ ಪ್ಯಾಕಿಂಗ್ ಹಾಗೂ ಲೇಬಲಿಂಗ್ ದಂಧೆಯ ಆಳ-ಅಗಲವನ್ನು ಭೇದಿಸುವುದು ತನಿಖೆಯ ಮುಖ್ಯ ಉದ್ದೇಶವಾಗಿದೆ. ತನಿಖಾ ತಂಡಗಳು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಈ ದಂಧೆಯ ಹಿಂದಿರುವ ಮುಖ್ಯ ರೂವಾರಿಗಳು ಹಾಗೂ ಕಪ್ಪುಮಾರುಕಟ್ಟೆಯ ಜಾಲ ಶೀಘ್ರದಲ್ಲೇ ಬಯಲಾಗುವ ಸಾಧ್ಯತೆಯಿದೆ.


