ಮಂಗಳೂರಿನ ಟೌನ್ ಹಾಲ್ ಸಮೀಪ ನಡೆಯುವ ಸಂಡೇ ಬಜಾರ್‌ನಲ್ಲಿ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಇತರ ಪದಾಧಿಕಾರಿಗಳು ಪ್ರಶ್ನಿಸಿದ್ದರು.
ಈ ವೇಳೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪಾಲಿಕೆಯ ವಲಯ ಆಯುಕ್ತರು (ಪ್ರಭಾರ) ಭಾರತಿ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ, ಸಂಘದ ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕ್ರಿಮಿನಲ್ ನಡಾವಳಿಗೆ ತಡೆಯಾಜ್ಞೆ ಕೋರಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಬಾಲನ್ ಮತ್ತು ವಕೀಲೆ ರಕ್ಷಿತಾ ಸಿಂಗ್ ಅವರ ಮುಖ್ಯ ಅಂಶಗಳು:
ಮಹಾನಗರ ಪಾಲಿಕೆಯು ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ಹಾಗೂ ವಿಚಾರಣೆಗೆ ಅವಕಾಶ ಕಲ್ಪಿಸದೆ ಧ್ವಂಸ ಕಾರ್ಯಾಚರಣೆ ನಡೆಸಿದೆ. ಇದು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ.
ಅಧಿಕಾರಿಗಳು ಸುಪ್ರೀಂ ಕೋರ್ಟ್‌ನ Maniyar Iliyaz v. P. Ayyappan ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆ ತೀರ್ಪು ಪಾದಚಾರಿಗಳಿಗೆ ಸೂಕ್ತ ಮೂಲಸೌಕರ್ಯ ಒದಗಿಸುವುದಕ್ಕೆ ಸಂಬಂಧಿಸಿದೆಯೇ ಹೊರತು, ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಅಥವಾ 2014ರ ಕಾಯ್ದೆಯಿಂದ ವಿನಾಯಿತಿ ಪಡೆಯಲು ಅವಕಾಶ ನೀಡುವುದಿಲ್ಲ.
ಘಟನೆಯ ವೀಡಿಯೋದಲ್ಲಿ ಇಮ್ತಿಯಾಝ್ ಅವರು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸುವಂತೆ ಮನವಿ ಮಾಡುತ್ತಿರುವುದು ಸ್ಪಷ್ಟವಾಗಿದೆ. ಯಾವುದೇ ಹಲ್ಲೆ ನಡೆದಿಲ್ಲ. ಸಂಘವನ್ನು ಸಭೆಗೆ ಆಹ್ವಾನಿಸಿ ಮಾನ್ಯತೆ ನೀಡಿದ ಪಾಲಿಕೆಯೇ, ವ್ಯಾಪಾರಿಗಳ ಹಕ್ಕು ಪ್ರತಿಪಾದಿಸಿದ ಪದಾಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಕಾನೂನಿನ ದುರುಪಯೋಗ.
ಹೈಕೋರ್ಟ್ ಮಹತ್ವದ ಆದೇಶ
ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಸುಪ್ರೀಂ ಕೋರ್ಟ್ ಆದೇಶವು ರಸ್ತೆಗಳ ಜೊತೆಗೆ ಸೂಕ್ತ ಫುಟ್‌ಪಾತ್ ಇರಬೇಕು ಎಂದಷ್ಟೇ ಹೇಳಿದೆ. ಸುಪ್ರೀಂ ಕೋರ್ಟ್ ಎಂದಿಗೂ ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣಾ ಕಾಯ್ದೆಯನ್ನು ರದ್ದುಗೊಳಿಸಿಲ್ಲ. ಹಾಗಾಗಿ ವ್ಯಾಪಾರಿಗಳಿಗೆ ಬೀದಿಯಲ್ಲಿ ವ್ಯಾಪಾರ ಮಾಡುವ ಹಕ್ಕಿದೆ. ಪುನರ್ವಸತಿಯ ಎಲ್ಲಾ ವ್ಯವಸ್ಥೆ ಹಾಗೂ ಕಾನೂನು ಪ್ರಕ್ರಿಯೆಯನ್ನು ಪಾಲಿಸಿ ಮಾತ್ರ ತೆರವುಗೊಳಿಸಬೇಕು ಎಂದು ಸರ್ಕಾರ ಮತ್ತು ಪಾಲಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


