ರಾಜ್ಯ ಚುನಾವಣಾ ಆಯೋಗವು ಇಂದು ಎಸ್‌ಐಆರ್ ಕರಡು ಪಟ್ಟಿ ಪ್ರಕಟಿಸಿದ್ದು, ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಹೆಸರಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಅತಿ ಕಡಿಮೆ, ಅಂದರೆ 7,088 ಜನರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಜನರಿಗೆ ನೋಟಿಸ್, ಅಂದರೆ, 9.46 ಲಕ್ಷ ಜನರಿಗೆ ಸೇರಿದಂತೆ ಇಡೀ ರಾಜ್ಯದಾದ್ಯಂತ ಒಟ್ಟು 43,81,335 ಜನರಿಗೆ ನೋಟಿಸ್ ನೀಡಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಯುಕ್ತರಾದ ವಿ. ಅನ್ಬು ಕುಮಾರ್, “ನಾಳೆಯಿಂದಲೇ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಎಇಆರ್‌ಒಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಹೆಚ್ಚಿನ ಇಆರ್‌ಒಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಚುನಾವಣಾ ಆಯೋಗದಿಂದ ಶೀಘ್ರದಲ್ಲೇ ನೇಮಕಾತಿ ಆದೇಶ ಹೊರಬೀಳಲಿದೆ. ಮತದಾರರಿಗೆ ಅನುಕೂಲ ಮಾಡಿಕೊಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
“ಎನ್ಯುಮರೇಷನ್ ಫಾರ್ಮ್‌ಗೆ ಸಹಿ ಮಾಡಿಕೊಟ್ಟವರ ಹೆಸರು ಕರಡು ಪಟ್ಟಿಯಲ್ಲಿ ಇದೆ. ಎಎಸ್‌ಡಿಡಿಒ ಹೊರತುಪಡಿಸಿ, 43,81,335 ಜನರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಟಿಸ್ ಕೊಟ್ಟವರ ಹೆಸರು ಉಳಿಸಿಕೊಳ್ಳುವ ಅಂತಿಮ ತೀರ್ಮಾನವನ್ನು ಎಇಆರ್‌ಒ ಮತ್ತು ಇಆರ್‌ಒಗೆ ಬಿಡಲಾಗಿದೆ. ಅಕ್ಟೋಬರ್ 22 ರ ಒಳಗೆ ಈ ಪ್ರಕ್ರಿಯೆ ಮುಗಿಯಲಿದೆ. ಈ ಹಂತದಲ್ಲಿ ತಿದ್ದುಪಡಿ ಏನಾದರೂ ಬೇಕಾಗಿದ್ದರೆ ಫಾರ್ಮ್ 8 ಕೊಡಬೇಕು, ಹೊಸ ಮತದಾರರು ಫಾರ್ಮ್ 6 ಕೊಡಬೇಕು, ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಬಂದಿದ್ದವರು ಸಹ, ತಮ್ಮ ಹೆಸರು ಬೇರೆ ಯಾವುದೇ ಕ್ಷೇತ್ರದಲ್ಲಿ ಇಲ್ಲದಿದ್ದರೆ ಫಾರ್ಮ್ ನಂ. 6 ಕೊಟ್ಟು ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು” ಎಂದು ಮಾಹಿತಿ ನೀಡಿದರು.
“ಎಸ್‌ಐಆರ್ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದವರು, ಅವರ ಹೆಸರು ಪುನಃ ಮತದಾರರ ಪಟ್ಟಿಗೆ ಸೇರಬೇಕೆಂದರೆ ಫಾರ್ಮ್ ನಂ. 6 ಕೊಡಬೇಕು. ಪಟ್ಟಿಯಲ್ಲಿ ಹೆಸರು ಇದ್ದವರು ತಿದ್ದುಪಡಿಗಾಗಿ ಫಾರ್ಮ್ 8 ಕೊಡಬೇಕು, ಬಿಎಲ್‌ಒಗಳು ಅದನ್ನು ಪರಿಶೀಲಿಸಿ ಇಆರ್‌ಒಗೆ ಕಳಿಸುತ್ತಾರೆ” ಎಂದರು.
“ಮ್ಯಾಪಿಂಗ್ ಡೇಟಾ ಕೊಡದವರು ಮತ್ತು ಮಾಹಿತಿ ಮ್ಯಾಚ್ ಆಗದವರಿಗೆ ಸ್ಥಳೀಯ ಪೊಲೀಸ್ ನೆರವಿನೊಂದಿಗೆ ಮತದಾರರಿಗೆ ಅಥವಾ ಅವರಿಗೆ ಸಂಬಂಧಪಟ್ಟವರಿಗೆ ನೋಟಿಸ್ ಕೊಡುತ್ತಾರೆ. ನೋಟಿಸ್ ಏಕೆ ಕೊಡಲಾಗುತ್ತಿದೆ ಎಂಬುದನ್ನು ಅದರಲ್ಲಿ ಉಲ್ಲೇಖಿಸಲಾಗುತ್ತದೆ. ವಿಚಾರಣೆಯ ಸ್ಥಳ, ಸಮಯ ಮತ್ತು ದಿನಾಂಕ ಅದರಲ್ಲಿ ನಿಗದಿಪಡಿಸಲಾಗಿದ್ದು, ಮತದಾರರು ಅಲ್ಲಿಗೆ ತೆರಳಿ ಮಾಹಿತಿ ಕೊಡಬೇಕು. ಮಾಹಿತಿ ನೀಡಲು ಮತದಾರರಿಗೆ ಎರಡು ಬಾರಿ ಕಾಲಾವಕಾಶ ನೀಡಲಾಗುವುದು, ನೋಟಿಸ್ ಕೊಟ್ಟ ಒಂದು ವಾರ ಅವರಿಗೆ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ಮತದಾರರಿಗೆ ನೇರವಾಗಿ ನೋಟಿಸ್ ಕೊಡಲಾಗುತ್ತದೆ. ಮೆಸೇಜ್ ಅಥವಾ ವಾಟ್ಸಾಪ್ ಮೂಲಕ ಕೊಡಲು ಸಾಧ್ಯವಿಲ್ಲ” ಎಂದರು.
“ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರು ದಯವಿಟ್ಟು ಫಾರ್ಮ್ ನಂ. 6 ಕೊಡಿ. ಈಗಾಗಲೇ 4,80,000 ಜನ ಫಾರ್ಮ್ ನಂ. 6 ಕೊಟ್ಟಿದ್ದಾರೆ. ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಚ್ಚಿನ ಜನರ ಹೆಸರು ಇರುವ ಕಡೆ ಚುನಾವಣಾ ಆಯೋಗದಿಂದ ವಿಶೇಷ ಕ್ಯಾಂಪೇನ್ ಮಾಡಿ ಫಾರ್ಮ್ 6 ಕೊಡಲಾಗುವುದು” ಎಂದು ವಿವರಿಸಿದರು.
“ಆಯೋಗ ನಿಗದಿಪಡಿಸಿರುವ 12 ದಾಖಲಾತಿಗಳನ್ನು ಮಾತ್ರ ಇಆರ್‌ಒ ಕೇಳಬೇಕು. ನೋಟಿಸ್ ತಲುಪಿದ ನಂತರ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಿ ಪ್ರಕಟ ಮಾಡಲಾಗುವುದು. ಈ ಇಡೀ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ. ಎಇಆರ್‌ಒಗಳು ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟಕ್ಕೆ ಹೋಗುತ್ತಾರೆ. ಜನ ಹೆಚ್ಚಿನ ಹಣ ಮತ್ತು ಸಮಯ ಖರ್ಚು ಮಾಡಿಕೊಂಡು ಎಇಆರ್‌ಒ ಇರುವ ಕಡೆಗೆ ಹೋಗಬೇಕಾಗಿಲ್ಲ. ಮತದಾರರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡುವುದಿಲ್ಲ” ಎಂದು ಹೇಳಿದರು.
“ಒಂದು ದಿನಕ್ಕೆ ಇಷ್ಟೇ ಅರ್ಜಿ ತೆರವು ಮಾಡಬೇಕು ಎಂಬ ಒತ್ತಡವಿಲ್ಲ. ಉದಾಹರಣೆಗೆ ದಾವಣಗೆರೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅತಿ ಕಡಿಮೆ ಸಂಖ್ಯೆಯ ನೋಟಿಸ್‌ಗಳಿವೆ, ಅಲ್ಲೆಲ್ಲಾ ಬೇಗ ಮುಗಿಯುತ್ತದೆ. ಅಕ್ಟೋಬರ್ 22ರ ಒಳಗೆ ಮುಗಿಸಬೇಕು ಎಂಬ ಗಡುವು ನೀಡಲಾಗಿದೆ. ಇಆರ್‌ಒ ಮತ್ತು ಎಇಆರ್‌ಒ ತೀರ್ಮಾನ ತೃಪ್ತಿ ಆಗದೇ ಇದ್ದರೆ, ಮತದಾರರು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಯೂ ತೃಪ್ತಿ ಆಗದೇ ಇದ್ದರೆ ಚುನಾವಣಾ ಆಯೋಗ ಸಂಪರ್ಕಿಸಬಹುದು. ನೋಟಿಸ್ ಪಡೆದವರೇ ಖುದ್ದಾಗಿ ಹಾಜರಾಗಬೇಕು” ಎಂದು ಅನ್ಬು ಕುಮಾರ್ ವಿವರಿಸಿದರು.
“ಮನೆ ಶಿಫ್ಟ್ ಮಾಡಿಕೊಂಡಿದ್ದರೂ, ಎಎಸ್‌ಡಿಡಿಒನಲ್ಲಿ ಹೆಸರು ಬಂದವರು ದಯವಿಟ್ಟು ಫಾರ್ಮ್ ನಂ. 6 ಕೊಡಿ. ಅಕ್ಟೋಬರ್ 27 ರಂದು ಅಂತಿಮ ಪಟ್ಟಿ ಪ್ರಕಟ ಆಗುತ್ತದೆ, ಆದ್ದರಿಂದ ಅಕ್ಟೋಬರ್ 22 ರ ಒಳಗೆ ಫಾರ್ಮ್ 8 ಕೊಡಿ. ಅದಾದ ನಂತರ ಕೊಟ್ಟರೆ ಅಂತಿಮ ಕರಡಿನಲ್ಲಿ ನಿಮ್ಮ ಹೆಸರು ಇರುವುದಿಲ್ಲ. ಆದರೆ, ಫಾರ್ಮ್ 6 ಕೊಡುವುದಕ್ಕೆ ಗಡುವು ಇಲ್ಲ, ಯಾವಾಗ ಬೇಕಾದರೂ ಕೊಡಬಹುದು” ಎಂದರು.
ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ನೋಟಿಸ್?
- ಬಿಬಿಎಂಪಿ ಕೇಂದ್ರ- 4,29,372
- ಬಿಬಿಎಂಪಿ ಉತ್ತರ- 6,13,004
- ಬೆಂಗಳೂರು ನಗರ- 9,46,037
- ಬಿಬಿಎಂಪಿ ದಕ್ಷಿಣ – 4,17,631
- ಕಲಬುರಗಿ – 1,05,456
- ಮಂಡ್ಯ- 1,50,269
- ಚಿಕ್ಕಬಳ್ಳಾಪುರ- 55,804
- ವಿಜಯಪುರ – 24,529
- ಕೋಲಾರ – 1,42,197
- ಹಾಸನ- 79,780
- ದಕ್ಷಿಣ ಕನ್ನಡ – 1,50,155
- ಬಾಗಲಕೋಟೆ – 47,430
- ರಾಯಚೂರು – 68,637
- ಕೊಡಗು – 58,893
- ಉಡುಪಿ – 97,705
- ಕೊಪ್ಪಳ – 14,399
- ಯಾದಗಿರಿ – 55,084
- ಹಾವೇರಿ – 60,010
- ವಿಜಯನಗರ – 30,622
- ಮೈಸೂರು – 1,28,138
- ಬೆಂಗಳೂರು ಗ್ರಾಮಾಂತರ – 56,369
- ಚಾಮರಾಜನಗರ- 7,480
- ಚಿಕ್ಕಮಗಳೂರು – 91,620
- ಧಾರವಾಡ- 47,938
- ಚಿತ್ರದುರ್ಗ – 68,759
- ಬೆಳಗಾವಿ – 84,389
- ಬೀದರ್ – 32,613
- ತುಮಕೂರು – 1,11,887
- ಗದಗ – 25,976
- ಉತ್ತರ ಕನ್ನಡ – 65,332
- ರಾಮನಗರ – 20,192
- ಬಳ್ಳಾರಿ – 37,872
- ದಾವಣಗೆರೆ – 7,088
- ಶಿವಮೊಗ್ಗ – 48,668


