ಸೊಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬಿ ಹಾಗೂ ಆಪ್ತ ತುಳಸಿರಾಮ್ ಪ್ರಜಾಪತಿ ಅವರ 2005ರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ 21 ಪೊಲೀಸರು ಸೇರಿದಂತೆ ಒಟ್ಟು 22 ಆರೋಪಿಗಳನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಸೊಹ್ರಾಬುದ್ದೀನ್ ಶೇಖ್ ಅವರ ಕಿರಿಯ ಸಹೋದರ ನಯಾಬುದ್ದೀನ್ ಶೇಖ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದು, ಎಲ್ಲಾ ಆರೋಪಿಗಳ ಖುಲಾಸೆಯನ್ನು ಎತ್ತಿಹಿಡಿದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಹಾಗೂ ನ್ಯಾಯಮೂರ್ತಿ ಗೌತಮ್ ಅಶ್ವಿನ್ ಅಂಕಡ್ ಅವರಿದ್ದ ಪೀಠ ನೀಡಿದ್ದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಇದರಲ್ಲಿ ಪ್ರಶ್ನಿಸಲಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ, 2005ರಲ್ಲಿ ಹೈದರಾಬಾದ್‌ನಿಂದ ಮಹಾರಾಷ್ಟ್ರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸೊಹ್ರಾಬುದ್ದೀನ್ ಶೇಖ್, ಅವರ ಪತ್ನಿ ಕೌಸರ್ ಬಿ ಹಾಗೂ ಆಪ್ತ ತುಳಸಿರಾಮ್ ಪ್ರಜಾಪತಿಯನ್ನು ಪೊಲೀಸ್ ತಂಡವೊಂದು ಅಪಹರಿಸಿತ್ತು. ಬಳಿಕ ಶೇಖ್‌ನನ್ನು ಅಹಮದಾಬಾದ್ ಬಳಿ ಎನ್‌ಕೌಂಟರ್‌ನಲ್ಲಿ ಹಾಗೂ ಅವರ ಪತ್ನಿಯನ್ನು ಮೂರು ದಿನಗಳ ನಂತರ ಹತ್ಯೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಹಾಗೆಯೇ ಆಪ್ತ ಪ್ರಜಾಪತಿಯನ್ನು 2006ರಲ್ಲಿ ಗುಜರಾತ್-ರಾಜಸ್ಥಾನ ಗಡಿಯಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಗುಜರಾತ್ ಅಪರಾಧ ತನಿಖಾ ಇಲಾಖೆಯಿಂದ (ಸಿಐಡಿ) ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಗುಜರಾತ್‌ನಿಂದ ಮುಂಬೈಗೆ ಸ್ಥಳಾಂತರಿಸುವಂತೆಯೂ ಆದೇಶಿಸಿತ್ತು. ಇದೇ ವೇಳೆ, ಪ್ರಜಾಪತಿ ಎನ್‌ಕೌಂಟರ್ ಹತ್ಯೆ ಪ್ರಕರಣವನ್ನು ಸಹ ಸೊಹ್ರಾಬುದ್ದೀನ್ ಶೇಖ್ ಪ್ರಕರಣದೊಂದಿಗೆ ಒಂದಾಗಿ ಸೇರಿಸಲಾಗಿತ್ತು.
ಒಟ್ಟು 210 ಸಾಕ್ಷಿಗಳಲ್ಲಿ 92 ಸಾಕ್ಷಿಗಳು ವಿಚಾರಣೆ ವೇಳೆ ಉಲ್ಟಾ ಹೊಡೆದಿದ್ದರು. 2018ರಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು, ಶೇಖ್ ಹಾಗೂ ಇತರರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.
ಈ ಆದೇಶ ಪ್ರಶ್ನಿಸಿ 2019 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ‘ರುಬಾಬುದ್ದೀನ್ ಶೇಖ್ V/s ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’ ಪ್ರಕರಣದಲ್ಲಿ ಇತ್ತೀಚೆಗೆ ತೀರ್ಪು ನೀಡಿದ್ದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ (ಟ್ರಯಲ್ ಕೋರ್ಟ್) ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರಗಳಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿತ್ತು.
ಈ ಪ್ರಕರಣವು ಕೇವಲ ಸಂದರ್ಭೋಚಿತ ಸಾಕ್ಷ್ಯಗಳನ್ನು ಆಧರಿಸಿದ್ದು, ಘಟನೆಗಳನ್ನು ಲಿಂಕ್ ಮಾಡುವ ಸರಿಯಾದ ಸಾಕ್ಷ್ಯಗಳು ದೊರೆತಿಲ್ಲ. ಶೇಖ್ ಮತ್ತು ಅವರ ಪತ್ನಿಯನ್ನು ಪೊಲೀಸರೇ ಅಪಹರಿಸಿದ್ದರು ಎಂಬುದಕ್ಕೆ ಹಾಗೂ ಈ ನಕಲಿ ಎನ್‌ಕೌಂಟರ್ ಮಾಡಲು ಪೊಲೀಸರಿಗೆ ಏನು ಲಾಭ ಅಥವಾ ಉದ್ದೇಶವಿತ್ತು ಎಂಬುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ಗೆ ವಿಫಲವಾಗಿದೆ ಎಂದು ಹೈಕೋರ್ಟ್ ಹೇಳಿತ್ತು.
ದೊಡ್ಡ ಸಂಖ್ಯೆಯ ಸಾಕ್ಷಿಗಳು ಉಲ್ಟಾ ಹೊಡೆದ ತಕ್ಷಣಕ್ಕೆ, ವಿಚಾರಣೆಯನ್ನು ಸರಿಯಾಗಿ ನಡೆಸಲಾಗಿಲ್ಲ ಎಂದು ತಾನಾಗಿಯೇ (ಇಪ್ಸೋ ಫ್ಯಾಕ್ಟೋ) ತೀರ್ಮಾನಿಸಲು ಸಾಧ್ಯವಿಲ್ಲ. ಈ ಆರೋಪಿತ ಎನ್‌ಕೌಂಟರ್‌ಗಳ ಹಿಂದೆ ರಾಜಕಾರಣಿ ಹಾಗೂ ಪೊಲೀಸರ ನಡುವೆ ಯಾವುದೇ ರೀತಿಯ ಶಾಮೀಲಾತಿ (ನೆಕ್ಸಸ್) ಇತ್ತು ಎಂಬುದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳಿಲ್ಲ ಎಂದೂ ತಿಳಿಸಿತ್ತು.
ಆಗಸ್ಟ್ 13, 2026 ರಂದು ಬಾಂಬೆ ಹೈಕೋರ್ಟ್‌ನ ಖುಲಾಸೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಅರ್ಜಿದಾರರ ಪರವಾಗಿ ವಕೀಲ ಅಚಿಂತ್ ಕುಮಾರ್ ಅವರು ವಾದ ಮಂಡಿಸುತ್ತಿದ್ದಾರೆ.
livelaw.in


