ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೆಲೆಟ್ ಗನ್ ಬಳಕೆ, ಲಾಠಿ ಚಾರ್ಜ್ ಸೇರಿದಂತೆ ಪೊಲೀಸರಿಂದ ವಿವಿಧ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ (ಆ.21) ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ಧರಣಿ ಕುಳಿತಿದ್ದಾರೆ.
ಇದಕ್ಕೂ ಮುನ್ನ ಕನ್ನೌಟ್ ಪ್ಲೇಸ್‌ನಲ್ಲಿರುವ ಡಿಸಿಪಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ.
ಜುಲೈ 20ರಂದು ನಡೆದ ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳ ಬಳಕೆ ಸೇರಿದಂತೆ ಪೊಲೀಸರು ಕೈಗೊಂಡ ಕ್ರಮಗಳು ಹಾಗೂ ಅತಿಯಾದ ಬಲಪ್ರಯೋಗದ ಸಂಬಂಧ ಎಫ್‌ಐಆರ್ ದಾಖಲಿಸುವಂತೆ ರಾಹುಲ್ ಗಾಂಧಿ ಒತ್ತಾಯಿಸಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ವರದಿಗಳ ಪ್ರಕಾರ, “ದೂರು ಅಧಿಕೃತವಾಗಿ ದಾಖಲಾಗುವವರೆಗೆ ತಾವು ಪೊಲೀಸ್ ಠಾಣೆಯಲ್ಲೇ ಉಳಿದು ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ರಾಹುಲ್ ತಿಳಿಸಿದ್ದಾರೆ. ರಾಹುಲ್ ಗಾಂಧಿ ಇದಕ್ಕೂ ಮುನ್ನ ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ದಾಖಲಿಸುವಂತೆ ವಿನಂತಿಸಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಅವರು ಡಿಸಿಪಿ ಸೆಂಟ್ರಲ್ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.
ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳ ಬಳಕೆ ಸೇರಿದಂತೆ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಜವಾಬ್ದಾರರು ಎಂದು ರಾಹುಲ್ ಗಾಂಧಿ ನೇರವಾಗಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ಸಂದರ್ಭದಲ್ಲಿ ಮಾರಕ ಆಯುಧಗಳನ್ನು ಬಳಸಲು ಶಾ ಅವರೇ ಅನುಮತಿ ನೀಡಿದ್ದಾರೆ ಎಂದು ಹೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ವಿದ್ಯಾರ್ಥಿ ಪ್ರತಿಭಟನಾಕಾರ ಸಾಹಿಲ್ ಲೋಚವ್ ಮೇಲಿನ ಪೆಲೆಟ್ ಗನ್ ದಾಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ ಈ ವಿಷಯವನ್ನು ಈ ಹಿಂದೆಯೇ ಪೊಲೀಸರ ಗಮನಕ್ಕೆ ತರಲಾಗಿದ್ದರೂ, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದೆ.
ಆಗಸ್ಟ್ 14 ರಂದು ಲೋಚವ್ ಅವರು ತಮ್ಮ ವಕೀಲರ ಸಮ್ಮುಖದಲ್ಲಿ ದೆಹಲಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ಆದರೆ ಪೊಲೀಸರು ಐ/ಓ ಸಂಖ್ಯೆ ಅಥವಾ ಸ್ವೀಕೃತಿಯನ್ನು ನೀಡಿರಲಿಲ್ಲ ಎಂದು ಪಕ್ಷ ತಿಳಿಸಿದೆ. ಈ ವಿಷಯದ ಕುರಿತು ಆಗಸ್ಟ್ 17 ರಂದು ಇಮೇಲ್ ಮತ್ತು ಫೋನ್ ಕರೆಗಳ ಮೂಲಕ ಮತ್ತೆ ಪ್ರಯತ್ನಿಸಲಾಯಿತಾದರೂ, ಯಾವುದೇ ಐ/ಓ ಸಂಖ್ಯೆಯನ್ನು ಒದಗಿಸಲಾಗಿಲ್ಲ ಎಂದು ಪಕ್ಷವು ಆರೋಪಿಸಿದೆ.
ರಾಹುಲ್ ಗಾಂಧಿ ಪ್ರಕರಣ ದಾಖಲಿಸಲು ಒತ್ತಾಯಿಸಲು ಲೋಚವ್ ಜೊತೆ ಡಿಸಿಪಿ ಕಚೇರಿಗೆ ಹೋಗಿದ್ದಾರೆ. ಆದರೆ ಡಿಸಿಪಿ ತನಿಖಾಧಿಕಾರಿಯ ಹೆಸರು ಅಥವಾ ಐ/ಓ ಸಂಖ್ಯೆಯನ್ನು ನೀಡಿಲ್ಲ. ಇದು ಗಂಭೀರ ಅಪರಾಧವಾಗಿರುವುದರಿಂದ ಎಫ್‌ಐಆರ್ ದಾಖಲಿಸಲೇಬೇಕು, ಆದರೆ ದೆಹಲಿ ಪೊಲೀಸರು ಆ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಡಿಸಿಪಿ ಕಚೇರಿಯ ಹೊರಗೆ ಲೋಚವ್ ಅವರೊಂದಿಗೆ ರಾಹುಲ್ ನಡೆಸುತ್ತಿರುವ ಧರಣಿಯನ್ನು ಉಲ್ಲೇಖಿಸಿ, “ಎಫ್‌ಐಆರ್ ಇಲ್ಲ, ನ್ಯಾಯವೂ ಇಲ್ಲ. ಹಾಗಾಗಿ ನಾವು ಇಲ್ಲಿಯೇ ಕುಳಿತುಕೊಳ್ಳುತ್ತೇವೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದೆ. “ಇದು ವಿಳಂಬವಲ್ಲ, ನ್ಯಾಯದ ನಿರಾಕರಣೆ. ಎಫ್‌ಐಆರ್ ದಾಖಲಾಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ” ಎಂದು ಹೇಳಿದೆ.


