ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ ಮತದಾರರು ತುಂಬಿ ಕೊಟ್ಟಿರುವ 4,46,35,899 ಎನ್ಯುಮರೇಷನ್ ಫಾರಂಗಳು (ಗಣತಿ ನಮೂನೆ) ಡಿಜಿಟಲೀಕರಣಗೊಂಡಿವೆ. ಈ ಪೈಕಿ 43,80,740 ಮತದಾರರಿಗೆ ದಾಖಲೆ ಕೇಳಿ ನೋಟಿಸ್ ಬರಲಿದೆ.
ಎನ್ಯುಮರೇಷನ್ ಫಾರಂ ತುಂಬಿ ಕೊಡುವ ಅವಧಿ ಆಗಸ್ಟ್ 17ರಂದು ಮುಕ್ತಾಯಗೊಂಡಿದೆ. ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಆ ಬಳಿಕ ನೋಟಿಸ್‌ಗಳನ್ನು ನೀಡಲಾಗುತ್ತದೆ.
ನೋಟಿಸ್ ಪಡೆಯಲಿರುವ 43,80, 740 ಮತದಾರರ ಪೈಕಿ 23,45,428 ಪ್ರೊಜೆನಿ ಮ್ಯಾಪಿಂಗ್ ಮಾಡದವರು ಮತ್ತು 20,35,312 ಅನಾಮಲಿಸ್ ಇರುವ (ಲಾಜಿಕಲ್ ಡಿಸ್ಕ್ರಿಪೆನ್ಸಿ ಅಥವಾ ತಾರ್ಕಿಕ ವೈರುದ್ಯ) ಮತದಾರರು ಒಳಗೊಂಡಿದ್ದಾರೆ.
ಒಟ್ಟು ಮತದಾರರಲ್ಲಿ ನೋಟಿಸ್ ಪಡೆಯಲಿರುವವರ ಪ್ರಮಾಣ ಶೇಕಡ 9.81 ಇದೆ. ಈ ಪೈಕಿ ಬಿಬಿಎಂಪಿ ಉತ್ತರ ಜಿಲ್ಲೆಯ ಮತದಾರರು ಅತಿ ಹೆಚ್ಚು, ಅಂದರೆ ಶೇ.47.89ರಷ್ಟು ನೋಟಿಸ್‌ಗಳನ್ನು ಪಡೆಯಲಿದ್ದಾರೆ. ನಂತರ ಸ್ಥಾನದಲ್ಲಿ ಬಿಬಿಎಂಪಿ ಕೇಂದ್ರ ಜಿಲ್ಲೆ ಇದೆ. ಇಲ್ಲಿ ಶೇ.41.72ರಷ್ಟು ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ದಾವಣಗೆರೆ ಜಿಲ್ಲೆಯ ಮತದಾರರು ಅತಿ ಕಡಿಮೆ, ಅಂದರೆ ಶೇ.0.55ರಷ್ಟು ನೋಟಿಸ್‌ಗಳನ್ನು ಪಡೆಯಲಿದ್ದಾರೆ.
ನೋಟಿಸ್ ಪಡೆಯಲಿರುವ ಇಡೀ ರಾಜ್ಯದ 43,80,740 ಮತದಾರರ ಪೈಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲೇ 24, 05,990 (ಶೇ. 42.21) ಮತದಾರರಿದ್ದಾರೆ. ಬಿಬಿಎಂಪಿ ಉತ್ತರ ಜಿಲ್ಲೆಯ 12, 80,085 ಮತದಾರರ ಪೈಕಿ 6, 13, 003 (ಶೇ.47.89), ಬಿಬಿಎಂಪಿ ಕೇಂದ್ರ ಜಿಲ್ಲೆಯ 10,29,190 ಮತದಾರರ ಪೈಕಿ 4,29,364 (ಶೇ.41.72), ಬಿಬಿಎಂಪಿ ದಕ್ಷಿಣ ಜಿಲ್ಲೆಯ 10, 86, 750 ಮತದಾರರ ಪೈಕಿ 4,17,625 (ಶೇ.38.43) ಬೆಂಗಳೂರು ನಗರ ಜಿಲ್ಲೆಯ 23,03,594 ಮತದಾರರ ಪೈಕಿ 9,45,998 (ಶೇ.41.07) ನೋಟಿಸ್ ಪಡೆಯಲಿದ್ದಾರೆ.
ನೋಟಿಸ್ ನೀಡುವುದು ಮತ್ತು ದಾಖಲೆ ಸಲ್ಲಿಕೆ ಹೇಗೆ?
ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಮ್ಯಾಪಿಂಗ್ ಮಾಡದವರು ಮತ್ತು ಲಾಜಿಕಲ್ ಡಿಸ್ಕ್ರಿಪೆನ್ಸಿ ಇರುವವರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ನೀಡಲಾಗುತ್ತದೆ. ಬಿಎಲ್‌ಒ ಮತದಾರರ ಮನೆಗೆ ತೆರಳಿ ನೋಟಿಸ್ ತಲುಪಿಸಬೇಕು. ಮತದಾರರ ಪರವಾಗಿ ಸಂಬಂಧಿಕರು ನೋಟಿಸ್ ಸ್ವೀಕರಿಸಬಹುದು. ಆದರೆ, ವಿಚಾರಣೆಗೆ ಮತದಾರರ ಖುದ್ದಾಗಿ ಇಆರ್‌ಒ ಅಥವಾ ಎಇಆರ್‌ಒ ಮುಂದೆ ಹಾಜರಾಗಬೇಕು.
ಬಿಎಲ್‌ಒ ಮುಖಾಂತರ ನೀಡುವ ನೋಟಿಸ್‌ನಲ್ಲಿ ದಾಖಲೆ ಸಲ್ಲಿಕೆ ಮತ್ತು ವಿಚಾರಣೆಯ ದಿನಾಂಕ, ಸ್ಥಳ ಮತ್ತು ಸಮಯ ಉಲ್ಲೇಖಿಸಿರುತ್ತದೆ. ಇಆರ್‌ಇ ಅಥವಾ ಎಇಆರ್‌ಒ ಮತದಾರರಿಂದ ದಾಖಲೆಗಳನ್ನು ಪಡೆದು ವಿಚಾರಣೆ ನಡೆಸಲು ಸ್ಥಳೀಯ ಗ್ರಾಮ ಪಂಚಾಯತ್, ವಾರ್ಡ್ ಕಚೇರಿ, ಮತಗಟ್ಟೆಗೆ ಬರಲಿದ್ದಾರೆ.
ನೋಟಿಸ್‌ನಲ್ಲಿ ಹೇಳಿದ ದಿನಾಂಕದಂದು ಸಮಯಕ್ಕೆ ಸರಿಯಾಗಿ ಮತದಾರರು ದಾಖಲೆ ಸಮೇತ ಇಆರ್‌ಒ ಮುಂದೆ ವಿಚಾರಣೆಗೆ ಹಾಜರಾಗಬೇಕು. ಚುನಾವಣಾ ಆಯೋಗ ಹೇಳಿದ 11 ದಾಖಲೆಗಳ ಪೈಕಿ ಕನಿಷ್ಠ ಒಂದು ಜೊತೆಗೆ ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್ ಸಲ್ಲಿಸಬೇಕು. ಇಆರ್‌ಒ ಮತದಾರರಿಂದ ಒಂದಕ್ಕಿಂತ ಹೆಚ್ಚು ದಾಖಲೆ, ಅಂದರೆ ಗರಿಷ್ಠ ಮೂರರವರೆಗೆ ದಾಖಲೆಗಳನ್ನು ಕೇಳಬಹುದು.
ಲಾಜಿಕಲ್ ಡಿಸ್ಕ್ರಿಪೆನ್ಸಿ ಬಂದವರು ಸಲ್ಲಿಸುವ ದಾಖಲೆಗಳನ್ನು ಇಆರ್‌ಒ ಸ್ವತಃ ಪರಿಶೀಲಿಸಿ, ಅದು ಸರಿಯಾಗಿದ್ದರೆ ಅವರನ್ನು ಮತದಾರರ ಪಟ್ಟಿಗೆ ಸೇರಿಸುತ್ತಾರೆ. ಮತದಾರರ ಕೊಟ್ಟ ಅಧಿಕೃತ ದಾಖಲೆಯನ್ನು ಇಆರ್‌ಒ ತಿರಸ್ಕರಿಸಿದರೆ, 15 ದಿನಗಳ ಒಳಗಾಗಿ ಜಿಲ್ಲಾ ಚುನಾವಣಾ ಅಧಿಕಾರಿಗೆ (ಡಿಇಒ) ಮೇಲ್ಮನವಿ ಸಲ್ಲಿಸಬಹುದು. ಡಿಇಒ ಕೂಡ ತಿರಸ್ಕರಿಸಿದರೆ 30 ದಿನಗಳ ಒಳಗಾಗಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ (ಸಿಇಒ) ಮೇಲ್ಮನವಿ ಸಲ್ಲಿಸಬಹುದು.
ಮ್ಯಾಪಿಂಗ್ ಆಗದ ಕಾರಣಕ್ಕೆ ನೋಟಿಸ್ ಪಡೆದರೆ, ಅವರು ನೀಡುವ ದಾಖಲೆಗಳನ್ನು ಇಆರ್‌ಒ ಡಿಇಒಗೆ ವರ್ಗಾಯಿಸುತ್ತಾರೆ. ಡಿಇಒ ಅದರ ಸತ್ಯಾಸತ್ಯತೆ ಪರಿಶೀಲಿಸಿ ಮೂರು ದಿನಗಳ ಒಳಗಾಗಿ ಇಆರ್‌ಒಗೆ ಪ್ರತಿಕ್ರಿಯೆ ನೀಡಲಿದ್ದಾರೆ. ಆ ಬಳಿಕ ಅವರನ್ನು ಮತದಾರರ ಪಟ್ಟಿಗೆ ಸೇರಿಸುವ ಅಥವಾ ಹೊರಗಿಡುವ ತೀರ್ಮಾನವನ್ನು ಇಆರ್‌ಒ ಮಾಡಲಿದ್ದಾರೆ. ಡಿಇಒ ಕೇವಲ ದಾಖಲೆ ಪರಿಶೀಲನೆ ಮಾತ್ರ ಮಾಡಲಿದ್ದಾರೆ.


