ಮೀಸಲಾತಿಯನ್ನು ವಿರೋಧಿಸುವ ಅಥವಾ ಅದನ್ನು ರದ್ದುಗೊಳಿಸಲು ಆಗ್ರಹಿಸುವವರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಬೇಕೆಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಅಧ್ಯಕ್ಷ ರಾಮದಾಸ್ ಅಠಾವಳೆ ಭಾನುವಾರ ಆಗ್ರಹಿಸಿದ್ದಾರೆ.
ಮೀಸಲಾತಿ ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಘೋಷಿಸಲಾದ ಪ್ರತಿಭಟನೆ ಸೇರಿದಂತೆ ಮೀಸಲಾತಿ ವಿರೋಧಿ ಚಳವಳಿಗಳು ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿವೆ ಎಂದು ಅಠಾವಳೆ ಹೇಳಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಮೀಸಲಾತಿ ವ್ಯವಸ್ಥೆಯನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ಮೀಸಲಾತಿಯನ್ನು ವಿರೋಧಿಸುವುದು ಸಂವಿಧಾನವನ್ನು ವಿರೋಧಿಸಿದಂತೆ. ಮೀಸಲಾತಿ ವಿರೋಧಿ ನಿಲುವು ತಳೆಯುವವರು ಸಂವಿಧಾನ ವಿರೋಧಿಗಳು. ಅವರ ವಿರುದ್ಧ ದೇಶದ್ರೋಹದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅಠಾವಳೆ ಹೇಳಿದ್ದಾರೆ.
“ಕೆಲವರು ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ, ಮೀಸಲಾತಿಯು ಸಂವಿಧಾನ ನೀಡಿರುವ ಹಕ್ಕಾಗಿರುವುದರಿಂದ ಅದನ್ನು ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.
ಇನ್ನೊಂದೆಡೆ, “ಮೀಸಲಾತಿ ಸುಧಾರಣೆಗಳ ಕುರಿತು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಅಥವಾ ಸಮಾವೇಶ ನಡೆಸಲು ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಅನುಮತಿ ನೀಡಿಲ್ಲ” ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳ ದಾರಿ ತಪ್ಪಿಸುವ ಪೋಸ್ಟ್‌ಗಳನ್ನು ನಂಬಿ ಅಲ್ಲಿ ಸೇರದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಆದರೂ, ಬ್ಯಾನರ್‌ಗಳು, ಪೋಸ್ಟರ್‌ಗಳು ಮತ್ತು ಕೇಸರಿ ಧ್ವಜಗಳನ್ನು ಹಿಡಿದು ದೊಡ್ಡ ಸಂಖ್ಯೆಯಲ್ಲಿ ಜಂತರ್ ಮಂತರ್‌ನಲ್ಲಿ ನೆರೆದಿದ್ದ ಪ್ರತಿಭಟನಾಕಾರರು, ಜಾತಿ ಆಧಾರಿತ ಮೀಸಲಾತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸರ್ಕಾರಿ ನೆರವು ಮತ್ತು ಮೀಸಲಾತಿಯನ್ನು ನಿರ್ಧರಿಸುವಾಗ ಜಾತಿಗಿಂತ ಆರ್ಥಿಕ ಮಾನದಂಡಗಳಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದರು.


