ತುಂಚತ್ ಎಝುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯದ (ಟಿಇಎಂಯು) ದಲಿತ ಸಂಶೋಧಕಿಯೊಬ್ಬರು, “ಸಹಾಯಕ ಪ್ರಾಧ್ಯಾಪಕರೊಬ್ಬರು ತಮ್ಮ ವಿರುದ್ಧ ಜಾತಿ ಆಧಾರಿತ ತಾರತಮ್ಯ, ಕಿರುಕುಳ ಮತ್ತು ಪಿಎಚ್ಡಿ ಸಂಶೋಧನೆಗೆ ಅಡ್ಡಿಪಡಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಆಗಸ್ಟ್ 15 ರಿಂದ ತಿರೂರಿನ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅನಘಾ ಶಶಿ, ತಮ್ಮ ಸಂಶೋಧನಾ ಮಾರ್ಗದರ್ಶಕರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ತಾರತಮ್ಯ ಹಾಗೂ ಶೈಕ್ಷಣಿಕ ಸಂಕಷ್ಟಗಳನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಅವರು ಸಹಾಯಕ ಪ್ರಾಧ್ಯಾಪಕ ಅರುಣ್ ಬಾಬು ವಿ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಅರುಣ್ ಬಾಬು ಈ ಆರೋಪಗಳನ್ನು ನಿರಾಕರಿಸಿದ್ದು, ತಾವು ಅವರ ಅಧಿಕೃತ ಸಂಶೋಧನಾ ಮಾರ್ಗದರ್ಶಕರಲ್ಲ ಎಂದು ಹೇಳಿದ್ದಾರೆ.
ಸಂಶೋಧನೆಗೆ ಅಡ್ಡಿಪಡಿಸಿದ ಆರೋಪ
ಅನಘಾ, ಮಾರ್ಚ್ 2024 ರಲ್ಲಿ ಪರಿಸರ ವಿಜ್ಞಾನ ವಿಭಾಗದಲ್ಲಿ ಡಾಕ್ಟರೇಟ್ ಕೋರ್ಸ್ಗೆ ಸೇರಿಕೊಂಡರು. ಪರಿಸರ ವಿಜ್ಞಾನ ಮತ್ತು ನಿರ್ವಹಣೆಯಲ್ಲಿ ಎಂಎಸ್ಸಿ ಮುಗಿಸಿರುವ ಅವರು ಮೈಕ್ರೋಪ್ಲಾಸ್ಟಿಕ್ಸ್ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ ಎಂದು ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.
ಆನ್ಲೈನ್ ಮಾಧ್ಯಮದೊಂದಿಗಿನ ಮಾತುಕತೆಯಲ್ಲಿ ಅನಘಾ, ತಮಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಪ್ರಯೋಗಾಲಯಕ್ಕೆ ಪ್ರವೇಶ ನೀಡಲಿಲ್ಲ, ಸಿನೋಪ್ಸಿಸ್ (ಸಂಶೋಧನಾ ಪ್ರಬಂಧದ ಸಾರಾಂಶ) ಪರಿಶೀಲಿಸಲಿಲ್ಲ, ಡಾಕ್ಟರಲ್ ಸಮಿತಿಯನ್ನು ರಚಿಸಲಿಲ್ಲ ಎಂದು ಹೇಳಿದ್ದಾರೆ. ಬದಲಾಗಿ, ಪ್ರಯೋಗಾಲಯ ಮತ್ತು ತರಗತಿ ಕೊಠಡಿಗಳನ್ನು ಸ್ವಚ್ಛಗೊಳಿಸುವಂತೆ ತಮ್ಮಿಂದ ಕೆಲಸ ಮಾಡಿಸಿಕೊಳ್ಳಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ನಂತರ ಸ್ವಚ್ಛಗೊಳಿಸುವ ಕೆಲಸವನ್ನು ನಿಲ್ಲಿಸಿದೆ. ಪ್ರಯೋಗಾಲಯದ ಸಹಾಯಕನನ್ನು ಒದಗಿಸುವಂತೆ ಅರುಣ್ ಬಾಬು ಅವರಲ್ಲಿ ವಿನಂತಿಸಿದೆ; ಆದರೆ ಅದನ್ನು ನಿರಾಕರಿಸಲಾಯಿತು ಎಂದು ಅನಘಾ ತಿಳಿಸಿದ್ದಾರೆ.
“ಪಿಎಚ್ಡಿ ವಿದ್ಯಾರ್ಥಿಗಳ ಕ್ಯಾಬಿನ್ನಲ್ಲಿ ನನಗೆ ಕುರ್ಚಿ ನೀಡಲಿಲ್ಲ, ಇತರ ಸಂಶೋಧಕರು ಕ್ಯಾಬಿನ್ ಬಳಸುವಾಗ ನಾನು ಹೊರಗೆ ಕುಳಿತುಕೊಳ್ಳಬೇಕಾಯಿತು” ಎಂದು ಅವರು ಹೇಳಿದ್ದಾರೆ.
2024 ರಲ್ಲಿ ನಡೆದ ಲಿಖಿತ ಪರೀಕ್ಷೆಯ ನಂತರ ಅನಘಾ ಅವರಿಗೆ ಪರಿಸರ ವಿಜ್ಞಾನದಲ್ಲಿ ‘ಕೇರಳ ರಾಜ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿ’ (KSCSTE) ಫೆಲೋಶಿಪ್ ಲಭಿಸಿತ್ತು.
“ನಾನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವಳು ಎಂಬ ಕಾರಣಕ್ಕೆ ಈ ಫೆಲೋಶಿಪ್ ಸಿಕ್ಕಿದೆ ಎಂದು ಅವರು ಹೇಳಿದರು. ಫೆಲೋಶಿಪ್ ತಡೆಹಿಡಿಯುವುದಾಗಿ ಬೆದರಿಕೆ ಹಾಕಿದರು” ಎಂದು ಅನಘಾ ಆರೋಪಿಸಿದ್ದಾರೆ.
“ಆಗಸ್ಟ್ 2025 ರಲ್ಲಿ ವಿಶ್ವವಿದ್ಯಾಲಯಕ್ಕೆ ಹಲವು ದೂರುಗಳನ್ನು ಸಲ್ಲಿಸಿದರೂ ಯಾವುದೇ ಸೂಕ್ತ ಪರಿಹಾರ ಸಿಗಲಿಲ್ಲ. 2025 ರಲ್ಲಿ, ಸುದೀರ್ಘ ಅಡಚಣೆ, ಕಿರುಕುಳ ಮತ್ತು ಶೈಕ್ಷಣಿಕ ನಿರ್ಲಕ್ಷ್ಯದ ವಿರುದ್ಧ ಅವರು ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಅವರಿಗೆ ದೂರು ನೀಡಿದ್ದು, ಇದರಿಂದ ತಮಗೆ ತೀವ್ರ ಮಾನಸಿಕ ಸಮಸ್ಯೆ ಉಂಟಾಗಿದೆ” ಎಂದು ತಿಳಿಸಿದ್ದರು.
ಈ ವರ್ಷ, ಅವರು ಕೇರಳ ಮುಖ್ಯಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಿದ್ದು, ಅದರ ಬೆನ್ನಲ್ಲೇ ಈ ವಿಷಯದ ಕುರಿತು ತನಿಖೆ ನಡೆಸಲು ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ.
ಆರೋಪಗಳನ್ನು ನಿರಾಕರಿಸಿದ ಪ್ರಾಧ್ಯಾಪಕ
ಆರೋಪಗಳನ್ನು ತಳ್ಳುಹಾಕಿದ ಅರುಣ್ ಬಾಬು, ಅನಘಾ ಅವರಿಗೆ ಪ್ರಯೋಗಾಲಯ ಬಳಸಲು ಯಾವುದೇ ನಿರ್ಬಂಧ ಇರಲಿಲ್ಲ. ಪ್ರಯೋಗಾಲಯ ಅಥವಾ ತರಗತಿಗಳನ್ನು ಸ್ವಚ್ಛಗೊಳಿಸಲು ಬಲವಂತಪಡಿಸಿಲ್ಲ ಎಂದು ಹೇಳಿದರು.
ಅವರ ಸಿನೋಪ್ಸಿಸ್ ತಿದ್ದುಪಡಿ ಮಾಡಲು ವಿಫಲರಾಗಿದ್ದಾರೆ ಎಂಬ ಆರೋಪವನ್ನೂ ಅವರು ಅಲ್ಲಗಳೆದಿದ್ದಾರೆ. ಅವರ ಪ್ರಕಾರ, ತಾವು ಅನಘಾ ಅವರ ಅಧಿಕೃತ ಸಂಶೋಧನಾ ಮಾರ್ಗದರ್ಶಕರಲ್ಲ. ಆದರೂ, ಜುಲೈ 25, 2024 ರಂದು ಪ್ರಭಾರ ರಿಜಿಸ್ಟ್ರಾರ್ ನೀಡಿದ ಸೇರ್ಪಡೆ ವರದಿಯಲ್ಲಿ ಅರುಣ್ ಬಾಬು ಅವರನ್ನು ಅನಘಾ ಅವರ ಮಾರ್ಗದರ್ಶಕರೆಂದು ಪಟ್ಟಿ ಮಾಡಲಾಗಿದೆ.
ಸಮಯ ವಿಸ್ತರಣೆ ನೀಡಿದ್ದರೂ ಅಂತಿಮ ಸಿನೋಪ್ಸಿಸ್ ಸಲ್ಲಿಸದ ಕಾರಣ ಅನಘಾ ಅವರು ಎರಡು ಡಾಕ್ಟರಲ್ ಸಮಿತಿ ಸಭೆಗಳಿಗೆ ಗೈರುಹಾಜರಾಗಿದ್ದರು ಎಂದು ಅರುಣ್ ಬಾಬು ತಿಳಿಸಿದ್ದಾರೆ.
ಅಧಿಕಾರಿಗಳು ಈ ವಿಷಯದ ತನಿಖೆಯನ್ನು ಮುಂದುವರಿಸಿದ್ದು, ಆರೋಪ ಮತ್ತು ಪ್ರತ್ಯಾರೋಪಗಳ ಪರಿಶೀಲನೆ ನಡೆಯುತ್ತಿದೆ.


