ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಕ್ತಾರ ಸೌರವ್ ದಾಸ್ ಅವರು ಹಿಂದುತ್ವ ಡಿಜಿಟಲ್ ಮಾಧ್ಯಮ ಪೋರ್ಟಲ್‌ಗಳು, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಬಲಪಂಥೀಯ ರಾಜಕೀಯ ವಿಶ್ಲೇಷಕ ಅಭಿಜಿತ್ ಅಯ್ಯರ್-ಮಿತ್ರ ಅವರ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದಾರೆ.
ತನ್ನ ಮನೆ ವಿಳಾಸವನ್ನು ಬಹಿರಂಗಪಡಿಸುವ ಮೂಲಕ ಇವರುಗಳು ವೈಯಕ್ತಿಕ ಗೌಪ್ಯತೆಯ (ಖಾಸಗಿತನದ) ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಅಡ್ವೊಕೇಟ್ ಸಮ್ಯಕ್ ಗಂಗ್ವಾಲ್ ಅವರ ಮೂಲಕ ಮೊಕದ್ದಮೆ ಹೂಡಿರುವ ದಾಸ್ ಅವರು, ಪರಿಹಾರದ (ನಷ್ಟ ತುಂಬಿಕೊಡುವಂತೆ) ಜೊತೆಗೆ ತಮ್ಮ ಮನೆ ವಿಳಾಸ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಇನ್ನು ಮುಂದೆ ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.
ಸಾರ್ವಜನಿಕವಾಗಿ ಲಭ್ಯವಿರುವ ತಮ್ಮ ವೈಯಕ್ತಿಕ ವಿವರಗಳನ್ನು ತೆಗೆದುಹಾಕುವಂತೆಯೂ ಅವರು ಕೋರಿದ್ದಾರೆ.
ಸೌರವ್ ದಾಸ್ ಅವರ ಅರ್ಜಿಯಲ್ಲಿ ‘ದಿ ಪ್ಯಾಂಪ್ಲೆಟ್’ ಮತ್ತು ‘ದಿ ಜೈಪುರ್ ಡೈಲಾಗ್ಸ್’ ಎಂಬ ಎರಡು ಬಲಪಂಥೀಯ ಯೂಟ್ಯೂಬ್ ಚಾನೆಲ್‌ಗಳನ್ನು ಹೆಸರಿಸಲಾಗಿದ್ದು, ಅಯ್ಯರ್-ಮಿತ್ರ ಅವರು “ತನ್ನ ಮನೆ ಕಡೆಗೆ ಜನರ ಗಮನ ಸೆಳೆದಿದ್ದಾರೆ. ತಾನು ಆ ಜಾಗದಲ್ಲಿ ಶಾಂತಿಯುತವಾಗಿ ವಾಸಿಸುವುದಕ್ಕೆ ಅಡ್ಡಿಪಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ತನ್ನ ಪತ್ರಿಕೋದ್ಯಮದ ಕೆಲಸ ಮತ್ತು ರಾಜಕೀಯ ಒಳಗೊಳ್ಳುವಿಕೆಯು ಈ ಹಿಂದೆಯೂ ತನ್ನನ್ನು “ಹಿಂಸಾತ್ಮಕ ಬೆದರಿಕೆಗಳು ಮತ್ತು ಉದ್ದೇಶಪೂರ್ವಕ ಹಗೆತನಕ್ಕೆ” ಗುರಿಪಡಿಸಿತ್ತು ಎಂದು ದಾಸ್ ಹೇಳಿದ್ದಾರೆ.
ತನ್ನ ನಿಖರವಾದ ಮನೆ ವಿಳಾಸವನ್ನು ಪದೇ ಪದೇ ಬಹಿರಂಗಪಡಿಸುವುದು ಮತ್ತು ಅದನ್ನು ಪ್ರಚಾರ ಮಾಡುವುದು, ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ದೈಹಿಕ ದಾಳಿಗೆ ನಿಜವಾದ ಮತ್ತು ನಿರೀಕ್ಷಿತ ಅಪಾಯವನ್ನು ಉಂಟುಮಾಡುತ್ತದೆ ಎಂದು ದಾಸ್ ಹೇಳಿಕೊಂಡಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ, ದಾಸ್ ಅವರು ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ತಾನು ಇಲ್ಲದ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಗ್ರೇಟರ್ ಕೈಲಾಶ್‌ನಲ್ಲಿರುವ ತನ್ನ ಮನೆಗೆ ನುಗ್ಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಆ ವ್ಯಕ್ತಿಗಳು ತಮ್ಮ ಬಗ್ಗೆ ಮಾಹಿತಿ ಸಂಗ್ರಹಿಸಲು ಕೇರ್‌ಟೇಕರ್, ಭದ್ರತಾ ಸಿಬ್ಬಂದಿ ಮತ್ತು ನೆರೆಹೊರೆಯವರೊಂದಿಗೆ ಮಾತನಾಡಿದ್ದಾರೆ ಎಂದೂ ಅವರು ದೂರಿದ್ದರು.
ಇದನ್ನು ಆಧರಿಸಿ ದಾಸ್ ಅವರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 329 (ಅತಿಕ್ರಮ ಪ್ರವೇಶ), 351 (ಅಪರಾಧಿಕ ಬೆದರಿಕೆ) ಮತ್ತು 356 (ಮಾನನಷ್ಟ) ಅಡಿಯಲ್ಲಿ ಎಫ್‌ಐಆರ್ (ಎಫ್‌ಐಆರ್) ದಾಖಲಿಸುವಂತೆ ಕೋರಿದ್ದರು.
ಕಳೆದ ವಾರ, ದಾಸ್ ಅವರ ಸಂಬಂಧಿಕರ ಮನೆಗೆ ಪುದುಚೇರಿ ಪೊಲೀಸರು ಭೇಟಿ ನೀಡಿದ್ದು ರಾಜಕೀಯ ಬೆದರಿಕೆಯ ಆರೋಪಗಳಿಗೆ ಕಾರಣವಾಗಿತ್ತು. ಆದರೆ, ಪೊಲೀಸರು ಈ ಭೇಟಿಯು ಸ್ವಾತಂತ್ರ್ಯ ದಿನಾಚರಣೆಯ ಮುನ್ನಡೆ ನಡೆಯುವ ಸಾಮಾನ್ಯ ಭದ್ರತೆ ಪರಿಶೀಲನೆಯ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದ್ದರು.


