RTI ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಲನ ಮೂಡಿಸುವಂತಹ ಮಹತ್ವದ ದಾಖಲೆಯೊಂದು ಬಹಿರಂಗವಾಗಿದೆ. ಬಾಳಿಗಾ ಹತ್ಯೆ ನಡೆಯುವುದಕ್ಕೂ ಕೆಲವೇ ದಿನಗಳ ಮುನ್ನ, ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ದೇವಸ್ಥಾನಕ್ಕೆ ಸೇರಿದ ₹24 ಲಕ್ಷ ‘ರಥ ಕಾಣಿಕೆ’ ಹಣವನ್ನು ಕಾನೂನುಬಾಹಿರವಾಗಿ ತಮ್ಮ ಮನೆಗೆ ಒಯ್ದಿದ್ದರು ಎಂಬ ಅಂಶ ನ್ಯಾಯಾಲಯದ ದಾಖಲೆಗಳಿಂದ ಹೊರಬಿದ್ದಿದೆ ಎಂದು ‘ಬಿಎಲ್‌ಆರ್ ಪೋಸ್ಟ್’ ವರದಿ ಮಾಡಿದೆ.
2016ರ ಫೆಬ್ರವರಿಯಲ್ಲಿ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವ ನಡೆದಿತ್ತು. ಈ ವೇಳೆ ಕಾಶಿ ಮಠದ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ ಸಮರ್ಪಿಸಲು ಭಕ್ತರು ನೀಡಿದ್ದ ₹24 ಲಕ್ಷ ಕಾಣಿಕೆ ಮೊತ್ತವನ್ನು ನರೇಶ್ ಶೆಣೈ ಹಾಗೂ ಅವರ ಬೆಂಬಲಿಗರು ಇನ್ನೋವಾ ಕಾರಿನಲ್ಲಿ ನೇರವಾಗಿ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು.
ದೇವಸ್ಥಾನದ ಸಾರ್ವಜನಿಕ ಹಣವನ್ನು ಈ ರೀತಿ ವ್ಯಕ್ತಿಗತವಾಗಿ ನಿರ್ವಹಿಸಿದ್ದನ್ನು ವಿನಾಯಕ ಬಾಳಿಗಾ ತೀವ್ರವಾಗಿ ಪ್ರಶ್ನಿಸಿದ್ದರು. ನಿಯಮಗಳ ಪ್ರಕಾರ, ಸಂಗ್ರಹವಾದ ಕಾಣಿಕೆ ಹಣವನ್ನು ಮೊದಲು ದೇವಸ್ಥಾನದ ಅಧಿಕೃತ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಮತ್ತು ಆ ನಂತರವೇ ಸ್ವಾಮೀಜಿಯವರಿಗೆ ಚೆಕ್ ಮುಖಾಂತರ ವರ್ಗಾಯಿಸಬೇಕು ಎಂದು ಬಾಳಿಗಾ ಆಗ್ರಹಿಸಿದ್ದರು.
ದೇವಸ್ಥಾನದ ಆಡಳಿತ ಮತ್ತು ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರಲು ಬಾಳಿಗಾ ನಡೆಸಿದ ಈ ಹೋರಾಟವೇ ಅವರ ಹತ್ಯೆಗೆ ಪ್ರಮುಖ ಪ್ರಚೋದನೆಯಾಯಿತು ಎಂದು ನ್ಯಾಯಾಲಯದ ದಾಖಲೆಗಳು ಬೆಟ್ಟುಮಾಡಿವೆ. ಈ ರಥ ಕಾಣಿಕೆ ವಿವಾದಕ್ಕಿಂತ ಮುಂಚೆಯೇ ಬಾಳಿಗಾ ಅವರು ದೇವಸ್ಥಾನದ ಆರ್ಥಿಕ ಲೆಕ್ಕಪತ್ರಗಳ ಮರು ಲೆಕ್ಕಪರಿಶೋಧನೆಗೆ ಆಗ್ರಹಿಸಿ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ನ್ಯಾಯಾಲಯವು ಮರು ಆಡಿಟ್‌ಗೆ ಆದೇಶಿಸಿ, 2016ರ ಏಪ್ರಿಲ್‌ನಲ್ಲಿ ದಿನಾಂಕವನ್ನೂ ನಿಗದಿಪಡಿಸಿತ್ತು. ಆದರೆ, ಈ ಆಡಿಟ್ ಪ್ರಕ್ರಿಯೆ ಆರಂಭವಾಗಲು ಇನ್ನು ಕೆಲವೇ ವಾರಗಳಿವೆ ಎನ್ನುವಾಗಲೇ, ಅಂದರೆ 2016ರ ಮಾರ್ಚ್ 21ರಂದು ಕೊಡಿಯಾಲಬೈಲ್‌ನಲ್ಲಿರುವ ನಿವಾಸದ ಮುಂಭಾಗದಲ್ಲೇ ಬಾಳಿಗಾ ಅವರನ್ನು ದೈಹಿಕವಾಗಿ ಮುಗಿಸಿಹಾಕಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶಿತ್ ದೇವಡಿಗ, ಶೈಲೇಶ್ ಮತ್ತು ಮಂಜುನಾಥ್ ಶೆಣೈ ಸೇರಿ ಏಳು ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ಸುದೀರ್ಘ ಆರೋಪಪಟ್ಟಿ ಸಲ್ಲಿಸಿದ್ದರು. ಸದ್ಯ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ಈಗ ನ್ಯಾಯಾಲಯದ ವಿಚಾರಣೆ ವೇಳೆ ಬಹಿರಂಗವಾಗಿರುವ ಈ ಪ್ರಮುಖ ಸಾಕ್ಷ್ಯಗಳು, ಧಾರ್ಮಿಕ ಸಂಸ್ಥೆಗಳ ಹೆಸರಿನಲ್ಲಿ ನಡೆಯುವ ಅಕ್ರಮಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಗಾಗಿ ಜೀವ ತೆತ್ತ ವಿನಾಯಕ ಬಾಳಿಗಾ ಅವರ ದಿಟ್ಟ ಹೋರಾಟವನ್ನು ಎತ್ತಿಹಿಡಿದಿವೆ.


