HomeಅಂಕಣಗಳುKarnataka against SIRಎಸ್‌ಐಆರ್‌ ಕರಡು ತಿರಸ್ಕರಿಸಿದ ನಾಗರಿಕ ಸಂಘಟನೆಗಳು; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ

ಎಸ್‌ಐಆರ್‌ ಕರಡು ತಿರಸ್ಕರಿಸಿದ ನಾಗರಿಕ ಸಂಘಟನೆಗಳು; ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ

ಮತದಾರರ ಹೆಸರು ಡಿಲೀಟ್ ಮಾಡುವುದು ಕ್ರಿಮಿನಲ್ ಅಪರಾಧ: ನಟ ಪ್ರಕಾಶ್‌ ರಾಜ್

- Advertisement -
- Advertisement -

ಆಗಸ್ಟ್ 24 ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಎಸ್‌ಐಆರ್‌ ಕರಡು ಪಟ್ಟಿಯನ್ನು ಕರ್ನಾಟಕದ ನಾಗರಿಕ ಸಂಘಟನೆಗಳು ತಿರಸ್ಕರಿಸಿದ್ದು, ಲಕ್ಷಾಂತರ ಮತದಾರರಿಗೆ ನೋಟಿಸ್‌ ಕೊಡಲು ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ ಮಾಡಲಾಯಿತು.

ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಇಂದು ಎಸ್‌ಐಆರ್ ವಿರೋಧಿ ಒಕ್ಕೂಟದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ ಮಾಡಲಾಯಿತು. ಎದ್ದೇಳು ಕರ್ನಾಟಕದ ಕೆ. ಎಲ್. ಅಶೋಕ್ ಮಾತನಾಡಿ, “ಕಳೆದ ಐದಾರು ತಿಂಗಳಿಂದ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲೂ ಜನಪರ ಸಂಘಟನೆಗಳು ಒಗ್ಗೂಡಿ ಎಸ್‌ಯಾರ್ ವಿರುದ್ಧ ಜಾಗೃತಿ ಮೂಡಿಸಿ, ಅದರಿಂದ ಆಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಲ್ಲಿ ರಾಜ್ಯದ ಎಲ್ಲ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳು ಜೊತೆಗೂಡಿದ್ದವು” ಎಂದರು.

“ಎಸ್‌ಐಆರ್‌ ಕುತಂತ್ರ ಎಂಬುದು ನಮಗೆಲ್ಲ ಗೊತ್ತಿತ್ತು. ನಿನ್ನೆ ಪ್ರಕಟವಾದ ಕರಡು ಪಟ್ಟಿಯಲ್ಲಿ, ನಿರೀಕ್ಷೆಯಂತೆ ಲಕ್ಷಾಂತರ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆಯೋಗ ನೀಡಿದ್ದ ಫಾರ್ಮ್ ಭರ್ತಿ ಮಾಡಲು ಚಿಂತಕರು ಮತ್ತು ಪ್ರೊಫೆಸರ್‌ಗಳಿಗೂ ಕಷ್ಟವಾಗಿತ್ತು. ಚುನಾವಣಾ ಆಯೋಗ ಇಡೀ ಎಸ್‌ಐಆರ್‌ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ನಟ ಪ್ರಕಾಶ್ ರಾಜ್ ಅವರು ತಮ್ಮ ಹೆಸರು ಡಿಲೀಟ್ ಆಗಿದ್ದರೂ, ಇದು ತಮ್ಮ ಸಮಸ್ಯೆ ಮಾತ್ರ ಎಂದುಕೊಳ್ಳದೆ ಬಡವರು ಮತ್ತು ಅನಕ್ಷರಸ್ಥರ ಪರವಾಗಿ ನಿಂತು ಹೋರಾಟ ಮಾಡುತ್ತಿದ್ದಾರೆ. ಕರ್ನಾಟಕದ ನಾಗರಿಕ ಸಂಘಟನೆಗಳ ಪರವಾಗಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ನಾವಿಂದು ಎಫ್‌ಐಆರ್ ಬಿಡುಗಡೆ ಮಾಡುತ್ತಿದ್ದೇವೆ” ಎಂದರು.

ಕೇಂದ್ರ ಚುನಾವಣಾ ಆಯುಕ್ತರ ನೇಮಕವೇ ಸರಿಯಾಗಿ ಆಗಿಲ್ಲ: ಬಹುಭಾಷಾ ನಟ ಪ್ರಕಾಶ್ ರಾಜ್

“ಇದೊಂದು ನಾಗರಿಕ ಸಮಾಜ, ನಮ್ಮ ಆಕ್ಷೇಪಣೆಗಳನ್ನು ಜನರ ಪರವಾಗಿ ಕೇಂದ್ರ ಚುನಾವನಾ ಆಯೋಗದ ವಿರುದ್ಧ ಎಫ್‌ಐಆರ್ ರೂಪದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಚಾರ್ಜ್‌ಶೀಟ್ ಕೂಡ ಬಿಡುಗಡೆ ಮಾಡಲಿದ್ದೇವೆ. ಇಷ್ಟೆಲ್ಲಾ ನಾಗರಿಕ ಸಂಘಟನೆಗಳು ಎಸ್‌ಯಾರ್ ಬಗ್ಗೆ ಜಾಗೃತಿ ಮೂಡಿಸಿ ಆತಂಕ ವ್ಯಕ್ತಪಡಿಸಿದರೂ ಆಯೋಗ ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ ಚುನಾವಣಾ ಆಯುಕ್ತರ ನೇಮಕವೇ ಸರಿಯಾಗಿ ಆಗಿಲ್ಲ. ಆಡಳಿತ ಪಕ್ಷದ ಬಹುಮತದಿಂದ ಆದ ಆಯ್ಕೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ನ್ಯಾಯಾಂಗದ ಪ್ರತಿನಿಧಿಯೇ ಇಲ್ಲ. ಒಂದು ಸ್ವತಂತ್ರ ಸಂಸ್ಥೆಯ ಮುಖ್ಯಸ್ಥರ ಆಯ್ಕೆ ಪ್ರಜಾಪ್ರಭುತ್ವದ ರೀತಿಯಲ್ಲಿ ಆಗಿಲ್ಲ; ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ” ಎಂದು ನಟ ಪ್ರಕಾಶ್‌ ರಾಜ್ ಆಕ್ರೋಶ ವ್ಯಕ್ತಪಡಿಸಿದರು.

“ದೇಶದ ಪ್ರಜೆಗಳನ್ನು ಆತಂಕಕ್ಕೆ ಈಡುಮಾಡುವ ರೀತಿಯಲ್ಲಿ ಯಾಕೆ ನಡೆದುಕೊಳ್ಳಲಾಗುತ್ತಿದೆ? ಬಂಗಾಳದಲ್ಲಿ 27 ಲಕ್ಷ ಜನರು ‘ನಾವು ಅರ್ಹರು’ ಎಂದು ಕೋರ್ಟ್‌ಗೆ ಹೋಗಿದ್ದಾರೆ. ಅದರಲ್ಲಿ 34 ಸಾವಿರ ಜನರ ವಿಚಾರಣೆ ಮಾತ್ರ ನಡೆಯುತ್ತಿದೆ. ಬೇಕಂತಲೇ ವಿಚಾರಣೆಯನ್ನು ತಡ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ, ಇಷ್ಟೊಂದು ಅವಸರ ಯಾಕೆ” ಎಂದು ಪ್ರಶ್ನಿಸಿದರು.

“ನಾವು ತೆರಿಗೆ ಕಟ್ಟುತ್ತೇವೆ, ನೀವು ನಿಮ್ಮ ಕೆಲಸ ಏನಿದೆಯೋ ಅದನ್ನು ಸರಿಯಾಗಿ ಮಾಡಬೇಕು. ಮನೆಮನೆಗೆ ಭೇಟಿ ನೀಡಿ ಹೊಸ ಮತದಾರರನ್ನು ಸೇರಿಸಬೇಕು, ತೀರಿಕೊಂಡವರ ಹೆಸರನ್ನು ಡಿಲೀಟ್ ಮಾಡಬೇಕು. ತಿದ್ದುಪಡಿಗಳಿದ್ದರೆ ಫಾರ್ಮ್ 8 ಪಡೆದು ಮಾಡಬೇಕು. ಅಧಿಕಾರಿಗಳೇ ಫಾರ್ಮ್ ತುಂಬಬೇಕು, ಏಕೆಂದರೆ ಬಹುತೇಕ ಜನರು ಅನಕ್ಷರಸ್ಥರು. 2002 ರಲ್ಲಿ ಆಗಿರುವ ತಪ್ಪುಗಳನ್ನು ನಿಮ್ಮದೇ ಸಿಬ್ಬಂದಿ ಮಾಡಿದ್ದು, ಜನರಲ್ಲ, ಇಂದು ನೀವು ಹೇಳುತ್ತಿರುವ ಎಲ್ಲಾ ತಪ್ಪುಗಳಿಗೂ ನೀವೇ ಜವಾಬ್ದಾರರು” ಎಂದು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದರು.

“ದಯವಿಟ್ಟು ಮತದಾರರ ಘನತೆಯನ್ನು ಕಾಪಾಡಿ. ಇಷ್ಟೊಂದು ಅವಸರ ಯಾಕೆ? ಐದು ಕೋಟಿ ಜನರನ್ನು ಒಂದು ತಿಂಗಳಲ್ಲಿ ತಲುಪಲು ಸಾಧ್ಯವೇ? ಬೆಂಗಳೂರಿನಂತಹ ನಗರದಲ್ಲಿ ಬಿಎಲ್‌ಒಗಳು ಜನರನ್ನು ತಲುಪುವುದು ಕಷ್ಟ, ಬಹುತೇಕರನ್ನು ಭೇಟಿ ಮಾಡಲು ಆಗಿಲ್ಲ. ಮನೆ ಬದಲಾಯಿಸಿದ್ದರೆ ಹೆಸರು ಡಿಲೀಟ್ ಮಾಡಲಾಗಿದೆ, ಅವರನ್ನು ಹುಡುಕುವ ಪ್ರಯತ್ನ ಮಾಡಲಿಲ್ಲ. ಎಎಸ್‌ಡಿಡಿಒ ಪಟ್ಟಿಯಲ್ಲಿ 16 ಲಕ್ಷ ಜನರು ಸತ್ತಿದ್ದಾರೆ ಎಂದು ಹೇಳಿದ್ದೀರಿ. ಇದು ಕರ್ನಾಟಕ ಸರ್ಕಾರದ ಸತ್ತವರ ಅಂಕಿ-ಅಂಶಗಳಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ” ಎಂದು ಚುನಾವಣಾ ಆಯೋಗದ ಲೋಪಗಳನ್ನು ವಿವರಿಸಿದರು.

“ಮನೆ ಬದಲಾಯಿಸಿದವರಿಗೆ ನಾನೇ ಉದಾಹರಣೆ. ನಾನು ಎಲ್ಲೂ ಹೋಗಿಲ್ಲ, ಆದರೂ ನನಗೆ ಎನ್ಯುಮರೇಷನ್ ಫಾರ್ಮ್ ಕೊಟ್ಟೇ ಇಲ್ಲ. ಗೈರಾದವರು ದೇಶ ಬಿಟ್ಟು ಹೋಗಿಲ್ಲ, ಅವರು ಎಲ್ಲೋ ಕೆಲಸಕ್ಕೆ ಹೋಗಿರುತ್ತಾರೆ. ಮನೆಯಲ್ಲಿ ಇರಲಿಲ್ಲ ಎಂದ ಮಾತ್ರಕ್ಕೆ ಹೆಸರು ಡಿಲೀಟ್ ಮಾಡಲಾಗಿದೆ. ಆ ವ್ಯಕ್ತಿ ಮತ್ತೆ ಸಾಲಿನಲ್ಲಿ ನಿಂತು ‘ಫಾರ್ಮ್ 6’ ಕೊಡಬೇಕು. ಅವರಿಗೆ ಅಷ್ಟೊಂದು ಹಿಂಸೆ ಯಾಕೆ ಕೊಡುತ್ತಿದ್ದೀರಿ? ನಿಮ್ಮ ಅಜೆಂಡಾ ಏನು” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

“ನಿಮಗೆ ಎಸ್‌ಐಆರ್‌ ಕೆಲಸ ಮಾಡಲು ತುಂಬಾ ಸಮಯವಿದೆ, ಇಷ್ಟೊಂದು ಅವಸರ ಯಾಕೆ? ನಿಮ್ಮ ಅಜೆಂಡಾವೇ ತಪ್ಪಾಗಿದೆ. ಆರು ತಿಂಗಳ ಮೊದಲೇ ನೀವು ಈ ಬಗ್ಗೆ ಮಾಹಿತಿ ಕೊಡಬೇಕಾಗಿತ್ತು. ಈ ದೇಶದ ನಾಗರಿಕರ ಜೊತೆ ಯಾಕೆ ಹೀಗೆ ವರ್ತಿಸುತ್ತಿದ್ದೀರಿ? ಕರ್ನಾಟಕದ ಲಕ್ಷಾಂತರ ಜನರು ಕೋರ್ಟ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾ” ಎಂದು ಆಕ್ರೋಶ ಹೊರಹಾಕಿದರು.

ಮತದಾರರ ಹೆಸರು ಡಿಲೀಟ್ ಮಾಡುವುದು ಕ್ರಿಮಿನಲ್ ಅಪರಾಧ

“ಬಿಜೆಪಿ ಅಥವಾ ಕಾಂಗ್ರೆಸ್ ಯಾರೇ ಆಗಿರಲಿ, ಯಾವುದೇ ಪಕ್ಷದ ಪರವಾದ ಮತದಾರರ ಹೆಸರು ಡಿಲೀಟ್ ಆದರೂ ಅದು ತಪ್ಪು. ನಾನು ಯಾರಿಗೆ ಬೇಕಾದರೂ ಮತ ಹಾಕುತ್ತೇನೆ ಎನ್ನುವುದು ನನ್ನ ಹಕ್ಕು. ಇಲ್ಲಿ ಯಾವ ಪಕ್ಷದ ಪರವಾದ ಮತದಾರರ ಹೆಸರು ಡಿಲೀಟ್ ಆಯಿತು ಎಂಬುದು ಮುಖ್ಯವಲ್ಲ, ಇದು ಕ್ರಿಮಿನಲ್ ಅಪರಾಧ! ಇಷ್ಟೊಂದು ಅತಿ ಮುಖ್ಯ ಕೆಲಸ ಮಾಡಲು ಅರ್ಹ ಬಿಎಲ್‌ಒಗಳನ್ನು ನೇಮಿಸಿಯೇ ಇಲ್ಲ. ಇದರಿಂದ ಜನರಿಗೆ ‘ವೋಟ್ ಹಾಕುವುದೇ ಬೇಡ’ ಎಂಬ ನಿರಾಸಕ್ತಿ ಮೂಡುತ್ತಿದೆ” ಎಂದರು.

“ಜಗತ್ತಿನ ಎಲ್ಲಾ ಸರ್ವಾಧಿಕಾರಿಗಳು ಮಾಡಿದ್ದು ಇದನ್ನೇ. ತಾವೇ ಸುಪ್ರೀಂ ಎಂದುಕೊಳ್ಳುತ್ತಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಮತದಾರರೇ ಸುಪ್ರೀಂ! ಅನರ್ಹನನ್ನೂ ಆಯ್ಕೆ ಮಾಡಿಕೊಳ್ಳುವುದು ಮತದಾರನ ಹಕ್ಕು; ತಪ್ಪಾಗಿದ್ದರೆ ಐದು ವರ್ಷದ ನಂತರ ಸರಿ ಮಾಡಿಕೊಳ್ಳುತ್ತಾರೆ. ಆದರೆ ನೀವು ಆ ತಪ್ಪು ಮಾಡಲು ಸಾಧ್ಯವಿಲ್ಲ. ಪ್ರಜೆಗಳನ್ನು ಅಸಹಾಯಕ ಸ್ಥಿತಿಗೆ ತಳ್ಳುವುದು ಸರಿಯಲ್ಲ. ಇದನ್ನು ಕರ್ನಾಟಕದ ನಾಗರಿಕ ಸಂಘಟನೆಗಳಾದ ನಾವು ಒಪ್ಪುವುದಿಲ್ಲ” ಎಂದು ಹೇಳಿದರು.

ಸೆ. 1 ರಂದು ಚುನಾವಣಾ ಆಯೋಗ ಚಲೋ

“ಸೆಪ್ಟೆಂಬರ್ 1 ರಂದು ನಾವು ಫ್ರೀಡಂ ಪಾರ್ಕ್‌ನಿಂದ ಸಂತ್ರಸ್ತರೊಂದಿಗೆ ‘ಚುನಾವಣಾ ಆಯೋಗ ಚಲೋ’ ಹಮ್ಮಿಕೊಂಡಿದ್ದೇವೆ. ಇದು ಸುದೀರ್ಘವಾಗಿ ಮುಂದುವರಿಯುತ್ತದೆ. ರಾಜಕೀಯ ಪಕ್ಷಗಳು ಮತದಾರರ ಪ್ರತಿನಿಧಿಗಳು. ಆದ್ದರಿಂದ ನೀವೆಲ್ಲರೂ ನಮ್ಮ ಜೊತೆಗೆ ನಿಲ್ಲಬೇಕು, ಕೋರ್ಟ್ ಮೆಟ್ಟಿಲು ಹತ್ತಬೇಕು. ನಾವು ಕೋರ್ಟ್‌ಗೆ ಹೋಗುತ್ತೇವೆ, ಜೊತೆಗೆ ಸರ್ಕಾರವನ್ನು ಪ್ರಶ್ನೆ ಮಾಡುತ್ತಲೇ ಇರುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಎಸ್‌ಐಆರ್ ಕರಡು ಪಟ್ಟಿಯನ್ನು ನಾಗರಿಕ ಸಮಾಜ ಒಪ್ಪಬಾರದು: ನೂರ್ ಶ್ರೀಧರ್

“ಕರ್ನಾಟಕದ ಎಲ್ಲ ಜನಪರ ಹಾಗೂ ಜಾತ್ಯತೀತ ಸಂಘಟನೆಗಳು ಕಳೆದ ಒಂದು ವರ್ಷದಿಂದ ಎಸ್‌ಐಆರ್ ವಿಚಾರವಾಗಿ ಕೆಲಸ ಮಾಡುತ್ತಿದ್ದೇವೆ. ಅದರ ಸಂವಿಧಾನ ವಿರೋಧಿ ವಿಚಾರಗಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದೇವೆ. ಕರ್ನಾಟಕವು ಬಿಹಾರ, ಬಂಗಾಳದಂತೆ ಆಗಬಾರದು, ಯಾರೂ ಮತದಾನದಿಂದ ವಂಚಿತರಾಗಬಾರದು ಎಂದು ಬಹಳಷ್ಟು ಕೆಲಸ ಮಾಡಿದ್ದೇವೆ. ನಿನ್ನೆ ಬಿಡುಗಡೆಯಾದ ಕರಡು ಪಟ್ಟಿಯನ್ನು ನಾಗರಿಕ ಸಮಾಜ ಒಪ್ಪಬಾರದು” ಎಂದು ಜನಶಕ್ತಿ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಹೇಳಿದರು.

“ನೋಟಿಸ್‌ ಪಡೆಯಲಿರುವ 43 ಲಕ್ಷ ಜನರು ಕುರಿ-ಕೋಳಿಗಳಲ್ಲ, ಇವರೆಲ್ಲ ಮತದಾರರು! ಇಷ್ಟೊಂದು ಜನರನ್ನು ಡಿಲೀಟ್ ಮಾಡಿದ್ದು ಯಾಕೆ? ಆಯೋಗ 43 ಲಕ್ಷ ಜನರಿಗೆ ನೋಟಿಸ್‌ ಕೊಡುತ್ತಿಲ್ಲ, ಬದಲಿಗೆ ವಾರೆಂಟ್ ಕೊಡುತ್ತಿದೆ! ಅವರ ಹೆಸರು ಡಿಲೀಟ್ ಆದರೆ ಅವರು ಎಲ್ಲಿಗೆ ಹೋಗುತ್ತಾರೆ? ಇಲ್ಲಿ ನಾಗರಿಕತೆಯನ್ನು ಸಾಬೀತು ಮಾಡಬೇಕಾದ ಸ್ಥಿತಿ ಬಂದಿದೆ. ಇದು ಕರ್ನಾಟಕದ ಜನರನ್ನು ತೀವ್ರ ಒತ್ತಡ ಮತ್ತು ಆತಂಕಕ್ಕೆ ಈಡು ಮಾಡಿದೆ. ಇದು ರಾಜ್ಯ ಚುನಾವಣಾ ಆಯೋಗದ ಕೆಲಸವಲ್ಲ, ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವೇ ನಿಜವಾದ ಆರೋಪಿಗಳು. ನಾವು ಅವರ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಿದ್ದೇವೆ” ಎಂದರು.

“ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸರಣಿ ಲೋಪಗಳಿವೆ. ಎಸ್‌ಐಆರ್ ಆರಂಭಿಸುವ ದಿನಾಂಕವನ್ನು ಜನರಿಗೆ ಮೊದಲೇ ತಿಳಿಸಿಲ್ಲ. ಘೋಷಣೆ ಮಾಡಿದ ಕೇವಲ 15 ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಕೊನೆಯ ಹಂತದವರೆಗೆ ಬಿಎಲ್‌ಒ ಯಾರು ಎಂಬುದೇ ಅವರಿಗೆ ಗೊತ್ತಿರಲಿಲ್ಲ! ಬಿಎಲ್‌ಒಗಳಿಗೆ ಅರ್ಧ ದಿನ ಮಾತ್ರ ತರಬೇತಿ ನೀಡಲಾಗಿದೆ. ಲಾಜಿಕಲ್ ಡಿಸಿಕ್ರಪನ್ಸಿ (Logical Discrepancy) ಬಗ್ಗೆ ಅವರಿಗೆ ಅರಿವೇ ಇರಲಿಲ್ಲ. ನಾಗರಿಕ ಸಂಘಟನೆಗಳ ಒತ್ತಡದಿಂದಾಗಿ ಆ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಇದು ಸೂಕ್ತ ತರಬೇತಿ ನೀಡಿ ಮಾಡಿದ ಪ್ರಕ್ರಿಯೆಯಲ್ಲ, ಆದ್ದರಿಂದ ಈ ಎಸ್‌ಐಆರ್‌ ಅನ್ನು ನಾವು ಒಪ್ಪುವುದಿಲ್ಲ” ಎಂದರು.

“ಮನೆ ಶಿಫ್ಟ್ ಮಾಡಿದವರ ಹೆಸರನ್ನು ಡಿಲೀಟ್ ಮಾಡುವಂತಿಲ್ಲ. ಈ ‘Others’ ಯಾರು? ಲಕ್ಷಾಂತರ ಜನರು ತಾವು Enumeration ಫಾರ್ಮ್ ಕೊಡುವುದಿಲ್ಲ ಎನ್ನಲು ಸಾಧ್ಯವೇ? ಇವರೆಲ್ಲರೂ ನೈಜ ಮತದಾರರು. ‘ಅನುಮಾನಾಸ್ಪದ ಮತದಾರರು’ ಎಂದು ಅವರನ್ನು ಅನುಮಾನಿಸುವುದನ್ನು ನಾವು ಒಪ್ಪುವುದಿಲ್ಲ. ಇಡೀ ಪ್ರಕ್ರಿಯೆಯ ಅಂಕಿ-ಅಂಶಗಳನ್ನು ನಾವು ಒಪ್ಪುವುದಿಲ್ಲ; ಬೇಕಿದ್ದರೆ ನಮ್ಮ ಜೊತೆಗೆ ನೇರಾನೇರ ಚರ್ಚೆಗೆ ಬರಲಿ, ವಾಸ್ತವದಲ್ಲಿ ಹಾಗಿಲ್ಲ. ಇಡೀ ದೇಶದಲ್ಲಿ ಈಗಾಗಲೇ 6 ಕೋಟಿ ಹೆಸರುಗಳು ಡಿಲೀಟ್ ಆಗಿವೆ, ಅದು 12 ಕೋಟಿ ದಾಟಬಹುದು. ಈ ಅವಾಂತರಗಳಿಗೆ ಕಾರಣರಾಗಿರುವ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಅವರ ಆಯ್ಕೆಯೇ ಸರಿಯಾಗಿ ಆಗಿಲ್ಲ, ಆಡಳಿತ ಪಕ್ಷದ ಇಬ್ಬರ ಮತವನ್ನು ನಾವು ಒಪ್ಪುವುದಕ್ಕೆ ಸಾಧ್ಯವಿಲ್ಲ” ಎಂದು ಹೇಳಿದರು.

ನಾಗರಿಕ ಸಂಘಟನೆಗಳ ಅಂತಿಮ ಷರಾ:

ಚುನಾವಣಾ ಆಯೋಗ ನಡೆಸಿರುವ ಪ್ರಕ್ರಿಯೆಯನ್ನಾಗಲೀ, ಅದು ನೀಡಿರುವ ಅಂಕಿ ಸಂಖ್ಯೆ ಯನ್ನಾಗಲೀ, ಅದರ ಹಿಂದಿರುವ ವಿವರಣೆಯನ್ನಾಗಲೀ ನಾವು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕದ ನಾಗರೀಕ ಸಮಾಜ ಇದೊಂದು ದೋಷಭರಿತ ಅನಾಗರೀಕ ಪ್ರಕ್ರಿಯೆ ಎಂದು ಘೋಷಿಸುತ್ತದೆ ಮತ್ತು ತಿರಸ್ಕರಿಸುತ್ತದೆ.

ಇಂತಹ ದೋಷ ಮತ್ತು ದುಷ್ಟತನದ ಪ್ರಕ್ರಿಯೆಯನ್ನು ರೂಪಿಸಿರುವ ಕೇಂದ್ರ ಚುನಾವಣಾ ಆಯೋಗ, ವಿಶೇಷವಾಗಿ ಜ್ಞಾನೇಷ್ ಕುಮಾರ್ ರಾಜಿನಾಮೆಯನ್ನು ಕೊಡಬೇಕೆಂದು ಒತ್ತಾಯಿಸುತ್ತದೆ.

ಕೇಂದ್ರ ಚುನಾವಣಾ ಆಯೋಗವನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಮಾಡಿರುವ ತಿದ್ದುಪಡಿಯೇ ದುರುದ್ದೇಷದಿಂದ ಕೂಡಿದೆ. ಇಬ್ಬರು ಆಳುವ ಪಕ್ಷದ ಮತ್ತು ಒಬ್ಬರು ವಿರೋಧ ಪಕ್ಷದ ಸದಸ್ಯರಿದ್ದು ಆಯ್ಕೆ ಮಾಡುವ ಸಮಿತಿ ನಿಷ್ಪಕ್ಷಪಾತಿಯಾಗಿ ಇರಲು ಸಾಧ್ಯವಿಲ್ಲ. ಇದನ್ನು ಈ ಹಿಂದಿನಂತೆ ಒಬ್ಬರು ಆಳುವ , ಒಬ್ಬರು ವಿರೋಧ ಪಕ್ಷದ ಹಾಗೂ ಒಬ್ಬರು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಇರುವ ಸಮಿತಿ ಆಯ್ಕೆ ಮಾಡುವ ವಿಧಾನಕ್ಕೆ ಮರಳಬೇಕು ಎಂದು ಒತ್ತಾಯಿಸುತ್ತದೆ.

ಈ ಅಕ್ರಮ ಪ್ರಕ್ರಿಯೆಯನ್ನು ಖಂಡಿಸಿ ಸೆಪ್ಟೆಂಬರ್ 1ರಂದು ಚಲೋ ಸಂತ್ರಸ್ತರ ಸಾಕ್ಷ್ಯಗಳೊಂದಿಗೆ “ಎಲೆಕ್ಷನ್ ಕಮಿಷನ್ ಚಲೋ” ನಡೆಸಲಾಗುತ್ತಿದೆ. ನಿಮ್ಮ ಇಡೀ ಪ್ರಕ್ರಿಯೆ ಹೇಗೆ ತಪ್ಪಾದುದು ಎಂಬುದನ್ನು ಕೇವಲ ತರ್ಕದ ಮೂಲಕವಲ್ಲ ಜೀವಂತ ಸಾಕ್ಷಿಗಳ ಸಮೇತ ಚುನಾವಣಾ ಆಯೋಗದ ಮುಂದೆ ತರಲಿದ್ದೇವೆ.

ಈ ಇಡೀ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಕದವನ್ನೂ ತಟ್ಟಲಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ...

ಮತ್ತೆ ಜೈಲಿನಿಂದ ಹೊರಬಂದ ಅತ್ಯಾಚಾರಿ ರಾಮ್ ರಹೀಮ್! 6 ವರ್ಷದಲ್ಲಿ 17ನೇ ಬಾರಿ ಪೆರೋಲ್

ನವದೆಹಲಿ/ರೋಹ್ಟಕ್: ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಪುನಃ...

‘ಕೇಂದ್ರ ಸರ್ಕಾರ ಜಾತಿ ಗಣತಿಗೆ ರೂಪಿಸಿರುವ ಪ್ರಶ್ನಾವಳಿ ವಿಧಾನ ದಾರಿತಪ್ಪಿಸುವಂತಿವೆ’: ಹೊಸ ಪ್ರಶ್ನಾವಳಿ ರಚಿಸಲು ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಪತ್ರ

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರೂಪಿಸಿರುವ ಪ್ರಶ್ನಾವಳಿಯ ವಿಧಾನವು ಅತ್ಯಂತ ದಾರಿತಪ್ಪಿಸುವಂತಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ...

ಪತ್ರಕರ್ತ ಅಭಿಷೇಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಆದೇಶ

ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು,...

2027ರ ಜನಗಣತಿಯಲ್ಲಿ ಪೋಷಕರ ಧರ್ಮ, ಜನ್ಮಸ್ಥಳದ ವಿವರ ಏಕೆ? ಕೇಂದ್ರದ ವಿರುದ್ಧ ಸಿಪಿಐ(ಎಂ) ಆಕ್ರೋಶ

2027ರ ಜನಗಣತಿ ಪ್ರಶ್ನಾವಳಿಯಲ್ಲಿ ಪೋಷಕರ ಧರ್ಮ ಹಾಗೂ ಜನ್ಮಸ್ಥಳದ ಕುರಿತಾದ ವಿವರಗಳನ್ನು ಸಂಗ್ರಹಿಸಲು ಉದ್ದೇಶಿಸಿರುವುದರ ವಿರುದ್ಧ ಸಿಪಿಐ(ಎಂ) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕ್ರಮವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರುವ...

ಟಿಎಂಸಿ ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಶಾಕ್: 20 ಎಂಪಿಗಳಿಗೆ ನೋಟಿಸ್ ಜಾರಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಜನಪ್ರಿಯವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟವನ್ನು ಸೇರಿಕೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಟಿಎಂಸಿ ಪ್ರಧಾನ...

ಹನೂರ್ ‘ಶೂಟೌಟ್’: ದಾಖಲೆಗಳನ್ನು ಬಿಡುಗಡೆ ಮಾಡಿದ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ: ಸಿಬಿಐ ತನಿಖೆಗೆ ಆಗ್ರಹ 

ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದ ಮೂವರ ಸಾವು ಮತ್ತು ಗುಂಡಿನ ಚಕಮಕಿ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆಗಸ್ಟ್ 15ರಂದು ಹನೂರಿನ ಮರಿಯಮಂಗಲ ಬಿಟ್ ಅರಣ್ಯ...

ಬಿಜೆಪಿ MLC ರವಿಕುಮಾರ್‌ ವಿರುದ್ಧ ಜಾಮೀನು ರಹಿತ ವಾರಂಟ್‌

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ವಿರುದ್ಧ ಅವಹೇಳನಕಾರಿ ಹಾಗೂ ಕೋಮು ಪ್ರಚೋದಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ವಿಚಾರಣೆಗೆ ಹಾಜರಾಗದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಬೆಂಗಳೂರಿನ...

20 ಬಂಡಾಯ ಸಂಸದರ ಅನರ್ಹತೆಗೆ ಒತ್ತಾಯ: ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ

ತಮ್ಮ ಪಕ್ಷದಿಂದ ಪ್ರತ್ಯೇಕಗೊಂಡಿರುವ 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ತೃಣಮೂಲ ಕಾಂಗ್ರೆಸ್...

ದೆಹಲಿ, ಬಿಹಾರದಲ್ಲಿ ನೀಟ್ ಪ್ರತಿಭಟನಾಕಾರರ ಮೇಲೆ ಪೆಲೆಟ್, ಅಶ್ರುವಾಯು, ವಿದ್ಯುತ್ ಶಾಕ್ ಲಾಠಿ ಪ್ರಹಾರ ನಡೆದಿರುವುದು ಸತ್ಯ: ಅಮ್ನೆಸ್ಟಿ ವರದಿಯಲ್ಲಿ ಕಳವಳಕಾರಿ ವಿಷಯಗಳು ಬಹಿರಂಗ

ದೆಹಲಿ ಮತ್ತು ಬಿಹಾರದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ನೇತೃತ್ವದಲ್ಲಿ ನಡೆದ ನೀಟ್ (NEET) ಪರೀಕ್ಷಾ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ಭಾರತೀಯ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕಾನೂನುಬಾಹಿರ ಮತ್ತು ಅತಿಯಾದ ಬಲಪ್ರಯೋಗ ಮಾಡಿದ್ದಾರೆ...