ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಜನಪ್ರಿಯವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಒಕ್ಕೂಟವನ್ನು ಸೇರಿಕೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಟಿಎಂಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವು ಈ ನೋಟಿಸ್ ಜಾರಿಗೊಳಿಸಿದೆ. 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಟಿಎಂಸಿ ನೀಡಿರುವ ಅರ್ಜಿಗಳ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರ ನಿರ್ಧಾರ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಅಭಿಷೇಕ್ ಬ್ಯಾನರ್ಜಿ ತಮ್ಮ ಅರ್ಜಿಯಲ್ಲಿ ಕೋರಿದ್ದರು.
ಆರಂಭದಲ್ಲಿ ಸುಪ್ರೀಂ ಕೋರ್ಟ್ ಸ್ಪೀಕರ್ ಅವರಿಗೂ ನೋಟಿಸ್ ಜಾರಿ ಮಾಡುವ ಸುಳಿವು ನೀಡಿತ್ತಾದರೂ, ಸ್ಪೀಕರ್ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮನವಿಯ ಮೇರೆಗೆ ನೋಟಿಸ್ ಜಾರಿಯನ್ನು ತಡೆಹಿಡಿಯಿತು. ವಿಚಾರಣೆ ವೇಳೆ ತುಷಾರ್ ಮೆಹ್ತಾ ಅವರು, ಅನರ್ಹತೆ ಅರ್ಜಿಗಳ ಕುರಿತು ಸ್ಪೀಕರ್ ಈಗಾಗಲೇ ನೋಟಿಸ್‌ಗಳನ್ನು ಜಾರಿ ಮಾಡಿದ್ದಾರೆ ಎಂಬ ಮಾಹಿತಿ ನನಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ, ಇಲ್ಲಿ ಕೇವಲ ನೋಟಿಸ್ ಜಾರಿ ಮಾಡುವುದು ವಿಷಯವಲ್ಲ, ನಿಗದಿತ ಕಾಲಮಿತಿಯೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಮುಖ್ಯ ಎಂದು ಹೇಳಿದರು.
ಅನರ್ಹತೆ ಅರ್ಜಿಗಳ ತೀರ್ಮಾನದಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂದು ಬ್ಯಾನರ್ಜಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ನ್ಯಾಯಾಲಯದ ಈ ನಡಾವಳಿಯ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ ಪರ ವಕೀಲ ಕಲ್ಯಾಣ್ ಬ್ಯಾನರ್ಜಿ, ಇದು ತೃಣಮೂಲ ಕಾಂಗ್ರೆಸ್‌ಗೆ ಸಿಕ್ಕ ದೊಡ್ಡ ಜಯವಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಲಿದೆ ಎಂದಿದ್ದಾರೆ.
ಟಿಎಂಸಿ ಸಂಸದೀಯ ಪಕ್ಷದಲ್ಲಿ ಎದ್ದ ದಂಗೆಯ ನಂತರ 20 ಲೋಕಸಭಾ ಸಂಸದರು ತ್ರಿಪುರಾ ಮೂಲದ ‘ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (ಎನ್‌ಸಿಪಿಐ) ಎಂಬ ರಾಜಕೀಯ ಪಕ್ಷದೊಂದಿಗೆ ವಿಲೀನಗೊಂಡಿರುವುದಾಗಿ ಘೋಷಿಸಿಕೊಂಡು, ಸದನದಲ್ಲಿ ಪ್ರತ್ಯೇಕ ಗುರುತಿಸುವಿಕೆಯನ್ನು ಕೋರಿದ್ದರು. ಅಂದಿನಿಂದ ಈ ಬಂಡಾಯ ಸಂಸದರನ್ನು ಸಂಸತ್ತಿನಲ್ಲಿ ಎನ್‌ಸಿಪಿಐ ಗುಂಪು ಎಂದು ಪರಿಗಣಿಸಲಾಗಿದ್ದು, ಇವರು ಎನ್‌ಡಿಎ ಮೈತ್ರಿಕೂಟದ ಸಭೆಗಳಲ್ಲೂ ಭಾಗವಹಿಸುತ್ತಿದ್ದಾರೆ. ಆದರೆ, ಈ ಸಂಸದರು ಟಿಎಂಸಿ ಚಿಹ್ನೆಯಡಿ ಗೆದ್ದಿದ್ದು, ಇನ್ನೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದು ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದಂತೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಇವರನ್ನು ಅನರ್ಹಗೊಳಿಸಬೇಕು ಎಂದು ಟಿಎಂಸಿ ವಾದಿಸುತ್ತಿದೆ. ಆದರೆ, ಬಂಡಾಯ ಬಣವು ತಮ್ಮ ನಡೆ ಕಾನೂನುಬದ್ಧ ವಿಲೀನವಾಗಿದೆ ಎಂದು ಸಮರ್ಥಿಸಿಕೊಂಡಿದೆ.
ಈ ಅರ್ಜಿಯಲ್ಲಿ ಲೋಕಸಭಾ ಸ್ಪೀಕರ್ ಮತ್ತು ಕಾರ್ಯದರ್ಶಿಯವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಅನರ್ಹತೆ ಬೆದರಿಕೆ ಎದುರಿಸುತ್ತಿರುವ 20 ಸಂಸದರ ಪಟ್ಟಿ ಈ ಕೆಳಗಿನಂತಿದೆ. ಕಾಕೋಲಿ ಘೋಷ್ ದಸ್ತಿದಾರ್, ಸುದೀಪ್ ಬಂಡೋಪಾಧ್ಯಾಯ, ಶತಾಬ್ದಿ ರಾಯ್, ಪ್ರಸೂನ್ ಬ್ಯಾನರ್ಜಿ, ರಚನಾ ಬ್ಯಾನರ್ಜಿ, ಜಗದೀಶ್ ಚಂದ್ರ ಬರ್ಮಾ ಬಸುನಿಯಾ, ಪಾರ್ಥ ಭೌಮಿಕ್, ಅರೂಪ್ ಚಕ್ರವರ್ತಿ, ಅಧಿಕಾರಿ ದೀಪಕ್ ದೇವ್, ಸಾಯನಿ ಘೋಷ್, ಬಾಪಿ ಹಲ್ದಾರ್, ಮೊಹಮ್ಮದ್ ಅಬು ತಾಹಿರ್ ಖಾನ್, ಕಾಳಿಪಾದ ಸೊರೇನ್ ಖೇರ್ವಾಲ್, ಅಸಿತ್ ಕುಮಾರ್ ಮಾಲ್, ಜೂನ್ ಮಲಿಯಾ, ಮಿತಾಲಿ ಬಾಗ್, ಖಲೀಲುರ್ ರಹಮಾನ್, ಮಾಲಾ ರಾಯ್, ಶರ್ಮಿಳಾ ಸರ್ಕಾರ್ ಮತ್ತು ಯುಸೂಫ್ ಪಠಾಣ್.


