ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದ್ದು, ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ತಡೆ ನೀಡಿದೆ.
ಉತ್ತರ ಪ್ರದೇಶ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ಪರಿಹಾರ ಒದಗಿಸಿದೆ.
ವಿಚಾರಣೆ ವೇಳೆ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಪ್ರತಿಯನ್ನು ತಕ್ಷಣವೇ ಒದಗಿಸುವಂತೆ ಸುಪ್ರೀಂ ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಎಫ್‌ಐಆರ್ ಪ್ರತಿ ಕೈಸೇರಿದ ನಂತರ ಉಪಾಧ್ಯಾಯ ಅವರು ಸೂಕ್ತ ಪರಿಹಾರ ಹಾಗೂ ತಡೆಯಾಜ್ಞೆಗಾಗಿ ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಪೀಠ ತಿಳಿಸಿದೆ. ಅಷ್ಟೇ ಅಲ್ಲದೆ, ಮುಂದಿನ ವಿಚಾರಣೆಯ ದಿನಾಂಕದೊಳಗೆ ಎಫ್‌ಐಆರ್ ಪ್ರತಿಯನ್ನು ಅರ್ಜಿದಾರರಿಗೆ ನೀಡಿದ ಕುರಿತು ಅನುಸರಣೆ ವರದಿಯನ್ನು (Compliance Report) ನ್ಯಾಯಾಲಯಕ್ಕೆ ಸಲ್ಲಿಸುವಂತೆ ಘಾಜಿಯಾಬಾದ್ ಪೊಲೀಸ್ ಆಯುಕ್ತರಿಗೆ ಪೀಠ ಸ್ಪಷ್ಟ ನಿರ್ದೇಶನ ನೀಡಿದೆ.
ಗಾಝಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದೂರುದಾರರೊಬ್ಬರು ಶಿಪ್ರಾ ಮಾಲ್ ಬಳಿ ತಮ್ಮ ಬೈಕ್‌ಗೆ ಬಲೆನೊ ಕಾರು ಢಿಕ್ಕಿ ಹೊಡೆದಿದೆ ಮತ್ತು ಘಟನೆಯ ಬಳಿಕ ಚಾಲಕ ತಮ್ಮನ್ನು ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದರು. ಆ ಕಾರು ಅಭಿಷೇಕ್ ಉಪಾಧ್ಯಾಯ ಅವರಿಗೆ ಸೇರಿದ್ದು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ, ರಾಮ ಮಂದಿರ ದೇಣಿಗೆ ಕಳ್ಳತನ ಮತ್ತು ಅಕ್ರಮಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಪತ್ರಕರ್ತನ ವಿರುದ್ಧ ದ್ವೇಷಪೂರಿತವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇದೀಗ ರಕ್ಷಣೆ ನೀಡಿದೆ.


