ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯವು ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದೆ. ಪಕ್ಷಾಂತರ ಕಾಯ್ದೆಯಡಿ ಸಂಸದರ ಅನರ್ಹತೆ ಪ್ರಕ್ರಿಯೆಗಳನ್ನು ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದ ಬೆನ್ನಲ್ಲೇ ಲೋಕಸಭಾ ಸಚಿವಾಲಯ ಈ ತ್ವರಿತ ಕ್ರಮ ಕೈಗೊಂಡಿದೆ.
ಲೋಕಸಭಾ ಸದಸ್ಯರ (ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ) ನಿಯಮಗಳು 1985ರ ನಿಯಮ 6ರ ಅಡಿಯಲ್ಲಿ ಆಗಸ್ಟ್ 25ರ ದಿನಾಂಕ ನಮೂದಿಸಿ ಈ ನೋಟಿಸ್ ಜಾರಿಗೊಳಿಸಲಾಗಿದೆ. ಜೂನ್ 18ರಂದು ಸಂಸದರ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅನರ್ಹತೆ ಅರ್ಜಿಗಳ ಪ್ರತಿಯನ್ನೂ ಈ ನೋಟಿಸ್ ಜೊತೆಗೆ ಲಗತ್ತಿಸಲಾಗಿದೆ. ಅನರ್ಹತೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಈ 20 ಸಂಸದರಿಗೆ ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ವೇಳೆ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು ಲೋಕಸಭಾ ಸ್ಪೀಕರ್ ಮತ್ತು ಪ್ರಧಾನ ಕಾರ್ಯದರ್ಶಿಯವರ ಪರವಾಗಿ ಆಜರಾಗುವುದಾಗಿ ತಿಳಿಸಿದ ಕಾರಣ ನ್ಯಾಯಾಲಯ ಅವರಿಗೆ ಪ್ರತ್ಯೇಕ ನೋಟಿಸ್ ನೀಡಲಿಲ್ಲ. ಇದೇ ವೇಳೆ ಇದು ಕೇವಲ ನೋಟಿಸ್ ಜಾರಿ ಮಾಡುವ ವಿಷಯವಲ್ಲ, ನಿಗದಿತ ಕಾಲಮಿತಿಯೊಳಗೆ ಅನರ್ಹತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾದ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಭಿಷೇಕ್ ಬ್ಯಾನರ್ಜಿ ಅವರು ಜುಲೈ 27ರಂದು ಲಿಖಿತ ಜ್ಞಾಪಕ ಪತ್ರ ಕಳುಹಿಸಿ ಅರ್ಜಿ ಇತ್ಯರ್ಥಕ್ಕೆ ಕೋರಿದ್ದರು. ಬಳಿಕ ಆಗಸ್ಟ್ 12ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಪ್ರಸ್ತುತ ಅನರ್ಹತೆ ನೋಟಿಸ್ ಪಡೆದ ಸಂಸದರ ಪಟ್ಟಿಯಲ್ಲಿ ಕಾಕೋಲಿ ಘೋಷ್ ದಸ್ತಿದಾರ್, ಸುದೀಪ್ ಬಂಡೋಪಾಧ್ಯಾಯ, ಶತಾಬ್ದಿ ರಾಯ್, ಪ್ರಸೂನ್ ಬ್ಯಾನರ್ಜಿ, ರಚನಾ ಬ್ಯಾನರ್ಜಿ, ಜಗದೀಶ್ ಚಂದ್ರ ಬರ್ಮಾ ಬಸುನಿಯಾ, ಪಾರ್ಥ ಭೌಮಿಕ್, ಅರೂಪ್ ಚಕ್ರವರ್ತಿ, ಅಧಿಕಾರಿ ದೀಪಕ್ ದೇವ್, ಸಯಾನಿ ಘೋಷ್, ಬಾಪಿ ಹಾಲ್ದಾರ್, ಮೊಹಮ್ಮದ್ ಅಬು ತಾಹಿರ್ ಖಾನ್, ಕಾಳಿಪದ ಸರೆನ್ ಖೇರ್ವಾಲ್, ಅಸಿತ್ ಕುಮಾರ್ ಮಾಲ್, ಜೂನ್ ಮಲಿಯಾ, ಮಿತಾಲಿ ಬಾಗ್, ಖಲೀಲುರ್ ರಹಮಾನ್, ಮಾಲಾ ರಾಯ್, ಶರ್ಮಿಳಾ ಸರ್ಕಾರ್ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಸೇರಿದ್ದಾರೆ.


