‘ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು’ ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ ಪವಾಡಸದೃಶವಾಗಿ ಬಚಾವಾದ 40 ವರ್ಷ ಹಳೆಯ ‘ಹಸಿರು ಬಣ್ಣದ ಮನೆ’ಯ ಮಾಲೀಕ ಪ್ರಕಾಶ್ ಅವರ ಆತಂಕದ ನುಡಿಗಳು.
ತಮ್ಮ ಮನೆಯ ಅಕ್ಕಪಕ್ಕದಲ್ಲಿದ್ದ ಕಾರುಗಳು, ದೊಡ್ಡ ದೊಡ್ಡ ಕಟ್ಟಡಗಳು ಹಾಗೂ ಜನರ ಆಸ್ತಿಪಾಸ್ತಿಗಳು ಕ್ಷಣಾರ್ಧದಲ್ಲಿ ನದಿಯ ಪ್ರಬಲ ಹರಿವಿಗೆ ಕೊಚ್ಚಿಹೋಗುತ್ತಿದ್ದಾಗ, ಪ್ರಕಾಶ್ ಅವರ ಮನೆ ಮಾತ್ರ ಅಲುಗಾಡದೆ ಭದ್ರವಾಗಿ ನಿಂತಿತ್ತು. ಇಡೀ ನೇಪಾಳದ ಪ್ರವಾಹದ ಭೀಕರತೆಯನ್ನು ಬಿಂಬಿಸುವ ಅತ್ಯಂತ ಪ್ರಮುಖ ಚಿತ್ರವಾಗಿ ಈ ಮನೆಯ ವೀಡಿಯೋ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದೆ.
‘ಇಂಡಿಯಾ ಟುಡೇ’ ವರದಿಯ ಪ್ರಕಾರ, ಪ್ರವಾಹದ ನೀರು ಕ್ಷಣಾರ್ಧದಲ್ಲೇ ಮನೆಯನ್ನು ಆವರಿಸಿಕೊಂಡಾಗ ಅನುಭವಿಸಿದ ಆ ಭೀಕರ ಮತ್ತು ನಡುಕ ಹುಟ್ಟಿಸುವ ಕ್ಷಣಗಳನ್ನು ಕುಟುಂಬದ ಸದಸ್ಯರು ಸ್ಮರಿಸಿಕೊಂಡಿದ್ದಾರೆ.
ಪ್ರವಾಹದ ಸಂದರ್ಭದಲ್ಲಿ ತಾವು ಅನುಭವಿಸಿದ ಆತಂಕಗಳನ್ನು ನೆನಪಿಸಿಕೊಂಡ ಪ್ರಕಾಶ್, ಪ್ರವಾಹ ಬಂದಾಗ ಮನೆಯಲ್ಲಿ ತಮ್ಮ ಕುಟುಂಬದ ಐದು ಜನರು ಸೇರಿದಂತೆ ಒಟ್ಟು ಆರು ಜನರಿದ್ದರು ಎಂದು ತಿಳಿಸಿದ್ದಾರೆ. ನಾನು ಹತ್ತಿರದ ಅಂಗಡಿಯಲ್ಲಿದ್ದಾಗ ನೀರಿನ ಮಟ್ಟ ಏರುತ್ತಿರುವ ಬಗ್ಗೆ ಎಚ್ಚರಿಕೆ ಸಿಕ್ಕಿತು. ತಕ್ಷಣ ಮನೆಗೆ ಓಡಿಬಂದು ಎಲ್ಲರನ್ನೂ ಹೊರಬರುವಂತೆ ಕೂಗಿದೆ. ಆದರೆ ಅಷ್ಟರಲ್ಲಾಗಲೇ ನೀರಿನ ಭೋರ್ಗರೆತಕ್ಕೆ ಮನೆಯ ಹೊರಗಿದ್ದ ನನ್ನ ವಾಹನವೇ ಮುಳುಗಿ ಉರುಳಿಬಿದ್ದಿತ್ತು. ಅದನ್ನು ನೋಡಿ ಹೆದರಿ ಮತ್ತೆ ಮನೆ ಒಳಗೇ ಓಡಿದೆವು, ಎಂದಿದ್ದಾರೆ.
ಮನೆಯಲ್ಲಿದ್ದವರೆಲ್ಲರೂ ಜೀವ ಉಳಿಸಿಕೊಳ್ಳಲು ಕಟ್ಟಡದ ಕೊನೆಯ ಮಹಡಿ ಮೇಲ್ಛಾವಣಿಗೆ ಓಡಿದೆವು. ಅಷ್ಟರಲ್ಲಾಗಲೇ, ಆರ್ಭಟಿಸುತ್ತಿದ್ದ ನೀರು ಮಹಡಿಯವರೆಗೂ ತಲುಪಿತ್ತು. ಆದರೆ ಶಾಲೆಗೆ ಹೋಗಿದ್ದ ನನ್ನ ಮಗ ಮಾತ್ರ ಜೊತೆಗಿರಲಿಲ್ಲ. ಪ್ರವಾಹಕ್ಕೆ ನಾವೇನಾದರೂ ಕೊಚ್ಚಿಹೋದರೆ ಆ ಮಗನ ಗತಿಯೇನು ಎಂಬ ಯೋಚನೆಯೇ ನನ್ನನ್ನು ತೀವ್ರವಾಗಿ ಕಾಡುತ್ತಿತ್ತು, ಎಂದು ಪ್ರಕಾಶ್ ಭಾವುಕರಾಗಿದ್ದಾರೆ.
40 ವರ್ಷ ಹಳೆಯ ಮನೆ ಬಚಾವಾಗಿದ್ದು ಹೇಗೆ?’
ಸುತ್ತಮುತ್ತಲಿನ ಕಟ್ಟಡಗಳು ನೆಲಸಮವಾದರೂ ಈ ಹಸಿರು ಬಣ್ಣದ ಮನೆ ಮಾತ್ರ ಸುರಕ್ಷಿತವಾಗಿ ಉಳಿದಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಪ್ರಕಾಶ್, “ಇದು ಸುಮಾರು 40 ವರ್ಷಗಳಷ್ಟು ಹಳೆಯ ಮನೆ. ಆ ಕಾಲದಲ್ಲಿ ಸಿಮೆಂಟ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ಗುಣಮಟ್ಟ ಅತ್ಯುತ್ತಮವಾಗಿತ್ತು. ನದಿಯ ದಂಡೆಯಲ್ಲೇ ಮನೆ ಇದ್ದುದರಿಂದ ಸುರಕ್ಷತೆಯ ದೃಷ್ಟಿಯಿಂದ ತಳಪಾಯದ ಕೆಳಗೆ 2-3 ಪದರಗಳ ರಸ್ತೆ ಕಾಮಗಾರಿಯ ಸಾಮಗ್ರಿಗಳನ್ನು ಬಳಸಿ ಅಡಿಪಾಯವನ್ನು ಅತ್ಯಂತ ಗಟ್ಟಿಯಾಗಿ ನಿರ್ಮಿಸಿದ್ದೆವು, ಎಂದು ಇಂಡಿಯಾ ಟುಡೆಗೆ ವಿವರಿಸಿದ್ದಾರೆ.
ಆದಾಗ್ಯೂ, ಮನೆಯ ಗ್ರೌಂಡ್ ಪ್ಲೋರ್ನಲ್ಲಿದ್ದ ಅಂಗಡಿಯ ಗೋದಾಮು ಸಂಪೂರ್ಣವಾಗಿ ನಾಶವಾಗಿದೆ. ಎರಡು ಕಾರುಗಳು, ಬೈಕ್ಗಳು ಮತ್ತು ಸ್ಕೂಟರ್ಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.
ಪೈಪ್ ಮತ್ತು ಹಗ್ಗದ ಸಹಾಯದಿಂದ ರಕ್ಷಣೆ:
ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ಸಾವಿನ ನೆರಳಿನಲ್ಲೇ ಕಳೆದ ಕುಟುಂಬಕ್ಕೆ ನೀರಿನ ಮಟ್ಟ ಕೊಂಚ ಕಡಿಮೆಯಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ನೆರೆಹೊರೆಯವರು ಎದುರಿನ ಕಟ್ಟಡದಿಂದ ಈ ಮನೆಗೆ ದಪ್ಪನೆಯ ಪೈಪ್ ಹಾಗೂ ಹಗ್ಗವನ್ನು ಕಟ್ಟಿ, ಅದರ ಮೂಲಕ ಪ್ರಕಾಶ್ ಮತ್ತು ಅವರ ಕುಟುಂಬಸ್ಥರನ್ನು ರಕ್ಷಿಸಿದ್ದಾರೆ.
ಪ್ರಸ್ತುತ ಪ್ರಕಾಶ್ ಅವರ ಕುಟುಂಬ ಕಾಠ್ಮಂಡುವಿನಲ್ಲಿ ಆಶ್ರಯ ಪಡೆದಿದ್ದು, ಸದ್ಯಕ್ಕೆ ಮನೆಯಲ್ಲಿ ಉಳಿದಿರುವ ಕೆಲ ವಸ್ತುಗಳನ್ನು ಹೊರತೆಗೆಯುತ್ತಿದ್ದಾರೆ. ವಾಹನಗಳು, ಅಂಗಡಿಯಲ್ಲಿದ್ದ ಸಾಮಗ್ರಿಗಳು ಎಲ್ಲವೂ ಮಣ್ಣಿನಪಾಲಾಗಿವೆ. ಆದರೆ ಮನೆಯಲ್ಲಿದ್ದ ನಾವೆಲ್ಲರೂ ಜೀವಂತವಾಗಿ ಉಳಿದಿದ್ದೇವೆ. ಶೂನ್ಯದಿಂದ ಮತ್ತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತೇವೆ, ಎಂದು ಪ್ರಕಾಶ್ ಧೈರ್ಯದ ಮಾತುಗಳನ್ನಾಡಿದ್ದಾರೆ.
ಈಗ ಪ್ರವಾಹ ತಗ್ಗಿದ್ದು, ನುವಾಕೋಟ್ ಮತ್ತು ರಸುವಾ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಧ್ವಂಸಗೊಂಡಿದ್ದು, ನೇಪಾಳ ಸೇನೆಯು ಸದ್ಯ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದೆ. ಪ್ರವಾಹದ ನಡುವೆ ಜೀವ ಉಳಿಸಿಕೊಂಡ ಹಲವರು, ತಮ್ಮವರನ್ನು ಕಳೆದುಕೊಂಡ ನೋವಿನ ನಡುವೆಯು ಮರಳಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಸಿರು ಬಣ್ಣದ ಈ ಮನೆ ಪ್ರಕೃತಿಯ ಪ್ರವಾಹಕ್ಕೂ ಸವಾಲೆಸೆದು ಕೆಸರಿನ ನಡುವೆ ಶಾಂತವಾಗಿ ನಿಂತು ಕತೆ ಹೇಳುತ್ತಿದೆ.


