ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಸಿದ್ಧಪಡಿಸಲಾದ ರಾಜ್ಯದ ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ನಾಪತ್ತೆಯಾದ ನಂತರ, ಪಂಜಾಬ್‌ನ ಆಮ್ ಆದ್ಮಿ ಪಕ್ಷದ(ಎಎಪಿ) ಸರ್ಕಾರದ ವಿರುದ್ಧ ಇತ್ತೀಚೆಗೆ ಬಿಜೆಪಿ ಸೇರಿದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ “ಸೇಡಿನ ರಾಜಕಾರಣ” ಎಂಬ ಆರೋಪ ಮಾಡಿದ್ದಾರೆ.
ರಾಘವ್ ಚಡ್ಡಾ ಅವರು 2022ರಲ್ಲಿ ಎಎಪಿ ಅಭ್ಯರ್ಥಿಯಾಗಿ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ವರ್ಷದ (2026) ಆರಂಭದಲ್ಲಿ ಬಿಜೆಪಿ ಸೇರಿದ್ದರು. ತನ್ನ ಮತ ಮೊಹಾಲಿಯ ನೋಂದಣಿಯಾಗಿದೆ ಎಂದಿರುವ ಅವರು, ‘ಶಿಫ್ಟೆಡ್’ ಎಂದು ವರ್ಗೀಕರಿಸಿ ಕರಡು ಪಟ್ಟಿಯಿಂದ ಹೆಸರು ಕೈ ಬಿಟ್ಟಿರುವುದನ್ನು ಪ್ರಶ್ನಿಸಿದ್ದಾರೆ.
ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳುವ ಮೊದಲು, ಹಕ್ಕುಗಳು ಮತ್ತು ಆಕ್ಷೇಪಣೆಗಳ (claims and objections) ಪ್ರಕ್ರಿಯೆಯ ಅವಧಿಯಲ್ಲಿ ಈ ತಪ್ಪನ್ನು ಸರಿಪಡಿಸಬಹುದು ಎಂದಿದ್ದಾರೆ.
“ಅದೃಷ್ಟವಶಾತ್, ಇವು ಕೇವಲ ಕರಡು ಮತದಾರರ ಪಟ್ಟಿಗಳಷ್ಟೇ ಆಗಿದ್ದು, ಅಂತಿಮ ಮತದಾರರ ಪಟ್ಟಿಗಳಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ‘ಹಕ್ಕುಗಳು ಮತ್ತು ಆಕ್ಷೇಪಣೆಗಳ’ ಪ್ರಕ್ರಿಯೆಯ ಅವಧಿಯಲ್ಲಿ ಹೆಸರುಗಳನ್ನು ಸರಿಪಡಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಗಳು ಅಕ್ಟೋಬರ್ 2026ರಲ್ಲಿ ಪ್ರಕಟಗೊಳ್ಳಲಿವೆ. ನಾನು ಈಗಾಗಲೇ ಎಸ್‌ಐಆರ್ ಮಾರ್ಗಸೂಚಿಗಳ ಅಡಿಯಲ್ಲಿ ಒದಗಿಸಲಾದ ಪರಿಹಾರಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿದ್ದೇನೆ” ಎಂದು ಚಡ್ಡಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಆದಾಗ್ಯೂ, ಈ ಹೆಸರು ಕೈಬಿಟ್ಟಿರುವುದು ಕೇವಲ ಕ್ಲರಿಕಲ್ ತಪ್ಪು (clerical error) ಅಲ್ಲ, ಬದಲಿಗೆ ರಾಜಕೀಯ ಸೇಡಿನ ಉದ್ದೇಶಪೂರ್ವಕ ಕೃತ್ಯ ಎಂದು ಚಡ್ಡಾ ಆರೋಪಿಸಿದ್ದಾರೆ.
“ಇದು ಕೇವಲ ಒಂದು ಸಾಧಾರಣ ಕ್ಲರಿಕಲ್ ತಪ್ಪು ಎಂದು ತೋರುತ್ತಿಲ್ಲ. ಇದು ಸ್ಪಷ್ಟವಾಗಿ ರಾಜಕೀಯ ಸೇಡಿನ ಪ್ರಕರಣವಾಗಿದೆ. ನನ್ನನ್ನು ‘ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಿದವರು ಯಾರು? ಎಎಪಿ ಪಂಜಾಬ್ ಸರ್ಕಾರದ ಅಧಿಕಾರಿಯೊಬ್ಬರು. ಆ ವರ್ಗೀಕರಣವನ್ನು ಪರಿಶೀಲಿಸಿ ದೃಢೀಕರಿಸಿದವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.
“ಮತ್ತದೇ ಎಎಪಿ ಪಂಜಾಬ್ ಸರ್ಕಾರದ ಅಧಿಕಾರಿಯೇ. ಉನ್ನತ ಮಟ್ಟದಲ್ಲಿ ಇದನ್ನು ಪ್ರಕ್ರಿಯೆಗೊಳಿಸಿದವರು ಯಾರು? ಮತ್ತೊಮ್ಮೆ, ಅದೇ ಎಎಪಿ ಪಂಜಾಬ್ ಸರ್ಕಾರದ ಅಧಿಕಾರಿ” ಎಂದು ಅವರು ಆರೋಪ ಮಾಡಿದ್ದಾರೆ.
ತಮ್ಮ ವರ್ಗಾವಣೆ ಮತ್ತು ನೇಮಕಾತಿಗಳನ್ನು ರಾಜ್ಯ ಸರ್ಕಾರವೇ ನಿಯಂತ್ರಿಸುವುದರಿಂದ, ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದೂ ಚಡ್ಡಾ ಪ್ರತಿಪಾದಿಸಿದ್ದಾರೆ.
ಆದಾಗ್ಯೂ, ಎಎಪಿ ಈ ಆರೋಪಗಳನ್ನು ತಿರಸ್ಕರಿಸಿದೆ. ಕರಡು ಪಟ್ಟಿಯಿಂದ ತಮ್ಮ ಹೆಸರು ನಾಪತ್ತೆಯಾದ ನಂತರ ಚಡ್ಡಾ ಅವರು ಇದರ ಹೊರೆಯನ್ನು ಪಕ್ಷ ಮತ್ತು ಪಂಜಾಬ್ ಸರ್ಕಾರದ ಮೇಲೆ ಹೊರಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದೆ.
“ರಾಘವ್ ಚಡ್ಡಾ ಅವರು ಹಿಂದಿನ ದಿನಾಂಕದ (backdated) ಪ್ರಕ್ರಿಯೆಯ ಮೂಲಕ ದೆಹಲಿಯಲ್ಲಿ ತಮ್ಮ ಮತದಾರರ ನೋಂದಣಿಯನ್ನು ಮಾಡಿಸಲು ಪ್ರಯತ್ನಿಸುತ್ತಿರುವುದನ್ನು ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆಯೊಂದು ಪತ್ತೆಹಚ್ಚಿದೆ. ಈಗ ಅವರು ಇದರ ಸಂಪೂರ್ಣ ಹೊರೆಯನ್ನು ಆಮ್ ಆದ್ಮಿ ಪಕ್ಷ (ಎಎಎಪಿ) ಮತ್ತು ಪಂಜಾಬ್ ಸರ್ಕಾರದ ಮೇಲೆ ಹೊರಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಪಕ್ಷವು ತಿಳಿಸಿದೆ.
ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಚುನಾವಣಾ ಆಯೋಗವೇ ನಿರ್ವಹಿಸುತ್ತದೆ ಮತ್ತು ಮತದಾರರ ಪಟ್ಟಿಯಲ್ಲಿ ಯಾರ ಹೆಸರನ್ನು ಸೇರಿಸಬೇಕು ಅಥವಾ ಕೈಬಿಡಬೇಕು ಎಂಬುದನ್ನು ನಿರ್ಧರಿಸುವಲ್ಲಿ ಪಂಜಾಬ್ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಆಪ್ ಹೇಳಿದೆ.
“ಎಸ್‌ಐಆರ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ನಡೆಸುತ್ತದೆಯೇ ಹೊರತು ರಾಜ್ಯ ಸರ್ಕಾರವಲ್ಲ, ಆದ್ದರಿಂದ ಮತದಾರರ ಪಟ್ಟಿಯಲ್ಲಿ ಯಾರ ಹೆಸರನ್ನು ಸೇರಿಸಬೇಕು ಅಥವಾ ಕೈಬಿಡಬೇಕು ಎಂದು ನಿರ್ಧರಿಸುವಲ್ಲಿ ಪಂಜಾಬ್ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ” ಎಂದಿದೆ.
ಪಕ್ಷವು ಮುಂದುವರಿದು ಚಡ್ಡಾ ಅವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದೆ ಮತ್ತು ಹೆಸರು ಕೈಬಿಟ್ಟಿರುವುದಕ್ಕೆ ಪಂಜಾಬ್ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಅವರ ನಿರ್ಧಾರವನ್ನು ಪ್ರಶ್ನಿಸಿದೆ.
“ರಾಘವ್ ಚಡ್ಡಾ ಅವರು ಪಂಜಾಬ್‌ನಲ್ಲಿ ಅಲ್ಲ, ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂಬುದು ಸಾರ್ವಜನಿಕ ದಾಖಲೆಯಾಗಿದೆ. ಅವರು ಪಂಜಾಬ್‌ನಲ್ಲಿ ವಾಸಿಸದೇ ಇದ್ದಲ್ಲಿ, ತಮ್ಮ ಮತದಾರರ ನೋಂದಣಿಯನ್ನು ಮುಂದುವರಿಸುವುದು ಅಥವಾ ಸ್ಥಳಾಂತರಿಸುವುದು ಅವರ ಸ್ವಂತ ಜವಾಬ್ದಾರಿಯಾಗಿತ್ತು. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದಕ್ಕೆ ಅವರು ಈಗ ಎಎಪಿ ಅಥವಾ ಪಂಜಾಬ್ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ” ಎಂದು ಪಕ್ಷವು ಹೇಳಿದೆ.
ಎಎಪಿ ಮುಂದುವರಿದು, ರಾಘವ್ ಚಡ್ಡಾ ಅವರು ಹಿಂದಿನ ದಿನಾಂಕದ (backdated) ಪ್ರಕ್ರಿಯೆಯ ಮೂಲಕ ದೆಹಲಿಯಲ್ಲಿ ತಮ್ಮ ಮತದಾರರ ನೋಂದಣಿಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ ಮತ್ತು ಅಂತಹ ಯಾವುದೇ ಪ್ರಕ್ರಿಯೆ ನಡೆದಿದ್ದರೆ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.
ಪಂಜಾಬ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ನಡುವೆಯೇ ಈ ವಿವಾದ ಉಂಟಾಗಿದೆ. ಕರಡು ಪಟ್ಟಿಯಿಂದ ಹೆಸರುಗಳು ಕೈಬಿಟ್ಟುಹೋಗಿರುವ ಮತದಾರರು ನಿಗದಿಪಡಿಸಿದ ಕಾಲಾವಕಾಶದೊಳಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 12ರಂದು ಪ್ರಕಟಗೊಳ್ಳಲು ನಿರ್ಧರಿಸಲಾಗಿದೆ.


