ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ ‘ಇನ್‌ಫ್ಲುಯೆನ್ಸರ್’ ಸ್ವತಂತ್ರ ಭಾರದ್ವಾಜ್ ಅನ್ನು ಶುಕ್ರವಾರ (ಸೆ.4) ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಿಜೆಪಿ ಸಹ-ಸಂಘಟಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ತಮ್ಮ ಬೆಂಬಲಿಗರು ಹಾಗೂ ಕೆಲವು ರಾಜಕಾರಣಿಗಳೊಂದಿಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ವ್ಯಕ್ತಪಡಿಸಿದ ನಂತರ ಭಾರದ್ವಾಜ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.
ಇತ್ತೀಚಿನ ವರದಿಗಳ ಪ್ರಕಾರ, ಭಾರದ್ವಾಜ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಹೊಸ ಎಫ್‌ಐಆರ್ ದಾಖಲಿಸಲಾಗಿದೆ. ಇದರೊಂದಿಗೆ, ಈ ಹಿಂದೆ ದಾಖಲಾಗಿದ್ದ ಎಫ್‌ಐಆರ್‌ಗೆ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೂಕ್ತ ಸೆಕ್ಷನ್‌ಗಳನ್ನು ಸಹ ಸೇರಿಸಲಾಗಿದೆ.
ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ತಾನು ಅಪ್ರಾಪ್ತ ವಯಸ್ಸಿನ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ “ತಲೆಬುರುಡೆ ಒಡೆದಿದ್ದೇನೆ” ಎಂದು ಭಾರದ್ವಾಜ್ ಸಾರ್ವಜನಿಕವಾಗಿ ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ, ತನ್ನ ‘ರಾಜಕೀಯ ಪ್ರಭಾವದ’ ಕಾರಣದಿಂದಾಗಿಯೇ ಜೈಲಿಗೆ ಹೋಗಿಲ್ಲ ಎಂದು ಹೇಳಿಕೊಂಡಿದ್ದ.
ಪ್ರಕರಣ ದಾಖಲಾದ ಬಳಿಕ ಸ್ವತಂತ್ರ ಭಾರದ್ವಾಜ್ ಬುಲಂದ್‌ಶಹರ್‌ಗೆ ತೆರಳಿ ತಲೆ ಮರೆಸಿಕೊಂಡಿದ್ದ ಎಂದು ವರದಿಯಾಗಿದೆ.
ಬುಲಂದ್‌ಶಹರ್‌ನ ಸ್ಥಳೀಯ ನಿವಾಸಿಗಳು ಪ್ರಕಾರ, ಭಾರದ್ವಾಜ್ ಬಂಧನದಿಂದ ತಪ್ಪಿಸಿಕೊಳ್ಳಲು ಶುಕ್ರವಾರ (ಸೆ.4) ಮುಂಜಾನೆ ಜಿಲ್ಲೆಗೆ ತಲುಪಿ, ಅಲ್ಲಿನ ನೈತ್ಲಾ ಗ್ರಾಮದ ಸ್ಥಳೀಯ ಕುಟುಂಬವೊಂದರ ಮನೆಯಲ್ಲಿ ಆಶ್ರಯ ಪಡೆದಿದ್ದ. ಅಲ್ಲಿರುವಾಗ ಆತ ಕೆಲವು ಪತ್ರಕರ್ತರೊಂದಿಗೆ ಸಂವಾದ ನಡೆಸಿದ್ದಲ್ಲದೆ, ಸಿಜೆಪಿ ಪ್ರತಿಭಟನೆಯಲ್ಲಿ ತಾನು ನಡೆಸಿದ ಹಲ್ಲೆಯ ಬಗ್ಗೆ ತನ್ನ ಹೇಳಿಕೆಗಳನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದನೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಿಜೆಪಿ ಪ್ರತಿನಿಧಿಗಳ ಪ್ರಕಾರ, ಭಾರದ್ವಾಜ್‌ನನ್ನು 72 ಗಂಟೆಗಳ ಒಳಗೆ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರು ಶುಕ್ರವಾರ ಭರವಸೆ ನೀಡಿದ್ದರು.
ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತಿದ್ದ ನೈತ್ಲಾ ನಿವಾಸಿ ಹರಿಶಂಕರ್ ಶರ್ಮಾ ಅವರ ಮನೆಯಲ್ಲಿ ಭಾರದ್ವಾಜ್ ತಂಗಿದ್ದ. ತಾನು ಹಿಂದಿನ ಪ್ರಯಾಣವೊಂದರ ಸಂದರ್ಭದಲ್ಲಿ ಭಾರದ್ವಾಜ್‌ನನ್ನು ಭೇಟಿಯಾಗಿದ್ದಾಗಿ ಶರ್ಮಾ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿದೆ.
“ಭಾರದ್ವಾಜ್ ನನಗೆ ಕರೆ ಮಾಡಿ, ನನ್ನನ್ನು ಭೇಟಿಯಾಗಲು ನನ್ನ ಮನೆಗೆ ಬರಲು ಬಯಸುವುದಾಗಿ ಹೇಳಿದ್ದ. ಆತ ಮುಂಜಾನೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಬಂದಿದ್ದ. ಆರಂಭದಲ್ಲಿ ನನಗೆ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಮಾಧ್ಯಮದವರು ನನ್ನ ಗ್ರಾಮಕ್ಕೆ ಬರಲು ಪ್ರಾರಂಭಿಸಿದಾಗ, ಏನೋ ತಪ್ಪಾಗಿದೆ ಎಂಬ ಸುಳಿವು ಸಿಕ್ಕಿತು” ಎಂದು ಶರ್ಮಾ ಹೇಳಿದ್ದಾರೆ.
“ಭಾರದ್ವಾಜ್ ನಂತರ ಐದು ನಿಮಿಷಗಳಲ್ಲಿ ಹಿಂತಿರುಗುವುದಾಗಿ ಹೇಳಿ, ನನ್ನ ಬೈಕ್ ಎರವಲು ಕೇಳಿದ್ದ. ಆಮೇಲೆ ದೆಹಲಿ ಪೊಲೀಸರು ಅವನನ್ನು ವಶಕ್ಕೆ ಪಡೆದಿದ್ದಾರೆ ಎಂಬ ವಿಷಯ ನನಗೆ ತಿಳಿಯಿತು. ದೇಶದ ರಾಜಧಾನಿಯಲ್ಲಿ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಮತ್ತು ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ ಎಂಬುದು ನನಗೆ ಅದರ ನಂತರವೇ ಗೊತ್ತಾಗಿದ್ದು. ಈ ಪ್ರಕರಣದ ಬಗ್ಗೆ ನನಗಿನ್ನೂ ಹೆಚ್ಚಿನ ಮಾಹಿತಿ ಇಲ್ಲ” ಎಂದು ಶರ್ಮಾ ತಿಳಿಸಿದ್ದಾರೆ.
“ಅವನು ಮಧ್ಯಾಹ್ನ 2 ಗಂಟೆಯವರೆಗೆ ನನ್ನೊಂದಿಗಿದ್ದ. ದೆಹಲಿಯಿಂದ ಬಂದ ಅಪರಾಧ ವಿಭಾಗದ ಪೊಲೀಸರು ಅವನನ್ನು ಕರೆದುಕೊಂಡು ಹೋದರು. ಅವರು ಬಂದು, ‘ನಾವು ಕ್ರೈಂ ಬ್ರಾಂಚ್‌ನಿಂದ ಬಂದಿದ್ದೇವೆ; ಸ್ವತಂತ್ರ, ನಮ್ಮೊಂದಿಗೆ ಬಾ’, ಎಂದು ಹೇಳಿ ತಮ್ಮೊಂದಿಗೆ ಕರೆದೊಯ್ದರು…” ಎಂದು ಶರ್ಮಾ ಸುದ್ದಿ ಸಂಸ್ಥೆ ಎಎನ್‌ಐ ಹೇಳಿದ್ದಾರೆ.
“ಸಿವಿಲ್ ಡ್ರೆಸ್‌ನಲ್ಲಿದ್ದ ಮೂವರು ಪುರುಷರಿದ್ದ ಕಾರೊಂದನ್ನು ಕಂಡು ಕೆಲವು ಗ್ರಾಮಸ್ಥರಿಗೆ ಅನುಮಾನ ಬಂದಿತ್ತು. ನಾವು ಅವರನ್ನು ವಿಚಾರಿಸಿದಾಗ, ತಾವು ಪೊಲೀಸರು ಎಂದು ಹೇಳಿದರು… ನಂತರ, ಭಾರದ್ವಾಜ್‌ನನ್ನು ಬುಲಂದ್‌ಶಹರ್‌ನ ಧಮೇಡಾ ನಾರಾ ಗ್ರಾಮದಿಂದ ವಶಕ್ಕೆ ಪಡೆಯಲಾಗಿದೆ ಎಂದು ನಾವು ತಿಳಿದುಕೊಂಡೆವು” ಎಂದು ಮತ್ತೊಬ್ಬ ಸ್ಥಳೀಯ ನಿವಾಸಿ ಶಂಶುದ್ದೀನ್ ಸೈಫಿ ಹೇಳಿಕೊಂಡಿದ್ದಾರೆ.
“ವಾಟ್ಸಾಪ್ ಗ್ರೂಪ್ ಮೂಲಕ ಭಾರದ್ವಾಜ್ ಇಲ್ಲಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ನಾವು ತಕ್ಷಣವೇ ಸ್ಥಳೀಯ ಪೊಲೀಸ್ ತಂಡವನ್ನು ಆ ಪ್ರದೇಶಕ್ಕೆ ಕಳುಹಿಸಿದೆವು, ಆದರೆ ತಂಡವು ಅಲ್ಲಿಗೆ ತಲುಪುವಷ್ಟರಲ್ಲಿ ಆತ ಆ ಸ್ಥಳವನ್ನು ತೊರೆದಿದ್ದ” ಎಂದು ಸಿಕಂದರಾಬಾದ್ ಸರ್ಕಲ್ ಆಫೀಸರ್ ದೀಪಕ್ ಕುಮಾರ್ ಹೇಳಿದ್ದಾರೆ. ದೆಹಲಿ ಪೊಲೀಸ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮ್ಮ ಆಗಮನದ ದಾಖಲೆಯನ್ನು ಮಾಡಿಸಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಮೂಲತಃ ಬಿಹಾರದವನಾದ 20 ವರ್ಷ ಆಸುಪಾಸಿನ ವಯಸ್ಸಿನ ಭಾರದ್ವಾಜ್, ಸದ್ಯ ದೆಹಲಿಯಲ್ಲಿ ವಾಸಿಸುತ್ತಿದ್ದಾನೆ. ಆತನ ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗಳಲ್ಲಿನ ಮಾಹಿತಿಯ ಪ್ರಕಾರ, ಆತ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದು, ಸರ್ಕಾರಿ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾನೆ. ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು ಆತ ಪಾಟ್ನಾದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಎಂಬುದು ಆತನ ಸೋಶಿಯಲ್ ಮೀಡಿಯಾದಿಂದ ಗೊತ್ತಾಗಿದೆ. ಭಾರದ್ವಾಜ್ ತನ್ನನ್ನು ತಾನು ‘ಸನಾತನಿ ಯೋಧ’ ಎಂದು ಘೋಷಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯ ಫಾಲೋವರ್ಸ್‌ಗಳನ್ನು ಹೊಂದಿದ್ದ. ಅಲ್ಲಿ ಆತ ಹಲವಾರು ಪ್ರಚೋದನಾಕಾರಿ ವಿಡಿಯೋಗಳು ಮತ್ತು ದ್ವೇಷಪೂರಿತ ವಿಷಯಗಳನ್ನು ಪೋಸ್ಟ್ ಮಾಡುತಿದ್ದ.
ತನ್ನ ತಂದೆಯ ಮೇಲಿನ ಹಲ್ಲೆಯ ಬಗ್ಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿದ ನಂತರ ತನಗೆ ಮೌಖಿಕ ನಿಂದನೆ ಮತ್ತು ಅತ್ಯಾಚಾರದ ಬೆದರಿಕೆಗಳು ಬಂದಿತ್ತು ಎಂದು ನಿಶು ಆಝಾದ್ ಹೇಳಿಕೊಂಡಿದ್ದಾರೆ. “ಮನೆಯಿಂದ ಹೊರಗೆ ಕಾಲಿಡುವುದು ಕೂಡ ಕಷ್ಟವಾಗಿತ್ತು. ಕೆಲವು ವಾರಗಳವರೆಗೆ ನಾನು ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಎಲ್ಲರೂ ನನ್ನನ್ನು ಜಡ್ಜ್ ಮಾಡುತ್ತಿದ್ದಾರೆ ಎಂದು ನನಗೆ ಅನಿಸಿತ್ತು. ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.


