ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶನಿವಾರ (ಸೆ.6) ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಸ್ವಚ್ಚತೆಯ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೆಲ ಪೌರ ಕಾರ್ಮಿಕರು ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಚಿವರು ಪ್ರತಿಕ್ರಿಯಿಸಿದ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಸಚಿವರು ಹೇಳಿರುವುದನ್ನು ಕೆಳಗೆ ಅಕ್ಷರ ರೂಪದಲ್ಲಿ ವಿವರಿಸಲಾಗಿದೆ.
ಕಾರ್ಮಿಕರಿಗೆ ಸಚಿವ ಕೃಷ್ಣ ಬೈರೇಗೌಡ… “ಕೆಲಸಕ್ಕೇ ಬರೋದಿಲ್ಲ ಎನಕ್ಕೆ ಪರ್ಮನೆಂಟ್ ಮಾಡ್ಬೇಕು? ಕೆಲಸಕ್ಕೆ ಬಂದ್ರೆ ತಾನೆ ಪರ್ಮನೆಂಟ್ ಮಾಡೋದು. 30% ಜನ ಕೆಲಸಕ್ಕೇ ಬರೋದಿಲ್ಲ. ಯಾರೂ ಅಧಿಕಾರಿಗಳು ಮಾತಾಡುವಂಗಿಲ್ಲ. ದಿನಾ 30% ಜನಕ್ಕೆ ಆರಾಮ ಇರೋದಿಲ್ವಾ? ನಾವೂ ಮನುಷ್ಯರೇ…ಅವರು ಎಲ್ಲಾ ಮನುಷ್ಯರೇ. ಒಂದು ದಿನಕ್ಕೆ 30% ಕೆಲಸಕ್ಕೆ ಬರೋದಿಲ್ಲ ಅಂದ್ರೆ ಹೆಂಗ್ರಿ ಸಿಟಿ ಕ್ಲೀನ್ ಇಟ್ಕೋಬೇಕು? ಜನ ನಮಗೆ ಬಾಯಿಗೆ ಬಂದಂಗೆ ಉಗೀತಾರೆ. ಮನುಷ್ಯ ಅಂದ್ಮೇಲೆ ಎಲ್ಲರಿಗೂ ಜವಬ್ದಾರಿ ಇರ್ಬೇಕು. ಪರ್ಮನೆಂಟ್ ಮಾಡ್ಬೇಕು…ಏನಕ್ಕೆ ಪರ್ಮನೆಂಟ್ ಮಾಡ್ಬೇಕು? ಕೆಲಸಕ್ಕೆ ಬರೋದಿಕ್ಕೆ ಆಸಕ್ತಿ ಇಲ್ಲ ಅಂದ್ರೆ ಯಾಕೆ ಪರ್ಮನೆಂಟ್ ಮಾಡ್ಬೇಕು? ಬರೀ ಅದನ್ನು ಮಾತ್ರ ಕೇಳ್ತೀರಾ ಕೆಲಸ ಮಾಡೋದನ್ನು ಕಲೀರಿ ಫಸ್ಟು, ಮಾತಾಡೊದನ್ನು ಕಲ್ತಿದ್ದೀರಾ. ದಿನಾ 30% ಇಲ್ಲಿ ಕೆಲಸಕ್ಕೇ ಬರೋದಿಲ್ಲ, ಬೇಡದೇ ಇರೋದಿಗೆ ಯಾಕೆ ಪರ್ಮನೆಂಟ್ ಮಾಡ್ಬೇಕು?” ಎಂದಿದ್ದಾರೆ.
ಈ ಮಧ್ಯೆ ಕಾರ್ಮಿಕರು..“ಸರ್ ನಾವು ಸರಿಯಾಗಿ ಕೆಲಸಕ್ಕೆ ಬರುತ್ತಿದ್ದೇವೆ” ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕಾರ್ಮಿಕರ ಮಾತನ್ನು ತಿರಸ್ಕರಿಸಿದ ಸಚಿವರು, “ನನ್ನತ್ರ ಸುಳ್ಳು ಸುಳ್ಳು ಮಾತನಾಡ್ಬೇಡಿ..ನಾನು ಅಟೆಡೆನ್ಸ್ ರಿಜಿಸ್ಟ್ರಿ ಹಿಡ್ಕೊಂಡು ಮಾತಾಡ್ತಿದ್ದೀನಿ. ಸುಮ್ನೆ ಬಾಯ್ಬಿಟ್ರೆ ಸುಳ್ಳು ಹೇಳ್ಬೇಡಿ. ನಿಮಗೆ ಸಂಬಳಾನೂ ಕೊಡ್ಬೇಕು..ಎಲ್ಲಾನು ಕೊಡ್ಬೇಕು. ಇಲ್ಲಿ ಕೆಲಸಕ್ಕೆ ಮಾತ್ರ ಇಲ್ಲ. ಸಿಟಿ ಗಬ್ಬೆದ್ದು ನಾರ್ತಿದ್ರೆ ನಾವು ಬೈಸ್ಕೋಬೇಕು. ಸ್ವಲ್ಪನಾದ್ರೂ ಮನುಷ್ಯತ್ಯ ಅನ್ನೋದು ಇರ್ಬೇಕು. ಬೆಳಿಗ್ಗೆ ಎದ್ರೆ ದುಡೀಬೇಕು ಅನ್ನೋದು ಇರ್ಬೇಕು. ಏರಿಯಾ ನೋಡಿದ್ರೆ ಗಬ್ಬಾಗಿದೆ. ನಿಮಗೆ ಪರ್ಮನೆಂಟ್ ಬಿಟ್ರೆ ಇನ್ನೇನ್ ಚಿಂತೆಯಿಲ್ಲ. ಪರ್ಮನೆಂಟ್ ಮಾಡದೇ ಇದ್ರೆ ಕೆಲಸಕ್ಕೆ ಬರಂಗಿಲ್ಲ. ಅವರನ್ನು ಮಾತಾಡಿಸಂಗೂ ಇಲ್ಲ. ಸಿಟಿ ನಾರ್ತಾ ಇದ್ರೆ, ಜನ ಬೈತಾ ಇದ್ರೆ ನಾವು ಬೈಸ್ಕೋಬೇಕಾ? ನೋಡೋ ಹಂಗೆ ಇದ್ಯಾ ಇಲ್ಲಿ ಏನಾದ್ರು ಪರಿಸ್ಥಿತಿ. ಬರೀ ಇದೊಂದು ಬಿಟ್ರೆ ಇನ್ನೇನು ಇಲ್ಲ ನಿಮಗೆ. ಮಾಡೋ ಕೆಲ್ಸ ಶ್ರದ್ದೆಯಿಂದ ಮಾಡೋನಾ ಅನ್ನೋದು ಏನಾದ್ರು ಇದ್ಯಾ?” ಎಂದು ತಮ್ಮ ದರ್ಪದ ಮಾತುಗಳನ್ನು ಮುಂದುವರಿಸಿದ್ದಾರೆ.
ಇದಕ್ಕೆ ಕಾರ್ಮಿಕರು, “ಮಾಡ್ತೀವಿ ಸರ್” ಎಂದಾಗ..“ಮಾಡ್ತೀರಾ ಬರೀ ಬಾಯಿ ಮಾತಿನಲ್ಲಿ” ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ.
ಸಚಿವರ ದರ್ಪದ ಮಾತಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ, “ಕೃಷ್ಣಬೈರೇಗೌಡ ಅವರೇ ರಾಜೀನಾಮೆ ಕೊಟ್ಟು ಮನೆಗೆ ಹೋಗಪ್ಪ..” ಎಂದು ಬರೆದುಕೊಂಡಿದ್ದಾರೆ.

ಬರಹಗಾರ ವಿ.ಎಲ್ ನರಸಿಂಹಮೂರ್ತಿ (ವಿಎಲ್‌ಎನ್) ಪ್ರತಿಕ್ರಿಯಿಸಿ, “ಕೃಷ್ಣ ಬೈರೇಗೌಡರೇ ಭಾರತದಲ್ಲಿ ಒಬ್ಬ ಮನುಷ್ಯ ಕೇವಲ ಒಂದು ವರ್ಷ ಪೌರಕಾರ್ಮಿಕನಾಗಿ ಕೆಲಸ ಮಾಡಿದರೆ ಸರ್ಕಾರ ಅವರಿಗೆ ಇಡೀ ಜೀವಮಾನ ಮನೆಯಲ್ಲಿ ಕೂರಿಸಿ ಸಂಬಳ ಕೊಡಬೇಕು. ಅಷ್ಟು ಹೊಲಸು ಬಾಚಿರುತ್ತಾರೆ. ಭಾರತದಲ್ಲಿ ಮಾತ್ರವೇ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಹೇಲು, ಉಚ್ಚೆ ಬಾಚಿದರೆ ಏನೂ ಅನಿಸುವುದೇ ಇಲ್ಲ. ಅಂತಹ ಹೊಲಸು ಮನಸ್ಥಿತಿ ಭಾರತೀಯ ಸಮಾಜದ್ದು. ಭಾರತದ ಪೌರಕಾರ್ಮಿಕರಂತಹ ಹೀನ ವೃತ್ತಿ ಇಡೀ ಜಗತ್ತಿನಲ್ಲೇ ಎಲ್ಲೂ ಇಲ್ಲ. ಪೌರ ಕಾರ್ಮಿಕರ ವೃತ್ತಿಯ ಸ್ವರೂಪ ಎಂತದ್ದು ಎನ್ನುವ ಕನಿಷ್ಠ ತಿಳುವಳಿಕೆ ನಿಮಗೆ ಇದ್ದಿದ್ದರೆ ಇಷ್ಟು ದರ್ಪದಿಂದ ಮಾತನಾಡುತ್ತಿರಲಿಲ್ಲ.”
“ನೀವು ಅಮೇರಿಕಾಗೆ ಹೋಗಿ ಓದಿ ಬಂದಿದ್ದರೂ ಕೋಲಾರದ ಒಕ್ಕಲಿಗರ ದೌವಲತ್ತಿನ ಮನಸ್ಥಿತಿಯಿಂದ ಇನ್ನೂ ಆಚೆ ಬಂದಿಲ್ಲ. ಬೇಗ ಆಚೆ ಬನ್ನಿ..Shame on you” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇರುವ ಮನುಷ್ಯ ನಾನಲ್ಲ ಅಂತ ಸ್ಪಷ್ಟವಾಗಿ ಗೌಡರು ತಿಳಿಸಿದ್ದಾರೆ. ಸಾಹೇಬರು – ಬಾಯಲ್ಲಿ ಬಸಪ್ಪ ಎದೇಲಿ ವಿಷಪ್ಪ ಕೆಟಗರಿ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ” ಎಂದು ಸೌಮ್ಯ ಕೋಡೂರು ಬರೆದುಕೊಂಡಿದ್ದಾರೆ.

ಪತ್ರಕರ್ತ ರಾಘವೇಂದ್ರ ಪ್ರತಿಕ್ರಿಯಿಸಿ, “ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಎರಡ್ ದಿನ ಕಸದ ಗಾಡಿಗೆ ಹಾಕ್ತಿದ್ರೆ ನಮ್ಮ ಕಿಚನ್ಗಳು ಅಥವಾ ಕಸದ ಪುಟ್ಟಿ ಇಡುವ ಸ್ಥಳ ಗಬ್ಬು ವಾಸನೆ ಬರ್ತಿರತ್ತೆ. ಮೊದ್ಲು ಇದನ್ನ ಹೇಗಾದ್ರು ಮಾಡಿ ಸಾಗಾಕ್ಬೇಕು ಅಂತ ಕಸದ ಗಾಡಿ ಬರೋದನ್ನೆ ಕಾಯ್ತಿರ್ತಿವಿ”
“ಕೆಲವು ಮನೆಯವರು, ಪ್ರತಿ ದಿನ ಕಸವನ್ನ ಗಾಡಿಗೆ ಹಾಕ್ತಾರೆ, ಆದ್ರೆ 50% ಜನ ಎರಡು ಮೂರು ದಿನಕ್ಕೆ, ಬ್ಯಾಚುಲರ್ಸ್ ಗಳು ವಾರಗಟ್ಟಲೆ ಕಸವನ್ನೆ ಹಾಕದೆ ಡಸ್ಟ್ ಬಿನ್ಗಳಲ್ಲಿ ಹುಳುಗಳು ಉತ್ಪತ್ತಿ ಆಗಿರತ್ತೆ, ಅದರ ವಾಸನೆ ಯಾವ ಲೆವೆಲ್ ಗೆ ಇರತ್ತೆ ಇಮೇಜ್ ಮಾಡ್ಕಳಿ. (ಆಸ್ಪತ್ರೆ,ಹೋಟೆಲ್ಲು,ಲಾಡ್ಜುಗಳ ಕಸಗಳದ್ದು ಬೇರೆ ಲೆವೆಲ್ಲು)”
“ಮೊದಲೇ ಹೇಳಿ ಕೇಳಿ ಅದು ಕಸ, ಅದರಲ್ಲಿ ಏನಿರಲ್ಲ ಹೇಳಿ, ಅಡುಗೆ ಮನೆಗಳಲ್ಲಿ ಉಳಿದದ್ದು, ಮಕ್ಕಳು ಕಕ್ಕ ಮಾಡಿದ ಡೈಪರ್ ಗಳು, ಮಹಿಳೆಯರ ತಿಂಗಳ ಪೀರಿಯಡ್ಸ್ ಪ್ಯಾಡ್ಸು, ನೀವು ಒಂದು ಕ್ಷಣ ಅದನ್ನು ನೋಡಲು ಅಸಹ್ಯಪಡುವ, ಅಬ್ಬಬ್ಬಾ ವಾಸನೆ ಎನ್ನುವಂತಹ ಎಲ್ಲವೂ ಅದರಲ್ಲಿ ಇರತ್ತೆ ಹೌದಲ್ವಾ.”
“ಈಗ ಹೇಳಿ ನಿಮಗೆ ಒಂದು ಕ್ಷಣ ಸಹಿಸಲಾಗದ ನಿಮ್ಮ ಸ್ವಂತ ಕಚಡಾವನ್ನ, ಇನ್ನೊಬ್ಬರು ಕೈಯಲ್ಲಿ ಮುಟ್ಟಿ, ಅದನ್ನ ಮತ್ತೆ ವಿಭಾಗ ಮಾಡಿ ವಿಲೇವಾರಿ ಮಾಡ್ತಾರೆ ಎಂದಾದರೆ ಅವರ ಪರಿಸ್ಥಿತಿ, ಅವರ ಆರೋಗ್ಯ ಪರಿಸ್ಥಿತಿ ಹೇಗಿರತ್ತೆ.”
“ನಾವು KC ಜನರಲ್ ಆಸ್ಪತ್ರೆಗೊ, ವಿಕ್ಟೋರಿಯಾ ಆಸ್ಪತ್ರೆಗೊ ಹೋಗ್ಬಂದ್ರೆ ಸ್ನಾನ ಮಾಡಿ ಎಷ್ಟೊತ್ತಾದ್ರು ಇನ್ನು ಔಷಧಿ ಸ್ಮೆಲ್ ಬರ್ತಿರೋ ಫೀಲ್ ಅಗ್ತಿದೆ, ಊಟ ಮಾಡೋಕೆ ಆಗ್ತಿಲ್ಲ ಅಂತ ಕಿರಿ ಕಿರಿ ಮಾಡ್ಕೋತಿರ್ತೀವಿ.”
“ಆದ್ರೆ ನೂರಾರು ಮನೆಯ ಸಾವಿರಾರು ಜನರ ಕಚಡಾವನ್ನ ವಿಲೆವಾರಿ ಮಾಡಿ ಮತ್ತೆ ಹೋಗಿ ಅವರು ತಿಂಡಿ ಊಟ ಮಾಡ್ಬೇಕು, ಆಗ ಅವರಿಗೆ ಹೇಗನ್ನಿಸಬಹುದು ನಮ್ಮಿಂದ ಊಹಿಸಿಕೊಳ್ಳೋಕು ಆಗಲ್ಲಾ ಅಲ್ವಾ. ಅಂತವರನ್ನ ಹೀಗೆ ಬಹಿರಂಗವಾಗಿ ಅವಮಾನ ಮಾಡಿದ ಒಬ್ಬ ಸ್ಟುಪಿಡ್ ಸಚಿವನಿಗೆ ನನ್ನ ಧಿಕ್ಕಾರ.” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಚಂದ್ರು ತರಹುಣಸೆ, ಸಚಿವ ಕೃಷ್ಣಬೈರೇಗೌಡ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. “ಪೌರಕಾರ್ಮಿಕರ ಕುರಿತು ಅಸೂಕ್ಷ್ಮ ಹೇಳಿಕೆ ನೀಡಿದ ಸಚಿವ ಕೃಷ್ಣಭೈರೇಗೌಡ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ನಾಗೇಗವ್ಡ ಕೆ ಎಸ್ ಪ್ರತಿಕ್ರಿಯಿಸಿ, “ಕೃಷ್ಣ ಬೈರೇಗೌಡ ಅವರೇ… ನಿಮ್ಮ ದಕ್ಶತೆಯ ಪ್ಯೂಡಲಿಸಂ ಇಮೇಜ್‌ಗೆ ಸಾವಿರಾರು ಸಾಮಾನ್ಯ ಜನರು ಬೆಂಬಲ ಕೊಡುತ್ತಿದ್ದಾರೆ. ಇದು ಸಾಮಾನ್ಯ ಜನರ ತಪ್ಪಲ್ಲ. ನಾವುಗಳು ಒಂದು ವ್ಯವಸ್ತೆಯಾಗಿ ಸಾಮಾನ್ಯ ಜನರಿಗೆ ಪ್ರಜಾಪ್ರಬುತ್ವ ಅಂದರೆ ಏನು, ಸಂವಿದಾನದ ಮೂಲಬೂತ ಹಕ್ಕುಗಳು ಅಂದರೆ ಏನು ಅಂತಲೇ ಅರಿವು ಮೂಡಿಸಿಲ್ಲ. ಆದರೆ ಈ ಅರಿವು ನಿಮಗೆ ಇರಲೇಬೇಕು ಏಕೆಂದರೆ ನೀವು ಸಂವಿದಾನದ ಮೇಲೆ ವಚನ ಮಾಡಿ ಮಿನಿಸ್ಟರ್ ಆಗಿರೋದು.”
“ನನಗೆ ಗೊತ್ತು. ಸ್ವಾತಂತ್ರ್ಯ ಮತ್ತು ಸಮಾನತೆ, ಪ್ರಜಾಪ್ರಬುತ್ವ ಮತ್ತು ದಕ್ಶತೆ ಒಟ್ಟೊಟ್ಠಿಗೆ ನಿಬಾಯಿಸುವುದು ಅಸ್ಟು ಸುಲಬದ ಕೆಲಸ ಅಲ್ಲ ಅನ್ನುವುದು. ಆದರೆ ನೀವೇ ಸ್ವತಃ ನಾನು ಮಂತ್ರಿಯಾಗಿ ಜನರ ಸೇವೆ ಮಾಡುತ್ತೇನೆ ಎಂದು ಚುನಾವಣೆಯಲ್ಲಿ ನಿಂತು ಗೆದ್ದು ಮಂತ್ರಿಯಾಗಿದ್ದಿರಿ. ಆದ್ದರಿಂದ ನಿಮ್ಮ ಕ್ರಿಯೆಯಲ್ಲಿ ಮಾತ್ರವಲ್ಲ ಅಲೋಚನೆಯಲ್ಲೂ ಪ್ರಜಾಸತ್ತಾತ್ಮಕ ಮೌಲ್ಯಗಳೇ ಇರಬೇಕು ಹೊರತು CEO ಮಾದರಿ ಅಲ್ಲ. ಮೊನ್ನೆ ಪ್ಯೂಡಲ್ ದರ್ಪದಿಂದ ನೀವು ರೇಗಿದ ಆ ಪೌರ ಕಾರ್ಮಿಕರ ಬಳಿ ಕ್ಶಮೆ ಕೇಳುತ್ತಿರಿ ಎಂದು ಆಶಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ಕೃಷ್ಣ ಬೈರೇಗೌಡ ಅವರ ನಡೆಯನ್ನು ಖಂಡಿಸಿದೆ, ರಾಜೀನಾಮೆಗೆ ಆಗ್ರಹಿಸಿದೆ.

“ಬೆಂಗಳೂರು ನಗರಾಭಿವೃದ್ಧಿ ಫ್ಯೂಡಲ್ ಸಚಿವರ ಬಗ್ಗೆ ಹತ್ತಾರು ಪೋಸ್ಟ್ ಹಾಕಿದ್ದೀನಿ; ಈಗ ಪೌರ ಕಾರ್ಮಿಕರ ಎದುರು ತನ್ನ ದುರಹಂಕಾರವನ್ನು ಪ್ರದರ್ಶನ ಮಾಡಿದ್ದಾರೆ ಮಹನೀಯರು. ಈತನ ಬಗ್ಗೆ ನನಗೆ ಇನ್ನು ಸದಭಿಪ್ರಾಯ ಮೂಡಲು ಸಾಧ್ಯವೇ ಇಲ್ಲ. ಇನ್ನು ಇಂತಹ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುವವರ ಜತೆಗೂ ನನಗೆ ಯಾವುದೇ ಸಂವಾದ ನಡೆಸುವ ಇಚ್ಛೆ ಇಲ್ಲ. ಅಸಹ್ಯದ ಪರಮಾವಧಿ ತಲುಪಿದೆ ಈತನ ನಡವಳಿಕೆ!”ಎಂದು ಪ್ರಕಾಶಕ ಗುರುಪ್ರಸಾದ್ (ಗುರುವೇ) ಹೆಜ್ಜಾಜಿ ಬರೆದುಕೊಂಡಿದ್ದಾರೆ.



