ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಸೆ. 10) ಗಂಭೀರವಾಗಿ ಪರಿಗಣಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಇಂತಹ ಆರೋಪಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತು. ಅಪರಾಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ ಕಾರಣಕ್ಕೆ ಯಾವುದೇ ವ್ಯಕ್ತಿಯನ್ನಾಗಲಿ, ಅವರ ಕುಟುಂಬವನ್ನಾಗಲಿ ಬೆದರಿಸಲು ಅಥವಾ ಬೆದರಿಸಿ ಮೌನವಾಗಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಒತ್ತಿಹೇಳಿತು.
ನಿಶು ಆಜಾದ್ ಹಾಗೂ ಅವರ ಕುಟುಂಬಕ್ಕೆ ನೀಡಲಾಗಿರುವ ಭದ್ರತಾ ವ್ಯವಸ್ಥೆ, ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳು, ಹಲ್ಲೆ ಹಾಗೂ ಬೆದರಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಉತ್ತರ ಪ್ರದೇಶ ಮತ್ತು ದೆಹಲಿ ಸರ್ಕಾರಗಳಿಂದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನಿಶು ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಬಂದಿರುವ ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡ ಬಳಿಕ ಈ ವಿಷಯ ಮತ್ತಷ್ಟು ಗಮನ ಸೆಳೆದಿದೆ. ನಿಶು ಅವರ ತಂದೆ ಸಂಜಯ್ ಅವರ ಮೇಲೆ ಸಿ.ಜೆ.ಪಿ. ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂದುತ್ವ ಕಾರ್ಯಕರ್ತ ಸ್ವತಂತ್ರ ಭಾರದ್ವಾಜ್ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಪ್ರತಿಭಟನೆ ನಡೆದ ಹಲವು ತಿಂಗಳ ಬಳಿಕ ಪಾಡ್‌ಕಾಸ್ಟ್‌ವೊಂದರಲ್ಲಿ ಭಾರದ್ವಾಜ್ ಈ ಹಲ್ಲೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದ ವಿಡಿಯೊ ವೈರಲ್ ಆಗಿತ್ತು.
ವಿಡಿಯೊ ವೈರಲ್ ಆದ ಬಳಿಕ ಸಿ.ಜೆ.ಪಿ. ನಿಯೋಗವು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಭೀಮ್ ಪಾರ್ಟಿಯೊಂದಿಗೆ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿ, ಸಂಜಯ್ ಮೇಲಿನ ಹಲ್ಲೆಗಾಗಿ ಭಾರದ್ವಾಜ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿತ್ತು.
ಅದೇ ದಿನ, ಈ ಪ್ರಕರಣದ ಕುರಿತು ಮಾತನಾಡಿದ್ದಕ್ಕಾಗಿ ಭಾರದ್ವಾಜ್ ಬೆಂಬಲಿಗರಿಂದ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ನಿಶು ನೀಡಿದ ದೂರಿನ ಆಧಾರದ ಮೇಲೂ ಪೊಲೀಸರು ಮತ್ತೊಂದು ಎಫ್‌ಐಆರ್ ದಾಖಲಿಸಿದ್ದರು.
ಎಫ್‌ಐಆರ್‌ಗಳು ದಾಖಲಾದ ಬಳಿಕವೂ ನಿಶು ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಬಂದಿರುವ ಸರಣಿ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಸಂದೇಶಗಳಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲ ಭಾಷೆ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಅಪರಿಚಿತ ವ್ಯಕ್ತಿಗಳು ತಮ್ಮ ಮನೆಯ ಮೇಲೆ ಕಲ್ಲು ತೂರುತ್ತಿರುವ ದೃಶ್ಯಗಳಿರುವ ವಿಡಿಯೊಗಳನ್ನೂ ಅವರು ಹಂಚಿಕೊಂಡಿದ್ದಾರೆ.
ನಿಶುಗೆ ರಕ್ಷಣೆ – ಎಫ್‌ಐಆರ್ ಕುರಿತು ಕ್ರಮ ಕೈಗೊಳ್ಳಲು ಸೂಚನೆ
ನಿಶು ಅವರ ಎಫ್‌ಐಆರ್ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತು. ಜತೆಗೆ ನಿಶು ಮತ್ತು ಅವರ ಕುಟುಂಬಕ್ಕೆ ಅಗತ್ಯ ಭದ್ರತೆ ಒದಗಿಸುವಂತೆಯೂ ನಿರ್ದೇಶನ ನೀಡಿತು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿದ್ದ ವೇಳೆ ಈ ವಿಷಯ ನ್ಯಾಯಪೀಠದ ಮುಂದೆ ಬಂದಿತು. ಈ ಸಂದರ್ಭದಲ್ಲಿ ವಕೀಲರೊಬ್ಬರು 14 ವರ್ಷದ ನಿಶು ಅವರ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದರು.
ಯಾರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ ವಕೀಲರು, ಸಿ.ಜೆ.ಪಿ. ಪ್ರತಿಭಟನೆ ಸಂದರ್ಭದಲ್ಲಿ ನಿಶು ಅವರ ತಂದೆಯ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ವ್ಯಕ್ತಿಯೊಬ್ಬರು ವಿಡಿಯೊದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
“ಒಬ್ಬ ವ್ಯಕ್ತಿ ತಾನು ಆ ಕೃತ್ಯ ಎಸಗಿರುವುದಾಗಿ ವಿಡಿಯೊದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಆತನೊಂದಿಗೆ ಇದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಮಗುವಿನ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ. ಇದು ಈ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ. ಈ ಕುರಿತು ಉತ್ತರ ಪ್ರದೇಶ ಮತ್ತು ದೆಹಲಿ ಸರ್ಕಾರಗಳಿಂದ ಪ್ರತಿಕ್ರಿಯೆ ಪಡೆಯಬೇಕು” ಎಂದು ವಕೀಲರು ಹೇಳಿದರು.
ನಿಶು ನೀಡಿದ ದೂರಿನ ಆಧಾರದ ಮೇಲೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವಕೀಲರು ತಿಳಿಸಿದರು. ನಿಶು ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿರುವುದಕ್ಕೆ ಸಂಬಂಧಿಸಿದ ವಿಡಿಯೊ ಸಾಕ್ಷ್ಯಗಳನ್ನು ಕೂಡ ಸಲ್ಲಿಸಬಹುದು ಎಂದು ಹೇಳಿದರು.
“ಸಮಿತಿ ನಡೆಸುವ ತನಿಖೆಗೆ ಸಮಯ ಬೇಕಾಗುತ್ತದೆ. ಆದರೆ ಆ ಅವಧಿಯಲ್ಲಿ ಆ ಮಗುವಿಗೆ ಏನಾದರೂ ಅನಾಹುತವಾದರೆ, ಬಳಿಕ ಅದನ್ನು ಹಿಂದಕ್ಕೆ ಸರಿಪಡಿಸಲು ಸಾಧ್ಯವಾಗುವುದಿಲ್ಲ” ಎಂದು ವಕೀಲರು ಆತಂಕ ವ್ಯಕ್ತಪಡಿಸಿದರು.
ಮಗುವನ್ನು ಬೆದರಿಸುತ್ತಿದ್ದರೆ ಅದು ಗಂಭೀರ ವಿಚಾರ
ನಿಶು ಅವರ ಸುರಕ್ಷತೆಗೆ ಸಂಬಂಧಿಸಿದ ಆರೋಪಗಳನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಗಂಭೀರವಾಗಿ ಪರಿಗಣಿಸಿದರು.
“ಮಗುವಿನ ವಿರುದ್ಧ ಹಿಂಸಾಚಾರ ನಡೆಸಿದ ಸಮಾಜವಿರೋಧಿ ವ್ಯಕ್ತಿಗಳು ಸ್ವತಂತ್ರವಾಗಿ ಓಡಾಡುತ್ತಿದ್ದು, ಆ ಮಗುವನ್ನು ಬೆದರಿಸಲು ಅಥವಾ ಹೆದರಿಸಲು ಪ್ರಯತ್ನಿಸುತ್ತಿದ್ದರೆ, ಅದು ಗಂಭೀರ ವಿಚಾರವಾಗಬಹುದು” ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
ಈ ವಿಚಾರದಲ್ಲಿ ಅರ್ಜಿ ಸಲ್ಲಿಸಿರುವವರ ಕಾಳಜಿ ಸಮರ್ಥನೀಯವಾಗಿದೆ ಎಂದ ಅವರು, ಇದರಲ್ಲಿ ಯಾವುದೇ ಎರಡನೇ ಅಭಿಪ್ರಾಯಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ಮಾತನಾಡಿದ ಸಿಜೆಐ, “ಮಗು ಎಂದರೆ ಮಗು. ಮಗುವಿನ ರಕ್ಷಣೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಈ ಘಟನೆಯನ್ನು ಸ್ಥಳೀಯ ಪೊಲೀಸರು ಪ್ರತ್ಯೇಕ ಪ್ರಕರಣವಾಗಿ ಪರಿಗಣಿಸಬಹುದು” ಎಂದು ಹೇಳಿದರು.
ನಿಶುಗೆ ತಕ್ಷಣ ರಕ್ಷಣೆ: ನ್ಯಾಯಮೂರ್ತಿ ಬಾಗ್ಚಿ
ನಿಶು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ತಮಗೆ ಈ ವಿಚಾರದ ಬಗ್ಗೆ ಮಾಹಿತಿ ಇದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯ ದೃಶ್ಯಾವಳಿಗಳಲ್ಲಿ ದಾಳಿ ನಡೆಸಿದವರು ಪೊಲೀಸರೊಂದಿಗೆ ಇದ್ದಂತೆ ಕಾಣುತ್ತದೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ನಿಶು ದಾಖಲಿಸಿರುವ ಎಫ್‌ಐಆರ್ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು, ನಿಶು ಹಾಗೂ ಅವರ ಕುಟುಂಬಕ್ಕೆ ಉತ್ತರ ಪ್ರದೇಶ ಪೊಲೀಸರಿಂದ ಭದ್ರತೆ ಒದಗಿಸಬೇಕು ಎಂದು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಹೇಳಿದರು.
ಅಲ್ಲದೆ, ಪ್ರಕರಣದ ತನಿಖೆಯನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಮೂಲಕ ನಡೆಸುವಂತೆ ಸೂಚಿಸಿದರು.
ಸುಪ್ರೀಂ ಕೋರ್ಟ್‌ಗೆ ನಿಶು ಧನ್ಯವಾದ
ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ನಿಶು ಆಜಾದ್ ಅವರು ಎಕ್ಸ್‌ನಲ್ಲಿ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಧನ್ಯವಾದ ಸಲ್ಲಿಸಿದರು.
“ನನ್ನ ಸುರಕ್ಷತೆಯ ಬಗ್ಗೆ ನ್ಯಾಯಾಲಯ ತೋರಿದ ಕಾಳಜಿ ಮತ್ತು ಕೈಗೊಂಡ ಮಧ್ಯಪ್ರವೇಶಕ್ಕೆ ನಾನು ಆಳವಾಗಿ ಕೃತಜ್ಞಳಾಗಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಗೌರವಾನ್ವಿತ ನ್ಯಾಯಾಲಯದ ನಿರ್ದೇಶನಗಳನ್ನು ಗೌರವಿಸಿ, ಅವುಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಾರೆ ಎಂದು ನಾನು ಹೃತ್ಪೂರ್ವಕವಾಗಿ ಆಶಿಸುತ್ತೇನೆ” ಎಂದು ನಿಶು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


