ಪೌರಕಾರ್ಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಪೌರಕಾರ್ಮಿಕರ ಉಪಹಾರ ಭತ್ಯೆಯನ್ನು ₹35 ರಿಂದ ₹70 ಕ್ಕೆ ಏರಿಕೆ ಮಾಡಿ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಅಲ್ಲದೆ, ಕಾರ್ಮಿಕರ ಒಟ್ಟಾರೆ ಕಲ್ಯಾಣ ಮತ್ತು ವಿವಿಧ ಬೇಡಿಕೆಗಳ ಪರಿಶೀಲನೆಗೆ ಆರ್ಥಿಕ ಇಲಾಖೆಯ ಒಪ್ಪಿಗೆಯೊಂದಿಗೆ ಸಂಪುಟ ಉಪಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ‘ಸ್ವಚ್ಛತಾ ಯೋಧರಿಗೆ ನಲ್ಮೆಯ ನಮನ’ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ‘ಪೌರಕಾರ್ಮಿಕರ ದಿನಾಚರಣೆ-2026’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಪೌರಕಾರ್ಮಿಕರ ಸಮಸ್ಯೆಗಳನ್ನು ನೇರವಾಗಿ ಬಗೆಹರಿಸುವ ಉದ್ದೇಶದಿಂದ ನಾವು ‘ಪ್ರಜಾಸೇವೆ ಇಲಾಖೆ’ಯನ್ನು ಆರಂಭಿಸಿದ್ದೇವೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಯಾವುದೇ ಮಧ್ಯವರ್ತಿಗಳ ಅಥವಾ ಸಂಘಟನೆಗಳ ಹಸ್ತಕ್ಷೇಪ ಅಗತ್ಯವಿಲ್ಲ, ನೇರವಾಗಿ ಸಚಿವರಿಗೆ ತಿಳಿಸಬಹುದು. ನಿಮ್ಮ ಯೋಗಕ್ಷೇಮ, ಮಂಡಳಿ ಮತ್ತು ಕಲ್ಯಾಣ ನಿಧಿಯ ಸುಧಾರಣೆಗೆ ಸಮಾಜ ಕಲ್ಯಾಣ ಹಾಗೂ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಸಚಿವ ಕೆ.ಎಸ್. ಬಸವಂತಪ್ಪ ಅವರನ್ನು ಒಳಗೊಂಡ ಸಂಪುಟ ಉಪಸಮಿತಿ ರಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸಿಎಂ ಹೇಳಿದರು.
“ನೀವಿಲ್ಲದಿದ್ದರೆ ನಗರ ತಿಪ್ಪೆಗುಂಡಿಯಾಗುತ್ತದೆ”:
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ, “ನೀವು ಪ್ರತಿನಿತ್ಯ ವಹಿಸುವ ಜವಾಬ್ದಾರಿಯಲ್ಲಿ ಶೇ.60 ರಷ್ಟು ಜನ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಿ. ನಿಮ್ಮ ಸೇವೆಯಿಲ್ಲದಿದ್ದರೆ ನಗರವೇ ಒಂದು ತಿಪ್ಪೆಗುಂಡಿಯಾಗುತ್ತದೆ ಎಂಬ ಅರಿವು ನಮಗಿದೆ. ನೀವಿರುವುದರಿಂದಲೇ ನಗರ ಮತ್ತು ರಸ್ತೆಗಳು ಸುಂದರವಾಗಿವೆ. ಸರ್ಕಾರ ನಿಮ್ಮನ್ನು ‘ಸ್ವಚ್ಛತೆಯ ರಾಯಭಾರಿಗಳು’ ಎಂದು ಗೌರವಿಸುತ್ತದೆ. ನಿಮ್ಮ ಆರೋಗ್ಯಕ್ಕೆ ಗ್ಯಾರಂಟಿ ನೀಡುವುದು ನಮ್ಮ ಆಡಳಿತಾತ್ಮಕ ಬದ್ಧತೆಯಾಗಿದೆ. ಸಮಾಜ ನಿಮ್ಮ ಮೇಲೆ ಅವಲಂಬಿತವಾಗಿದ್ದು, ನಿಮ್ಮ ಕಾಯಕವು ದೇವಸೇವೆಗೆ ಸಮಾನವಾದುದು” ಎಂದರು.
“ನಿಮ್ಮ ಬದುಕಿನಲ್ಲಿ ಎಂದಿಗೂ ಕೀಳರಿಮೆಯಿಂದ ಮಾನಸಿಕವಾಗಿ ಕುಗ್ಗಬಾರದು, ದೇಶಸೇವೆ ಮಾಡುತ್ತಿದ್ದೇವೆ ಎಂಬ ಸ್ವಾಭಿಮಾನದಿಂದ ಬಾಳಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಷ್ಟೇ ಆರ್ಥಿಕ ಮತ್ತು ಆಡಳಿತಾತ್ಮಕ ಒತ್ತಡಗಳಿದ್ದರೂ ಸಾವಿರಾರು ಪೌರಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ಜಲಮಂಡಳಿ ಹಾಗೂ ನೀರು ಸರಬರಾಜು ಇಲಾಖೆಗಳಲ್ಲಿ ಉಳಿದಿರುವ ಕಾರ್ಮಿಕರನ್ನೂ ಶೀಘ್ರದಲ್ಲೇ ಖಾಯಂಗೊಳಿಸಿ ಸ್ವಾಭಿಮಾನದ ಬದುಕು ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.
ಪೌರಕಾರ್ಮಿಕರ ಮಕ್ಕಳಿಗಾಗಿ ‘ಕೆಪಿಎಸ್’ ವಸತಿ ಶಾಲೆ ಹಾಗೂ ‘ಪೌರ ಭವನ’:
ಪೌರಕಾರ್ಮಿಕರ ಮಕ್ಕಳ ಭವಿಷ್ಯದ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, “ನಿಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಐಎಎಸ್ (IAS), ಕೆಎಎಸ್ (KAS) ಅಧಿಕಾರಿಗಳಾಗಬೇಕು, ಉದ್ಯೋಗ ಸೃಷ್ಟಿಸುವ ನಾಯಕರಾಗಬೇಕು ಎಂಬುದು ನಮ್ಮ ಆಶಯ. ಇದಕ್ಕಾಗಿ ನಗರ ಪ್ರದೇಶಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗಾಗಿಯೇ ‘ಕರ್ನಾಟಕ ಪಬ್ಲಿಕ್ ಶಾಲೆ’ (KPS) ಮಾದರಿಯ ವಿಶೇಷ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು. ಜೊತೆಗೆ, ಮುಂದಿನ ಎರಡು ತಿಂಗಳಲ್ಲಿ ಪ್ರತ್ಯೇಕ ‘ಪೌರ ಭವನ’ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಹಾಗೂ ಪ್ರತಿವರ್ಷ ಸರ್ಕಾರಿ ಮಟ್ಟದಲ್ಲೇ ಪೌರಕಾರ್ಮಿಕರ ದಿನಾಚರಣೆಯನ್ನು ವಿಜೃಂಭಣೆಯಿಂದ ನಡೆಸಲಾಗುವುದು” ಎಂದು ಪ್ರಕಟಿಸಿದರು.
ಪೌರಕಾರ್ಮಿಕ ಸಮವಸ್ತ್ರ ಧರಿಸಿ ಧೈರ್ಯ ತುಂಬಿದ ಸಿಎಂ:
ಇತ್ತೀಚೆಗೆ ಖಾಸಗಿ ಶಾಲೆಯೊಂದರಲ್ಲಿ ಪೌರಕಾರ್ಮಿಕ ಮಹಿಳೆಯ ಮಗಳಿಗೆ ಆಕೆಯ ತಾಯಿಯ ಸಮವಸ್ತ್ರದ ದುರ್ವಾಸನೆಯ ನೆಪವೊಡ್ಡಿ ಸಹಪಾಠಿಗಳು ನಿಂದಿಸಿ, ಅಂತರ ಕಾಯ್ದುಕೊಂಡಿದ್ದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯಿಂದ ಮನನೊಂದಿದ್ದ ಕಾರ್ಮಿಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ, ಸಿಎಂ ಡಿ.ಕೆ. ಶಿವಕುಮಾರ್ ಅವರು ಇಡೀ ಸಮಾರಂಭದ ಕೊನೆಯವರೆಗೂ ಸ್ವತಃ ಪೌರಕಾರ್ಮಿಕರ ಸಮವಸ್ತ್ರವನ್ನು ಧರಿಸಿ ಭಾಗವಹಿಸುವ ಮೂಲಕ ಗಮನ ಸೆಳೆದರು.
ಬಳಿಕ ಪೌರಕಾರ್ಮಿಕರೊಂದಿಗೆ ಕುಳಿತು ಮಧ್ಯಾಹ್ನದ ಊಟ ಸೇವಿಸಿದ ಸಿಎಂ, “ಶ್ರಮದಲ್ಲೇ ಶಿವನನ್ನು ಕಾಣುವ ನಿತ್ಯ ನೈರ್ಮಲ್ಯಗಾರರು ನೀವು. ನೀವು ನಿಜವಾದ ಕರ್ಮಯೋಗಿಗಳು, ಕಾಯಕಜೀವಿಗಳು ಮತ್ತು ಸ್ವಚ್ಛತೆ ಕ್ರಾಂತಿಯ ಸರದಾರರು” ಎಂದು ಬಣ್ಣಿಸಿದರು.
ಸಾಮಾಜಿಕ ಸಮಾನತೆಯ ಕುರಿತು ಮಾತನಾಡುತ್ತಾ, “ಒಂದು ಕಾಲದಲ್ಲಿ ದೇವಾಲಯಗಳ ಪ್ರವೇಶಕ್ಕೇ ನಿರ್ಬಂಧ ಎದುರಿಸುತ್ತಿದ್ದ ಸಮುದಾಯದ ಪೌರಕಾರ್ಮಿಕನ ಮಗನನ್ನು ಇಂದು ಭಗವಂತನ ಸೇವೆ ಮಾಡುವ ಮುಜರಾಯಿ ಇಲಾಖೆಯ ಸಚಿವನ್ನಾಗಿ ಮಾಡಲಾಗಿದೆ. ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದಂತೆ ತಾರತಮ್ಯವನ್ನು ಹೋಗಲಾಡಿಸಲು ಅವರಿಗೆ ಮುಜರಾಯಿ ಜೊತೆಗೆ ಮೀನುಗಾರಿಕೆ ಮತ್ತು ಬಂದರು ಸಚಿವ ಸಂಪುಟದ ಜವಾಬ್ದಾರಿ ನೀಡಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಮುನಿಯಪ್ಪ, ಎಚ್.ಸಿ. ಬಾಲಕೃಷ್ಣ, ಡಾ. ಯತೀಂದ್ರ, ಕೆ.ಎಸ್. ಬಸವಂತಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಶೋಕ್ ಸಾಲಪ್ಪ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


