ಭಾರತೀಯ ಚುನಾವಣಾ ಆಯೋಗದ ಒಳಗಿನ ‘ಸರ್ವಾಧಿಕಾರಿ’ ಧೋರಣೆ, ಇಬ್ಬರು ಆಯುಕ್ತರ ಬಂಡಾಯ ಮತ್ತು ನಿಯಮಬಾಹಿರ ನಿರ್ಧಾರಗಳ ಕುರಿತು ಇಡೀ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ, ಖ್ಯಾತ ಚುನಾವಣಾ ತಂತ್ರಜ್ಞ ಹಾಗೂ ‘ಜನ್ ಸುರಾಜ್’ ಸಂಸ್ಥಾಪಕ ಪ್ರಶಾಂತ್ ಕಿಶೋರ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
“ಚುನಾವಣಾ ಆಯೋಗದ ಈ ಕೊಳೆತ ವ್ಯವಸ್ಥೆ ಕೇವಲ ಇಂದಿನ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಅವರಿಂದಷ್ಟೇ ಶುರುವಾಗಿದ್ದಲ್ಲ,” ಎಂದು ಹೇಳುವ ಮೂಲಕ ಆಯೋಗದ ಸಾಂವಿಧಾನಿಕ ಪಾವಿತ್ರ್ಯತೆ ಮತ್ತು ನಿಷ್ಪಕ್ಷಪಾತತೆಯ ಮೇಲೆ ಅವರು ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಸ್ವತಃ ಆಯೋಗದ ಇತರ ಇಬ್ಬರು ಆಯುಕ್ತರು 14 ಬಾರಿ ಅಧಿಕೃತ ಆಕ್ಷೇಪಣೆ ದಾಖಲಿಸಿರುವ ವರದಿಗಳು ಹೊರಬಿದ್ದ ಬೆನ್ನಲ್ಲೇ, ಪ್ರಶಾಂತ್ ಕಿಶೋರ್ ಅವರು ಈ ವ್ಯವಸ್ಥಿತ ಅಕ್ರಮದ ಬೇರುಗಳು ಹಿಂದೆಯೇ ಹುಟ್ಟಿಕೊಂಡಿದ್ದವು ಎಂಬುದನ್ನು ಸ್ಮರಿಸಿದ್ದಾರೆ.
“ಈ ಕೊಳೆತ ವ್ಯವಸ್ಥೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರಿಂದಷ್ಟೇ ಶುರುವಾಗಿದ್ದಲ್ಲ. 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಗಿದ ತಕ್ಷಣವೇ ನಾನು ಈ ಮಾತನ್ನು ಹೇಳಿದ್ದೆ. ಚುನಾವಣಾ ಆಯೋಗದ ಕೃಪಾಕಟಾಕ್ಷದಿಂದಲೇ ಬಿಜೆಪಿ ಅಲ್ಲಿ 77 ಸೀಟುಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ. ಒಂದು ವೇಳೆ ಆ ಚುನಾವಣೆ ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆದಿದ್ದರೆ, ಅವರ ಸೀಟುಗಳ ಸಂಖ್ಯೆ 50ನ್ನೂ ದಾಟುತ್ತಿರಲಿಲ್ಲ” ಎಂದು ಪ್ರಶಾಂತ್ ಕಿಶೋರ್ ವಿಶ್ಲೇಷಿಸಿದ್ದಾರೆ.
2021ರ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಗೆಲುವಿನ ರೂವಾರಿಯಾಗಿದ್ದ ಪ್ರಶಾಂತ್ ಕಿಶೋರ್ ಅವರ ಈ ಹೇಳಿಕೆ, ಪ್ರಗತಿಪರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಡಳಿತಾರೂಢ ಸರ್ಕಾರವು ಚುನಾವಣಾ ಆಯೋಗವನ್ನು ತನ್ನ ರಾಜಕೀಯ ಲಾಭಕ್ಕಾಗಿ ಹೇಗೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಜೀವಂತ ಸಾಕ್ಷಿ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಇದು ಕೇವಲ ಬಂಗಾಳದ ಕಥೆಯಲ್ಲ, ಇಡೀ ಭಾರತದ ಆತಂಕ!
ಪ್ರಶಾಂತ್ ಕಿಶೋರ್ ಅವರ ಹೇಳಿಕೆ ಕೇವಲ 2021ರ ಬಂಗಾಳ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ. ಅಂದು ಬಂಗಾಳದಲ್ಲಿ ನಡೆದಿದ್ದ ಅದೇ ‘ಸಾಂವಿಧಾನಿಕ ಹಸ್ತಕ್ಷೇಪ’ ಇಂದು ಇಡೀ ದೇಶದಾದ್ಯಂತ ಬೃಹತ್ ರೂಪ ಪಡೆದುಕೊಂಡಿದೆ ಎಂಬುದು ವಿಪಕ್ಷಗಳ, ಪ್ರಜಾಸತ್ತಾತ್ಮಕ ಶಕ್ತಿಗಳ ಪ್ರಮುಖ ಕಳವಳವಾಗಿದೆ.
ಇತ್ತೀಚೆಗಷ್ಟೇ ಹೊರಬಿದ್ದ ಮಾಹಿತಿಯ ಪ್ರಕಾರ, ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ಸಿಇಸಿ ಗ್ಯಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ 14 ಬಾರಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. 18 ವರ್ಷ ತುಂಬಿದ ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ‘ಫಾರ್ಮ್ 6’ ನಮೂನೆಯನ್ನು ಅನಧಿಕೃತವಾಗಿ ಬದಲಾಯಿಸಿರುವುದನ್ನು ಆಯುಕ್ತರು “ಸಂಪೂರ್ಣ ಕಾನೂನುಬಾಹಿರ” ಎಂದು ಲಿಖಿತವಾಗಿ ದಾಖಲಿಸಿದ್ದಾರೆ.
ಪ್ರಶಾಂತ್ ಕಿಶೋರ್ ಅವರ ಇಂದಿನ ಈ ಕಟುನುಡಿಗಳು ಮತ್ತು ಆಯೋಗದ ಒಳಗಿನ ಆಂತರಿಕ ಬಿಕ್ಕಟ್ಟುಗಳು ಕೇವಲ ಸಾಂಸ್ಥಿಕ ಭಿನ್ನಾಭಿಪ್ರಾಯಗಳಲ್ಲ; ಬದಲಾಗಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಡಿಪಾಯವೇ ಅಲುಗಾಡುತ್ತಿರುವ ಮುನ್ಸೂಚನೆಯಾಗಿವೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
“ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕೆಲಸ ಮಾಡದಿದ್ದರೆ, ಚುನಾವಣೆಗಳು ಕೇವಲ ಒಂದು ಪ್ರಹಸನವಾಗಿ ಉಳಿಯುತ್ತವೆ. ವಿಪಕ್ಷಗಳು, ಯುವಜನತೆ ಮತ್ತು ಸಾಮಾನ್ಯ ನಾಗರಿಕರು ಈಗಲೇ ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತದಿದ್ದರೆ ಮುಂದೊಂದು ದಿನ ಮತದಾನದ ಹಕ್ಕೇ ಕಣ್ಮರೆಯಾಗಬಹುದು,” ಎಂದು ಸಾಮಾಜಿಕ ಹೋರಾಟಗಾರರು ಎಚ್ಚರಿಸುತ್ತಿದ್ದಾರೆ.


