ನ್ಯಾಯಾಂಗದ ಮೂಲಕ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಕೆಳಗಿಳಿಸುವುದು ಸಾಧ್ಯವಾಗದಿರಬಹುದು, ಆದರೆ ಜನರ ಹಕ್ಕುಗಳಿಗಾಗಿ ಬೀದಿ ಚಳವಳಿ ನಡೆಯಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದರು.
ಎಸ್‌ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಜಾಥಾದ ಭಾಗವಾಗಿ ಚಿಕ್ಕಮಗಳೂರಿನಲ್ಲಿ ಭಾನುವಾರ (ಸೆ.27) ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಗ್ಯಾನೇಶ್ ಕುಮಾರ್ ನಿಜವಾದ ಮತ ಕಳ್ಳ. ಗಣೇಶ ವಿಸರ್ಜನೆ ಮಾಡಿದ್ದೇವೆ, ಶೀಘ್ರದಲ್ಲೇ ಗ್ಯಾನೇಶ್ ಕುಮಾರ್ ಅವರನ್ನೂ ವಿಸರ್ಜನೆ ಮಾಡುತ್ತೇವೆ” ಎಂದು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತರ ನೇಮಕ, ಚುನಾವಣಾ ಆಯೋಗದ ಸ್ವಾಯತ್ತತೆ ಹಾಗೂ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ ಕಾನೂನು ತಿದ್ದುಪಡಿಗಳ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದರು. “ಏನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡು, ಅದಕ್ಕಾಗಿಯೇ ಮೊದಲೇ ಮಯ್ಯೆಗೆ ಎಣ್ಣೆ ಹಚ್ಚಿಕೊಂಡಿದ್ದರು” ಎಂದು ಆರೋಪಿಸಿದರು.
ಮತದಾರರ ಪಟ್ಟಿಯಿಂದ ದೊಡ್ಡ ಸಂಖ್ಯೆಯಲ್ಲಿ ಹೆಸರುಗಳನ್ನು ತೆಗೆದುಹಾಕಿರುವ ಆರೋಪದ ಕುರಿತು ಮಾತನಾಡಿದ ಪ್ರಕಾಶ್ ರಾಜ್, ಕೊಲೆ ಮಾಡುವವರು ಕೃತ್ಯವೆಸಗಿದಾಗ ಸಿಕ್ಕಿಹಾಕಿಕೊಳ್ಳುವುದಿಲ್ಲ; ಅದರ ಸಾಕ್ಷಿಗಳನ್ನು ನಾಶ ಮಾಡುವಾಗ ಸಿಕ್ಕಿಕೊಳ್ಳುತ್ತಾರೆ. ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದವರು ಈಗ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ” ಎಂದರು.
ಎಸ್‌ಐಆರ್ ಒಂದೊಂದು ದಿನಕ್ಕೂ ಒಂದೊಂದು ತಿರುವು ಪಡೆಯುತ್ತಿದೆ. ನುಸುಳುಕೋರರನ್ನು ಪತ್ತೆ ಹಚ್ಚುತ್ತೇವೆ ಎಂದು ಪ್ರಾರಂಭಿಸಿದ ಪ್ರಕ್ರಿಯೆಯಲ್ಲಿ ಒಬ್ಬ ನುಸುಳುಕೋರನನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಸುಳ್ಳು ನೆಪಗಳನ್ನು ಹೇಳಿಕೊಂಡು ಇಡೀ ದೇಶದ ಜನರನ್ನು ಪರೀಕ್ಷೆಗೆ ಕೂರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಆರ್ ಪ್ರಕ್ರಿಯೆಯ ಎರಡನೇ ಹಂತದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಬೆಳವಣಿಗೆಗಳನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ವಿವಿಧ ನಾಗರಿಕ ಸಂಘಟನೆಗಳು ಆಯೋಗದ ಅವಸರದ ಬಗ್ಗೆ ಪ್ರಶ್ನೆ ಎತ್ತಿದ್ದವು ಎಂದು ತಿಳಿಸಿದರು.
ಕರ್ನಾಟಕದಲ್ಲೂ ಎಸ್‌ಐಆರ್ ಪ್ರಕ್ರಿಯೆಯನ್ನು ಅವಸರದಲ್ಲಿ ನಡೆಸಲಾಗಿದೆ. ಬಿಎಲ್‌ಒಗಳಿಗೆ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ದೊಡ್ಡ ಸಂಖ್ಯೆಯ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಾಗಿದೆ ಎಂದರು.
ಒಂದೂವರೆ ಕೋಟಿ ಜನರನ್ನು ಈಗ ಸರತಿ ಸಾಲಿನಲ್ಲಿ ನಿಲ್ಲಿಸಲಾಗಿದೆ. ನಾವು ಕರ್ನಾಟಕದಾದ್ಯಂತ ‘ಮತ ಕಾವಲು ಸಮಿತಿ’ ಹೆಸರಿನಲ್ಲಿ ಆಗಿರುವ ಅನ್ಯಾಯವನ್ನು ಬಹಿರಂಗಪಡಿಸುತ್ತಿದ್ದೇವೆ. ಚುನಾವಣಾ ಆಯೋಗ ಮಾಡಿರುವ ತಪ್ಪುಗಳನ್ನು ನೇರವಾಗಿ ಜನರನ್ನು ಭೇಟಿ ಮಾಡಿ ದಾಖಲಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಪ್ರವಾಸದ ವೇಳೆ ತಮಗೆ ಎದುರಾದ ಕೆಲವು ಪ್ರಕರಣಗಳನ್ನು ವಿವರಿಸಿದ ಪ್ರಕಾಶ್ ರಾಜ್, ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ಸಾಮಾನ್ಯ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಟ್ರಾನ್ಸ್‌ಜೆಂಡರ್ ಮಹಿಳೆಯೊಬ್ಬರ ಹೆಸರು ಹಾಗೂ ಗುರುತಿನ ಬದಲಾವಣೆಯಿಂದ ಉಂಟಾದ ಸಮಸ್ಯೆ, ಕಲಬುರಗಿಯಲ್ಲಿ ಗುಡಿಸಲು ಸುಟ್ಟುಹೋದ ಹಿರಿಯ ಮಹಿಳೆಯ ವಿಳಾಸದ ಕುರಿತು ನೋಟಿಸ್ ನೀಡಿರುವುದು ಹಾಗೂ ಮತ್ತೊಬ್ಬ ವೃದ್ಧೆಯ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಅವರು ಉದಾಹರಣೆಯಾಗಿ ನೀಡಿದರು.
“ಒಬ್ಬೊಬ್ಬರ ಮಾತು ಕೇಳಿದರೆ ಕಣ್ಣೀರು ಬರುತ್ತದೆ. ಒಬ್ಬ ವೃದ್ಧೆ ನನಗೆ, ನನ್ನ ಹೆಸರು ಮತದಾರರ ಪಟ್ಟಿಯಿಂದ ಹೋಗಿದೆ. ಮುಂದೆ ನನಗೆ ಪಿಂಚಣಿ ಬರುತ್ತದೆಯೇ?’ ಎಂದು ಪ್ರಶ್ನಿಸಿದರು. ದೇಶದ ಜನರಿಗೆ ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಿ?” ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಯುವಜನರ ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದರು. “ಈ ದೇಶದ ಯುವಜನರ ಪ್ರಶ್ನೆಗಳಿಗೆ ತಾಕತ್ತಿದ್ದರೆ ಉತ್ತರಿಸಿ” ಎಂದು ಹೇಳಿದರು.
ದೇಶದ ಎಲ್ಲ ಮಾಧ್ಯಮಗಳೂ ಮಾರಾಟವಾಗಿಲ್ಲ ಎಂದು ಹೇಳಿದ ಪ್ರಕಾಶ್ ರಾಜ್, ಎಸ್‌ಐಆರ್ ಕುರಿತ ವರದಿಗಾಗಿ The Indian Express ಅನ್ನು ಶ್ಲಾಘಿಸಿದರು. ಸತ್ಯವನ್ನು ಹೇಳುವ ಮಾಧ್ಯಮಗಳು ಇನ್ನೂ ಇವೆ ಎಂದರು.


