ಭಾರತೀಯ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಕಾರ್ಯವೈಖರಿಯ ಪಾರದರ್ಶಕತೆಯ ಕುರಿತು ‘ಸ್ಕ್ರಾಲ್.ಇನ್’ (Scroll.in) ಡಿಜಿಟಲ್ ಮಾಧ್ಯಮ ಸಂಸ್ಥೆ ಪ್ರಕಟಿಸಿರುವ ಸರಣಿ ತನಿಖಾ ವರದಿಯೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. 2024ರ ಲೋಕಸಭಾ ಚುನಾವಣೆ ವೇಳೆ ಉತ್ತರ ಪ್ರದೇಶದ ಸಂಭಲ್ ಲೋಕಸಭಾ ಕ್ಷೇತ್ರದಲ್ಲಿ ಸಂಭವಿಸಿದೆ ಎನ್ನಲಾದ ಪೊಲೀಸ್ ದೌರ್ಜನ್ಯ ಹಾಗೂ ಮತದಾರರ ಹಕ್ಕು ತಡೆಯುವಿಕೆ ಕುರಿತ ಗಂಭೀರ ದೂರುಗಳನ್ನು ವಜಾಗೊಳಿಸುವಾಗ, ಆಯೋಗದ ಒಳಗಡೆ ಭಾರಿ ಮಟ್ಟದ ‘ಸ್ವಹಿತಾಸಕ್ತಿ ಸಂಘರ್ಷ’ ಸಂಭವಿಸಿದೆಯೇ ಎಂಬ ಆರೋಪಗಳು ಎದುರಾಗಿವೆ. ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿರುವ (CEC) ಜ್ಞಾನೇಶ್ ಕುಮಾರ್ ಅವರ ನೇರ ಅಳಿಯ ಸಲ್ಲಿಸಿದ್ದ ವರದಿಯನ್ನೇ ಆಧಾರವಾಗಿಟ್ಟುಕೊಂಡು ಆಯೋಗವು ಸಾರ್ವಜನಿಕ ದೂರುಗಳನ್ನು ವಜಾಗೊಳಿಸಿತ್ತೇ ಎಂಬ ಆರೋಪ ಮುನ್ನೆಲೆಗೆ ಬಂದಿದೆ.
‘ಸ್ಕ್ರಾಲ್.ಇನ್’ ಗ್ರೌಂಡ್ ರಿಪೋರ್ಟ್ ಪ್ರಕಾರ, 2024ರ ಮೇ 7ರಂದು ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಸಂಭಲ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಜಿಯಾ ಉರ್ ರೆಹಮಾನ್ ಬರ್ಕ್ ಮತ್ತು ಭಾರತೀಯ ಜನತಾ ಪಾರ್ಟಿಯ ಪರಮೇಶ್ವರ್ ಲಾಲ್ ಸೈನಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂದು ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಓವರಿ ಗ್ರಾಮದ ಮತಗಟ್ಟೆಯ ಹೊರಗೆ ಆಗಮಿಸಿದ ಪೊಲೀಸ್ ವಾಹನದಿಂದ ಇಳಿದ ಸಿಬ್ಬಂದಿ ಸಾಲಿನಲ್ಲಿ ನಿಂತಿದ್ದ ಮತದಾರರ ಮೇಲೆ ದಿಢೀರ್ ಲಾಠಿಚಾರ್ಜ್ ನಡೆಸಿದರೆಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಈ ದೌರ್ಜನ್ಯಕ್ಕೆ ಒಳಗಾದ ಓವರಿ ಗ್ರಾಮದ 70 ವರ್ಷದ ಹಿರಿಯ ಮತದಾರರಾದ ಬಾನೋ ಎಂಬುವವರು, ತಮ್ಮ ಕೆನ್ನೆ ಹಾಗೂ ಮೊಣಕಾಲಿಗೆ ಬಿದ್ದ ಪೆಟ್ಟನ್ನು ತೋರಿ, “ನನ್ನ ಇಡೀ ಜೀವಮಾನದಲ್ಲೇ ಇಂತಹ ಘೋರ ಪರಿಸ್ಥಿತಿಯನ್ನು ನೋಡಿರಲಿಲ್ಲ, ಪುರುಷ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದರು” ಎಂದು ‘ಸ್ಕ್ರಾಲ್’ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಅದೇ ರೀತಿ ಪಕ್ಕದ ಶಹಬಾಜ್‌ಪುರ ಗ್ರಾಮದ 38 ವರ್ಷದ ಸಕೀನಾ ಎಂಬುವವರು, “ಪುರುಷರ ಮೇಲೆ ಹಲ್ಲೆ ನಡೆಸಿದಾಗ ಮಹಿಳೆಯರ ಮೇಲಾದರೂ ಕರುಣೆ ತೋರಿಸಬಹುದು ಅಂದುಕೊಂಡಿದ್ದೆವು, ಆದರೆ ಪೊಲೀಸರು ಮಹಿಳೆಯರನ್ನೂ ಬಿಡದೆ ಥಳಿಸಿದರು” ಎಂದು ತಮ್ಮ ಅಳಲು ತೋಡಿಕೊಂಡಿದ್ದರು.
ಈ ರೀತಿಯಾಗಿ ಗ್ರೌಂಡ್ ಮಟ್ಟದಲ್ಲಿ ಭಾರಿ ಪ್ರಮಾಣದ ದೌರ್ಜನ್ಯಗಳು ನಡೆದವು ಎಂಬ ಆರೋಪಗಳು ಮತ್ತು ವಿಡಿಯೋ ಸಾಕ್ಷ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರೂ, ಆ ಸಮಯದಲ್ಲಿ ಸಂಭಲ್ ಕ್ಷೇತ್ರದ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಮನೀಶ್ ಬನ್ಸಲ್ ಅವರು ಆಯೋಗಕ್ಕೆ ಭಿನ್ನ ವರದಿಯೊಂದನ್ನು ಸಲ್ಲಿಸಿದ್ದರು. ಕ್ಷೇತ್ರದಲ್ಲಿ ಯಾವುದೇ ಮತದಾರರನ್ನು ತಡೆಯಲಾಗಿಲ್ಲ, ಕೇವಲ ಮತಗಟ್ಟೆಗಳ ಸಾಲುಗಳನ್ನು ನಿರ್ವಹಿಸಲಾಗಿದೆ ಹಾಗೂ ದೌರ್ಜನ್ಯದ ಆರೋಪಗಳು ಸುಳ್ಳು ಎಂದು ಮನೀಶ್ ಬನ್ಸಲ್ ತಮ್ಮ ವರದಿಯಲ್ಲಿ ಪ್ರತಿಪಾದಿಸಿದ್ದರು. ಈ ವರದಿಯನ್ನೇ ಆಧಾರವಾಗಿಟ್ಟುಕೊಂಡು ಚುನಾವಣಾ ಆಯೋಗವು ಸಾರ್ವಜನಿಕರು ಹಾಗೂ ಸಂತ್ರಸ್ತರು ನೀಡಿದ್ದ ದೂರುಗಳನ್ನು ನಿರಾಕರಿಸಿತ್ತು.
ಆದರೆ ‘ಸ್ಕ್ರಾಲ್.ಇನ್’ ನಡೆಸಿದ ತನಿಖೆಯ ಪ್ರಕಾರ, ಸಂಭಲ್‌ನ ಅಂದಿನ ಚುನಾವಣಾಧಿಕಾರಿ ಮನೀಶ್ ಬನ್ಸಲ್ ಅವರು ಬೇರಾರೂ ಅಲ್ಲ, ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇರ ಅಳಿಯ (ಜ್ಞಾನೇಶ್ ಕುಮಾರ್ ಅವರ ಪುತ್ರಿ, ಐಎಎಸ್ ಅಧಿಕಾರಿ ಮೇಧಾ ರೂಪಮ್ ಅವರ ಪತಿ). ಚುನಾವಣೆ ನಡೆಯುತ್ತಿದ್ದ ಸಮಯದಲ್ಲಿ ಜ್ಞಾನೇಶ್ ಕುಮಾರ್ ಅವರು ಆಯೋಗದಲ್ಲಿ ಚುನಾವಣಾ ಆಯುಕ್ತರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ತಮ್ಮದೇ ಸ್ವಂತ ಅಳಿಯ ಸಲ್ಲಿಸಿದ ವರದಿಯನ್ನು ಆಧರಿಸಿ ದೂರುಗಳನ್ನು ವಜಾಗೊಳಿಸುವ ನಿರ್ಧಾರದ ಸಭೆಯಲ್ಲಿ ಜ್ಞಾನೇಶ್ ಕುಮಾರ್ ಭಾಗವಹಿಸಿದ್ದರೇ ಅಥವಾ ಕೌಟುಂಬಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯಿಂದ ಸ್ವತಃ ದೂರ ಉಳಿದಿದ್ದರೇ ಎನ್ನುವ ಗಂಭೀರ ಪ್ರಶ್ನೆ ಈಗ ಎದುರಾಗಿದೆ.
ಭಾರತೀಯ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಅತಿ ಮುಖ್ಯ ಹಾಗೂ ನಿಷ್ಪಕ್ಷಪಾತ ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಗಳಲ್ಲಿ ‘ಸ್ವಹಿತಾಸಕ್ತಿ ಸಂಘರ್ಷ’ ತಡೆಯಲು ಸ್ಪಷ್ಟ ನಿಯಮಾವಳಿಗಳು ಇಲ್ಲದಿರುವುದು ಕಳವಳಕಾರಿಯಾಗಿದೆ. ಸಂಭಲ್ ಪ್ರಕರಣದ ಈ ಕೌಟುಂಬಿಕ ಸಂಪರ್ಕ ಹಾಗೂ ಮತದಾರರ ಹಕ್ಕು ತಡೆಯುವಿಕೆಯ ಆತಂಕಗಳು ಇದೀಗ ಸುಪ್ರೀಂ ಕೋರ್ಟ್ ಅಂಗಳದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಇದಕ್ಕೆ ಪುಷ್ಟಿ ನೀಡುವಂತೆ, ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರಿ ಟೀಕೆ ಹಾಗೂ ರಾಜಕೀಯ ಪ್ರತಿರೋಧವನ್ನು ಎದುರಿಸುತ್ತಿವೆ. ಎಸ್‌ಐಆರ್ ಪ್ರಕ್ರಿಯೆಯಡಿ ಲಕ್ಷಾಂತರ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಕೈಬಿಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಆಯೋಗದ ಒಳಗೆ ಸ್ವತಃ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಏಕಪಕ್ಷೀಯ ನಿರ್ಧಾರಗಳು ಹಾಗೂ ಡಿಜಿಟಲ್ ಫಾರ್ಮ್-6 ಬದಲಾವಣೆಗಳ ಕುರಿತು ಆಕ್ಷೇಪಣೆ ದಾಖಲಿಸಿರುವುದು ಬಹಿರಂಗಗೊಂಡಿದೆ. ಸಂಭಲ್ ಘಟನೆಯ ಸ್ವಹಿತಾಸಕ್ತಿ ಸಂಘರ್ಷ ಮತ್ತು ಎಸ್‌ಐಆರ್ ಪರಿಷ್ಕರಣೆಯ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ತನಿಖಾ ತಂಡ ರಚನೆಗೆ ಕೋರಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಹಾಗೂ ನಾಗರಿಕ ಸಮಾಜದ ಸಂಘಟನೆಗಳು ತೀವ್ರ ಹೋರಾಟಕ್ಕೆ ಮುಂದಾಗಿವೆ.


