ಗೋವಾದ ಸಾಂತಾ ಕ್ರೂಝ್ ಮತಕ್ಷೇತ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ, ಒಂದು ಕುಟುಂಬದ ಆರು ಸದಸ್ಯರು ತಮ್ಮ ವಿಳಾಸ ಬದಲಾವಣೆಯನ್ನು ತಿಳಿಸಲು ‘ಫಾರ್ಮ್ 8’ ಸಲ್ಲಿಸಿದ್ದರೂ ಸಹ, ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ತೆಗೆದುಹಾಕಿದ್ದಕ್ಕೆ ಬಾಂಬೆ ಹೈಕೋರ್ಟ್ ಮಂಗಳವಾರ (ಸೆ.29) ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಮುಖ್ಯ ಚುನಾವಣಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಅರ್ಜಿದಾರ ಪರೇಶ್ ಸಾಲಗಾಂವ್ಕರ್ ಅವರು, “ತಾವು ಒಂದೇ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಾಸದ ಮನೆಯನ್ನು ಬದಲಾಯಿಸಿದ ನಂತರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅವಧಿಯಲ್ಲಿ ತಾವೂ ಸೇರಿದಂತೆ ತಮ್ಮ ಕುಟುಂಬದವರು ‘ಫಾರ್ಮ್ 8’ ಅನ್ನು ಸಲ್ಲಿಸಿದ್ದು, ಆದರೆ ನಂತರ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಟ್ಟಿರುವುದು ಕಂಡುಬಂದಿದೆ” ಎಂದು ನ್ಯಾಯಮೂರ್ತಿಗಳಾದ ವಾಲ್ಮೀಕಿ ಮಿನೆಜಸ್ ಮತ್ತು ಅಮಿತ್ ಜಾಮ್‌ಸಾಂದೇಕರ್ ಅವರಿದ್ದ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.
ಎಸ್‌ಐಆರ್ ಗಣತಿ ಹಂತದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ನಮೂನೆ ಫಾರಂ ನಂಬರ್-8 ಸ್ವೀಕರಿಸಲು ಸಿಸ್ಟಮ್‌ನಲ್ಲಿ ಅವಕಾಶವಿರಲಿಲ್ಲ. ಹಾಗಾಗಿ, ಆ ಕುಟುಂಬಕ್ಕೆ ಹೊಸ ಮತದಾರರಾಗಿ ಸೇರ್ಪಡೆಗೊಳ್ಳಲು ಫಾರಂ ನಂಬರ್-6 ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಅವರು ಫಾರಂ ನಂಬರ್-6 ಸಲ್ಲಿಸಲು ನಿರಾಕರಿಸಿದ್ದರು ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಸಮಜಾಯಿಸಿ ನೀಡಿತ್ತು.
ನಿಗದಿತ ಸಮಯದೊಳಗೇ ಸಲ್ಲಿಸಿದ್ದರೂ, ಎಸ್‌ಐಆರ್ ಅವಧಿಯಲ್ಲಿ ಫಾರಂ-8 ಅರ್ಜಿಗಳನ್ನು ಚುನಾವಣಾ ಆಯೋಗ ಯಾಕೆ ಪರಿಗಣಿಸಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿದೆ. “ಇದು ನಿಮ್ಮ ಸಾಫ್ಟ್‌ವೇರ್‌ನಲ್ಲಿರುವ ಸಮಸ್ಯೆ. ಇದರಿಂದಾಗಿ ಎಷ್ಟು ಜನ ಮತದಾರರನ್ನು ನೀವು ಕಳೆದುಕೊಳ್ಳಬಹುದು ಎಂದು ಊಹಿಸಲು ಸಾಧ್ಯವೇ? ಯಾರಾದರೂ ಫಾರಂ-6 ಭರ್ತಿ ಮಾಡಲೇಬೇಕೆಂದು ನೀವು ಹೇಗೆ ಒತ್ತಾಯಿಸುತ್ತೀರಿ? ಹಾಗಿದ್ದರೆ ಫಾರಂ-8 ಇರುವುದಾದರೂ ಯಾಕೆ? ಎಂದು ನ್ಯಾಯಪೀಠ ಕೇಳಿದೆ.
ಸಾಮಾನ್ಯ ದಿನಗಳಲ್ಲಿ ನಿವಾಸ ಬದಲಾವಣೆಗಾಗಿ ಫಾರಂ-8 ಸಲ್ಲಿಸಬಹುದು. ಆದರೆ, ಗಣತಿ ಪ್ರಕ್ರಿಯೆಯ (Enumeration Process) ಅವಧಿಯಲ್ಲಿ ಹಾಗೆ ಮಾಡಲು ಬರುವುದಿಲ್ಲ ಎಂದು ಚುನಾವಣಾ ಆಯೋಗ ಉತ್ತರಿಸಿದೆ.
ಅರ್ಜಿದಾರರು ಮತ್ತು ಅವರ ಕುಟುಂಬದವರು ಸುಮಾರು ಎಂಟು ವರ್ಷಗಳ ಹಿಂದೆಯೇ ತಮ್ಮ ನಿವಾಸವನ್ನು ಬದಲಾಯಿಸಿದ್ದರು. ಹೀಗೆ ವಿಳಾಸ ಬದಲಾದಾಗ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ಅವರದ್ದೇ ಜವಾಬ್ದಾರಿಯಾಗಿತ್ತು ಎಂದು ಚುನಾವಣಾ ಆಯೋಗದ ಪರ ವಕೀಲರು ವಾದಿಸಿದ್ದಾರೆ.
ಆದರೆ, ನ್ಯಾಯಾಧೀಶರು ಈ ವಾದವನ್ನು ಒಪ್ಪಿಲ್ಲ. ಅಲ್ಲದೆ, ಅರ್ಜಿದಾರರು ವಿಳಾಸ ಬದಲಾವಣೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ಫಾರಂ ನಂಬರ್-8 ಅನ್ನು ಈಗಾಗಲೇ ಸಲ್ಲಿಸಿದ್ದರು ಎಂಬುದನ್ನು ಎತ್ತಿ ತೋರಿಸಿದ್ದಾರೆ. ‘ಈ ಫಾರಂ ನಂಬರ್-8 ಚಾಲ್ತಿಗೆ ಬಂದು ಎಷ್ಟು ದಿನವಾಯಿತು? ಎಲೆಕ್ಟ್ರಾನಿಕ್ ಯುಗಕ್ಕೂ ಹಿಂದಿನ ಕಾಲಕ್ಕೆ ಹೋಗಿ ಯೋಚಿಸಿ. ಆಗ ನೀವು ಇದನ್ನು ಹೇಗೆ ಮಾಡುತ್ತಿದ್ದಿರಿ? … ಈಗ ನಿಮ್ಮ ಬಳಿ ಸಾಫ್ಟ್‌ವೇರ್ ಇದೆ ಎಂಬ ಒಂದೇ ಕಾರಣಕ್ಕೆ ಈ ಸಮಸ್ಯೆ ಉದ್ಭವಿಸಿದೆ. ಸಾಫ್ಟ್‌ವೇರ್ ನಿಯಮಗಳು ಕಾನೂನನ್ನು ಮೀರಿಸಲು ಸಾಧ್ಯವಿಲ್ಲ…. ಇದು ನಿಮ್ಮ ಕಡೆಯಿಂದಲೇ ಆಗಿರುವ ತಪ್ಪು” ಎಂದು ನ್ಯಾಯಪೀಠ ಹೇಳಿದೆ.
ಕಳೆದ ತಿಂಗಳು ನಡೆದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಯಾವ ನಮೂನೆಯನ್ನು ಭರ್ತಿ ಮಾಡಬೇಕು ಎಂದು ಹೈಕೋರ್ಟ್ ಚುನಾವಣಾ ಆಯೋಗವನ್ನು ಕೇಳಿತ್ತು. ಅದಕ್ಕೆ ಉತ್ತರಿಸಿದ್ದ ಆಯೋಗವು, ಒಮ್ಮೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ (ತೆಗೆದುಹಾಕಲ್ಪಟ್ಟರೆ) ಅದನ್ನು ಮತ್ತೆ ಮರುಸ್ಥಾಪಿಸಲು (Restore) ತಮ್ಮ ಸಾಫ್ಟ್‌ವೇರ್ ವ್ಯವಸ್ಥೆಯು ಅನುಮತಿಸುವುದಿಲ್ಲ ಎಂದು ಹೇಳಿತ್ತು. ಆಗ ನ್ಯಾಯಾಲಯವು ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವಂತೆ ಆಯೋಗಕ್ಕೆ ನಿರ್ದೇಶನ ನೀಡಿತ್ತು. “ಇಡೀ ದೇಶವೇ ಈ ಸಮಸ್ಯೆಯನ್ನು ಎದುರಿಸುತ್ತಿದೆ. ನೀವು ಇದಕ್ಕೆ ಯಾವುದಾದರೂ ಒಂದು ಮಾರ್ಗವನ್ನು ಕಂಡುಹಿಡಿಯಲೇಬೇಕು” ಎಂದು ನ್ಯಾಯಾಲಯ ಹೇಳಿತ್ತು.
Courtesy : timesofindia.indiatimes.com


