ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ನಡೆಯುತ್ತಿರುವ ಪ್ರಯತ್ನಗಳು ರಾಜ್ಯದ ನಾನಾ ಭಾಗಗಳಲ್ಲಿ ಬೆಳಕಿಗೆ ಬರುತ್ತಿವೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿರುವ ಅನರ್ಹ ಅಥವಾ ತಪ್ಪು ನೋಂದಣಿಗಳನ್ನು ಸರಿಪಡಿಸಲು ನೀಡಲಾಗಿರುವ ‘ಫಾರಂ-7’ (Form-7) ಅನ್ನು ದುರ್ಬಳಕೆ ಮಾಡಿಕೊಂಡು, ನಿರ್ದಿಷ್ಟ ಸಮುದಾಯಗಳು ಹಾಗೂ ವಿರೋಧ ಪಕ್ಷಗಳ ಬೆಂಬಲಿತ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿಸಲು ಶ್ರಮಿಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇಂತಹದ್ದೇ ಒಂದು ಗಂಭೀರ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ತಾಲೂಕಿನಲ್ಲಿ ಬಹಿರಂಗವಾಗಿದೆ. ಕೊಪ್ಪ ತಾಲೂಕಿನ ವಿವಿಧ 37 ಮತಗಟ್ಟೆ ವ್ಯಾಪ್ತಿಯಲ್ಲಿರುವ ಒಟ್ಟು 243 ಅರ್ಹ ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಕೋರಿ ಬಿಜೆಪಿ ತಾಲೂಕು ಮುಖಂಡರಾದ ಎಚ್.ಕೆ. ದಿನೇಶ್, ಅರ್ಜುನ್, ಹಾಲಪ್ಪ, ಕಾರ್ತಿಕ್ ಹಾಗೂ ಬ್ರಿಜೇಶ್ ಅವರು ಚುನಾವಣಾಧಿಕಾರಿಗೆ ಫಾರಂ-7 ಮೂಲಕ ಅರ್ಜಿ ಸಲ್ಲಿಸಿದ್ದರು.

ವಿಶೇಷವೆಂದರೆ, ಹೀಗೆ ಹೆಸರು ಡಿಲೀಟ್ ಮಾಡಲು ಕೋರಿ ಆಕ್ಷೇಪಣೆ ಸಲ್ಲಿಸಲಾಗಿದ್ದ 243 ಮತದಾರರಲ್ಲಿ ಹೆಚ್ಚಿನವರು ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರೆಲ್ಲರೂ “ಸ್ಥಳದಲ್ಲೇ ವಾಸವಿಲ್ಲ” ಅಥವಾ “ಬೇರೆಡೆ ಮತದಾನ ಹೊಂದಿದ್ದಾರೆ” ಎಂದು ತಪ್ಪು ಆಕ್ಷೇಪಣೆ ಸಲ್ಲಿಸಲಾಗಿತ್ತು. ಆದರೆ, ಅಸಲಿಗೆ ಈ ಎಲ್ಲ 243 ಮತದಾರರೂ ಕಳೆದ ಹಲವು ದಶಕಗಳಿಂದ ಅದೇ ಬೂತ್‌ಗಳ ವ್ಯಾಪ್ತಿಯಲ್ಲಿ ವಾಸವಾಗಿದ್ದು, ನಿಯಮಿತವಾಗಿ ಮತದಾನ ಮಾಡುತ್ತಾ ಬಂದಿದ್ದಾರೆ.
ಬಿಎಲ್‌ಒ ಕುಟುಂಬದ ಹೆಸರನ್ನೂ ಕೈಬಿಡಲು ಯತ್ನ!
ಅಕ್ರಮದ ಮಿತಿ ಎಷ್ಟಿತ್ತೆಂದರೆ, ಜಯಪುರ ಗ್ರಾಪಂ ವ್ಯಾಪ್ತಿಯ ಕಟ್ಟೆಮನೆ ಬೂತಿನ ಬಿಎಲ್‌ಒ (BLO) ವಝೀರ್ ಖಾನ್ ಮತ್ತು ಅವರ ಕುಟುಂಬದ ಸದಸ್ಯರ ಮತಗಳನ್ನು ವಜಾ ಮಾಡಲು ಬಿಜೆಪಿ ಮುಖಂಡರು ಅರ್ಜಿ ಸಲ್ಲಿಸಿದ್ದರು. ವಝೀರ್ ಖಾನ್ ಅವರ ಕುಟುಂಬವು ಕಳೆದ ಐದು ತಲೆಮಾರಿನಿಂದ ಜಯಪುರ ಪೇಟೆಯಲ್ಲೇ ವಾಸವಾಗಿದ್ದರೂ, ಪೀರ್ ಖಾನ್ ಅವರ ಆರು ಮನೆಗಳ ಒಟ್ಟು 25 ಮತಗಳನ್ನು ಪಟ್ಟಿಯಿಂದ ಕೈಬಿಡಲು ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದಲ್ಲದೆ, ಜಯಪುರ ಬೂತ್ ಸಂಖ್ಯೆ 154ರಲ್ಲಿ ಒಂದೇ ಕುಟುಂಬದ 25, ಕೊಪ್ಪ ಗ್ರಾಮಾಂತರದ ಬೂತ್ ಸಂಖ್ಯೆ 68ರಲ್ಲಿ 58, ಮಕ್ಕಿಕೊಪ್ಪ ಬೂತ್ ಸಂಖ್ಯೆ 183ರಲ್ಲಿ 22 ಹಾಗೂ ಬೂತ್ ಸಂಖ್ಯೆ 80ರಲ್ಲಿ 32 ಮತದಾರರ ಹೆಸರುಗಳನ್ನು ವಜಾ ಮಾಡಲು ಅರ್ಜಿ ನೀಡಲಾಗಿತ್ತು.
ಸಿಕ್ಕಿಬಿದ್ದ ಬಳಿಕ ಅರ್ಜಿ ಹಿಂಪಡೆದ ಬಿಜೆಪಿ ಮುಖಂಡರು:
ಸ್ಥಳೀಯವಾಗಿ ಈ ವಿಚಾರ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಬಾಧಿತ ಮತದಾರರಿಗೆ ಅಧಿಕಾರಿಗಳು ನೋಟೀಸ್ ನೀಡಿದಾಗ ಅಸಲಿ ಸತ್ಯ ಹೊರಬಂದಿದೆ. ಪ್ರಕ್ರಿಯೆ ಕಾನೂನಾತ್ಮಕವಾಗಿ ತಿರುಗುಬಾಣವಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಮತ್ತು ಪೊಲೀಸರ ಹಂತದಲ್ಲಿ ತನಿಖೆ ಎದುರಿಸುವ ಭೀತಿ ಎದುರಾಗುತ್ತಿದ್ದಂತೆಯೇ, ಅರ್ಜಿ ಸಲ್ಲಿಸಿದ್ದ ಬಿಜೆಪಿ ಮುಖಂಡ ಎಚ್.ಕೆ. ದಿನೇಶ್ ಎಂಬುವವರು ದಿನಾಂಕ 01-10-2026 ರಂದು ಕೊಪ್ಪ ತಾಲೂಕು ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಪತ್ರ ಬರೆದು ತಮ್ಮ ಆಕ್ಷೇಪಣೆಗಳನ್ನು ಹಿಂಪಡೆದಿದ್ದಾರೆ.
ತಮ್ಮ ಹಿಂಪಡೆಯುವಿಕೆ ಪತ್ರದಲ್ಲಿ, “ಕರಡು ಮತದಾರರ ಪಟ್ಟಿಯಲ್ಲಿ ಬಂದ ತಪ್ಪು ಮಾಹಿತಿಯಿಂದಾಗಿ 243 ಮತದಾರರನ್ನು ಪಟ್ಟಿಯಿಂದ ತೆಗೆಯುವಂತೆ ದಿನಾಂಕ 21.09.2026 ಮತ್ತು 22.09.2026 ರಂದು ಆಕ್ಷೇಪಣೆ ಸಲ್ಲಿಸಲಾಗಿತ್ತು. ನಂತರದ ಮರು ಪರಿಶೀಲನೆಯಲ್ಲಿ ಆ ಮತದಾರರು ಅದೇ ಮತಗಟ್ಟೆ ವ್ಯಾಪ್ತಿಯಲ್ಲೇ ಇರುವುದು ತಿಳಿದುಬಂದಿದೆ. ಹೀಗಾಗಿ ನಾನು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಹಿಂಪಡೆಯುತ್ತಿದ್ದು, ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು” ಎಂದು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಾದ್ಯಂತ ತೀವ್ರಗೊಳ್ಳುತ್ತಿರುವ ವಿವಾದ:
ಕೇವಲ ಕೊಪ್ಪ ತಾಲೂಕು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ದುರುದ್ದೇಶಪೂರ್ವಕವಾಗಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿ ಅರ್ಹ ಮತದಾರರ ಹಕ್ಕನ್ನು ಕಸಿಯುವ ಪ್ರಯತ್ನಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಈ ರೀತಿ ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದವರ ವಿರುದ್ಧ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ಎಫ್‌ಐಆರ್ (FIR) ದಾಖಲಿಸಲು ಮುಂದಾದಾಗ, ಪ್ರಕರಣದಿಂದ ಪಾರಾಗಲು ಬಿಜೆಪಿ ನಾಯಕರು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಎಫ್‌ಐಆರ್ ದಾಖಲಿಸದಂತೆ ಒತ್ತಡ ಹೇರುತ್ತಿದ್ದಾರೆ.
ಜನರ ಪ್ರಜಾಸತ್ತಾತ್ಮಕ ಮತದಾನದ ಹಕ್ಕನ್ನು ಕಸಿಯಲು ಫಾರಂ-7 ದುರುಪಯೋಗಪಡಿಸಿಕೊಳ್ಳುತ್ತಿರುವುದು, ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ.


