ರಾಜ್ಯಾದ್ಯಂತ ತೀವ್ರ ರಾಜಕೀಯ ವಿವಾದ ಹಾಗೂ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಪರಿಷ್ಕರಣೆಯ (SIR) ಅಕ್ರಮಗಳ ಸರಣಿಗೆ ಇದೀಗ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರವೂ ಸೇರ್ಪಡೆಯಾಗಿದೆ. ಫಾರಂ-7 ಅನ್ನು ಅಸ್ತ್ರವಾಗಿಸಿಕೊಂಡು ಜೀವಂತವಾಗಿರುವ ಹಾಗೂ ಅದೇ ಕ್ಷೇತ್ರದಲ್ಲಿ ವಾಸವಾಗಿರುವ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ನಡೆದಿರುವ ಬೃಹತ್ ಜಾಲವೊಂದು ಬೆಳಕಿಗೆ ಬಂದಿದ್ದು, ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಬೂತ್ ಏಜೆಂಟ್ ಸೇರಿದಂತೆ ಇಬ್ಬರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ನೀಡಿರುವ ದೂರಿನನ್ವಯ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 64ರಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಬೆಂಬಲಿತ ವ್ಯಕ್ತಿಗಳು ದೊಡ್ಡಮಟ್ಟದ ಒಳಸಂಚು ನಡೆಸಿರುವುದು ಬಹಿರಂಗವಾಗಿದೆ. ಮತದಾರರು ಅದೇ ಕ್ಷೇತ್ರದಲ್ಲಿ ಸುಖಕರವಾಗಿ ವಾಸವಿದ್ದರೂ ಸಹ, ಅವರು “ಗೈರುಹಾಜರಾಗಿದ್ದಾರೆ” ಅಥವಾ “ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ” ಎಂದು ಸುಳ್ಳು ಮಾಹಿತಿ ನೀಡಿ ಫಾರಂ-7 ಅರ್ಜಿಗಳನ್ನು ಭರ್ತಿ ಮಾಡಲಾಗಿತ್ತು. ಈ ಕ್ಷೇತ್ರದಲ್ಲಿ ಒಟ್ಟು 778 ಅರ್ಹ ಮತದಾರರ ಹಕ್ಕನ್ನು ಕಸಿಯಲು ಸಂಚು ರೂಪಿಸಲಾಗಿದ್ದು, ಬಿಜೆಪಿ ಬೂತ್ ಮಟ್ಟದ ಏಜೆಂಟ್ ಜಿ.ಎಸ್. ವಸಂತಲಕ್ಷ್ಮೀ ಹೆಸರಿನಲ್ಲಿ ಈ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ.
ತನಿಖೆಯ ವೇಳೆ, ನಿರ್ದಿಷ್ಟ ಸಮುದಾಯದ ಮತದಾರರನ್ನೇ ಗುರಿಯಾಗಿಸಿಕೊಂಡು ಈ ಅಕ್ರಮ ಎಸಗಿರುವುದು ಕಂಡುಬಂದಿದೆ. ವಾರ್ಡ್ 64ರ ವಿವಿದೆಡೆ ಅಂದರೆ ಮತಗಟ್ಟೆ 157ರಲ್ಲಿ 122, ಮತಗಟ್ಟೆ 155ರಲ್ಲಿ 233, ಮತಗಟ್ಟೆ 205ರಲ್ಲಿ 171 ಹಾಗೂ ಮತಗಟ್ಟೆ 203ರಲ್ಲಿ 88 ಅರ್ಜಿಗಳು ಸೇರಿದಂತೆ ಹಲವು ಬೂತ್ಗಳಲ್ಲಿ ನಕಲಿ ಫಾರಂ-7 ಸಲ್ಲಿಕೆಯಾಗಿವೆ. ಅಷ್ಟೇ ಅಲ್ಲದೆ, ಈ ಫಾರಂಗಳಲ್ಲಿ ಮಾಡಲಾಗಿರುವ ಸಹಿಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿದ್ದು, ಫೋರ್ಜರಿ ಸಹಿ ಮಾಡಿ ಅರ್ಜಿ ಸಲ್ಲಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೈಯಾಲಿಕಾವಲ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


