ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಚುನಾವಣಾ ಆಯೋಗದ ಮಹತ್ವದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಒಂದು ವಾರದೊಳಗೆ ವಿವರವಾದ ಪ್ರತಿಕ್ರಿಯೆ ಸಲ್ಲಿಸುವಂತೆ ಸೋಮವಾರ ನೋಟಿಸ್ ಜಾರಿ ಮಾಡಿದೆ. ಆದರೆ, ಗ್ಯಾನೇಶ್ ಕುಮಾರ್ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಅರ್ಜಿದಾರರು ಕೋರಿದ್ದ ಮಧ್ಯಂತರ ಮನವಿಯನ್ನು ನ್ಯಾಯಾಲಯ ಈ ಹಂತದಲ್ಲಿ ಒಪ್ಪಲಿಲ್ಲ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಅರ್ಜಿದಾರ ರಾಕೇಶ್ ಕುಮಾರ್ ಸಿಂಗ್ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ವಾದ ಮಂಡಿಸಿದರು. ಚುನಾವಣಾ ಆಯೋಗವು ಸಂವಿಧಾನದ ಅಡಿಯಲ್ಲಿ ಬಹುಸದಸ್ಯ ಸಂಸ್ಥೆಯಾಗಿದ್ದು, ಅದರ ನಿರ್ಧಾರಗಳು ಸರ್ವಾನುಮತದಿಂದ ಅಥವಾ ಭಿನ್ನಾಭಿಪ್ರಾಯವಿದ್ದರೆ ಬಹುಮತದ ಆಧಾರದ ಮೇಲೆ ಮಾತ್ರ ಕೈಗೊಳ್ಳಬೇಕಾಗಿದೆ ಎಂಬುದು ಅರ್ಜಿಯ ಪ್ರಮುಖ ವಾದವಾಗಿದೆ.
ಅರ್ಜಿದಾರರ ಆರೋಪದ ಪ್ರಕಾರ, ಚುನಾವಣಾ ಆಯೋಗದ ಇತರ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಮುಂದೆ ಸಂಬಂಧಿತ ಕಡತಗಳನ್ನು ಇಡದೆ, ಕೆಲವು ಪ್ರಮುಖ ನಿರ್ಧಾರಗಳನ್ನು ಸಿಇಸಿ ಕಚೇರಿಯಿಂದಲೇ ಕೈಗೊಂಡು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ನೇರವಾಗಿ ರವಾನಿಸಲಾಗಿದೆ. ಈ ರೀತಿಯ ಕ್ರಮವು ಚುನಾವಣಾ ಆಯೋಗದ ಬಹುಸದಸ್ಯ ಸ್ವರೂಪವನ್ನೇ ದುರ್ಬಲಗೊಳಿಸುತ್ತದೆ ಮತ್ತು ಸಂವಿಧಾನದ 324ನೇ ವಿಧಿಯ ಆಶಯಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ವಿಶೇಷವಾಗಿ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಹಾಗೂ ಮಾದರಿ ನೀತಿ ಸಂಹಿತೆಯ ಜಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳಲ್ಲಿ ಇತರ ಇಬ್ಬರು ಚುನಾವಣಾ ಆಯುಕ್ತರ ಅನುಮೋದನೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಆರೋಪಗಳು ಅರ್ಜಿಯಲ್ಲಿವೆ. ಚುನಾವಣಾ ಆಯೋಗದ ಅಧಿಕಾರವು ಒಬ್ಬ ವ್ಯಕ್ತಿಯ ಕೈಯಲ್ಲಿಲ್ಲ; ಅದು ಸಂಪೂರ್ಣ ಆಯೋಗಕ್ಕೆ ಸೇರಿದ್ದು, ಮುಖ್ಯ ಚುನಾವಣಾ ಆಯುಕ್ತರು ‘ಸಮಾನರಲ್ಲಿ ಮೊದಲಿಗರು’ ಮಾತ್ರವೇ ಹೊರತು ಇತರ ಆಯುಕ್ತರ ಮೇಲೆ ಏಕಪಕ್ಷೀಯ ಅಧಿಕಾರ ಹೊಂದಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ವಿಕಾಸ್ ಸಿಂಗ್ ಅವರು ಮಾಧ್ಯಮ ವರದಿಗಳು ಮತ್ತು ಆರ್‌ಟಿಐ ಮೂಲಕ ದೊರೆತ ಮಾಹಿತಿಯನ್ನು ಉಲ್ಲೇಖಿಸಿ, ಕೆಲವು ಸಂದರ್ಭಗಳಲ್ಲಿ ಇತರ ಇಬ್ಬರು ಚುನಾವಣಾ ಆಯುಕ್ತರ ಮುಂದೆ ಕಡತಗಳೇ ಮಂಡನೆಯಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಚುನಾವಣಾ ಆಯೋಗದ ನಿರ್ಧಾರಗಳನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಸಿಇಸಿ ಕಚೇರಿಯಿಂದ ನೇರವಾಗಿ ತಿಳಿಸಲಾಗಿದ್ದು, ಈ ಮೂಲಕ ಆಯೋಗದೊಳಗಿನ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಬದಿಗೊತ್ತಲಾಗಿದೆ ಎಂದು ಅವರು ಆರೋಪಿಸಿದರು.
ಈ ವೇಳೆ ನ್ಯಾಯಪೀಠವು ಅರ್ಜಿದಾರರ ವಾದದ ಪ್ರಮುಖ ಅಂಶವನ್ನೇ ಪ್ರಶ್ನಿಸಿತು. ಇತರ ಇಬ್ಬರು ಚುನಾವಣಾ ಆಯುಕ್ತರು ತಮ್ಮ ಅಭಿಪ್ರಾಯವನ್ನು ದಾಖಲಿಸಿದ ಅಥವಾ ತಮ್ಮನ್ನು ನಿರ್ಧಾರ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ಅಧಿಕೃತವಾಗಿ ದೂರು ನೀಡಿದ ನಿರ್ದಿಷ್ಟ ಪ್ರಕರಣವಿದೆಯೇ ಎಂದು ಪೀಠ ವಕೀಲರನ್ನು ಪ್ರಶ್ನಿಸಿತು. ನಿರ್ದಿಷ್ಟ ಉದಾಹರಣೆಯಿಲ್ಲದೆ ಆರೋಪವು ಕೇವಲ ಅಮೂರ್ತ ಆರೋಪವಾಗಿ ಉಳಿಯುವ ಸಾಧ್ಯತೆಯಿದೆ ಎಂಬುದನ್ನೂ ನ್ಯಾಯಾಲಯ ಸೂಚಿಸಿತು.
ಇದಕ್ಕೆ ಪ್ರತಿಯಾಗಿ ವಿಕಾಸ್ ಸಿಂಗ್, ಚುನಾವಣಾ ಆಯೋಗದ ಆಂತರಿಕ ಶ್ರೇಣೀಕರಣದ ಕಾರಣದಿಂದ ಇತರ ಆಯುಕ್ತರು ಸಾರ್ವಜನಿಕವಾಗಿ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ಇರದೇ ಇರಬಹುದು ಎಂದು ವಾದಿಸಿದರು. ಆದರೆ ಅದರಿಂದ ಕಾನೂನಿನಲ್ಲಿ ನಿಗದಿಪಡಿಸಿರುವ ಸಾಮೂಹಿಕ ನಿರ್ಧಾರ ಪ್ರಕ್ರಿಯೆಯನ್ನು ಬದಿಗೊತ್ತಲು ಅವಕಾಶ ಸಿಗುವುದಿಲ್ಲ ಎಂದು ಅವರು ಹೇಳಿದರು. ಇಂತಹ ಕ್ರಮಗಳು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ, ಚುನಾವಣಾ ಆಯೋಗದ ಮೇಲಿನ ಜನರ ನಂಬಿಕೆಯನ್ನೂ ಕುಗ್ಗಿಸಬಹುದು ಎಂದು ವಾದಿಸಿದರು.
ಚುನಾವಣಾ ಆಯೋಗದ ನಿರ್ಧಾರಗಳು ಕಡ್ಡಾಯವಾಗಿ ನಿಯಮಾನುಸಾರ ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ನಡೆಯಬೇಕು ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿತು. “ಕಡ್ಡಾಯ ಕಾನೂನು ಇದೆ. ಅವರು ಅದನ್ನು ಪಾಲಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಯಾವುದೇ ಉಲ್ಲಂಘನೆ ನಡೆದಿದ್ದರೆ, ಅದನ್ನು ನಾವು ರದ್ದುಗೊಳಿಸುತ್ತೇವೆ” ಎಂಬ ಅರ್ಥದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮಹತ್ವದ ಮಾತುಗಳನ್ನು ಹೇಳಿದರು.
ಅದೇ ವೇಳೆ, ಗ್ಯಾನೇಶ್ ಕುಮಾರ್ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಮಾಡಲಾದ ಮನವಿಯನ್ನು ನ್ಯಾಯಾಲಯ ಒಪ್ಪಲಿಲ್ಲ. ಪ್ರತಿವಾದಿಗಳ ವಾದವನ್ನು ಆಲಿಸದೆ ಯಾವುದೇ ಮಧ್ಯಂತರ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಮುಖ್ಯ ಚುನಾವಣಾ ಆಯುಕ್ತರನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸುವುದರಿಂದ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಮತ್ತು ಅದರ ಪರಿಣಾಮ ಚುನಾವಣಾ ಪ್ರಕ್ರಿಯೆಯ ಮೇಲೂ ಬೀಳಬಹುದು ಎಂದು ನ್ಯಾಯಾಲಯ ಎಚ್ಚರಿಸಿತು. “ಚುನಾವಣೆಗಳನ್ನು ಯಾರು ನಡೆಸುತ್ತಾರೆ?” ಎಂದು ಪೀಠ ಪ್ರಶ್ನಿಸಿತು.
ಇದಕ್ಕೆ ವಿಕಾಸ್ ಸಿಂಗ್, ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಯೋಗದ ಕಾರ್ಯಗಳನ್ನು ಮುಂದುವರಿಸಬಹುದು ಎಂದು ಉತ್ತರಿಸಿದರು. ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಚುನಾವಣಾ ಆಯೋಗದ ಸ್ವಾಯತ್ತತೆಯ ಕುರಿತು ಸುಪ್ರೀಂ ಕೋರ್ಟ್ 2023ರಲ್ಲಿ ಅನೂಪ್ ಬರನ್ವಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನೂ ಅವರು ಉಲ್ಲೇಖಿಸಿದರು. ಚುನಾವಣಾ ಸಂಸ್ಥೆಯ ಮೇಲೆ ಯಾವುದೇ ಪಕ್ಷಪಾತದ ಅನುಮಾನ ಮೂಡದಂತೆ ಅದರ ನಿರ್ಧಾರ ಪ್ರಕ್ರಿಯೆ ಸಾಮೂಹಿಕವಾಗಿರಬೇಕು ಎಂಬುದು ಅವರ ವಾದವಾಗಿತ್ತು.
ಪ್ರಕರಣದ ಮತ್ತೊಂದು ಪ್ರಮುಖ ಅಂಶವೆಂದರೆ, ಚುನಾವಣಾ ಆಯೋಗದೊಳಗೆ ಇಬ್ಬರು ಆಯುಕ್ತರು ಹಲವು ಬಾರಿ ಆಕ್ಷೇಪಣೆಗಳನ್ನು ದಾಖಲಿಸಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿರುವುದು. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕಳೆದ ಹತ್ತು ತಿಂಗಳಲ್ಲಿ SIRಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕನಿಷ್ಠ 14 ಬಾರಿ ಪ್ರಶ್ನೆ ಅಥವಾ ಆಕ್ಷೇಪಣೆಗಳನ್ನು ದಾಖಲಿಸಿದ್ದರು ಎಂದು ವರದಿಯಾಗಿದೆ. ಕೆಲವು ನಿರ್ಧಾರಗಳು ತಮ್ಮ ತಿಳುವಳಿಕೆ ಅಥವಾ ಶಿಫಾರಸಿಲ್ಲದೆ ಹೊರಬಂದಿದ್ದವು ಎಂಬ ಅಂಶವೂ ವರದಿಗಳಲ್ಲಿ ಉಲ್ಲೇಖವಾಗಿತ್ತು.
ಆದರೆ, ಚುನಾವಣಾ ಆಯೋಗವು ಆಂತರಿಕ ಭಿನ್ನಾಭಿಪ್ರಾಯಗಳು ಸಂಸ್ಥೆಯ ಸಾಮಾನ್ಯ ಚರ್ಚೆಯ ಭಾಗವಾಗಿದ್ದು, ತನ್ನ ಎಲ್ಲಾ ಕ್ರಮಗಳು ಕಾನೂನು ಮತ್ತು ನಿಗದಿತ ಪ್ರಕ್ರಿಯೆಗಳಿಗೆ ಅನುಗುಣವಾಗಿವೆ ಎಂದು ಹೇಳಿಕೊಂಡಿದೆ. ಹೀಗಾಗಿ, ಈ ಪ್ರಕರಣದಲ್ಲಿ ಈಗ ಸುಪ್ರೀಂ ಕೋರ್ಟ್ ಎದುರು ಇರುವ ಪ್ರಮುಖ ಪ್ರಶ್ನೆ ಕೇವಲ ಗ್ಯಾನೇಶ್ ಕುಮಾರ್ ಅವರ ವೈಯಕ್ತಿಕ ಅಧಿಕಾರದ ಕುರಿತದ್ದಲ್ಲ; ಭಾರತದ ಚುನಾವಣಾ ಸಂಸ್ಥೆಯ ನಿರ್ಧಾರಗಳನ್ನು ಅಂತಿಮವಾಗಿ ಯಾರು ಮತ್ತು ಯಾವ ರೀತಿಯ ಪ್ರಕ್ರಿಯೆಯ ಮೂಲಕ ತೆಗೆದುಕೊಳ್ಳಬೇಕು ಎಂಬ ಸಾಂವಿಧಾನಿಕ ಪ್ರಶ್ನೆಯೂ ಆಗಿದೆ.
ಈ ಹಂತದಲ್ಲಿ ಆರೋಪಗಳ ಸತ್ಯಾಸತ್ಯತೆ ಅಥವಾ ಅರ್ಜಿಯ ಅಂತಿಮ ಅರ್ಹತೆಯನ್ನು ನ್ಯಾಯಾಲಯ ನಿರ್ಧರಿಸಿಲ್ಲ. ಆದರೆ ಚುನಾವಣಾ ಆಯೋಗದ ಸಾಂಸ್ಥಿಕ ಸಮಗ್ರತೆ, ಅದರ ಬಹುಸದಸ್ಯ ಸ್ವರೂಪ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳು ಉದ್ಭವಿಸಿರುವುದನ್ನು ಪೀಠ ಪರಿಗಣಿಸಿದೆ. ಅದಕ್ಕಾಗಿ ಚುನಾವಣಾ ಆಯೋಗ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.
ಅರ್ಜಿಯು ಚುನಾವಣಾ ಆಯೋಗದ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಪ್ರಕ್ರಿಯೆಯನ್ನು ಬಹಿರಂಗಪಡಿಸುವಂತೆ, SIR ಸೇರಿದಂತೆ ಪ್ರಮುಖ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಪೂರ್ಣ ಆಯೋಗದ ಮುಂದೆ ಮಂಡಿಸುವಂತೆ ಮತ್ತು ಬಹುಮತದ ಒಪ್ಪಿಗೆಯಿಲ್ಲದೆ ಕೈಗೊಂಡಿರುವ ಯಾವುದೇ ನಿರ್ಧಾರವನ್ನು ಅಮಾನ್ಯಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಚುನಾವಣಾ ಆಯೋಗದ ಪಾರದರ್ಶಕ ಕಾರ್ಯನಿರ್ವಹಣೆ ಮತ್ತು ಅದರ ಬಹುಸದಸ್ಯ ಸ್ವರೂಪವನ್ನು ರಕ್ಷಿಸುವ ಹಿಂದಿನ ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೊಳಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ನಿಗದಿಪಡಿಸಲಾಗಿದೆ. ಹೀಗಾಗಿ, ಗ್ಯಾನೇಶ್ ಕುಮಾರ್ ಅವರನ್ನು ಈ ಹಂತದಲ್ಲಿ ಅಮಾನತುಗೊಳಿಸುವ ಬೇಡಿಕೆಗೆ ಸುಪ್ರೀಂ ಕೋರ್ಟ್ ತಕ್ಷಣ ಒಪ್ಪಿಗೆ ನೀಡದಿದ್ದರೂ, ಚುನಾವಣಾ ಆಯೋಗದೊಳಗಿನ ನಿರ್ಧಾರ ಪ್ರಕ್ರಿಯೆ, SIR ಸೇರಿದಂತೆ ಪ್ರಮುಖ ಚುನಾವಣಾ ನಿರ್ಧಾರಗಳ ಕಾನೂನುಬದ್ಧತೆ ಮತ್ತು ಬಹುಸದಸ್ಯ ಚುನಾವಣಾ ಸಂಸ್ಥೆಯ ಸಾಂವಿಧಾನಿಕ ಸ್ವರೂಪದ ಕುರಿತು ನ್ಯಾಯಾಂಗ ಪರಿಶೀಲನೆಯ ಬಾಗಿಲು ತೆರೆದಿದೆ. ಚುನಾವಣಾ ಆಯೋಗ ಸಲ್ಲಿಸಲಿರುವ ಪ್ರತಿಕ್ರಿಯೆ ಮತ್ತು ದಾಖಲೆಗಳು ಮುಂದಿನ ವಿಚಾರಣೆಯಲ್ಲಿ ಈ ಆರೋಪಗಳ ಸ್ವರೂಪ ಹಾಗೂ ಅವುಗಳ ಕಾನೂನು ಪರಿಣಾಮದ ಕುರಿತು ಮಹತ್ವದ ಬೆಳವಣಿಗೆಗೆ ಕಾರಣವಾಗುವ ಸಾಧ್ಯತೆಯಿದೆ.


