ತೆಲಂಗಾಣದಲ್ಲಿ ಫಾರ್ಮ್ 7 ರ ಮೂಲಕ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (ಡಿಇಒ) ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.
ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್‌ಒ) ಮುಂದೆ “ಫಾರ್ಮ್ 7 ರಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿರುವ ನಿದರ್ಶನಗಳು ವರದಿಯಾಗಿವೆ, ಅಂತಹ ನಮೂನೆಗಳು ಅಸಲಿಯಲ್ಲ ಎಂದು ಆರೋಪಿಸಲಾಗಿದೆ” ಎಂದು ತಮ್ಮ ಸುತ್ತೋಲೆಯಲ್ಲಿ ಸಿಇಒ ಸಿ. ಸುದರ್ಶನ್ ರೆಡ್ಡಿ ತಿಳಿಸಿದ್ದಾರೆ.
ಅದನ್ನು ಗಮನದಲ್ಲಿಟ್ಟುಕೊಂಡು, “ಫಾರ್ಮ್ 6, 6ಎ, 7 ಮತ್ತು 8 ರಲ್ಲಿ ಲಿಖಿತವಾಗಿ ತಿಳಿದೂ ತಿಳಿದೂ ತಪ್ಪು ಹೇಳಿಕೆಗಳು ಅಥವಾ ಘೋಷಣೆಗಳನ್ನು ನೀಡಿದ ಅರ್ಜಿದಾರರ ವಿರುದ್ಧ ಇಆರ್‌ಒಗಳು ಕ್ರಮ ಕೈಗೊಳ್ಳಬೇಕು” ಎಂದು ಎಲ್ಲಾ ಡಿಇಒಗಳಿಗೆ ಸೂಚನೆ ನೀಡುವಂತೆ ಸಿಇಒ ಕೇಳಿಕೊಂಡಿದ್ದಾರೆ. ವಿಚಾರಣೆಯ ನಂತರ ಈ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಫಾರ್ಮ್ 6 ಹೊಸ ಮತದಾರರ ನೋಂದಣಿಗೆ, 6ಎ ಸಾಗರೋತ್ತರ ನಾಗರಿಕರಿಗೆ, ಮೇಲೆ ತಿಳಿಸಿದಂತೆ ಫಾರ್ಮ್ 7 ಅಸ್ತಿತ್ವದಲ್ಲಿರುವ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಅಥವಾ ಸೇರಿಸುವುದನ್ನು ವಿರೋಧಿಸಲು, ಫಾರ್ಮ್ 8 ಅನ್ನು ಈಗಾಗಲೇ ನೋಂದಾಯಿತ ಮತದಾರರು ತಮ್ಮ ಅಸ್ತಿತ್ವದಲ್ಲಿರುವ ದಾಖಲೆಗಳನ್ನು ಮಾರ್ಪಡಿಸಲು, ತಿದ್ದುಪಡಿ ಮಾಡಲು ಅಥವಾ ನವೀಕರಿಸಲು ಬಳಸಲಾಗುತ್ತದೆ.
ದೊಡ್ಡ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿಲ್ಲ
ಇದಕ್ಕೂ ಮುಂಚೆ, ಗೋಶಾಮಹಲ್ ಮತ್ತು ಮುಶೀರಾಬಾದ್ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಲ್ಲಿಸಲಾಗಿದೆ ಎನ್ನಲಾದ ಫಾರ್ಮ್ 7 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯದ ಚುನಾವಣಾ ಅಧಿಕಾರಿಗಳು ತಿಳಿಸಿದ್ದರು.
ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಆಯುಕ್ತ ಮತ್ತು ಡಿಇಒ ಆರ್.ವಿ. ಕರ್ಣನ್ ಅವರನ್ನು ಉಲ್ಲೇಖಿಸಿರು ಮಾಧ್ಯಮಗಳು, ಫಾರ್ಮ್ 7 ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ಬಂದಿಲ್ಲ; ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬಂದಿವೆ.
ಗೋಶಾಮಹಲ್‌ನಲ್ಲಿ ಅರ್ಜಿದಾರರು ಸಲ್ಲಿಸಿದ ನಮೂನೆಗಳಿಗೆ ಸಹಿ ಮಾಡಿಲ್ಲವಾದ್ದರಿಂದ ಅವು ಅನರ್ಹಗೊಂಡಿವೆ. ಆದರೆ ಮುಶೀರಾಬಾದ್‌ನಲ್ಲಿ ಬಾಲಚಂದರ್ ಎಂಬವರು 30 ಮತದಾರರ ವಿರುದ್ಧ ಫಾರ್ಮ್ 7 ಅನ್ನು ಸಲ್ಲಿಸಿದ್ದಾರೆ. ಅವರು ಅದೇ ಸ್ಥಳದಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ ಎಂದು ಕರ್ಣನ್ ತಿಳಿಸಿದ್ದಾರೆ.
ಬಿಜೆಪಿ ಕೈವಾಡವಿರುವ ಆರೋಪ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಫಾರ್ಮ್ 7 ಅನ್ನು ಸಲ್ಲಿಸುವ ಮೂಲಕ ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕಲು ಬಿಜೆಪಿ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ ಎಂದು ಆರಪಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮುಶೀರಾಬಾದ್‌ನಲ್ಲಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ ವ್ಯಕ್ತಿ ಬಿಜೆಪಿಗೆ ಸೇರಿದವರು ಎಂದು ತೆಲಂಗಾಣ ಕಾಂಗ್ರೆಸ್ ಕೂಡ ಸಿಇಒಗೆ ದೂರು ನೀಡಿದೆ. ಆದರೆ, ಈ ಎಲ್ಲಾ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ.


