ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮುಸ್ಲಿಂ ಮತದಾರರ ಹೆಸರುಗಳನ್ನು ಮೋಸದಿಂದ ಡಿಲೀಟ್ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ನಾಯಕ ಡಾ. ರವಿ ಬಸಲಿಂಗಪ್ಪಗೌಡ ಪಾಟೀಲ್ ಅವರಿಗೆ ಕರ್ನಾಟಕದ ಬೆಳಗಾವಿಯ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಫಾರ್ಮ್ 7 ಅನ್ನು ಸಲ್ಲಿಸಿದ ಮಾತ್ರಕ್ಕೆ ಮತದಾರರ ಹೆಸರು ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ, ಏಕೆಂದರೆ ಚುನಾವಣಾಧಿಕಾರಿಗಳು ತಮ್ಮದೇ ಆದ ವಿಚಾರಣೆ ಮತ್ತು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ನ್ಯಾಯಾಧೀಶ ಗಂಗಾಧರ ಕೆ.ಎನ್. ಅವರು ಗಮನಿಸಿ, ರವಿ ಪಾಟೀಲ್ ಅವರಿಗೆ ಬಂಧನ ಪೂರ್ವ ಜಾಮೀನು ನೀಡಿದ್ದಾರೆ. ಫಾರ್ಮ್ 7 ಅರ್ಜಿಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿಸಬೇಕು ಎಂದು ಕೋರ್ಟ್ ಹೇಳಿದೆ.
ಆರೋಪಿತ ಫಾರ್ಮ್ 7 ಅರ್ಜಿಗಳು ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣಾ ವಿಭಾಗಕ್ಕೆ ಲಭ್ಯವಿರುವ ಮತಗಟ್ಟೆ ಮಟ್ಟದ ಅಧಿಕಾರಿಯ (ಬಿಎಲ್‌ಒ) ಬಳಿ ಇವೆ ಎಂದು ನ್ಯಾಯಾಲಯ ಗಮನಿಸಿದೆ.
“ಮೊದಲನೆಯದಾಗಿ, ಪ್ರಸ್ತುತ ಅರ್ಜಿದಾರರು ಮತ್ತು ಇತರರು ಸೃಷ್ಟಿಸಿದ ಫಾರ್ಮ್ ನಂ.7 ಅನ್ನು ಸಲ್ಲಿಸಿದ್ದರೆ, ಅವು ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣಾ ವಿಭಾಗಕ್ಕೆ ಲಭ್ಯವಿರುವ ಬಿಎಲ್‌ಒ ಬಳಿ ಇವೆ” ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣವು ಸಾಕ್ಷ್ಯಾಧಾರಗಳನ್ನು ಆಧರಿಸಿದೆ, ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ ಕೂಡಲೇ ಚುನಾವಣಾಧಿಕಾರಿಗಳು ಸ್ವಯಂಚಾಲಿತವಾಗಿ ಕ್ರಮ ಕೈಗೊಳ್ಳುವುದಿಲ್ಲ ಎಂದು ಅದು ತಿಳಿಸಿದೆ.
“ಅವರು ತಮ್ಮದೇ ಆದ ವಿಚಾರಣೆ ಮತ್ತು ಪರಿಶೀಲನೆಯನ್ನು ಮಾಡುತ್ತಾರೆ” ಎಂದು ನ್ಯಾಯಾಲಯ ಗಮನಿಸಿದೆ.
ಘಟನೆಯು ಸೆಪ್ಟೆಂಬರ್ 26 ರಂದು ನಡೆದಿದೆ. ಆದರೆ ಅಕ್ಟೋಬರ್ 1 ರಂದು ದೂರು ದಾಖಲಾಗಿದೆ ಎಂಬುದನ್ನೂ ನ್ಯಾಯಾಲಯ ಗಮನಿಸಿದ್ದು, ದಾಖಲೆಗಳ ದೃಢತೆಯನ್ನು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಗಳ ಬದಲಿಗೆ ಚುನಾವಣಾಧಿಕಾರಿಯೇ ಪ್ರಶ್ನಿಸಬೇಕಾಗುತ್ತದೆ ಎಂದು ಅದು ಹೇಳಿದೆ.
198 ನಕಲಿ ಫಾರ್ಮ್ 7 ಅರ್ಜಿಗಳ ಕುರಿತು ಪೊಲೀಸರ ಆರೋಪ
ರವಿ ಪಾಟೀಲ್ ಮತ್ತು ಇತರರು ಬೂತ್ ಮಟ್ಟದ ಅಧಿಕಾರಿಗೆ ಸುಮಾರು 198 ನಕಲಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಎದುರಾಳಿ ರಾಜಕೀಯ ಪಕ್ಷದ ಬ್ಲಾಕ್ ಏಜೆಂಟ್ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತದಾರರ ಪಟ್ಟಿಯಿಂದ ಮುಸ್ಲಿಂ ಮತದಾರರನ್ನು ತೆಗೆದುಹಾಕುವ ಉದ್ದೇಶದಿಂದ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಪ್ರಕಾರ, ಆ 198 ಮತದಾರರು ಮತದಾರರ ಪಟ್ಟಿಯಲ್ಲಿ ನಮೂದಿಸಿರುವ ವಿಳಾಸಗಳಲ್ಲೇ ಇನ್ನೂ ವಾಸಿಸುತ್ತಿದ್ದಾರೆ. ಅವರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಆರೋಪಿಗಳು ಉದ್ದೇಶಪೂರ್ವಕವಾಗಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೂರಿನ ಆಧಾರದ ಮೇಲೆ, ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯು ಪ್ರಕರಣ ದಾಖಲಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 35(1) ರ ಅಡಿಯಲ್ಲಿ ಪಾಟೀಲ್ ಅವರಿಗೆ ನೋಟೀಸ್ ಜಾರಿಗೊಳಿಸಿದೆ.
ರವಿ ಪಾಟೀಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4), 336(3), 336(4), 353, 61(2), 3(5), 3(7), 192 ಮತ್ತು ಸೆಕ್ಷನ್ 190 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಗಳನ್ನು ತಳ್ಳಿಹಾಕಿದ ರವಿ ಪಾಟೀಲ್
ತಾವು ಪ್ರತಿಷ್ಠಿತ ಕುಟುಂಬದ ವೈದ್ಯರಾಗಿದ್ದು, ಆರೋಪಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ರವಿ ಪಾಟೀಲ್ ನ್ಯಾಯಾಲಯದ ಮುಂದೆ ವಾದಿಸಿದರು.
ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು. ತಮ್ಮ ಬಂಧನದಿಂದ ತಮ್ಮ ಕೀರ್ತಿಗೆ ಗಂಭೀರ ಮತ್ತು ಸರಿಪಡಿಸಲಾಗದ ಹಾನಿಯಾಗುತ್ತದೆ ಎಂದು ಅವರ ಪರ ವಕೀಲರು ವಾದಿಸಿದರು.
ಆರೋಪಿತ ಅಪರಾಧಗಳು ಜಾಮೀನು ರಹಿತವಾಗಿದ್ದರೂ, ಅವುಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ರವಿ ಪಾಟೀಲ್ ಅವರು ನಿರೀಕ್ಷಣಾ ಜಾಮೀನು ಪಡೆಯಲು ಸೂಕ್ತ ಕಾರಣಗಳನ್ನು ಒದಗಿಸಿದ್ದಾರೆ. ಅವರು 50,000 ರೂ.ಗಳ ಬಾಂಡ್ ಹಾಗೂ ಅದೇ ಮೊತ್ತಕ್ಕೆ ಒಬ್ಬರ ಶ್ಯೂರಿಟಿ ಒದಗಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಅರ್ಜಿದಾರರ ಪರವಾಗಿ ವಕೀಲ ಆರ್.ಜಿ. ಪಾಟೀಲ್ ಹಾಜರಿದ್ದರು.


