ಉತ್ತರ ಪ್ರದೇಶದ ಪರಿಷ್ಕೃತ ಮತದಾರರ ಪಟ್ಟಿಯ ಸ್ವತಂತ್ರ ವಿಶ್ಲೇಷಣೆಯಲ್ಲಿ ಮಹತ್ವದ ಪಾರದರ್ಶಕತೆ ಕೊರತೆ ಬೆಳಕಿಗೆ ಬಂದಿದೆ. ರಾಜ್ಯದ ಸಾರ್ವಜನಿಕ ಚುನಾವಣಾ ಪೋರ್ಟಲ್‌ನಲ್ಲಿ 16.18 ಲಕ್ಷ ಮತದಾರರ ಅರ್ಜಿ ವಿವರಗಳು ಲಭ್ಯವಿಲ್ಲ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ನಡೆಸಿದ ತನಿಖಾ ವರದಿ ತಿಳಿಸಿದೆ.
ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಹೊಸ ಮತದಾರರ ಸೇರ್ಪಡೆಗಾಗಿ 88 ಲಕ್ಷ ಫಾರ್ಮ್-6 ಅರ್ಜಿಗಳು ಬಂದಿದ್ದವು. ಆದರೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ವೆಬ್‌ಸೈಟ್‌ನಲ್ಲಿ 71.38 ಲಕ್ಷ ಅರ್ಜಿಗಳ ವಿವರಗಳು ಮಾತ್ರ ಲಭ್ಯವಿವೆ ಎಂದು ವರದಿ ಹೇಳಿದೆ.
ಅಕ್ಟೋಬರ್ 6ರಂದು ಪ್ರಕಟವಾದ ವರದಿಯ ಪ್ರಕಾರ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ದೇಶದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯವಾದ ಉತ್ತರ ಪ್ರದೇಶದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಈ ಕಾನೂನು ಸಂಬಂಧಿತ ಪ್ರಶ್ನೆ ಬೆಳಕಿಗೆ ಬಂದಿದೆ.
ಅಂತಿಮ ಸಂಖ್ಯೆಯಲ್ಲಿ ಗೊಂದಲ
ಮೊದಲು ಮತದಾರರ ಪಟ್ಟಿಗೆ ಮರು ಸೇರ್ಪಡೆಗಾಗಿ ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಪರಿಶೀಲಿಸಿ, ಬಳಿಕ ಅಂತಿಮ ಪಟ್ಟಿಗೆ ಎಷ್ಟು ಮಂದಿಯನ್ನು ಸೇರಿಸಲಾಗಿದೆ ಎಂಬುದನ್ನು ಹೋಲಿಕೆ ಮಾಡಲಾಯಿತು. ಈ ವೇಳೆ ಅಂಕಿಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ವರದಿ ಹೇಳಿದೆ.
ತಾಂತ್ರಿಕ ನೆರವಿನೊಂದಿಗೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಮತದಾರರ ಪಟ್ಟಿಗೆ ಸೇರ್ಪಡೆಗಾಗಿ 71.38 ಲಕ್ಷ ಅರ್ಜಿಗಳ ವಿವರಗಳನ್ನು ಇಸಿಐ ಸಾರ್ವಜನಿಕಗೊಳಿಸಿತ್ತು. ಈ ಅರ್ಜಿಗಳಲ್ಲಿ ಬಹುತೇಕವು ಕರಡು ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದವರು ಸಲ್ಲಿಸಿದ ಅರ್ಜಿಗಳಾಗಿದ್ದವು.
ಆದರೆ, ಅಂತಿಮ ಮತದಾರರ ಪಟ್ಟಿಯಲ್ಲಿ 84.3 ಲಕ್ಷ ಮತದಾರರನ್ನು ಸೇರಿಸಲಾಗಿದೆ. ಅಂದರೆ ಸಾರ್ವಜನಿಕಗೊಳಿಸಲಾದ ಅರ್ಜಿಗಳಿಗಿಂತ 12.92 ಲಕ್ಷ ಹೆಚ್ಚು ಮತದಾರರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ.
ವರದಿ ಪ್ರಕಾರ, ಈ ಬೆಳವಣಿಗೆ ಅನುಮಾನಗಳನ್ನು ಹುಟ್ಟಿಸುತ್ತದೆ. ಏಕೆಂದರೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದವರ ಸಂಖ್ಯೆಯನ್ನು ಮೀರಿಸಿ ಹೊಸ ಮತದಾರರನ್ನು ಸೇರಿಸಲು ಸಾಧ್ಯವಿಲ್ಲ.
ಈ ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಉತ್ತರ ಪ್ರದೇಶ ಇಸಿಒ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿ ಮತ್ತು ಪತ್ರಿಕಾ ಹೇಳಿಕೆಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಮಾರ್ಚ್ 7ರಂದು ಪ್ರಕಟವಾದ ಪತ್ರಿಕಾ ಹೇಳಿಕೆಯೊಂದರಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸುವುದಕ್ಕೂ ಮುನ್ನವೇ 16.18 ಲಕ್ಷ ಮಂದಿ ಫಾರ್ಮ್-6 ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿರುವುದು ಕಂಡುಬಂದಿದೆ.
16.18 ಲಕ್ಷ ಮತದಾರರು ಯಾರು?
ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕವೇ ತಮ್ಮ ಹೆಸರು ಸೇರ್ಪಡೆಯಾಗಿದೆಯೇ, ತೆಗೆದುಹಾಕಲಾಗಿದೆಯೇ ಅಥವಾ ಕಾಣೆಯಾಗಿದೆಯೇ ಎಂಬುದು ಮತದಾರರಿಗೆ ತಿಳಿಯುತ್ತದೆ. ಆದರೆ ಇಸಿಐ ಪ್ರಕಾರ, ಕರಡು ಪಟ್ಟಿ ಪ್ರಕಟವಾಗುವ ಮೊದಲೇ 16.18 ಲಕ್ಷ ಮಂದಿ ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಿದ್ದರು.
ಈ ಹಂತದಲ್ಲಿ ಹೊಸದಾಗಿ ಮತದಾನದ ವಯಸ್ಸಿಗೆ ಬಂದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆದರೆ ಕಾನೂನಿನ ಪ್ರಕಾರ ಇಂತಹ ಅರ್ಜಿದಾರರ ವಿವರಗಳನ್ನು ಸಾರ್ವಜನಿಕಗೊಳಿಸಬೇಕಾಗುತ್ತದೆ. ಈ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲದ ಕಾರಣ, ಈ 16.18 ಲಕ್ಷ ಮಂದಿ ಯಾರು, ಅವರು ಯಾವ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರು ಅಥವಾ ಅವರ ಅರ್ಜಿಗಳನ್ನು ನಿಜವಾಗಿಯೂ ಪರಿಶೀಲಿಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಹೇಳಿದೆ.
ಈ 16.18 ಲಕ್ಷ ಮತದಾರರ ಕುರಿತು ಉತ್ತರ ಪ್ರದೇಶದ ಸಿಇಒ ನವದೀಪ್ ರಿನ್ವಾ ಅವರನ್ನು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಸಂಪರ್ಕಿಸಿತ್ತು. ಆದರೆ ಅವರು, “ನಿಮ್ಮ ಅನುಮಾನಗಳು ಅಥವಾ ಪ್ರಶ್ನೆಗಳನ್ನು ಪರಿಹರಿಸಲು ನಾವು ಸಲಹಾ ಸೇವೆಗಳನ್ನು ನೀಡುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸಿಇಒ ಕಚೇರಿಯ ವೆಬ್‌ಸೈಟ್‌ನಲ್ಲಿಯೂ ಈ ಮತದಾರರ ವಿವರಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಯುಪಿಯಲ್ಲಿನ ಅಂಕಿಅಂಶ ಭಿನ್ನವೇ?
ಎಸ್‌ಐಆರ್‌ನ ವಿವಿಧ ಹಂತಗಳಲ್ಲಿನ ಅಂಕಿಅಂಶಗಳನ್ನು ಅಂತಿಮ ಮತದಾರರ ಪಟ್ಟಿಯೊಂದಿಗೆ ಹೊಂದಿಸಲು, ಕರಡು ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಬಳಿಕ ಮರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದವರು ಹಾಗೂ ಮತದಾನದ ವಯಸ್ಸಿಗೆ ಬಂದು ಅರ್ಜಿ ಸಲ್ಲಿಸಿದವರ ಪೈಕಿ ಶೇ.96.27 ಮಂದಿಯನ್ನು ಅರ್ಹ ಮತದಾರರೆಂದು ಪರಿಗಣಿಸಬೇಕಾಗುತ್ತದೆ ಎಂದು ವರದಿ ಹೇಳಿದೆ.
ಇತರ ರಾಜ್ಯಗಳ ಅಂಕಿಅಂಶಗಳೊಂದಿಗೆ ಹೋಲಿಸಿದಾಗಲೂ ವ್ಯತ್ಯಾಸ ಕಂಡುಬರುತ್ತದೆ ಎಂದು ವರದಿ ಹೇಳಿದೆ. ಪರಿಷ್ಕರಣಾ ಪ್ರಕ್ರಿಯೆಗಳಲ್ಲಿ ಫಾರ್ಮ್-6 ಅರ್ಜಿಗಳ ಅನುಮೋದನೆ ಪ್ರಮಾಣ ಸಾಮಾನ್ಯವಾಗಿ ಶೇ.60–70 ರಷ್ಟಿರುತ್ತದೆ ಎಂದು ಹಿರಿಯ ಇಸಿಐ ಅಧಿಕಾರಿಯೊಬ್ಬರು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ಗೆ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
ಆದರೆ ಉತ್ತರ ಪ್ರದೇಶದೊಂದಿಗೆ ಏಕಕಾಲದಲ್ಲಿ ಎಸ್‌ಐಆರ್ ನಡೆದ ಪಶ್ಚಿಮ ಬಂಗಾಳದಲ್ಲಿ ಇದೇ ಅವಧಿಯಲ್ಲಿ ಸಲ್ಲಿಕೆಯಾದ ಫಾರ್ಮ್-6 ಅರ್ಜಿಗಳಲ್ಲಿ ಸುಮಾರು ಶೇ.18.5 ಮಾತ್ರ ಅಂಗೀಕರಿಸಲಾಗಿದೆ ಎಂದು ವರದಿ ಹೇಳಿದೆ.
ಉತ್ತರ ಪ್ರದೇಶದ ಎಸ್ಐಆರ್ ಅಂಕಿಅಂಶಗಳು
ಎಸ್ಐಆರ್ ಆರಂಭವಾಗುವ ಮೊದಲು, ಅಕ್ಟೋಬರ್ 2025ರಲ್ಲಿ ಉತ್ತರ ಪ್ರದೇಶದಲ್ಲಿ 15.44 ಕೋಟಿ ಮತದಾರರು ಇದ್ದರು.
ಜನವರಿ 6ರಂದು ಕರಡು ಮತದಾರರ ಪಟ್ಟಿ ಪ್ರಕಟವಾದಾಗ 2.89 ಕೋಟಿ ಮತದಾರರ ಹೆಸರುಗಳನ್ನು ಗೈರುಹಾಜರು, ಸ್ಥಳಾಂತರ, ಮರಣ ಅಥವಾ ದ್ವಂದ್ವ ನೋಂದಣಿ ಸೇರಿದಂತೆ ವಿವಿಧ ಕಾರಣಗಳಿಂದ ಕೈಬಿಡಲಾಗಿತ್ತು. ಇದು ಕರಡು ಪಟ್ಟಿಯ ಒಟ್ಟು ಮತದಾರರ ಸುಮಾರು ಶೇ.18.7 ಆಗಿತ್ತು.
ಪ್ರತಿ ಬೂತ್‌ಗೆ ಕನಿಷ್ಠ 200 ಮತದಾರರನ್ನು ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಇತರ ಹಿರಿಯ ನಾಯಕರು ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇದೇ ವೇಳೆ, ಫಾರ್ಮ್-6 ಮೂಲಕ ಬಂದ ಅರ್ಜಿಗಳಲ್ಲಿ ಗಣನೀಯ ಪ್ರಮಾಣದವು ಮತದಾರರ ಪಟ್ಟಿಯಿಂದ ತಪ್ಪಾಗಿ ಕೈಬಿಡಲ್ಪಟ್ಟವರದ್ದಾಗಿವೆ ಎಂದು ಸಿಇಒ ರಿನ್ವಾ ಒಪ್ಪಿಕೊಂಡಿದ್ದರು ಎಂದು ವರದಿ ಹೇಳಿದೆ.
ಒಂದೇ ದಿನ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಫಾರ್ಮ್-6 ಅರ್ಜಿಗಳು ಸಲ್ಲಿಕೆಯಾದ ಬಳಿಕ ರಿನ್ವಾ, “ಕರಡು ಪಟ್ಟಿಯಿಂದ ತೆಗೆದುಹಾಕಲ್ಪಟ್ಟವರೇ ಫಾರ್ಮ್-6 ತುಂಬುತ್ತಿದ್ದಾರೆ” ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.
ಪ್ರತಿ ಫಾರ್ಮ್-6 ಅರ್ಜಿಯನ್ನು ಮೊದಲು ಬೂತ್ ಮಟ್ಟದ ಅಧಿಕಾರಿಯ ಕ್ಷೇತ್ರ ಪರಿಶೀಲನೆಗೆ ಒಳಪಡಿಸಿ, ಬಳಿಕ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಅನುಮೋದಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಹ ಸೇರ್ಪಡೆಗಾಗಿ ಅರ್ಜಿಗಳನ್ನು ಸಲ್ಲಿಸುವುದರಿಂದ, ಸಾಮಾನ್ಯವಾಗಿ ಇದರ ಅನುಮೋದನೆ ಪ್ರಮಾಣ ಶೇ.60–70 ರಷ್ಟಿರುತ್ತದೆ ಎಂದು ವರದಿ ಹೇಳಿದೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಸಿಇಒ ಕಚೇರಿ ಸಾರ್ವಜನಿಕಗೊಳಿಸಿದ್ದ 71.38 ಲಕ್ಷ ಫಾರ್ಮ್-6 ಅರ್ಜಿಗಳ ಮಾಹಿತಿಯನ್ನು ತಾಂತ್ರಿಕ ತಜ್ಞರ ನೆರವಿನಿಂದ ಸಂಗ್ರಹಿಸಲಾಗಿದೆ ಎಂದು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತಿಳಿಸಿದೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜನವರಿ 6ಕ್ಕೂ ಮುನ್ನ ಸಲ್ಲಿಸಲಾದ ಫಾರ್ಮ್-6 ಅರ್ಜಿಗಳ ವಿವರಗಳು ಕಾಣೆಯಾಗಿದ್ದವು ಎಂದು ವರದಿ ಹೇಳಿದೆ.
ಉತ್ತರ ಪ್ರದೇಶ ಸಿಇಒ ಅವರ ಎಕ್ಸ್ ಖಾತೆಯಲ್ಲಿದ್ದ ಮಾಹಿತಿಯನ್ನು ಪರಿಶೀಲಿಸುವಾಗ 16 ಲಕ್ಷಕ್ಕೂ ಅಧಿಕ ಅರ್ಜಿಗಳ ಉಲ್ಲೇಖವೂ ಪತ್ತೆಯಾಯಿತು. ಆದರೆ ಆ ಅರ್ಜಿದಾರರ ವಿವರಗಳು ಇನ್ನೂ ನಿಗೂಢವಾಗಿಯೇ ಉಳಿದಿವೆ ಎಂದು ವರದಿ ಹೇಳಿದೆ.
ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದೇ?
ಎಸ್ಐಆರ್ ಬಳಿಕ ಉತ್ತರ ಪ್ರದೇಶದ ಮತದಾರರ ಸಂಖ್ಯೆ 13.39 ಕೋಟಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಉಲ್ಲೇಖಿಸಲಾದ 16 ಲಕ್ಷ ಮತದಾರರ ಸಂಖ್ಯೆ ಒಟ್ಟಾರೆ ಮತದಾರರ ಸಂಖ್ಯೆಗೆ ಹೋಲಿಸಿದರೆ ಕಡಿಮೆ.
ಆದರೆ ಈ ಮತದಾರರು ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಅಥವಾ ಯಾವ ಮತಗಟ್ಟೆಗಳಲ್ಲಿ ಹಂಚಿಕೆಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿಸಿ, ನಿರ್ದಿಷ್ಟ ಕ್ಷೇತ್ರಗಳು ಅಥವಾ ಮತಗಟ್ಟೆಗಳಲ್ಲಿ ಈ ಸಂಖ್ಯೆಯು ಗಮನಾರ್ಹ ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ.
ಈ ಕುರಿತು ಸಿಇಒ ರಿನ್ವಾ ಅವರನ್ನು ಪ್ರಶ್ನಿಸಿದಾಗ, ಮತದಾರರ ಪಟ್ಟಿಯಿಂದ ತೆಗೆದುಹಾಕಲಾದವರ ಸಂಖ್ಯೆಯ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಂಕಿಅಂಶಗಳಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರಶ್ನೆಗೆ ಅವರು, “ನಮ್ಮ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವ್ಯತ್ಯಾಸ ಇರುವುದು ನಿಮ್ಮ ವ್ಯಾಖ್ಯಾನದಲ್ಲಿ” ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ತಿಳಿಸಿದೆ.
ಆದರೆ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಪ್ರಕಾರ, 16.18 ಲಕ್ಷ ಮತದಾರರ ವಿವರಗಳನ್ನು ಉತ್ತರ ಪ್ರದೇಶ ಸಿಇಒ ಕಚೇರಿಯ ವೆಬ್‌ಸೈಟ್ ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಯಾವುದೇ ಮೂಲದಲ್ಲಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ.


