ಅಕ್ಟೋಬರ್ 7 ರ ಮಧ್ಯರಾತ್ರಿ ಮಹೇಶ್ ಕುಮಾರ್ (45) ಎಚ್ಚರಗೊಂಡಾಗ, ತಮ್ಮ ಮನೆಯ ಹೊರಗೆ 11ನೇ ತರಗತಿಯಲ್ಲಿ ಓದುತ್ತಿದ್ದ ಮಗ ಕುಳಿತಿರುವುದನ್ನು ಗಮನಿಸಿದರು. ಆ ಹದಿಹರೆಯದ ಬಾಲಕನ ಮುಖದಲ್ಲಿ ಆತಂಕವಿತ್ತು, ಶಾಲೆಯಲ್ಲಿ ತನಗಾಗುತ್ತಿದ್ದ ಕಿರುಕುಳ ನೆನೆದು ಆತನಿಗೆ ನಿದ್ರೆ ಬಂದಿರಲಿಲ್ಲ.
ದಲಿತ ಸಮುದಾಯಕ್ಕೆ ಸೇರಿರುವ ಮಹೇಶ್ ಕುಮಾರ್ ಗಾರೆ ಕೆಲಸ ಮಾಡುತ್ತಾರೆ. ಅವರ ಮಗ ಗಾಜಿಯಾಬಾದ್ ಮೂಲದ ಶಾಲೆಯೊಂದರಲ್ಲಿ ಓದುತ್ತಿದ್ದಾನೆ. “ಅಕ್ಟೋಬರ್ 6 ರಂದು ತನ್ನ ಸಹಪಾಠಿಗಳು ಮಗನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದರಿಂದ ಆತನ ಮೈಯೆಲ್ಲಾ ಗಾಯಗಳಾಗಿದ್ದು, ಮನೆಗೆ ವಾಪಸಾಗಿದ್ದಾನೆ” ಎಂದು ಅವರು ಆರೋಪಿಸಿದ್ದಾರೆ. “ಸಹಪಾಠಿಗಳು ಕಳೆದ ಒಂದು ತಿಂಗಳಿನಿಂದ ನನ್ನ ಮಗನಿಗೆ ಕಿರುಕುಳ ನೀಡುತ್ತಿದ್ದಾರೆ, ಆದ್ದರಿಂದ ನಾನು ಅಕ್ಟೋಬರ್ 8 ರಂದು ಪೊಲೀಸ್ ದೂರು ದಾಖಲಿಸಿದ್ದೇನೆ” ಎಂದು ಅವರು ತಿಳಿಸಿದರು.
ಭಾನುವಾರದಂದು, ಗಾಜಿಯಾಬಾದ್ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆ, 1989 ರ ಸೆಕ್ಷನ್ 3(2)(ವಿಎ), ನರಹತ್ಯೆಗೆ ಯತ್ನ, ಶಾಂತಿಭಂಗವನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮತ್ತು ಗಂಭೀರ ಕ್ರಮಿನಲ್ ಬೆದರಿಕೆ ಇತ್ಯಾದಿ ಸೆಕ್ಷನ್ಗಳ ಅಡಿಯಲ್ಲಿ ಶಾಲೆಯ ಹಲವಾರು ವಿದ್ಯಾರ್ಥಿಗಳು ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ನಾವು ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ದಿನಪತ್ರಿಕೆಯೊಂದಿಗೆ ಮಾತನಾಡಿದ ಮಹೇಶ್ ಕುಮಾರ್, “ಅವನ ಸಹಪಾಠಿಗಳು ಶಾಲೆಯಲ್ಲಿ ನನ್ನ ಮಗನಿಗೆ ‘ನೀನು ಅಂಬೇಡ್ಕರ್ ಆಗಬೇಕೇ?’ ಮತ್ತು ‘ನಾವು ನಿಮಗೆ ಓದಲು ಬಿಡುವುದಿಲ್ಲ’ ಎಂಬಂತಹ ಅನಗತ್ಯ ಜಾತಿ ನಿಂದನೆ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಅಂದು ಶಾಲೆ ಮುಗಿಯುವ ಸಮೀಪದಲ್ಲಿದ್ದಾಗ, ಅವರು ಮತ್ತೊಮ್ಮೆ ಆತನಿಗೆ ಅಸಹ್ಯಕರ ಭಾಷೆಯಿಂದ ಬೈದಿದ್ದಾರೆ. ಅವರು 5-7 ಸ್ನೇಹಿತರನ್ನು ಕರೆಸಿ ನನ್ನ ಮಗನಿಗೆ ಹೊಡೆದು, ಮುಷ್ಟಿಯಿಂದ ಹಲ್ಲೆ ನಡೆಸಿದ್ದಾರೆ ಹಾಗೂ ಬೆಲ್ಟ್ನಿಂದ ಹೊಡೆದಿದ್ದಾರೆ” ಎಂದು ಆರೋಪಿಸಿದ್ದಾರೆ.
“ಈ ಹಲ್ಲೆ ನಡೆದಾಗಿನಿಂದ, ಅವನು ಶಾಲೆಗೆ ಹೋಗಿರುವುದು ಕೇವಲ ಒಮ್ಮೆ ಮಾತ್ರ. ಅಂದು ನೋವು ಕಾಣಿಸಿಕೊಂಡಿದ್ದರಿಂದ ಎರಡು ಗಂಟೆಯ ನಂತರ ಬಂದು ಕರೆದುಕೊಂಡು ಹೋಗುವಂತೆ ಅವರ ಶಿಕ್ಷಕರು ನನಗೆ ಕರೆ ಮಾಡಿದ್ದರು. ಈ ಘಟನೆಗೂ ಮುಂಚೆಯೂ ಅವನು ಅನಿಯಮಿತವಾಗಿ ಶಾಲೆಗೆ ಹೋಗುತ್ತಿದ್ದ, ನಾನು ಅವನನ್ನು ಬೈಯುತ್ತಿದ್ದೆ. ಸಹಪಾಠಿಗಳು ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವನು ನಂತರ ನನಗೆ ಹೇಳಿದ” ಎಂದು ಕುಮಾರ್ ಆರೋಪಿಸಿದ್ದಾರೆ.


