ದಲಿತ ಸಮುದಾಯದ ವ್ಯಕ್ತಿಯೊಬ್ಬರು ಧಾರ್ಮಿಕ ಸ್ಥಳದಲ್ಲಿ ವಾಸಿಸುತ್ತಿರುವುದಕ್ಕೆ ಮತ್ತು ಅವರು ಪೂಜೆ ಸಲ್ಲಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರು ವ್ಯಕ್ತಿಗಳು, ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಸಾಲದ್ದಕ್ಕೆ ಅವರನ್ನು ದೇವಾಲಯದೊಳಗೆ ಕೂಡಿಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಘಟನೆಯು ಭಾನುವಾರ ಸಂಜೆ ಬಲ್ಲಿಯಾ ಜಿಲ್ಲೆಯ ಸರ್ದಾಸಪುರ ಗ್ರಾಮದಲ್ಲಿ ನಡೆದಿದ್ದು, ಸಂತ್ರಸ್ತ ನಗೀನಾ ರಾಮ್ ಎಂಬುವವರು ಹಿಂದೂ ದೇವತೆ ಕಾಳಿಯ ದೇವಾಲಯದಲ್ಲಿ ವಾಸಿಸುತ್ತಾ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿದ್ದರು.
ಪೊಲೀಸರ ಪ್ರಕಾರ, ವಿಶಾಲ್ ಸಿಂಗ್ ಮತ್ತು ಅಂಕಿತ್ ಸಿಂಗ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ದೇವಾಲಯದಲ್ಲಿ ರಾಮ್ ಅವರ ಉಪಸ್ಥಿತಿಯನ್ನು ಪ್ರಶ್ನಿಸಿ, ದೈಹಿಕವಾಗಿ ಹಲ್ಲೆ ನಡೆಸುವ ಮೊದಲು ಅವರನ್ನು ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ. ಹತ್ತಿರದ ಹೊಲದಿಂದ ಕೃಷಿ ಕಾರ್ಮಿಕರು ಸ್ಥಳಕ್ಕೆ ಬರುವವರೆಗೂ ಈ ದಾಳಿ ಮುಂದುವರಿದಿದೆ ಎಂದು ವರದಿಯಾಗಿದೆ.
ಬಳಿಕ ಆರೋಪಿಗಳು ದೇವಾಲಯದ ಗೇಟ್ ಮುಚ್ಚಿ ರಾಮ್ ಅವರನ್ನು ಒಳಗಡೆ ಕೂಡಿಹಾಕಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಅವರು ರಾಮ್ ಅವರ ಮನೆಗೆ ಭೇಟಿ ನೀಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ರಾಮ್ ನೀಡಿದ ದೂರಿನ ಮೇರೆಗೆ, ಭಾರತದ ಅಪರಾಧ ಸಂಹಿತೆಯಾದ ‘ಭಾರತೀಯ ನ್ಯಾಯ ಸಂಹಿತೆ’ ಮತ್ತು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆ’ಯ ಸೂಕ್ತ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಭಾನುವಾರ ತಡರಾತ್ರಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಯ್ದೆಯು ಚಾರಿತ್ರಿಕವಾಗಿ ದಮನಿತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುವ ಜಾತಿ ಆಧಾರಿತ ಹಿಂಸಾಚಾರ, ಅವಮಾನ, ಬೆದರಿಕೆ ಮತ್ತು ತಾರತಮ್ಯದ ವಿರುದ್ಧ ನಿರ್ದಿಷ್ಟ ಕಾನೂನು ರಕ್ಷಣೆಯನ್ನು ನೀಡುತ್ತದೆ.
ತನಿಖೆ ಪ್ರಾರಂಭಿಸಲಾಗಿದೆ ಎಂದು ರಸ್ರಾ ಪೊಲೀಸ್ ಠಾಣೆಯ ಮುಖ್ಯಸ್ಥ ಸುಶೀಲ್ ಕುಮಾರ್ ಅವರು ಸೋಮವಾರ ದೃಢಪಡಿಸಿದ್ದಾರೆ. ಆದರೆ ಪೊಲೀಸರು ಈವರೆಗೆ ಯಾವುದೇ ಬಂಧನ ಮಾಡಿರುವ ಬಗ್ಗೆ ಖಚಿತಪಡಿಸಿಲ್ಲ.
ಐತಿಹಾಸಿಕವಾಗಿ ಭಾರತದ ಜಾತಿ ವ್ಯವಸ್ಥೆಯಲ್ಲಿ ಕೆಳಹಂತದಲ್ಲಿರುವವರೆಂದು ಪರಿಗಣಿಸಲ್ಪಟ್ಟ ದಲಿತರು, ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಸಮಾನತೆ ಪಡೆಯಲು ನಡೆಸುತ್ತಿರುವ ನಿರಂತರ ಹೋರಾಟವನ್ನು ಈ ಘಟನೆ ಪ್ರತಿಬಿಂಬಿಸುತ್ತದೆ.
ಶತಮಾನಗಳಿಂದ ದಲಿತರು ಈ ದೇಶದಲ್ಲಿ ಅಸ್ಪೃಶ್ಯತೆ ಆಚರಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ಅದರ ಅಡಿಯಲ್ಲಿ ಮೇಲ್ವರ್ಗದ ಹಿಂದೂಗಳು ಅವರನ್ನು ದೇವಾಲಯಗಳು, ಧಾರ್ಮಿಕ ಸಮಾರಂಭಗಳು, ಸಾರ್ವಜನಿಕ ಬಾವಿಗಳು ಮತ್ತು ಇತರ ಹಂಚಿಕೆಯ ಸ್ಥಳಗಳಿಂದ ದೂರವಿಟ್ಟಿದ್ದರು.
ಧಾರ್ಮಿಕ ಪ್ರವೇಶವನ್ನು ಐತಿಹಾಸಿಕವಾಗಿ ಜಾತಿ ಆಧಾರಿತ ಶುದ್ಧತೆ ಮತ್ತು ಮೈಲಿಗೆಯ ಪರಿಕಲ್ಪನೆಗಳಿಂದ ನಿಯಂತ್ರಿಸಲಾಗುತ್ತಿದ್ದರಿಂದ ದೇವಾಲಯ ಪ್ರವೇಶವು ಪ್ರಮುಖ ವಿವಾದಾತ್ಮಕ ವಿಷಯವಾಗಿದೆ. ದಲಿತರು ದೇವಾಲಯಗಳನ್ನು ಪ್ರವೇಶಿಸುವುದನ್ನು ಅಥವಾ ಮೇಲ್ವರ್ಗದ ಸಮುದಾಯಗಳೊಂದಿಗೆ ಪೂಜೆಯಲ್ಲಿ ಪಾಲ್ಗೊಳ್ಳುವುದನ್ನು ಈಗಲೂ ನಿಷೇಧಿಲಾಗಿದೆ.


