Homeಅಂತರಾಷ್ಟ್ರೀಯಮಸೀದಿಯಲ್ಲಿ ಚುಂಬಿಸಿದ್ದಕ್ಕೆ ಮರಣದಂಡನೆ? ಸೌದಿ ಅಮಾನವೀಯ ತೀರ್ಪಿಗೆ ತೀವ್ರ ಆಕ್ರೋಶ

ಮಸೀದಿಯಲ್ಲಿ ಚುಂಬಿಸಿದ್ದಕ್ಕೆ ಮರಣದಂಡನೆ? ಸೌದಿ ಅಮಾನವೀಯ ತೀರ್ಪಿಗೆ ತೀವ್ರ ಆಕ್ರೋಶ

- Advertisement -
- Advertisement -

ಮುಸ್ಲಿಂ ಸಮುದಾಯದ ಪವಿತ್ರ ನಗರವಾದ ಮೆಕ್ಕಾದ ಮಸೀದಿಯೊಂದರಲ್ಲಿ ಅನೈತಿಕ ಕೃತ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಸೌದಿ ಅರೇಬಿಯಾ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಮರಣದಂಡನೆ ವಿಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಮರಣದಂಡನೆಗಳು ಅವರು ಎಸಗಿದ್ದಾರೆನ್ನಲಾದ ಅಪರಾಧಗಳು, ವಿಚಾರಣಾ ಪ್ರಕ್ರಿಯೆಯ ರಹಸ್ಯ, ವಿಚಾರಣೆಯ ನಿಷ್ಪಕ್ಷಪಾತತೆ ಮತ್ತು ಬಾಂಗ್ಲಾದೇಶ ಸರ್ಕಾರಕ್ಕೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತೇ ಹಾಗೂ ಆ ದಂಪತಿಯನ್ನು ರಕ್ಷಿಸಲು ಸಾಧ್ಯವಿತ್ತೇ ಎಂಬ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸೌದಿ ಮಾಧ್ಯಮಗಳ ವರದಿಗಳ ಪ್ರಕಾರ, ಮೆಕ್ಕಾದ ಮಸೀದಿಯೊಂದರಲ್ಲಿ “ಅನೈತಿಕ ಕೃತ್ಯಗಳನ್ನು” ಎಸಗಿದ್ದಕ್ಕಾಗಿ ಇಬ್ಬರನ್ನು ಅಕ್ಟೋಬರ್ 14 ರಂದು ಗಲ್ಲಿಗೇರಿಸಲಾಯಿತು. ಆದರೆ, ಆ ಮಾಧ್ಯಮ ವರದಿಗಳಲ್ಲಿ ಆ “ಅನೈತಿಕ ಕೃತ್ಯಗಳು” ಏನೆಂಬುದನ್ನು ನಿರ್ದಿಷ್ಟಪಡಿಸಿಲ್ಲ ಅಥವಾ ಸೌದಿ ಅಧಿಕಾರಿಗಳಿಂದ ಯಾವುದೇ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ವಿಶ್ವದಲ್ಲೇ ಅತಿ ಹೆಚ್ಚು ಮರಣದಂಡನೆ ವಿಧಿಸುವ ದೇಶಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದಾಗಿದೆ. ಹ್ಯೂಮನ್ ರೈಟ್ಸ್ ವಾಚ್ 2025 ರಲ್ಲಿ ಕನಿಷ್ಠ 356 ಮರಣದಂಡನೆಗಳನ್ನು ವರದಿ ಮಾಡಿದೆ, ಇವುಗಳಲ್ಲಿ ಹೆಚ್ಚಿನವು ಅಹಿಂಸಾತ್ಮಕ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಅಪರಾಧಗಳಿಗಾಗಿ ನೀಡಲಾಗಿದೆ. 2022 ರ ಸಂದರ್ಶನವೊಂದರಲ್ಲಿ ಪ್ರಧಾನಿ ಮತ್ತು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಮರಣದಂಡನೆಯನ್ನು ಕೊಲೆ ಪ್ರಕರಣಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಹೇಳಿದ್ದಾಗ್ಯೂ ಈ ಘಟನೆ ನಡೆದಿದೆ.

ಸೌದಿ ಅರೇಬಿಯಾ ಇಸ್ಲಾಮಿಕ್ ಕಾನೂನಿನ ಮೂರು ವ್ಯಾಪಕ ವರ್ಗಗಳ ಅಡಿಯಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತದೆ. ಪ್ರತೀಕಾರ, ಮುಖ್ಯವಾಗಿ ಕೊಲೆಯಂತಹ ನಿರ್ದಿಷ್ಟ ಅಪರಾಧಗಳಿಗೆ ನಿಗದಿಪಡಿಸಿದ ಶಿಕ್ಷೆಗಳಾಗಿವೆ. ಮಾದಕದ್ರವ್ಯ ಕಳ್ಳಸಾಗಣೆ ಮತ್ತು ಇತರ ಅಪರಾಧಗಳು ಸೇರಿದಂತೆ ನ್ಯಾಯಾಧೀಶರ ವಿವೇಚನೆಗೆ ಒಳಪಟ್ಟ ಶಿಕ್ಷೆಗಳು (ತಾಝೀರ್) ಪ್ರಕಟಿಸಲಾಗುತ್ತದೆ.

ಈ ಇಬ್ಬರು ಬಾಂಗ್ಲಾದೇಶಿಯರಿಗೆ ‘ತಾಝೀರ್’ ಅಡಿಯಲ್ಲಿ ಮರಣದಂಡನೆ ವಿಧಿಸಲಾಯಿತು. ಅವರ ಶಿಕ್ಷೆಯನ್ನು ಸಂಬಂಧಪಟ್ಟ ನ್ಯಾಯಾಂಗ ಅಧಿಕಾರಿಗಳು ಎತ್ತಿಹಿಡಿದಿದ್ದಾರೆ, ನಂತರ ಮೆಕ್ಕಾ ಪ್ರದೇಶದಲ್ಲಿ ಅವರ ಮರಣದಂಡನೆಯನ್ನು ಅಧಿಕೃತಗೊಳಿಸುವ ರಾಜಾಜ್ಞೆ ಹೊರಡಿಸಲಾಯಿತು ಎಂದು ವರದಿಯಾಗಿದೆ.

ಸೌದಿ ಅರೇಬಿಯಾದಲ್ಲಿ ವಿದೇಶಿ ಪ್ರಜೆಗಳಿಗೆ ಮರಣದಂಡನೆ ವಿಧಿಸಿದ ಎರಡನೇ ಪ್ರಕರಣ ಇದಾಗಿದೆ. ಶ್ರೀಲಂಕಾದ ಹಿಂದೂ ವಲಸಿಗ ಅನೋಜನ್ ಸಿವರಾಸಾ ಅವರಿಗೆ ಇತ್ತೀಚೆಗೆ ಧರ್ಮ ನಿಂದನೆಯ ಆರೋಪದ ಮೇಲೆ ಮರಣದಂಡನೆ ವಿಧಿಸಲಾಗಿತ್ತು, ಆದರೆ ಶ್ರೀಲಂಕಾ ಸರ್ಕಾರ ಮಧ್ಯಪ್ರವೇಶದ ನಂತರ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಗಿತ್ತು.

ಇಷ್ಟೆಲ್ಲಾ ಆದರೂ, ಆ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು ತಮ್ಮ ಸಾವುಗಳಿಗೆ ಕಾರಣವಾಗುವಂತಹ ತಪ್ಪು ಏನು ಮಾಡಿದರು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಮೊದಲಿಗೆ, ಇದು “ಅನೈತಿಕ ಕೃತ್ಯ” ಎಂದು ವರದಿಯಾಯಿತು, ನಂತರ ಅವರು ಮಸೀದಿಯಲ್ಲಿ ಚುಂಬಿಸುತ್ತಿದ್ದರು ಎಂಬ ವರದಿಗಳು ಹರಿದಾಡಿದವು, ತದನಂತರ ಅವರು ಹಣೆಗಷ್ಟೇ ಚುಂಬಿಸಿದ್ದರು ಎಂಬ ಸಮರ್ಥನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು.

ಸೌದಿ ಸರ್ಕಾರ ಅವರನ್ನು ಗಲ್ಲಿಗೇರಿಸಲಾಗಿದೆ ಎಂಬ ಸತ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿಯನ್ನು ನೀಡಲು ಮುಂದೆ ಬಂದಿಲ್ಲ, ಇದು ಸಾರ್ವಜನಿಕರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ.

ಗಲ್ಲಿಗೇರಿಸಲ್ಪಟ್ಟ ಬಾಂಗ್ಲಾದೇಶಿ ಪ್ರಜೆಗಳು ಯಾರು, ಮತ್ತು ಅವರ ಅಪರಾಧವೇನು?

ಸೌದಿ ಅರೇಬಿಯನ್ ಮಾಧ್ಯಮ ವರದಿಗಳು, ಆಂತರಿಕ ಸಚಿವಾಲಯವನ್ನು ಉಲ್ಲೇಖಿಸಿ, ಆ ಇಬ್ಬರು ವ್ಯಕ್ತಿಗಳನ್ನು ನಜ್ರುಲ್ ಇಸ್ಲಾಂ ಅಬ್ದುಲ್ ಬಾಸಿರ್ ಮತ್ತು ಸಿಟಿ ಅಖ್ತರ್ ಎಂದು ಗುರುತಿಸಿವೆ. ಪವಿತ್ರ ನಗರವಾದ ಮೆಕ್ಕಾದ ಮಸೀದಿಯೊಳಗೆ “ಅನೈತಿಕ ಕೃತ್ಯಗಳನ್ನು” ಎಸಗಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿತ್ತು.

ರಿಯಾದ್ ಬಹಿರಂಗಪಡಿಸಿದ ಮಾಹಿತಿ ಇಷ್ಟೇ. ಸೌದಿ ಅಧಿಕಾರಿಗಳು ಆರೋಪಿತ ಕೃತ್ಯಗಳು ಯಾವುವು, ಇಬ್ಬರನ್ನು ಯಾವಾಗ ಬಂಧಿಸಲಾಯಿತು ಅಥವಾ ಅವರ ವಿಚಾರಣೆಯನ್ನು ಹೇಗೆ ನಡೆಸಲಾಯಿತು ಎಂಬುದನ್ನು ಬಹಿರಂಗವಾಗಿ ವಿವರಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆ ಇಬ್ಬರೂ “ದಂಪತಿಗಳು” ಮತ್ತು ಆರೋಪಿತ ಕೃತ್ಯವು ಅವರು ಪರಸ್ಪರ ಹಣೆಗೆ ಚುಂಬಿಸುವುದನ್ನು ಒಳಗೊಂಡಿತ್ತು ಎಂದು ಊಹಿಸಿದ್ದಾರೆ. ಆದರೂ ಸೌದಿ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲದಿರುವುದರಿಂದ ಆರೋಪಗಳು ಅಸ್ಪಷ್ಟವಾಗಿದೆ. ಮುಖ್ಯವಾಗಿ, ನಜ್ರುಲ್ ಅವರ ಕುಟುಂಬವು ಈ ಆರೋಪಗಳನ್ನು ನಿರಾಕರಿಸಿದೆ ಎಂದು ‘ಪ್ರಥಮ್ ಅಲೋ’ ವರದಿ ಮಾಡಿದೆ.

ಅಬ್ದುಲ್ ಬಶೀರ್ ಮತ್ತು ರಹೀಮಾ ಬೇಗಂ ಅವರ ಹಿರಿಯ ಮಗ ನಜ್ರುಲ್, ಚಟ್ಟೋಗ್ರಾಮ್ ವಿಭಾಗದ ಬ್ರಾಹ್ಮಣಬಾರಿಯಾ ಸಾದರ್ ಉಪಜಿಲ್ಲೆಯವರು. ಅವರು ನವೆಂಬರ್ 2022 ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದರು. ಮೆಕ್ಕಾದ ಮಸೀದಿದುಲ್ ಹರಾಮ್‌ನಲ್ಲಿ ಶುಚಿಗೊಳಿಸುವ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಎಂಟು ತಿಂಗಳ ನಂತರ ಪೊಲೀಸರು ಆತನನ್ನು ಬಂಧಿಸಿದ್ದು, ಗಲ್ಲಿಗೇರಿಸುವವರೆಗೂ ಆತ ಜೈಲಿನಲ್ಲಿದ್ದ ಎಂದು ಆತನ ಕುಟುಂಬಸ್ಥರು ‘ಪ್ರಥಮ್ ಅಲೋ’ಗೆ ತಿಳಿಸಿದ್ದಾರೆ.

ಅಕ್ಟೋಬರ್ 11 ರಂದು ನಜ್ರುಲ್ ಜೊತೆ ಕೊನೆಯದಾಗಿ ಮಾತನಾಡಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ. ಮೂರು ದಿನಗಳ ನಂತರ, ಕುಟುಂಬಕ್ಕೆ ಆತನ ಮರಣದಂಡನೆಯ ಬಗ್ಗೆ ತಿಳಿಸುವ ಕರೆ ಬಂದಿದೆ. ಈ ಸುದ್ದಿ ಕೇಳಿ ಆತನ 65 ವರ್ಷದ ಚಿಕ್ಕಮ್ಮ ಅಬೀದಾ ಬೇಗಂ ಪ್ರಜ್ಞೆ ತಪ್ಪಿ ಬಿದ್ದು ನಂತರ ಸಾವನ್ನಪ್ಪಿದ್ದಾರೆ.

ಶಿಕ್ಷೆಯ ಬಗ್ಗೆ ತಮಗೆ ಯಾವುದೇ ಮುನ್ಸೂಚನೆ ಸಿಕ್ಕಿರಲಿಲ್ಲ ಎಂದು ನಜ್ರುಲ್ ಕುಟುಂಬದವರು ತಿಳಿಸಿದ್ದಾರೆ. ಸ್ವತಃ ಸೌದಿ ಅರೇಬಿಯಾದಲ್ಲಿ 24 ವರ್ಷಗಳ ಕಾಲ ಕೆಲಸ ಮಾಡಿದ್ದ ಆತನ ತಂದೆ ಅಬ್ದುಲ್ ಬಾಸಿರ್ ನೀಡಿದ ಹೇಳಿಕೆಯಲ್ಲಿ, “ತಮ್ಮ ಮಗನಿಗೆ ನ್ಯಾಯಸಮ್ಮತ ವಿಚಾರಣೆ ಸಿಕ್ಕಿಲ್ಲ. ಮಗನನ್ನು ಸೂಕ್ತ ಕಾರಣವಿಲ್ಲದೆ ಗಲ್ಲಿಗೇರಿಸಿದ್ದರೆ, ನನಗೆ ನ್ಯಾಯ ಬೇಕು” ಎಂದಿದ್ದಾರೆ.

ನಜ್ರುಲ್ ಅತ್ಯಂತ ವಿನೀತ ಮತ್ತು ಸಭ್ಯ ನಡವಳಿಕೆಯವನಾಗಿದ್ದ ಎಂದು ಹೇಳಿರುವ ಆತನ ಸಂಬಂಧಿಕರು ಮತ್ತು ಸ್ನೇಹಿತರು ಆರೋಪಗಳನ್ನು ಪ್ರಶ್ನಿಸಿದ್ದಾರೆ. ಆತನ ಸೋದರಸಂಬಂಧಿಗಳಾದ ಮುಸ್ತಕಿಮ್ ಭುಯ್ಯಾನ್ ಮತ್ತು ಇಮಾಮ್ ಹಸನ್ ಭುಯ್ಯಾನ್ ಮಾತನಾಡಿ, “ಆತನಿಗೆ ಪಾಕಿಸ್ತಾನಿ ಸಹೋದ್ಯೋಗಿಯೊಬ್ಬರ ಜೊತೆ ಗಲಾಟೆಯಾಗಿತ್ತು, ಆ ವ್ಯಕ್ತಿಯೇ ಆತನ ವಿರುದ್ಧ ಪಿತೂರಿ ನಡೆಸಿದ್ದಾನೆ” ಎಂದು ಆರೋಪಿಸಿದ್ದಾರೆ.

ಆತನ ಸ್ನೇಹಿತ ರಾಹತ್ ಭುಯ್ಯಾನ್, “ಆತ ಇಂತಹ ಕೆಲಸ ಮಾಡುತ್ತಾನೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಿಲ್ಲ” ಎಂದಿದ್ದಾರೆ.

ನಜ್ರುಲ್ ಅವರ ಹಳೆಯ ಮದ್ರಸಾದ ಸೂಪರಿಂಟೆಂಡೆಂಟ್ ಮೌಲಾನಾ ನೈಮುರ್ ರಹಮಾನ್ ಮಾತನಾಡಿ, “ಆ ಹುಡುಗ ದುರ್ನಡತೆಯವನು ಅಥವಾ ಕೆಟ್ಟವನು ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆತ ಬಾಂಗ್ಲಾದೇಶದಲ್ಲಿದ್ದಾಗ ಆತನ ನಡವಳಿಕೆಯಲ್ಲಿ ಈಗ ಆತನ ಬಗ್ಗೆ ಹೇಳಲಾಗುತ್ತಿರುವಂತಹ ಯಾವುದೇ ವಿಷಯವನ್ನು ನಾನು ಎಂದಿಗೂ ನೋಡಿಲ್ಲ” ಎಂದು ಹೇಳಿದರು.

ಸೌದಿ ಅರೇಬಿಯಾ ಗಲ್ಲಿಗೇರಿಸಿದ ಬಾಂಗ್ಲಾದೇಶಿ ಮಹಿಳೆ ಯಾರು?

ನಜ್ರುಲ್ ಜೊತೆಗಿನ ಸಿಟಿ ಅಖ್ತರ್ ಸಂಬಂಧದ ಬಗ್ಗೆಯೂ ಸಾರ್ವಜನಿಕವಾಗಿ ತಿಳಿದಿರುವುದು ಬಹಳ ಕಡಿಮೆ. ನಜ್ರುಲ್ ತಂದೆ ಅಬ್ದುಲ್ ಬಾಸಿರ್ ಜಾಗೋ ನ್ಯೂಸ್‌ಗೆ ನೀಡಿರುವ ಹೇಳಿಕೆಯಲ್ಲಿ, ಕುಟುಂಬವನ್ನು ಸಲಹಲು ಮಗ ಕಾಲೇಜಿನಲ್ಲಿದ್ದಾಗಲೇ ವಿದೇಶಕ್ಕೆ ಕಳುಹಿಸಿದ್ದಾಗಿ ತಿಳಿಸಿದ್ದಾರೆ. ಸಿಟಿ, ನಜ್ರುಲ್ ಹೆಂಡತಿ ಎಂಬುದನ್ನು ನಿರಾಕರಿಸಿದ ಅವರು, “ನಮಗೆ ಆಕೆ ಯಾರೆಂದೇ ಗೊತ್ತಿಲ್ಲ. ಅವರಿಬ್ಬರೂ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕೇಳಿದ್ದೇನೆ” ಎಂದಿದ್ದಾರೆ.

ಆದರೆ, ನಜ್ರುಲ್ ಒಂದು ಹಂತದಲ್ಲಿ ಸಿಟಿ ಜೊತೆ “ಸಂಬಂಧ” ಹೊಂದಿರುವುದಾಗಿ ಒಪ್ಪಿಕೊಂಡಿದ್ದ ಎಂದು ಗುರುತು ತಿಳಿಸದ ಕುಟುಂಬದ ಸದಸ್ಯರೊಬ್ಬರು ಬಿಬಿಸಿ ಬಾಂಗ್ಲಾಗೆ ತಿಳಿಸಿದ್ದಾರೆ.

ನಜ್ರುಲ್ ಇಸ್ಲಾಂ ಅಬ್ದುಲ್ ಬಾಸಿರ್ ಮತ್ತು ಸಿಟಿ ಅಖ್ತರ್ ಅವರ ಪಾರ್ಥಿವ ಶರೀರಕ್ಕೆ ಸಂಬಂಧಿಸಿದಂತೆ, ಬಾಂಗ್ಲಾದೇಶ ಮತ್ತು ಸೌದಿ ಅರೇಬಿಯಾ ನಡುವಿನ ವಿಮಾನ ಸಂಪರ್ಕ ರದ್ದತಿಯಿಂದಾಗಿ ಅವರ ದೇಹಗಳನ್ನು ತಾಯ್ನಾಡಿಗೆ ತರುವುದು ವಿಳಂಬವಾಗಿದೆ ಎಂದು ವಿದೇಶಿ ಕಲ್ಯಾಣ ಮತ್ತು ಸಾಗರೋತ್ತರ ಉದ್ಯೋಗ ಸಚಿವ ಅರಿಫುಲ್ ಹಕ್ ಚೌಧರಿ ಸೋಮವಾರ ತಿಳಿಸಿರುವುದಾಗಿ ‘ಜಾಗೋ ನ್ಯೂಸ್’ ವರದಿ ಮಾಡಿದೆ.

ದಂಪತಿಯನ್ನು ಗಲ್ಲಿಗೇರಿಸಿದ್ದಕ್ಕೆ ತೀವ್ರ ಆಕ್ರೋಶ

ಇಬ್ಬರು ಬಾಂಗ್ಲಾದೇಶಿಯರನ್ನು ಗಲ್ಲಿಗೇರಿಸಿರುವುದು ದೇಶದಲ್ಲಿ ಮತ್ತು ಜಗತ್ತಿನ ಇತರ ಭಾಗಗಳಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ. ಜನರು ಈ ಅಸ್ಪಷ್ಟ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದಾರೆ.

“ಸತ್ಯವನ್ನು ನೇರವಾಗಿ ಹೇಳೋಣ. ಸೌದಿ ಅರೇಬಿಯಾದಲ್ಲಿ ಯುವ ಬಾಂಗ್ಲಾದೇಶಿ ದಂಪತಿಯ ಮರಣದಂಡನೆಯು ನ್ಯಾಯದ ಅಣಕವಾಗಿದೆ. ಆ ದುರದೃಷ್ಟಕರ ದೇಶದ ಹೃದಯಭಾಗದಲ್ಲಿರುವ ವಿಕಾರವಾದ ಕ್ಯಾನ್ಸರ್ ಅನ್ನು ಬಯಲು ಮಾಡುತ್ತದೆ” ಎಂದು ಬಾಂಗ್ಲಾದೇಶ ಮೂಲದ ವಾರಪತ್ರಿಕೆ ಕೌಂಟರ್‌ಪಾಯಿಂಟ್‌ನ ಸಂಸ್ಥಾಪಕ ಸಂಪಾದಕ ಜಾಫರ್ ಸೋಭನ್ ಬರೆದಿದ್ದಾರೆ.

ಸಾಮಾನ್ಯ ಹಣೆಗಿನ ಚುಂಬನಕ್ಕಾಗಿ ಸೌದಿ ಅರೇಬಿಯಾ ಬಾಂಗ್ಲಾದೇಶಿಯರನ್ನು ಗಲ್ಲಿಗೇರಿಸಿರಬಹುದು ಎಂಬುದನ್ನು ಜನರು ನಂಬಲು ನಿರಾಕರಿಸಿದರು. ಅವರನ್ನು ಗಲ್ಲಿಗೇರಿಸಿದ ರಹಸ್ಯ ಮತ್ತು ಸಾರ್ವಜನಿಕರೊಂದಿಗೆ ಹಂಚಿಕೊಂಡ ನಿಯಮಿತ ಮಾಹಿತಿಯ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.

“ತಮ್ಮ ಸಂಗಾತಿಗೆ ಚುಂಬಿಸಿದ್ದಕ್ಕಾಗಿ ಸೌದಿ ಅರೇಬಿಯಾದಲ್ಲಿ ಯಾರನ್ನಾದರೂ ಗಲ್ಲಿಗೇರಿಸಲು ಸಾಧ್ಯವೇ ಇಲ್ಲ. ನಾನು ಸೌದಿ ಅರೇಬಿಯಾಕ್ಕೆ ಹೋಗಿದ್ದೇನೆ, ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಸಮೀಪದಲ್ಲಿ ನಾನು ನನ್ನ ಹೆಂಡತಿಯನ್ನು ಹಲವು ಬಾರಿ ಅಪ್ಪಿಕೊಂಡು ಚುಂಬಿಸಿದ್ದೇನೆ; ಯಾವುದೇ ಸಮಸ್ಯೆಯಿಲ್ಲದೆ ಅನೇಕ ದಂಪತಿಗಳು ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವುದನ್ನು ನಾನು ನೋಡಿದ್ದೇನೆ. ‘ಹಣೆಯ ಚುಂಬನಕ್ಕಾಗಿ’ ಅವರನ್ನು ಗಲ್ಲಿಗೇರಿಸಲಾಗಿದೆ ಎಂಬ ಆರೋಪ ಸಂಪೂರ್ಣ ನಿರರ್ಥಕ ಮತ್ತು ಇಂಟರ್ನೆಟ್ ಕಾಲ್ಪನಿಕ ಕಥೆಯಾಗಿದೆ” ಎಂದು ನೈಜೀರಿಯಾದ ಬ್ಲಾಗರ್ ಎಂಸಿ ಅಲ್ಹಾಜಿ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.

ಬಂಧಿತ ಬಾಂಗ್ಲಾದೇಶಿಯರು ಎಸಗಿದ ಅಪರಾಧದ ನಿಖರ ಸ್ವರೂಪವನ್ನು ವಿವರಿಸುವ ಯಾವುದೇ ಅಧಿಕೃತ ಹೇಳಿಕೆಯನ್ನು ಸೌದಿ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಎಂದು ಅಲ್ಹಾಜಿ ಹೇಳಿದ್ದಾರೆ.

ಬಾಂಗ್ಲಾದೇಶದ ಜೋಬಾಯರ್ ಆಲಂ ಫೇಸ್‌ಬುಕ್‌ನಲ್ಲಿ ದಂಪತಿಯ ಮರಣದಂಡನೆಯು “ಸಂಪೂರ್ಣ ಹಾಸ್ಯಾಸ್ಪದ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಬರೆದಿದ್ದಾರೆ.

ಅವರು ಯಾವ ಅಪರಾಧಗಳಿಗೆ ಶಿಕ್ಷೆಗೊಳಗಾಗಿದ್ದಾರೆ, ಈ ಪ್ರಕರಣ ಯಾವಾಗ ನಡೆಯಿತು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲದ ಬಗ್ಗೆ ಅವರು ಮಾತನಾಡಿದರು.

“ಒಂದು ದಿನ ಅವರು ಮಕ್ಕಾದ ಅಜ್ಞಾತ ಮಸೀದಿಯೊಂದರಲ್ಲಿ ನಿಕಟವಾಗಿದ್ದರು ಎಂದು ನೀವು ಕೇಳುತ್ತೀರಿ, ಇನ್ನೊಂದು ದಿನ ಅವರು ಮಸೀದಿಯಲ್ಲಿ ಚುಂಬಿಸಿದರು ಎಂದು ಕೇಳುತ್ತೀರಿ, ಇನ್ನೊಂದು ದಿನ ಅವರು ಹಣೆಗೆ ಚುಂಬಿಸಿದರು ಎಂದು ಕೇಳುತ್ತೀರಿ. ಒಂದು ದಿನ ಅವರು ಸಂಬಂಧಿಕರಲ್ಲ ಎಂದು ಕೇಳುತ್ತೀರಿ, ಇನ್ನೊಂದು ದಿನ ಅವರು ದಂಪತಿಗಳು ಎಂದು ಕೇಳುತ್ತೀರಿ, ಇನ್ನೊಂದು ದಿನ ಅವರನ್ನು 2022 ರಿಂದ ಸೆಲ್‌ನಲ್ಲಿ ಇರಿಸಲಾಗಿತ್ತು ಎಂದು ಕೇಳುತ್ತೀರಿ” ಎಂದು ಆಲಂ ಬರೆದಿದ್ದಾರೆ.

“ಸೌದಿ ಸರ್ಕಾರವು ತಮ್ಮ ಕ್ರಮಗಳಿಗೆ ಸರಿಯಾದ ಕಾನೂನುಬದ್ಧ ಉತ್ತರವನ್ನು ನೀಡದ ಕಾರಣ ಈ ಎಲ್ಲಾ ಗೊಂದಲಗಳು ಉಂಟಾಗಿವೆ” ಎಂದು ಅವರು ಹೇಳಿದರು.

ಯುಕೆ ಆಕ್ಸ್‌ಫರ್ಡ್ ಮೂಲದ ವಕೀಲ ರಾಯ್ಹಾನ್ ರಶೀದ್ ಮಾತನಾಡಿ, “ಆರೋಪಿತ ಕೃತ್ಯದ ಬಗ್ಗೆ ಯಾರೇ ಏನೇ ಯೋಚಿಸಿದರೂ, ಕಾನೂನು ಪ್ರಕ್ರಿಯೆಯನ್ನು ನಂಬುವ ಯಾರನ್ನಾದರೂ ಇದು ಆಕ್ರೋಶಗೊಳಿಸಬೇಕು. ಸೌದಿ ವ್ಯವಸ್ಥೆಯ ಹೊರಗಿನ ಯಾರೂ ನೋಡಲು ಅನುಮತಿಸದ ಪ್ರಕ್ರಿಯೆಯ ಮೂಲಕ ಇಬ್ಬರ ಜೀವಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ಬಂಧನ ಮತ್ತು ಮರಣದಂಡನೆಯ ಬಗ್ಗೆ ಬಾಂಗ್ಲಾದೇಶಕ್ಕೆ ಮಾಹಿತಿ ನೀಡಲಾಗಿತ್ತೇ?

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ವಕೀಲ ರಾಯ್ಹಾನ್ ರಶೀದ್, “ವಿಯೆನ್ನಾ ಕಾನ್ಸುಲರ್ ಸಂಬಂಧಗಳ ಕನ್ವೆನ್ಷನ್‌ನ ವಿಧಿ 36 ರ ಪ್ರಕಾರ ಬಂಧಿತ ವಿದೇಶಿ ಪ್ರಜೆಗಳಿಗೆ ಅವರ ಕಾನ್ಸುಲರ್ ಹಕ್ಕುಗಳ ಬಗ್ಗೆ ತಿಳಿಸುವುದು ಅಗತ್ಯವಾಗಿದೆ, ಆದರೆ ವಿಧಿ 37 ರ ಪ್ರಕಾರ ವಿದೇಶಿ ಪ್ರಜೆಯ ಮರಣದ ಬಗ್ಗೆ ಆತಿಥೇಯ ದೇಶಗಳು ತಡಮಾಡದೆ ರಾಯಭಾರ ಕಚೇರಿಗಳಿಗೆ ತಿಳಿಸಬೇಕಾಗುತ್ತದೆ” ಎಂದು ನೆನಪಿಸಿದ್ದಾರೆ.

ಆದರೂ, ಜಿದ್ದಾದಲ್ಲಿರುವ ಬಾಂಗ್ಲಾದೇಶದ ಕಾನ್ಸುಲೇಟ್ ಜನರಲ್ ಸೆಪ್ಟೆಂಬರ್‌ನಲ್ಲಿ ಜೈಲಿನಲ್ಲಿರುವ ಎಲ್ಲಾ ಪ್ರಜೆಗಳ ಪಟ್ಟಿಯನ್ನು ಸ್ವೀಕರಿಸಿದೆ, ಅದರಲ್ಲಿ ನಜ್ರುಲ್ ಇಸ್ಲಾಂ ಅಬ್ದುಲ್ ಬಾಸಿರ್ ಮತ್ತು ಸಿಟಿ ಅಖ್ತರ್ ಅವರ ಹೆಸರುಗಳಿವೆ ಎಂದು ದ ಡೈಲಿ ಸ್ಟಾರ್ ವರದಿ ಮಾಡಿದೆ. ಅವರ ಆರೋಪಿತ ಅಪರಾಧಗಳನ್ನು “ವ್ಯಭಿಚಾರ” ಮತ್ತು “ಐಸಿಟಿ” ಎಂದು ಪಟ್ಟಿ ಮಾಡಲಾಗಿತ್ತು, ಆದರೆ ಅವರ ಮರಣದಂಡನೆ ಶಿಕ್ಷೆಯ ಬಗ್ಗೆ ಉಲ್ಲೇಖಿಸಿರಲಿಲ್ಲ.

ಅವರಿಬ್ಬರೂ ಕಾನ್ಸುಲರ್ ನೆರವು ಕೋರಿರಲಿಲ್ಲ ಎಂದೂ ಕಾನ್ಸುಲೇಟ್ ಹೇಳಿದೆ. ನಜ್ರುಲ್ ಅವರ ಕುಟುಂಬಕ್ಕೆ ಬಂಧನದ ಬಗ್ಗೆ ತಿಳಿದಿತ್ತಾದರೂ, ಆತನನ್ನು ಮೊದಲು ಬಂಧಿಸಿದಾಗ ಢಾಕಾಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ.

ಮರಣದಂಡನೆಯ ಬಗ್ಗೆ ಢಾಕಾಗೆ ಮುಂಚಿತವಾಗಿ ತಿಳಿಸಿರಲಿಲ್ಲ, ಮಾಧ್ಯಮ ವರದಿಗಳ ಮೂಲಕ ತಿಳಿದುಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಒಬೈದ್ ಇಸ್ಲಾಂ ಶನಿವಾರ ಪತ್ರಕರ್ತರಿಗೆ ತಿಳಿಸಿದರು.

ಬಾಂಗ್ಲಾದೇಶವು ತದನಂತರ ಢಾಕಾದಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಅಬ್ದುಲ್ಲಾ ಜಾಫರ್ ಹೆಚ್ ಬಿನ್ ಅಭಿಯಾ ಅವರಿಂದ ಸ್ಪಷ್ಟನೆ ಕೋರಿತ್ತು. ಆದರೆ, ವಿದೇಶಾಂಗ ಸಚಿವಾಲಯವು ಅಧಿಕೃತ ಸ್ವೀಕೃತಿಯನ್ನು ಕೋರಿ ಅಧಿಕೃತ ರಾಜತಾಂತ್ರಿಕ ಟಿಪ್ಪಣಿ ಕಳುಹಿಸಿತ್ತು.

ಮರಣದಂಡನೆ ಜಾರಿಯಾದ ಸಂದರ್ಭಗಳು ಮತ್ತು ಇಬ್ಬರು ಪ್ರಜೆಗಳ ಕೆಲಸ ಹಾಗೂ ಸೌದಿ ಅರೇಬಿಯಾದಲ್ಲಿ ತಂಗಿದ್ದ ವಿವರಗಳು ಸೇರಿದಂತೆ ರಿಯಾದ್‌ನಿಂದ ವಿವರವಾದ ಅಧಿಕೃತ ಮಾಹಿತಿಗಾಗಿ ಢಾಕಾ ಇನ್ನೂ ಕಾಯುತ್ತಿದೆ ಎಂದು ಶಮಾ ಶನಿವಾರ ಪತ್ರಕರ್ತರಿಗೆ ತಿಳಿಸಿದರು.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ಈ ಮರಣದಂಡನೆಗಳನ್ನು “ನಿರಾಶಾದಾಯಕ” ಎಂದು ಹೇಳಿದ್ದಾರೆ. ಉಭಯ ದೇಶಗಳು ವಿಯೆನ್ನಾ ಕನ್ವೆನ್ಷನ್‌ಗೆ ಸಹಿ ಹಾಕಿದ್ದರೂ ಮಾಹಿತಿ ಹಂಚಿಕೊಂಡಿಲ್ಲ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

“ಹಾಗಾದರೆ ಮಾಹಿತಿ ವಿನಿಮಯದಲ್ಲಿ ಕೊರತೆ ಏಕೆ ಇತ್ತು? ನಾವು ಸೌದಿ ಅರೇಬಿಯಾದಿಂದ ವಿವರಣೆ ಕೋರಿದ್ದೇವೆ” ಎಂದು ಅವರು ಹೇಳಿದರು. ಬಾಂಗ್ಲಾದೇಶದಲ್ಲಿ ಸೌದಿ ಪ್ರಜೆಗಳನ್ನು ಬಂಧಿಸಿದರೆ ಢಾಕಾ ಸೌದಿ ಅರೇಬಿಯಾಗೆ ತಿಳಿಸುವಂತೆಯೇ, ಸೌದಿ ಅರೇಬಿಯಾವೂ ಸಹ ಬಂಧಿತ ಪ್ರಜೆಗಳ ಬಗ್ಗೆ ತಮಗೆ ತಿಳಿಸುತ್ತದೆ ಎಂದು ಬಾಂಗ್ಲಾದೇಶ ನಿರೀಕ್ಷಿಸುತ್ತದೆ ಎಂದು ಅವರು ಹೇಳಿದರು.

ಯಾವುದೇ ಸಂದರ್ಭದಲ್ಲೂ, ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಅವರ ಕುಟುಂಬಗಳಿಗೆ ಅಥವಾ ಢಾಕಾದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸದೆ ರಹಸ್ಯವಾಗಿ ಗಲ್ಲಿಗೇರಿಸಿರುವುದು ಬಾಂಗ್ಲಾದೇಶ ಮತ್ತು ಅದರಾಚೆಗೆ ತೀವ್ರ ಆಕ್ರೋಶದ ಅಲೆಗೆ ಕಾರಣವಾಗಿದೆ. ಇಬ್ಬರೂ ಎಸಗಿದ ಅಪರಾಧಗಳೇನು ಮತ್ತು ಅವರಿಗೆ ಯಾವುದೇ ನ್ಯಾಯಸಮ್ಮತ ಕಾನೂನು ಪ್ರಕ್ರಿಯೆಯ ಸೌಲಭ್ಯ ಸಿಕ್ಕಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ

ಹುಗ್ಲಿ ನದಿಯಲ್ಲಿ ದುರ್ಗಾ ವಿಸರ್ಜನೆಯ ಸಮಯದಲ್ಲಿ ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿಯ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬುಧವಾರ ಹೇಳಿದ್ದಾರೆ. ಸುರಕ್ಷತಾ ಕಾಳಜಿಗಳು ಮತ್ತು...

ಮಹಾರಾಷ್ಟ್ರ ಸಿಇಒ ಮನವಿಗೆ ಸ್ಪಂದಿಸಿದ ಚುನಾವಣಾ ಆಯೋಗ: ‘ಇಸಿಐನೆಟ್’ ಸಾಫ್ಟ್‌ವೇರ್‌ನಲ್ಲಾಯಿತು 4 ಪ್ರಮುಖ ಬದಲಾವಣೆ!

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಾಫ್ಟ್‌ವೇರ್‌ನ ಅತಿಯಾದ ನಿಯಂತ್ರಣವು ಸ್ಥಳೀಯ ನೋಂದಣಿ ಅಧಿಕಾರಿಗಳ ಶಾಸನಬದ್ಧ ಅಧಿಕಾರವನ್ನೇ ಕಸಿದುಕೊಳ್ಳುತ್ತಿದೆ ಎಂಬ ತೀವ್ರ ಕಳವಳದ ಬೆನ್ನಲ್ಲೇ, ಭಾರತೀಯ ಚುನಾವಣಾ ಆಯೋಗವು ತನ್ನ 'ಇಸಿಐನೆಟ್' (ECINet)...

ಯೂಸುಫ್ ಪಠಾಣ್‌ಗೆ ವಡೋದರಾದ ವಿವಾದಿತ ನಿವೇಶನ ಹಂಚಿಕೆ ಮಾಡಿದ ಗುಜರಾತ್ ಬಿಜೆಪಿ ಸರ್ಕಾರ : ಟಿಎಂಸಿ ತೊರೆದು ಎನ್‌ಡಿಎ ಬೆಂಬಲಿಸಿದ್ದಕ್ಕೆ ಗಿಫ್ಟ್?

ಲೋಕಸಭಾ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರಿಗೆ ವಡೋದರಾದಲ್ಲಿರುವ 978 ಚದರ ಮೀಟರ್ ವಿಸ್ತೀರ್ಣದ ವಿವಾದಿತ ನಿವೇಶನವನ್ನು ಹಂಚಿಕೆ ಮಾಡಲು ಗುಜರಾತ್‌ನ ಬಿಜೆಪಿ ಸರ್ಕಾರವು ಅನುಮೋದನೆ ನೀಡಿದೆ. ಈ ಸಂಬಂಧ...

‘ಒಬ್ಬರೇ ಭೇಟಿಯಾಗಿದ್ದು ಯಾಕೆ?’ : ಎಪ್‌ಸ್ಟೀನ್ ಜೊತೆಗಿನ ಸಚಿವ ಹರ್ದೀಪ್ ಸಿಂಗ್ ಪುರಿ ಪೋಟೋ ಹಂಚಿಕೊಂಡು ಪ್ರತಿಪಕ್ಷ ನಾಯಕರ ಪ್ರಶ್ನೆ, ಉತ್ತರ ನೀಡಲು ಆಗ್ರಹ

ಕಾಂಗ್ರೆಸ್, ಟಿಎಂಸಿ ಮತ್ತು ಎನ್‌ಸಿಪಿ (ಎಸ್‌ಪಿ) ಸೇರಿದಂತೆ ವಿರೋಧ ಪಕ್ಷದ ನಾಯಕರು, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಅನ್ನು ಭೇಟಿಯಾಗಿರುವ ಫೋಟೋ...

ಸಿಎಂಆರ್‌ಎಲ್-ಎಕ್ಸಾಲಾಜಿಕ್ ಪ್ರಕರಣ: ಪಿಣರಾಯಿ ವಿಜಯನ್ ವಿರುದ್ಧದ ತನಿಖೆಗೆ 7 ದಿನಗಳ ತಡೆ ನೀಡಿದ ಸುಪ್ರೀಂ ಕೋರ್ಟ್: ಹೈಕೋರ್ಟ್‌ನಲ್ಲಿ ಮೇಲ್ಮನವಿಗೆ ಅವಕಾಶ

ಖಾಸಗಿ ಕಂಪನಿಯಿಂದ ಅಕ್ರಮ ಹಣಕಾಸು ವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 'ಸಿಎಂಆರ್‌ಎಲ್-ಎಕ್ಸಾಲಾಜಿಕ್' ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. ಹಾಗೂ ಅಳಿಯ, ಮಾಜಿ ಸಚಿವ...

ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಿಜೆಪಿಯ ಸೌರವ್ – ಅಶುತೋಷ್

ಪ್ರತಿಭಟನಾ ಸ್ಥಳವಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿರುವ ಜಂತರ್ ಮಂತರ್‌ನಲ್ಲಿ ರಾಷ್ಟ್ರಧವಜ ಹಾರಿಸಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ)...

ಆಂಧ್ರ ಪ್ರದೇಶ ಮುನ್ಸಿಪಲ್ ಚುನಾವಣೆ: ವೈಎಸ್‌ಆರ್‌ಸಿಪಿ ಅರ್ಜಿ ಪರಿಶೀಲಿಸಿ ನಾಳೆಯೊಳಗೆ ತೀರ್ಮಾನಿಸಿ; ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ!

ಆಂಧ್ರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ವ್ಯಾಪಕ ಹಿಂಸಾಚಾರ ನಡೆಸಿ, ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪ್ರಮುಖ...

ಸಿಜೆಪಿ ನಾಯಕರು – ನೇಹಾ ಬೋರಾ ಅರ್ಜಿಗಳ ತುರ್ತು ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್‌

ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸಲ್ಲಿಸಿರುವ ಅರ್ಜಿಯನ್ನು ಬುಧವಾರ (ಅ.21) ವಿಚಾರಣೆ...

ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಜೆಎನ್‌ಯು : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿಗಳು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (JNUSU) ಸದಸ್ಯರು ಮಂಗಳವಾರ (ಅಕ್ಟೋಬರ್ 20) ತಮ್ಮ 17 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿಶ್ವವಿದ್ಯಾಲಯದ ಡೀನ್ ನೇತೃತ್ವದ ಸಮಿತಿಯ ನಡುವೆ...

‘ಪ್ರಜಾಪ್ರಭುತ್ವದಲ್ಲಿ ಇದು ಕಳವಳಕಾರಿ, ಸಿಜೆಪಿ ಪ್ರಶ್ನೆಗಳಿಗೆ ನನ್ನ ಬೆಂಬಲವಿದೆ’: CJP ನಾಯಕರ ಬೆನ್ನಿಗೆ ನಿಂತ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ!

ಕಾಕ್‌ರೋಚ್ ಜನತಾ ಪಾರ್ಟಿಯ ಯುವ ನಾಯಕರ ಮೇಲೆ ದೆಹಲಿ ಪೊಲೀಸರು ನಡೆಸುತ್ತಿರುವ ಕಸ್ಟಡಿ ಮತ್ತು ಕಾನೂನು ಪ್ರಕ್ರಿಯೆಗಳ ಕುರಿತು ಪ್ರಜಾಪ್ರಭುತ್ವವಾದಿ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ...