ಭಾರತೀಯ ಚುನಾವಣಾ ಆಯೋಗ (ಇಸಿಐ) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ನಡೆಯುತ್ತಿರುವ ರಾಜ್ಯಗಳಲ್ಲೂ, ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಫಾರಂ-6 ಮತ್ತು ಅದರ ಜೊತೆಗಿನ ‘ಘೋಷಣಾ ಪತ್ರವನ್ನು’ (ಡಿಕ್ಲರೇಷನ್) ತನ್ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರತ್ಯೇಕಿಸಿದೆ.
ಇದಕ್ಕೂ ಮುನ್ನ, ಕಳೆದ ಸೆಪ್ಟೆಂಬರ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಫಾರಂ-6ರಿಂದ ಘೋಷಣಾ ಪತ್ರವನ್ನು ಪ್ರತ್ಯೇಕಿಸಲಾಗಿತ್ತು.
ಇದರೊಂದಿಗೆ, ಇನ್ನುಮುಂದೆ ಹೆಚ್ಚುವರಿ ‘ಘೋಷಣಾ ಪತ್ರವು’ ಯಾವುದೇ ರಾಜ್ಯದಲ್ಲಿ ಆನ್‌ಲೈನ್ ಫಾರಂ-6 ಭಾಗವಾಗಿ ಇರುವುದಿಲ್ಲ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಇನ್ನುಮುಂದೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸುವಾಗ ಬಳಸುವ ಫಾರಂ-6ರ ಭಾಗವಾಗಿ ಘೋಷಣಾ ಪತ್ರವನ್ನು ಭರ್ತಿ ಮಾಡುವ ಬದಲು, ಅರ್ಜಿದಾರರು ಇದನ್ನು ಪ್ರತ್ಯೇಕವಾಗಿ ಸಲ್ಲಿಸಬೇಕಾಗುತ್ತದೆ ಎಂದು indiatoday.in ವರದಿ ಮಾಡಿದೆ.
ಹೆಚ್ಚುವರಿ ಘೋಷಣಾ ಪತ್ರವನ್ನು ಫಾರಂ-6ರೊಂದಿಗೆ ಜೋಡಿಸುವ ಕುರಿತು ಇಬ್ಬರು ಚುನಾವಣಾ ಆಯುಕ್ತರು ಕಳವಳ ವ್ಯಕ್ತಪಡಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ ಎಂದು ವರದಿ ಹೇಳಿದೆ.
ಈ ಬೆಳವಣಿಗೆಯು, ಚುನಾವಣಾ ಸಂಸ್ಥೆಯು ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ತನ್ನ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಹೊರಡಿಸಿರುವ ಹೊಸ ಆದೇಶಗಳ ಮೂಲಕ ಜಾರಿಗೆ ತರುತ್ತಿರುವ, ಆಡಳಿತಾತ್ಮಕ ಬದಲಾವಣೆಗಳ ಒಂದು ಭಾಗವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಎಸ್‌ಐಆರ್‌ಗೆ ಸಂಬಂಧಪಟ್ಟಂತೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳು ದೇಶದಾದ್ಯಂತ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿರುವ ನಡುವೆ ಈ ಬದಲಾವಣೆಗಳು ಆಗುತ್ತಿವೆ.
ಫಾರಂ-6 ಒಂದು ಚುನಾವಣಾ ಆಯೋಗ ಒಂದು ಶಾಸನಬದ್ದ ಅರ್ಜಿಯಾಗಿದೆ. ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ ಕಾಯ್ದೆಗೆ ತಿದ್ದುಪಡಿ ತಂದು ಸಂಸತ್ತಿನ ಅನುಮೋದನೆ ಪಡೆಯುವುದು ಅತ್ಯಗತ್ಯವಾಗಿದೆ. ಆದರೆ, ಗ್ಯಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ ಆನ್‌ಲೈನ್ ಫಾರಂ-6ನಲ್ಲಿ ಕಾನೂನು ಮೀರಿ ಎಸ್‌ಐಆರ್‌ಗೆ ಸಂಬಂಧಪಟ್ಟ ಹೆಚ್ಚುವರಿ ಕಾಲಂ ಸೇರಿಸಿದೆ ಎಂಬ ಆರೋಪ ಕೇಳಿ ಬಂದಿತ್ತು.
ಚುನಾವಣಾ ಆಯೋಗ ಗೌಪ್ಯವಾಗಿ ನಡೆಸಿದ ಈ ಅಕ್ರಮ ಬಯಲಾಗುತ್ತಿದ್ದಂತೆ ಬದಲಾವಣೆಯನ್ನು ಹಿಂಪಡೆದ ಆಯೋಗ, ಫಾರಂ-6ರ ಜೊತೆ ಹೆಚ್ಚುವರಿ ಘೋಷಣಾ ಪತ್ರವನ್ನು ಪರಿಚಯಿಸಿತ್ತು. ಅದಕ್ಕೂ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಆ ಘೋಷಣಾ ಪತ್ರವನ್ನು ಹಂತ ಹಂತವಾಗಿ ಕೈಬಿಡುವ ಕೆಲಸವನ್ನು ಆಯೋಗ ಮಾಡುತ್ತಿದೆ. ಇದು ಹೋರಾಟಕ್ಕೆ ಸಿಕ್ಕ ಗೆಲುವು ಎನ್ನಬಹುದು.


