ದಲಿತ ಸಮುದಾಯದ ಕುರಿತು ಅವಹೇಳನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಐಐಟಿ ಪಟ್ನಾದ ರಿಜಿಸ್ಟ್ರಾರ್ ಅವಲೇಂದರ್ ಕುಮಾರ್ ಠಾಕೂರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಕೆಲವು ವಾರಗಳ ಹಿಂದೆಯೇ ಸಂಸ್ಥೆಯ ಬೋಧಕ ಸಿಬ್ಬಂದಿ ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರರು ದೂರುಗಳನ್ನು ಸಲ್ಲಿಸಿದ್ದರು.
ಮಾಜಿ ಕಾಂಗ್ರೆಸ್ ನಾಯಕ ಆದಿತ್ಯ ಪಾಸ್ವಾನ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ನವೆಂಬರ್ 5ರಂದು ಪಾಟ್ನಾದ ಎಸ್ಸಿ/ಎಸ್ಟಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಠಾಕೂರ್ ಅವರು ಸಾಮಾಜಿಕ ಜಾಲತಾಣದಲ್ಲಿ, “ಸಮರ್ಥರಾಗುವ ಬದಲು ದಲಿತರಾಗಿ, ಯಶಸ್ಸು ತಾನಾಗಿಯೇ ಬೆನ್ನಟ್ಟಿ ಬರುತ್ತದೆ” (Kabil mat bano, Dalit bano, kamyabi jhagg marke pichey ayegi) ಎಂಬರ್ಥದ ಹೇಳಿಕೆಯನ್ನು ಹಂಚಿಕೊಂಡಿದ್ದರು ಎಂದು ಪಾಸ್ವಾನ್ ಆರೋಪಿಸಿದ್ದಾರೆ.
ಆರೋಪಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಪೋಸ್ಟ್ ಅನ್ನು ಠಾಕೂರ್ ಅವರು ಅಳಿಸಿದ್ದಾರೆ ಎನ್ನಲಾಗಿದೆ.
ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು, ಸಂವಿಧಾನವನ್ನು ಅಗೌರವಿಸುವುದು ಮತ್ತು ಜಾತಿ ಆಧಾರಿತ ದ್ವೇಷವನ್ನು ಉತ್ತೇಜಿಸುವುದು ಸೇರಿದಂತೆ ಹಲವು ಆರೋಪಗಳನ್ನು ದೂರಿನಲ್ಲಿ ಮಾಡಲಾಗಿದೆ. ಮೀಸಲಾತಿಯು ರಾಜಕೀಯ ಪಕ್ಷಗಳು ನೀಡುವ ಕೊಡುಗೆಯಲ್ಲ; ಶತಮಾನಗಳಿಂದ ಮುಂದುವರಿದ ಸಾಮಾಜಿಕ ಅಸಮಾನತೆಯನ್ನು ಎದುರಿಸಲು ಸಂವಿಧಾನ ಒದಗಿಸಿರುವ ರಕ್ಷಣಾತ್ಮಕ ವ್ಯವಸ್ಥೆ ಎಂದು ಪಾಸ್ವಾನ್ ತಮ್ಮ ದೂರಿನಲ್ಲಿ ಪ್ರತಿಪಾದಿಸಿದ್ದಾರೆ.
ಸೆಪ್ಟೆಂಬರ್ನಿಂದಲೇ ವಿವಾದದ ಆರಂಭ
ಠಾಕೂರ್ ಅವರಿಗೆ ಸಂಬಂಧಿಸಿದವು ಎನ್ನಲಾದ ಫೇಸ್ಬುಕ್ ಮತ್ತು ಲಿಂಕ್ಡ್ಇನ್ ಪೋಸ್ಟ್ಗಳು ಸೆಪ್ಟೆಂಬರ್ ಅಂತ್ಯದಲ್ಲಿ ವಿವಾದಕ್ಕೆ ಕಾರಣವಾಗಿದ್ದವು. ಲಿಂಕ್ಡ್ಇನ್ನಲ್ಲಿ ಪ್ರಕಟವಾಗಿದ್ದ ಒಂದು ಪೋಸ್ಟ್ನಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿತ್ತು. ಅಲ್ಲದೆ, ಮೀಸಲಾತಿಯನ್ನು ರಾಜಕೀಯ ಪಕ್ಷಗಳ ಮತಬ್ಯಾಂಕ್ ಸಾಧನವೆಂದು ಬಣ್ಣಿಸಲಾಗಿತ್ತು.
ಈ ಹೇಳಿಕೆಗಳ ಕುರಿತು ಬೋಧಕ ಸಿಬ್ಬಂದಿ ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಐಐಟಿ ಪಾಟ್ನಾ ಆಡಳಿತಕ್ಕೆ ದೂರು ಸಲ್ಲಿಸಿರುವುದಾಗಿ ಅಕ್ಟೋಬರ್ 27ರಂದು ದಿ ಟೆಲಿಗ್ರಾಫ್ ವರದಿ ಮಾಡಿತ್ತು. ಆದರೆ, ಈ ಪೋಸ್ಟ್ಗಳನ್ನು ತಾವು ಪ್ರಕಟಿಸಿಲ್ಲ ಎಂದು ಠಾಕೂರ್ ನಿರಾಕರಿಸಿದ್ದರು. ಅವು ನಕಲಿ, ತಿರುಚಿದ ಮತ್ತು ಕಟ್ಟುಕಥೆಯ ಪೋಸ್ಟ್ಗಳೆಂದು ಅವರು ಪ್ರತಿಕ್ರಿಯಿಸಿದ್ದರು.
ಆಕ್ಷೇಪ ವ್ಯಕ್ತಪಡಿಸಿದವರಲ್ಲಿ ಬಹುಜನ ಹಕ್ಕುಗಳ ಹೋರಾಟಗಾರ ಹಾಗೂ ಐಐಎಂ ಅಲ್ಯುಮ್ನಿ ಗ್ಲೋಬಲ್ ನೆಟ್ವರ್ಕ್ನ ಸಂಸ್ಥಾಪಕ ಸದಸ್ಯ ಅನಿಲ್ ವಾಗ್ಡೆ ಕೂಡ ಸೇರಿದ್ದರು. ಅವರು ಐಐಟಿ ಪಾಟ್ನಾ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ವಿ. ನರೇಂದ್ರನ್ ಮತ್ತು ನಿರ್ದೇಶಕ ಅಮಿತ್ ಪಾತ್ರ ಅವರಿಗೆ ಪತ್ರ ಬರೆದು, ಈ ಕುರಿತು ತನಿಖೆ ನಡೆಸಬೇಕು ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸುವುದು ಸೇರಿದಂತೆ ಠಾಕೂರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು ಎಂದು ವರದಿ ತಿಳಿಸಿತ್ತು.
ಐಐಟಿ ಪಾಟ್ನಾದ ಮತ್ತೊಬ್ಬ ಬೋಧಕ ಸಿಬ್ಬಂದಿಯೂ ಸಂಸ್ಥೆಯ ನಿರ್ದೇಶಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ, ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸುವಂತೆ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದರು ಎಂದು ದಿ ಮೂಕನಾಯಕ ವರದಿ ಮಾಡಿತ್ತು.
ಅಕ್ಟೋಬರ್ 28ರಂದು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಗ್ಲೋಬಲ್ ಐಐಟಿ ಅಲ್ಯುಮ್ನಿ ಸಪೋರ್ಟ್ ಗ್ರೂಪ್ನ ಸಂಸ್ಥಾಪಕ ಧೀರಜ್ ಕುಮಾರ್ ಸಿಂಗ್ ಅವರು ನಿರ್ದೇಶಕ ಅಮಿತ್ ಪಾತ್ರ ಅವರಿಗೆ ಪತ್ರ ಬರೆದಿದ್ದರು. ಪ್ರಕರಣದ ತನಿಖೆಯ ಪ್ರಗತಿಯ ಕುರಿತು ಮಾಹಿತಿ ನೀಡಬೇಕು ಮತ್ತು ಸ್ವತಂತ್ರ ತನಿಖೆ ನಡೆಯುವುದನ್ನು ಖಚಿತಪಡಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ಇದಕ್ಕೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದ ಅಮಿತ್ ಪಾತ್ರ, ಪ್ರಕರಣವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದರು.
ಅಕ್ಟೋಬರ್ 30ರಂದು ಮಾಜಿ ಕಾಂಗ್ರೆಸ್ ನಾಯಕ ಆದಿತ್ಯ ಪಾಸ್ವಾನ್ ಅವರು ಠಾಕೂರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಅದೇ ದಿನ ರಿಜಿಸ್ಟ್ರಾರ್ ಆಗಿರುವ ಠಾಕೂರ್ ಅವರು ಸಂಸ್ಥೆಯ ಎಸ್ಸಿ/ಎಸ್ಟಿ/ಒಬಿಸಿ ಘಟಕಕ್ಕೆ ಮೂವರು ಬೋಧಕ ಸಿಬ್ಬಂದಿಯನ್ನು ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದ್ದರು. ಈ ಪೈಕಿ ಎಸ್ಸಿ ಮತ್ತು ಒಬಿಸಿ ಸಮುದಾಯಗಳ ಪ್ರತಿನಿಧಿಗಳೂ ಸೇರಿದ್ದರು. ರಿಜಿಸ್ಟ್ರಾರ್ ವಿರುದ್ಧವೇ ದೂರುಗಳು ಬಾಕಿ ಇರುವಾಗ ಈ ಆದೇಶ ಹೊರಡಿಸಿರುವುದು, ಸಂಸ್ಥೆಯಲ್ಲಿನ ಈ ಘಟಕದ ಕಾರ್ಯನಿರ್ವಹಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಪೊಲೀಸರಿಂದ ತನಿಖೆ ಆರಂಭ
ವರದಿಗಳ ಪ್ರಕಾರ, ನವೆಂಬರ್ 5ರಂದು ಎಫ್ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ಸಂಖ್ಯೆ 62/26 ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಫ್ಐಆರ್ ದಾಖಲಾಗಿರುವುದರಿಂದ ಆರೋಪಿತ ಸಾಮಾಜಿಕ ಜಾಲತಾಣ ಪೋಸ್ಟ್ಗಳು ನಿಜವಾಗಿಯೂ ಠಾಕೂರ್ ಅವರೇ ಪ್ರಕಟಿಸಿದವು ಎಂಬುದು ಅಥವಾ ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದರ್ಥವಲ್ಲ. ಈ ಹಿಂದೆ ಪೋಸ್ಟ್ಗಳನ್ನು ಪ್ರಕಟಿಸಿರುವುದನ್ನು ಠಾಕೂರ್ ನಿರಾಕರಿಸಿರುವುದೂ ಪ್ರಕರಣದ ಪ್ರಮುಖ ಅಂಶವಾಗಿದೆ. ತನಿಖೆಯ ಬಳಿಕವಷ್ಟೇ ಆರೋಪಗಳ ಸತ್ಯಾಸತ್ಯತೆ ತಿಳಿಯಬೇಕಿದೆ.


