ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿ ಆರು ವರ್ಷಗಳಿಂದ ಜೈಲಿನಲ್ಲಿ ನರಳುತ್ತಿದ್ದ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಇಬ್ಬರು ಯುವಕರನ್ನು ವಿಶೇಷ ನ್ಯಾಯಾಲಯ 2026ರ ನವೆಂಬರ್ 5ರಂದು ದೋಷಮುಕ್ತಗೊಳಿಸಿದೆ ಎಂದು ವರದಿಯಾಗಿದೆ.
ಪ್ರಾಸಿಕ್ಯೂಷನ್ ಮಂಡಿಸಿದ ವಾದದಲ್ಲಿನ ಪ್ರಮುಖ ವೈರುಧ್ಯಗಳ ಆಧಾರದ ಮೇಲೆ, 2020ರ ನವೆಂಬರ್ನಲ್ಲಿ ಬಂಧಿತರಾಗಿದ್ದ ಸೊಪೋರ್ನ ಚೂರಾದ ನಿವಾಸಿ ಹುಝೈಫ್ ಫಿರ್ದೌಸ್ ಭಟ್ ಮತ್ತು ಬಾರಾಮುಲ್ಲಾದ ಕ್ರೀರಿಯ ನಿವಾಸಿ ಅಜಾಝ್ ಅಹ್ಮದ್ ಭಟ್ ಅವರನ್ನು ಯುಎಪಿಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಫೆರೋಝ್ ಅಹ್ಮದ್ ಖಾನ್ ಅವರು ದೋಷಮುಕ್ತಗೊಳಿಸಿದ್ದಾರೆ.
ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾದ ಆರೋಪವು ಯಾವುದೇ ಸ್ವತಂತ್ರ ಸಾಕ್ಷಿಗಳ ಮೂಲಕ ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಬಾರಾಮುಲ್ಲಾದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾನಿಸ್ಪೋರಾ ಬಳಿ ತಪಾಸಣೆ ನಡೆಸುತ್ತಿದ್ದಾಗ, ವಾಹನದಿಂದ ಎರಡು ಹ್ಯಾಂಡ್ ಗ್ರೆನೇಡ್ಗಳು, 100 ರೌಂಡ್ ಮದ್ದುಗುಂಡುಗಳು ಮತ್ತು ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸೇರಿದ ಎರಡು ಪೋಸ್ಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೊಂಡ ನಂತರ, ಸೆ. 16, 2020 ರಂದು ಇಬ್ಬರು ಯುವಕರನ್ನು ಬಂಧಿಸಲಾಗಿತ್ತು.
ಬಂಧನದ ನಂತರ, ಯುಎಪಿಎ ಕಾಯ್ದೆಯ ಸೆಕ್ಷನ್ 18, 23 ಮತ್ತು 39 ಹಾಗೂ ಶಸ್ತಾಸ್ತ್ರ ಕಾಯ್ದೆಯ ಸೆಕ್ಷನ್ 7/25ರ ಅಡಿಯಲ್ಲಿ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ, ಆರೋಪಿಗಳು ಪೊಲೀಸರ ಬಂಧನದ ವಾದವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ತಾವು ಕಾನಿಸ್ಪೋರಾದಲ್ಲಿ ವಾಹನ ತಪಾಸಣೆಯ ವೇಳೆ ಸಿಕ್ಕಿಬಿದ್ದಿಲ್ಲ, ಬದಲಿಗೆ ರಾತ್ರಿಯ ಸಮಯದಲ್ಲಿ ನಮ್ಮ ನಮ್ಮ ಮನೆಗಳಿಂದಲೇ ಪೊಲೀಸರು ನಮ್ಮನ್ನು ಕರೆದೊಯ್ದಿದ್ದರು ಎಂದು ಅವರು ಆರೋಪಿಸಿದ್ದರು.
ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಆರೋಪಿಗಳ ವಶದಿಂದಲೇ ಜಪ್ತಿಯಾಗಿವೆ ಎಂಬುದನ್ನು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.
“ನ್ಯಾಯಾಲಯದ ಮುಂದೆ ಹಾಜರುಪಡಿಸಲಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಆರೋಪಿಗಳ ಸಕ್ರಿಯ ವಶದಿಂದಲೇ, ಪೊಲೀಸರು ಹೇಳಿರುವ ರೀತಿಯಲ್ಲಿಯೇ ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಪ್ರಾಸಿಕ್ಯೂಷನ್ ಬಲವಾದ ಮತ್ತು ನಂಬಲರ್ಹವಾದ ಸಾಕ್ಷ್ಯಾಧಾರಗಳ ಮೂಲಕ ಸಾಬೀತುಪಡಿಸಿಲ್ಲ… ಒಮ್ಮೆ ಪೊಲೀಸರು ಹೇಳಿಕೊಂಡ ಜಪ್ತಿಯೇ ಸಂಶಯಾಸ್ಪದವಾದರೆ, ಯುಎಪಿಎ ಕಾಯ್ದೆಯ ಸೆಕ್ಷನ್ 18 ಮತ್ತು 23 ಹಾಗೂ ಶಸ್ತಾಸ್ತ್ರ ಕಾಯ್ದೆಯ ಸೆಕ್ಷನ್ 7/25 ರ ಅಡಿಯ ಅಪರಾಧಗಳ ಅಡಿಪಾಯವೇ ಗಣನೀಯವಾಗಿ ದುರ್ಬಲಗೊಳ್ಳುತ್ತದೆ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಪ್ರಕರಣದ ಒಟ್ಟಾರೆ ಮೌಲ್ಯಮಾಪನವನ್ನು ಮಾಡಿದ ನ್ಯಾಯಾಲಯ, “ಪ್ರಾಸಿಕ್ಯೂಷನ್ ಮಂಡಿಸಿರುವ ಸಾಕ್ಷ್ಯಾಧಾರಗಳು ಭಾರಿ ವೈರುಧ್ಯಗಳು ಹಾಗೂ ದೋಷಗಳಿಂದ ಕೂಡಿವೆ. ಇಂತಹ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳಿಗೆ ಶಿಕ್ಷೆ ವಿಧಿಸುವುದು ಅಸುರಕ್ಷಿತ ಮತ್ತು ನ್ಯಾಯಸಮ್ಮತವಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆಯ 52 ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 53ನೇ ಬೆಟಾಲಿಯನ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ನಂತರ ಈ ಬಂಧನಗಳು ನಡೆದಿದ್ದವು ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಹೆಚ್ಚುವರಿ ಸರ್ಕಾರಿ ಅಭಿಯೋಜಕರು (ಪಬ್ಲಿಕ್ ಪ್ರಾಸಿಕ್ಯೂಟರ್) ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದರೆ, ಆರೋಪಿಗಳ ಪರವಾಗಿ ವಕೀಲರಾದ ಅಝೀಮ್ ಪಂಡಿತ್ ಮತ್ತು ತಜಮುಲ್ ಹುಸೇನ್ ಹಾಜರಾಗಿದ್ದರು.
ಪೊಲೀಸರು ಹೇಳಿಕೊಂಡ ಜಪ್ತಿಗೆ ಯಾವುದೇ ಸ್ವತಂತ್ರ ಸಾಕ್ಷಿಗಳು ಇರಲಿಲ್ಲ ಮತ್ತು ವಿಚಾರಣೆ ಹಾಗೂ ಪಾಟೀಸವಾಲಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ನೀಡಿದ ಹೇಳಿಕೆಗಳಲ್ಲಿ ಗಣನೀಯ ವೈರುಧ್ಯಗಳಿದ್ದವು ಎಂದೂ ಸಹ ನ್ಯಾಯಾಲಯ ಹೇಳಿದೆ.
ಪ್ರಾಸಿಕ್ಯೂಷನ್ ಸಾಕ್ಷಿಗಳು ತಪಾಸಣಾ ಕಾರ್ಯಾಚರಣೆ ನಡೆದಿದ್ದನ್ನು ಮತ್ತು ಆ ವೇಳೆ ಪತ್ತೆಯಾದ ವಸ್ತುಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಪೊಲೀಸರು ಹಾಜರುಪಡಿಸಿದ ಸಾಕ್ಷಿಗಳು ತಪಾಸಣೆ ನಡೆಸಿದ ಜವಾಬ್ದಾರಿಯನ್ನು ಇತರರ ಮೇಲೆ ತಳ್ಳಿದರಲ್ಲದೆ, ಇಬ್ಬರು ಸಾಕ್ಷಿಗಳು ತಮಗೆ ತಿಳಿದಿರುವಂತೆ ಇಂತಹ ಯಾವುದೇ ಜಪ್ತಿಗಳು ತಮ್ಮ ಸಮ್ಮುಖದಲ್ಲಿ ನಡೆದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
“ಹೀಗಾಗಿ, ಪೊಲೀಸರು ಹೇಳಿಕೊಂಡ ಜಪ್ತಿಯ ಹಲವಾರು ಮೂಲಭೂತ ಅಂಶಗಳ ಕುರಿತು ಪ್ರಾಸಿಕ್ಯೂಷನ್ ಒಂದೇ ರೀತಿಯ ವಿವರಣೆಯನ್ನು ನೀಡಿಲ್ಲ. ಒಬ್ಬ ಸಾಕ್ಷಿಯು PW-1 ತಪಾಸಣೆ ನಡೆಸಿದ್ದಾರೆ ಎಂದು ಹೇಳಿದರೆ, ಮತ್ತೊಬ್ಬರು ಆ ತಪಾಸಣೆಯ ಜವಾಬ್ದಾರಿಯನ್ನು ಜೈಪಾಲ್ ಅವರಿಗೆ ವಹಿಸುತ್ತಾರೆ. ಇನ್ನೊಬ್ಬ ಸಾಕ್ಷಿಯು PW-4 ತಪಾಸಣೆ ನಡೆಸಿದ್ದಾರೆ ಎಂದು ಹೇಳುತ್ತಾರೆ, ಆದರೆ PW-3 ಮತ್ತು PW-4 ತಮ್ಮ ಸಮ್ಮುಖದಲ್ಲಿ ಯಾವುದೇ ಜಪ್ತಿ ನಡೆದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ” ಎಂದು ನ್ಯಾಯಾಲಯ ತಿಳಿಸಿದೆ.
ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪ್ರಮಾಣ ಮತ್ತು ಗುರುತಿನ ವಿಷಯದಲ್ಲೂ ಸಹ ಈ ವೈರುಧ್ಯಗಳು ಕಂಡು ಬಂದಿವೆ. ಒಬ್ಬ ಪೊಲೀಸ್ ಸಾಕ್ಷಿಯು 100 ರೌಂಡ್ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಾಕ್ಷ್ಯ ನೀಡಿದರೆ, ಮತ್ತೊಬ್ಬರು ಆ ಸಂಖ್ಯೆಯನ್ನು ಕೇವಲ 40 ಎಂದು ತಿಳಿಸಿದ್ದಾರೆ. ಅದೇ ರೀತಿ, ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾದ ಪೋಸ್ಟರ್ಗಳು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ್ದೇ ಅಥವಾ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ್ದೇ ಎಂಬ ವಿಷಯದಲ್ಲೂ ಸಾಕ್ಷಿಗಳು ಭಿನ್ನವಾದ ಹೇಳಿಕೆಗಳನ್ನು ನೀಡಿದ್ದಾರೆ.
“ಹೇಳಲಾದ ಲಷ್ಕರ್-ಎ-ತೊಯ್ಬಾಗೆ ಸೇರಿದ ವಸ್ತುಗಳ ಸ್ವರೂಪ ಮತ್ತು ವಶಪಡಿಸಿಕೊಳ್ಳಲಾದ ಮದ್ದುಗುಂಡುಗಳ ಸಂಖ್ಯೆಯ ವಿಚಾರದಲ್ಲೂ ಸಾಕ್ಷಿಗಳು ಭಿನ್ನವಾದ ಹೇಳಿಕೆಗಳನ್ನು ನೀಡಿದ್ದಾರೆ. ಜಪ್ತಿ ಮಾಡಲಾದ ವಸ್ತುಗಳ ಗುರುತಿಸುವಿಕೆ ಮತ್ತು ಅವುಗಳ ಸಂರಕ್ಷಣೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳೊಂದಿಗೆ ಒಟ್ಟಾಗಿ ಪರಿಶೀಲಿಸಿದಾಗ, ಈ ವೈರುಧ್ಯಗಳು ಮತ್ತಷ್ಟು ಗಂಭೀರವಾಗಿ ಕಂಡುಬರುತ್ತವೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.
“ಸಮಯ ಕಳೆಯುವಿಕೆ ಅಥವಾ ಅಸ್ಪಷ್ಟ ನೆನಪಿನಿಂದಾಗಿ ಉಂಟಾಗುವ ಸಣ್ಣಪುಟ್ಟ ವೈರುಧ್ಯಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಬಹುದು ಎಂಬುದು ನಿಜ. ಆದರೆ ಪ್ರಾಸಿಕ್ಯೂಷನ್ ಕಥೆಯ ಮೂಲಕ್ಕೇ ಧಕ್ಕೆ ತರುವಂತಹ ಹಾಗೂ ಘಟನೆ, ಜಪ್ತಿ ಅಥವಾ ವಶಪಡಿಸಿಕೊಂಡ ವಸ್ತುಗಳ ಗುರುತು ಅಥವಾ ಆರೋಪಿಗಳೊಂದಿಗೆ ಆ ವಸ್ತುಗಳಿಗಿರುವ ಸಂಪರ್ಕದ ಬಗ್ಗೆಯೇ ಅನುಮಾನ ಮೂಡಿಸುವಂತಹ ಗಂಭೀರ ವೈರುಧ್ಯಗಳನ್ನು ಅಪ್ರಸ್ತುತ ಎಂದು ತಳ್ಳಿಹಾಕಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಆರೋಪಿಗಳಿಗೂ ಮತ್ತು ಗುರುತಿಸಲಾದ ಯಾವುದೇ ಭಯೋತ್ಪಾದಕ, ಭಯೋತ್ಪಾದಕ ಸಂಘಟನೆ ಅಥವಾ ಭಯೋತ್ಪಾದಕ ಚಟುವಟಿಕೆಗಳಿಗೂ ಯಾವುದೇ ರೀತಿಯ ಲಿಂಕ್ ಅಥವಾ ಸಂಪರ್ಕ ಇರುವುದನ್ನು ಸಾಬೀತುಪಡಿಸಲು ತನಿಖೆಯು ವಿಫಲವಾಗಿದೆ ಎಂಬುದನ್ನು ಸಹ ನ್ಯಾಯಾಲಯವು ಪತ್ತೆಹಚ್ಚಿದೆ.
“ಆರೋಪಿಗಳಿಗೂ ಮತ್ತು ಗುರುತಿಸಲಾದ ಯಾವುದೇ ಭಯೋತ್ಪಾದಕ, ಭಯೋತ್ಪಾದಕ ಕೃತ್ಯ, ಭಯೋತ್ಪಾದಕ ಸಂಘಟನೆಯ ಚಟುವಟಿಕೆ ಅಥವಾ ಉದ್ದೇಶಪೂರ್ವಕವಾಗಿ ನೆರವು ನೀಡಿದ ಯಾವುದೇ ನಿರ್ದಿಷ್ಟ ಕೃತ್ಯಕ್ಕೂ ಸಂಬಂಧ ಕಲ್ಪಿಸುವ ಯಾವುದೇ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿಲ್ಲ. ಆರೋಪಿಗಳು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆಯೋ, ಅಂತಹ ಯಾವುದೇ ಭಯೋತ್ಪಾದಕನ ಹೆಸರು ತನಿಖೆಯ ಅವಧಿಯಲ್ಲಿ ಹೊರಬಂದಿಲ್ಲ ಎಂಬುದನ್ನು ತನಿಖಾಧಿಕಾರಿಯೇ ಒಪ್ಪಿಕೊಂಡಿದ್ದಾರೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಆರೋಪಿಗಳಿಬ್ಬರಲ್ಲಿ ಯಾರೇ ಆಗಲಿ ಉದ್ದೇಶಪೂರ್ವಕವಾಗಿ ಯಾವುದೇ ಭಯೋತ್ಪಾದಕ ಕೃತ್ಯ ಅಥವಾ ಚಟುವಟಿಕೆಗೆ ನೆರವು ನೀಡಿದ್ದಾರೆ ಅಥವಾ ಅದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂಬುದನ್ನು ನಿರೂಪಿಸುವ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಹ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ.
ಬಾರಾಮುಲ್ಲಾದ ಇಬ್ಬರು ಯುವಕರು ದೋಷಮುಕ್ತರಾಗುವ ಮುನ್ನ ಆರು ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗಿ ಬಂದಿರುವ ಸಂಗತಿಯ ಬಗ್ಗೆ ಹುರಿಯತ್ ಅಧ್ಯಕ್ಷ ಹಾಗೂ ಕಾಶ್ಮೀರದ ಮುಖ್ಯ ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Courtesy :thewire.in


