‘ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆ’ಗೆ ಶನಿವಾರ (ನ.14) ಹೈದರಾಬಾದ್ನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಜಂಟಿಯಾಗಿ ಈ ಯೋಜನೆಯನ್ನು ಉದ್ಘಾಟಿಸಿದರು.
ಸ್ವಿಗ್ಗಿ, ಝೊಮ್ಯಾಟೊ, ಊಬರ್, ಓಲಾ, ಅಮೆಝಾನ್, ಫ್ಲಿಪ್ಕಾರ್ಟ್ ಮುಂತಾದ ಆ್ಯಪ್ ಆಧಾರಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸುಮಾರು 6 ಲಕ್ಷ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ.
ಯೋಜನೆಯಡಿ ನೋಂದಾಯಿತ ಪ್ರತಿ ಗಿಗ್ ಕಾರ್ಮಿಕರಿಗೆ ರೂ. 5 ಲಕ್ಷದವರೆಗೆ ಅಪಘಾತ ವಿಮೆ ಮತ್ತು ರೂ.10 ಲಕ್ಷದವರೆಗೆ ಆರೋಗ್ಯ ವಿಮಾ ಸೌಲಭ್ಯ ದೊರೆಯಲಿದೆ. ಪ್ರತಿ ಡೆಲಿವರಿ ಅಥವಾ ಕ್ಯಾಬ್ ಪ್ರಯಾಣದ ವಹಿವಾಟಿನ ಮೌಲ್ಯದಲ್ಲಿ ಶೇಕಡಾ 1 ರಷ್ಟು ಮೊತ್ತವನ್ನು ಕಂಪನಿಗಳಿಂದ ಸಂಗ್ರಹಿಸಿ ಕಾರ್ಮಿಕರ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ. ಈ ಹಣವನ್ನು ಕಲ್ಯಾಣ ಮಂಡಳಿಯ ಮೂಲಕ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಬಿಸಿಲು ಮತ್ತು ಮಳೆಯಲ್ಲಿ ಕೆಲಸ ಮಾಡುವ ಡೆಲಿವರಿ ಕಾರ್ಮಿಕರಿಗಾಗಿ ಹೈದರಾಬಾದ್ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವೈ-ಫೈ ಸೌಲಭ್ಯವಿರುವ ವಿಶೇಷ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಲಾಗುತ್ತದೆ. ಹೊಸ ಕಾಯ್ದೆಯಡಿ ಕಾರ್ಮಿಕರು ತಮ್ಮ ಕೆಲಸದ ಅವಧಿ, ಪ್ರತಿ ಡೆಲಿವರಿಯ ಆದಾಯ ಮತ್ತು ಪಾವತಿಗಳ ಸಂಪೂರ್ಣ ವಿವರಗಳನ್ನು ತಮ್ಮ ಮೊಬೈಲ್ ಫೋನ್ ಮೂಲಕವೇ ಪಾರದರ್ಶಕವಾಗಿ ವೀಕ್ಷಿಸುವ ಹಕ್ಕನ್ನು ಪಡೆಯಲಿದ್ದಾರೆ. ‘ತೆಲಂಗಾಣ ಪ್ಲಾಟ್ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಕಾಯ್ದೆ, 2026’ ರ ಅಡಿಯಲ್ಲಿ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ರಚಿಸಲಾಗಿದ್ದು, ಕಾರ್ಮಿಕರ ನೋಂದಣಿ ಮತ್ತು ಕುಂದುಕೊರತೆ ನಿವಾರಣೆಗಾಗಿ ವಿಶೇಷ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಪರಿಚಯಿಸಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಹೈದರಾಬಾದ್ನ ಮಾಧಾಪುರದ ಜಯಭೇರಿ ಮೈದಾನದಲ್ಲಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ, ರಾಹುಲ್ ಗಾಂಧಿ ನಗರದ ಶಿಲ್ಪಾರಾಮಮ್ನಿಂದ ಗಿಗ್ ಕಾರ್ಮಿಕರೊಂದಿಗೆ ಬೈಕ್ ರ್ಯಾಲಿ ನಡೆಸಿದರು. ಅಲ್ಲದೆ, ಗಿಗ್ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು. ಕಾರ್ಮಿಕರು ಎದುರಿಸುತ್ತಿರುವ ಕಷ್ಟಗಳು ಮತ್ತು ದೈನಂದಿನ ಜೀವನದ ಸವಾಲುಗಳು ನನಗೆ ಅರ್ಥವಾಗಿವೆ ಎಂದು ಹೇಳಿದರು.
ತಾನು, ಕಾಂಗ್ರೆಸ್ ಪಕ್ಷ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಗಿಗ್ ಕಾರ್ಮಿಕರ ಪರ ನಿಲ್ಲುವುದಾಗಿ ಮತ್ತು ಅವರ ಕಠಿಣ ಪರಿಶ್ರಮವನ್ನು ಗುರುತಿಸುವುದಾಗಿ ಭರವಸೆ ನೀಡಿದ್ದನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, “ನಾವು ಆ ಭರವಸೆ ನೀಡಿದ್ದೆವು, ಅದನ್ನು ಈಗ ಈಡೇರಿಸಿದ್ದೇವೆ” ಎಂದು ಹೇಳಿದರು.
ಡೆಲಿವರಿ ಸಮಯ, ಕೆಲಸದ ಅವಧಿ ಮತ್ತು ಪಾವತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡಂತೆ, ಗಿಗ್ ಕಾರ್ಮಿಕರ ಕುರಿತು ಭಾರತದಲ್ಲಿ ಸಮಗ್ರ ದತ್ತಾಂಶದ ಕೊರತೆಯಿದೆ ಎಂದು ಹೇಳಿದ ರಾಹುಲ್ ಗಾಂಧಿ, “ನೀವು ಕಠಿಣ ಪರಿಶ್ರಮ ಪಡುತ್ತೀರಿ, ಆದರೆ ನಿಮ್ಮ ಸ್ವಂತ ದತ್ತಾಂಶವನ್ನು ಪಡೆಯುವ ಅವಕಾಶವೂ ನಿಮಗಿಲ್ಲ” ಎಂದರು.
ಪಾವತಿಗಳಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಮೂಲಕ ಹಾಗೂ ಪ್ರತಿ ಡೆಲಿವರಿಗೆ ತಾವು ಗಳಿಸುವ ಮೊತ್ತದ ವಿವರಗಳನ್ನು ನಿಮಗೆ ಒದಗಿಸುವ ಮೂಲಕ, ಈ ಕಳವಳಗಳನ್ನು ಪರಿಹರಿಸಲು ತೆಲಂಗಾಣ ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ತೆಲಂಗಾಣದ ನಗರಗಳಲ್ಲಿ ಬೇಸಿಗೆಯ ಪ್ರಖರ ಬಿಸಿಲಿನಲ್ಲಿ ಬೈಕ್ಗಳ ಮೂಲಕ ಡೆಲಿವರಿ ಕೆಲಸ ಮಾಡುವವರು ಎದುರಿಸುವ ಸವಾಲುಗಳನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಈ ಹಿಂದೆ ಇವರಿಗೆ ವಿಶ್ರಾಂತಿ ಪಡೆಯಲು ಸೂಕ್ತ ಸೌಲಭ್ಯಗಳಿರಲಿಲ್ಲ. ಈಗ ತೆಲಂಗಾಣ ಸರ್ಕಾರ ಹೈದರಾಬಾದ್ ಮತ್ತು ರಾಜ್ಯದ ಇತರ ನಗರಗಳಲ್ಲಿ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದರು.
ಕಲ್ಯಾಣ ಯೋಜನೆಯ ಬಗ್ಗೆ ವಿವರಿಸಿದ ರಾಹುಲ್ ಗಾಂಧಿ, ಪ್ರತಿ ಡೆಲಿವರಿ ಮತ್ತು ಸಾರಿಗೆ ವಹಿವಾಟಿನ ಮೌಲ್ಯದ ಶೇಕಡಾ ಒಂದರಷ್ಟನ್ನು ‘ಗಿಗ್ ವರ್ಕರ್ಸ್ ವೆಲ್ಫೇರ್ ಫಂಡ್’ಗೆ (ಗಿಗ್ ಕಾರ್ಮಿಕರ ಕಲ್ಯಾಣ ನಿಧಿ) ನೀಡಲಾಗುವುದು. ಈ ಮೊತ್ತವನ್ನು ‘ಗಿಗ್ ವರ್ಕರ್ಸ್ ವೆಲ್ಫೇರ್ ಬೋರ್ಡ್’ (ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ) ಬಳಿ ಜಮೆ ಮಾಡಲಾಗುತ್ತದೆ ಮತ್ತು ನಂತರ ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ದೇಶದಲ್ಲಿ ಎರಡು ಪರಸ್ಪರ ವಿರುದ್ಧವಾದ ಸಿದ್ಧಾಂತಗಳಿವೆ ಎಂದ ರಾಹುಲ್ ಗಾಂಧಿ, ಆರ್ಎಸ್ಎಸ್-ಬಿಜೆಪಿ ಸಿದ್ಧಾಂತವು ಕಾರ್ಮಿಕರ ಶೋಷಣೆಯನ್ನು ಉತ್ತೇಜಿಸುತ್ತದೆ ಮತ್ತು ಅವರಿಂದ ಹಗಲಿರುಳು ದುಡಿಸುವುದನ್ನು ನಿರೀಕ್ಷಿಸುತ್ತದೆ; ಆದರೆ ಅವರ ಶ್ರಮದ ಫಲವು ಅದಾನಿ ಮತ್ತು ಅಂಬಾನಿಯಂತಹ ಕಾರ್ಪೊರೇಟ್ ಗುಂಪುಗಳಿಗೆ ಹೋಗುತ್ತದೆ ಎಂದರು.
ಇದಕ್ಕೆ ವ್ಯತಿರಿಕ್ತವಾಗಿ, ಗಿಗ್ ಕಾರ್ಮಿಕರು ರಾಷ್ಟ್ರದ ಅಡಿಪಾಯ ಮತ್ತು ಪಾಲುದಾರರಾಗಿದ್ದಾರೆ ಅವರು ಘನತೆ, ಭದ್ರತೆ ಮತ್ತು ರಕ್ಷಣೆಯನ್ನು ಪಡೆಯಲು ಅರ್ಹರು ಎಂದು ಕಾಂಗ್ರೆಸ್ ನಂಬುತ್ತದೆ ಎಂದು ಹೇಳಿದರು.


