ಅಸ್ಸಾಂನ ಲಖಿಂಪುರದಲ್ಲಿ ಅಧಿಕಾರಿಗಳು ಶುಕ್ರವಾರ (ನ.13) 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಿದ್ದಾರೆ. 1983ರಲ್ಲಿ ರಾಜ್ಯದಾದ್ಯಂತ ನಡೆದ ಗಲಭೆಗಳ ಸಂದರ್ಭದಲ್ಲಿ ನಿರಾಶ್ರಿತರಾದಾಗಿನಿಂದ ಈ ಕುಟುಂಬಗಳು ಬೊಗಿನದಿಯ ಸರ್ಕಾರಿ ಭೂಮಿಯೊಂದರಲ್ಲಿ ವಾಸಿಸುತ್ತಿದ್ದವು.
ತಮ್ಮ ಹಿಂದೂ ನೆರೆಹೊರೆಯವರನ್ನು ಒಕ್ಕಲೆಬ್ಬಿಸದ ಅಧಿಕಾರಿಗಳು, ‘ಕೇವಲ ಮುಸ್ಲಿಮರ ಮನೆಗಳನ್ನು’ ಮಾತ್ರ ಗುರಿಯಾಗಿಸಿಕೊಂಡಿದ್ದಾರೆ ಎಂದು ಸೂರು ಕಳೆದುಕೊಂಡ ಕುಟುಂಬಗಳು ಆರೋಪಿಸಿವೆ.
ದಾಖಲೆರಹಿತ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವ ಉದ್ದೇಶದಿಂದ 1979ರಲ್ಲಿ ಆರಂಭವಾದ ಅಸ್ಸಾಂ ಚಳವಳಿಯು ಉತ್ತುಂಗದಲ್ಲಿದ್ದಾಗ ರಾಜ್ಯದಲ್ಲಿ ಗಲಭೆಗಳು ಭುಗಿಲೆದ್ದಿದ್ದವು. 1985ರವರೆಗೆ ನಡೆದ ಈ ಚಳವಳಿಯನ್ನು ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟವು ಮುನ್ನಡೆಸಿತ್ತು ಮತ್ತು ‘ಬಾಂಗ್ಲಾದೇಶಿಯರು’ ಎಂದು ಆರೋಪಿಸಲ್ಪಟ್ಟ ಬಂಗಾಳಿ ಮಾತನಾಡುವ ಹಿಂದೂಗಳು ಹಾಗೂ ಮುಸ್ಲಿಮರ ವಿರುದ್ಧ ಇದು ಹೆಚ್ಚಾಗಿ ಕೇಂದ್ರೀಕೃತವಾಗಿತ್ತು.
‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ಮತ್ತು ‘ಆಲ್ ಅಸ್ಸಾಂ ಗಣ ಸಂಗ್ರಾಮ ಪರಿಷತ್’ನ ನಾಯಕತ್ವದ ವಿರೋಧದ ನಡುವೆಯೂ, ಕೇಂದ್ರ ಸರ್ಕಾರ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗಳನ್ನು ಘೋಷಿಸಿದಾಗ, 1983ರ ಫೆಬ್ರವರಿ ತಿಂಗಳ ಸುಮಾರಿಗೆ ಉದ್ವಿಗ್ನತೆ ತೀವ್ರಗೊಂಡಿತ್ತು. ಇದರ ಪರಿಣಾಮವಾಗಿ, ಬ್ರಹ್ಮಪುತ್ರ ಕಣಿವೆಯಾದ್ಯಂತ ಸಾವಿರಾರು ಜನರು ಸ್ಥಳಾಂತರಗೊಂಡಿದ್ದರು.
ಲಖಿಂಪುರದ ಕದಂ ಕಂದಾಯ ವೃತ್ತದ ಅಡಿಯಲ್ಲಿರುವ 622.4 ಎಕರೆ ವೃತ್ತಿಪರ ಹುಲ್ಲುಗಾವಲು ಭೂಮಿಯ ಪೈಕಿ ಸುಮಾರು 9.9 ಎಕರೆ ಪ್ರದೇಶದಲ್ಲಿ ಶುಕ್ರವಾರ ಕೆಡವಲಾದ ಮನೆಗಳು ಇದ್ದವು ಎಂದು ರೈಜೋರ್ ದಳದ ನಾಯಕ ಅಝೀಝುರ್ ರೆಹಮಾನ್ ಹೇಳಿದ್ದಾಗಿ ಸ್ಕ್ರೋಲ್ ಸುದ್ದಿ ವರದಿ ಮಾಡಿದೆ.
“1983ರಲ್ಲಿ ನಿರಾಶ್ರಿತರಾದ ನಂತರ ಅಸ್ಸಾಂ ಸರ್ಕಾರವೇ ಈ ಬಂಗಾಳಿ ಮುಸ್ಲಿಂ ನಿವಾಸಿಗಳಿಗೆ ಈ ಭೂಮಿಯಲ್ಲಿ ನೆಲೆ ಕಲ್ಪಿಸಿತ್ತು” ಎಂದು ರೆಹಮಾನ್ ಹೇಳಿದ್ದಾರೆ. “ಅವರು ಈ ಪ್ರದೇಶದಲ್ಲಿ ರಸ್ತೆಗಳು ಮತ್ತು ಶಾಲೆಗಳನ್ನು ನಿರ್ಮಿಸಿದ್ದರು ಹಾಗೂ ಅವರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನೂ ನೀಡಲಾಗಿತ್ತು. ಹೀಗಾಗಿ, ಈ ಭೂಮಿಯ ಮೇಲಿನ ತಮ್ಮ ಹಕ್ಕಿನ ಬಗ್ಗೆ ನಿವಾಸಿಗಳಿಗೆ ಭರವಸೆ ಮೂಡಿತ್ತು” ಎಂಬುವುದಾಗಿ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
595 ಎಕರೆ ವೃತ್ತಿಪರ ಹುಲ್ಲುಗಾವಲು ಭೂಮಿಯಲ್ಲಿ ವಾಸಿಸುತ್ತಿರುವ ಹಿಂದೂ ಸಮುದಾಯದ ಸದಸ್ಯರ ಮನೆಗಳನ್ನು ಕೆಡವದ ಕಾರಣ, ಈ ತೆರವು ಕಾರ್ಯಾಚರಣೆ ‘ಪಕ್ಷಪಾತದಿಂದ ಕೂಡಿವೆ’ ಎಂದು ಅಝೀಝುರ್ ರೆಹಮಾನ್ ಆರೋಪಿಸಿದ್ದಾರೆ. “ಇದು ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ. 14ನೇ ವಿಧಿಯು ಸಮಾನತೆಯ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ.
“ಶುಕ್ರವಾರ ತಮ್ಮ ಕುಟುಂಬಕ್ಕೆ ಸೇರಿದ ಎರಡು ಮನೆಗಳನ್ನು ಕೆಡವಲಾಗಿದೆ. ಆದರೆ ಪಕ್ಕದಲ್ಲೇ ಇದ್ದ ಹಿಂದೂ ಸಮುದಾಯದವರ ಮನೆಗಳನ್ನು ಮುಟ್ಟಿಲ್ಲ” ಎಂಬುವುದಾಗಿ 50 ವರ್ಷದ ಮೊಹಮ್ಮದ್ ತುಶಾನ್ ಅಲಿ ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
ಬಾರ್ಪೇಟೆಯಿಂದ ಸ್ಥಳಾಂತರಗೊಂಡ ನಂತರ, ಅಲಿ ಮತ್ತು ಆತನ ಕುಟುಂಬವು 1985ರಿಂದ ಈ ಭೂಮಿಯಲ್ಲಿ ವಾಸಿಸುತ್ತಿದ್ದರು.
ಕಳೆದ ಒಂದು ತಿಂಗಳಲ್ಲಿ, ಅಸ್ಸಾಂ ಸರ್ಕಾರವು 1,900ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಅವರ ಮನೆಗಳಿಂದ ಹೊರಹಾಕಿದೆ.
ನವೆಂಬರ್ 1ರಂದು, ಧುಬ್ರಿ ಜಿಲ್ಲೆಯ ಅಧಿಕಾರಿಗಳು 640 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಿದ್ದರು. ಅಲಮ್ಗಂಜ್ ಭಾಗ-IX ಗ್ರಾಮದಲ್ಲಿ ಸರ್ಕಾರಿ ಸ್ವಾಮ್ಯದ 650 ಬಿಘಾಸ್ ಭೂಮಿಯಲ್ಲಿ ಮನೆಗಳ ಧ್ವಂಸ ಕಾರ್ಯ ನಡೆದಿತ್ತು.
ಅಕ್ಟೋಬರ್ 18ರಂದು, ನಾಗಾಂವ್, ಹೋಜೈ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ ನಡೆದ ಎರಡು ದಿನಗಳ ಕಾರ್ಯಾಚರಣೆಯಲ್ಲಿ 1,100 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು.
ಅಸ್ಸಾಂನಲ್ಲಿ ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ, ಸುಮಾರು 19,000 ಕುಟುಂಬಗಳನ್ನು ಸರ್ಕಾರಿ ಜಮೀನಿನಿಂದ ಒಕ್ಕಲೆಬ್ಬಿಸಲಾಗಿದೆ. ‘ಸ್ಕ್ರೋಲ್’ ಸುದ್ದಿ ಸಂಸ್ಥೆ ಸಂಗ್ರಹಿಸಿದ, ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಜಿಲ್ಲಾಡಳಿತಗಳ ದತ್ತಾಂಶದ ಪ್ರಕಾರ, ಈ ಕುಟುಂಬಗಳಲ್ಲಿ ಬಹುಪಾಲು ಮುಸ್ಲಿಮರಾಗಿದ್ದಾರೆ.
Courtesy : scroll.in


