ಇರಾನ್ ವಿರುದ್ಧದ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದು, ಕಳೆದ ಐದು ತಿಂಗಳಲ್ಲಿ ಒಬ್ಬ ಅಮೆರಿಕನ್ ಸೈನಿಕನೂ ಪ್ರಾಣ ಕಳೆದುಕೊಂಡಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಸ್ವತಃ ಅಮೆರಿಕದ ರಕ್ಷಣಾ ಇಲಾಖೆ (Pentagon) ದಾಖಲೆಗಳೇ ಅಧ್ಯಕ್ಷರ ಈ ಹೇಳಿಕೆಯನ್ನು ನೇರವಾಗಿ ಸುಳ್ಳು ಎಂದು ಸಾಬೀತುಪಡಿಸಿದ್ದು, ಮಧ್ಯಪ್ರಾಚ್ಯದ ಈ ಸಂಘರ್ಷದಲ್ಲಿ 23 ಅಮೆರಿಕನ್ ಸೇನಾ ಸಿಬ್ಬಂದಿ ಮೃತಪಟ್ಟಿರುವುದನ್ನು ದೃಢಪಡಿಸಿವೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ಮತ್ತು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿವೆ.
ಗುರುವಾರ ಪ್ರಸಾರವಾದ ಬಲಪಂಥೀಯ ರೇಡಿಯೋ ನಿರೂಪಕ ಹ್ಯೂ ಹೆವಿಟ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅಧ್ಯಕ್ಷ ಟ್ರಂಪ್, “ಕಳೆದ ಐದು ತಿಂಗಳಲ್ಲಿ ಯಾರೂ ಮೃತಪಟ್ಟಿಲ್ಲ. ನಾವು ಐದು ತಿಂಗಳಲ್ಲಿ ಒಬ್ಬ ಸೈನಿಕನನ್ನೂ ಕಳೆದುಕೊಂಡಿಲ್ಲ ಮತ್ತು ಗಲ್ಫ್ ಪ್ರದೇಶವು ನಮ್ಮ ನಿಯಂತ್ರಣದಲ್ಲಿದೆ” ಎಂದು ಹೇಳಿಕೊಂಡಿದ್ದಾರೆ. ಆದರೆ, ಸರ್ಕಾರದ ಅಧಿಕೃತ ಪೆಂಟಗನ್ ದಾಖಲೆಗಳೇ ಅಧ್ಯಕ್ಷರ ಈ ಹೇಳಿಕೆಗೆ ತದ್ವಿರುದ್ಧವಾದ ಕಠಿಣ ವಾಸ್ತವವನ್ನು ತೆರೆದಿಟ್ಟಿವೆ. ಪೆಂಟಗನ್ ಅಂಕಿಅಂಶಗಳ ಪ್ರಕಾರ, ಈ ಯುದ್ಧದಲ್ಲಿ ಮಧ್ಯಪ್ರಾಚ್ಯದಲ್ಲಿ ಒಟ್ಟು 23 ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದು, ಈ ಪೈಕಿ 11 ಮಂದಿ ಶತ್ರುಗಳ ಗುಂಡಿನ ದಾಳಿಗೆ ಬಲಿಯಾಗಿದ್ದರೆ, ಉಳಿದ 12 ಮಂದಿ ಯುದ್ಧೇತರ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಅತ್ಯಂತ ಗಮನಾರ್ಹ ಸಂಗತಿಯೆಂದರೆ, ಟ್ರಂಪ್ ಉಲ್ಲೇಖಿಸಿರುವ ಇದೇ ಐದು ತಿಂಗಳ ಅವಧಿಯೊಳಗೆ ಅಂದರೆ ಜುಲೈ ತಿಂಗಳಲ್ಲೇ ಹಲವು ಸೈನಿಕರ ಸಾವು ಸಂಭವಿಸಿದ್ದು, ಸ್ವತಃ ಟ್ರಂಪ್ ಅವರೇ ಹುತಾತ್ಮ ಸೈನಿಕರ ಶವಪೆಟ್ಟಿಗೆಗಳಿಗೆ ಸಲ್ಯೂಟ್ ಮಾಡಿ ಗೌರವ ಸಲ್ಲಿಸಿದ್ದಾಗಿ ವರದಿಗಳಾಗಿವೆ . ಜೋರ್ಡಾನ್‌ನ ವಾಯುನೆಲೆಯ ಮೇಲೆ ನಡೆದ ಶತ್ರುಗಳ ದಾಳಿಯಲ್ಲಿ ಮೂವರು ಅಮೆರಿಕನ್ ಸೈನಿಕರು ಮೃತಪಟ್ಟಿದ್ದರೆ, ಇರಾಕ್‌ನ ವಾಯುನೆಲೆಯಲ್ಲಿ ನಿಯಂತ್ರಿತ ಡ್ರೋನ್ ಸ್ಫೋಟದ ವೇಳೆ ಮತ್ತೊಬ್ಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಹಾಗೂ ಅರಬ್ಬಿ ಸಮುದ್ರದಲ್ಲಿ ತುರ್ತು ಭೂಸ್ಪರ್ಶದ ವೇಳೆ ನೌಕಾಪಡೆಯ ಕ್ಯಾಪ್ಟನ್ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಅಕ್ಟೋಬರ್ 29ರ ವರದಿಯಂತೆ ಯುದ್ಧ ಆರಂಭವಾದಾಗಿನಿಂದ ಶತ್ರುಗಳ ದಾಳಿಯಲ್ಲಿ ಬರೋಬ್ಬರಿ 865 ಅಮೆರಿಕನ್ ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಗಳಾಗಿವೆ. ಇಷ್ಟೆಲ್ಲಾ ಅಧಿಕೃತ ದಾಖಲೆಗಳು ಮತ್ತು ಸಾವು-ನೋವುಗಳು ಕಣ್ಮುಂದೆಯೇ ಇದ್ದರೂ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕರ ದಿಕ್ಕು ತಪ್ಪಿಸುವ ಹಾಗೂ ಯುದ್ಧದ ಕಹಿ ನೈಜತೆಯನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಗಂಭೀರ ಟೀಕೆ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ, ದೂರದರ್ಶನ ನಿರೂಪಕ ಸ್ಟೀಫನ್ ಎ. ಸ್ಮಿತ್ (Stephen A. Smith) ಅವರಿಗೆ ನೀಡಿದ ಮತ್ತೊಂದು ಸಂದರ್ಶನದಲ್ಲಿ ಟ್ರಂಪ್ ಆಡಿರುವ ಮಾತುಗಳು ಅಮೆರಿಕದ ಸಾಮ್ರಾಜ್ಯಶಾಹಿ ಮತ್ತು ಕಾರ್ಪೊರೇಟ್ ಹಿತಾಸಕ್ತಿಯನ್ನು ಮತ್ತೊಮ್ಮೆ ಬಯಲು ಮಾಡಿವೆ. ತಾವು ಮನಸ್ಸು ಮಾಡಿದರೆ ಯುದ್ಧವನ್ನು ತಕ್ಷಣವೇ ನಿಲ್ಲಿಸಬಹುದು, ಆದರೆ ಮಧ್ಯಪ್ರಾಚ್ಯದ “ಅದ್ಭುತ ಹೂಡಿಕೆದಾರ” ರಾಷ್ಟ್ರಗಳ ಕೋರಿಕೆಯ ಮೇರೆಗೆ ಯುದ್ಧವನ್ನು ದೀರ್ಘಾವಧಿಯವರೆಗೆ ಎಳೆಯುತ್ತಿರುವುದಾಗಿ ಟ್ರಂಪ್ ಒಪ್ಪಿಕೊಂಡಿದ್ದಾರೆ. “ನಾನು ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬಲ್ಲೆ, ಆದರೆ ನಾನು ರಕ್ಷಿಸಲು ಬಯಸುವ ರಾಷ್ಟ್ರಗಳ ಕೋರಿಕೆಯ ಮೇರೆಗೆ ಸ್ವಲ್ಪ ದೀರ್ಘವಾದ ಹಾದಿಯನ್ನು ಹಿಡಿದಿದ್ದೇವೆ. ಅವರೆಲ್ಲರೂ ಈ ಕಾಯುವಿಕೆಯ ಅವಧಿಯನ್ನೇ ಬಯಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಸೈನಿಕರ ಜೀವದ ಬೆಲೆ ಮತ್ತು ರಕ್ತವನ್ನು ಹೂಡಿಕೆದಾರ ರಾಷ್ಟ್ರಗಳ ಹಾಗೂ ಕಾರ್ಪೊರೇಟ್ ಶಕ್ತಿಗಳ ಹಿತಾಸಕ್ತಿಗಾಗಿ ಬಲಿಗೈಯಲಾಗುತ್ತಿದೆ ಎಂಬ ಅಧ್ಯಕ್ಷರ ಈ ಹೇಳಿಕೆಯು, ಯುದ್ಧದ ಮಾನವೀಯ ನಷ್ಟವನ್ನು ಸಂಪೂರ್ಣವಾಗಿ ಕಡೆಗಣಿಸುವ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಅಧಿಕೃತ ದಾಖಲೆಗಳೇ ಸಾವು-ನೋವುಗಳನ್ನು ಸಾಬೀತುಪಡಿಸುತ್ತಿದ್ದರೂ ರಾಜಕೀಯ ಲಾಭಕ್ಕಾಗಿ ಸತ್ಯವನ್ನು ಮರೆಮಾಚುವ ನಾಯಕರ ಇಂತಹ ನಡೆಗಳು ಸರ್ಕಾರದ ಉತ್ತರದಾಯಿತ್ವವನ್ನು ಗಂಭೀರವಾಗಿ ಪ್ರಶ್ನಿಸುವಂತೆ ಮಾಡಿದೆ.


