ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ರಿಚ್ಛಾರಾ ಗ್ರಾಮದ ದಲಿತ ಮಹಿಳೆಯರು, ತಮ್ಮ ಜಾತಿಯ ಕಾರಣಕ್ಕೆ ಹೊಸದಾಗಿ ನಿರ್ಮಿಸಲಾದ ಶಿವ ದೇವಾಲಯ ಪ್ರವೇಶಿಸಲು ಮತ್ತು ಶಿವಲಿಂಗಕ್ಕೆ ನೀರು ಅರ್ಪಿಸಲು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗುರುವಾರ ಕುಟುಂಬದ ಸದಸ್ಯರು ನೀರು ತುಂಬಿದ್ದ ತಂಬಿಗೆಗಳನ್ನು ಹಿಡಿದು ಛತ್ತರ್ಪುರದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಗೆ ತೆರಳಿ, ಆರೋಪಿಗಳನ್ನು ಬಂಧಿಸುವಂತೆ ಹಾಗೂ ತಮ್ಮ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
‘ದೈನಿಕ್ ಭಾಸ್ಕರ್’ ವರದಿಯ ಪ್ರಕಾರ, ಭಗವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮೂರರಿಂದ ನಾಲ್ವರು ವ್ಯಕ್ತಿಗಳು ತಮ್ಮ ಕುಟುಂಬದ ಸದಸ್ಯರು ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸುವುದನ್ನು ತಡೆಯುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ತಾವು ದಲಿತರು ಎಂಬ ಕಾರಣಕ್ಕೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸಾರ್ವಜನಿಕ ಕೊಳಾಯಿಯಿಂದ ನೀರು ಪಡೆಯುವುದಕ್ಕೂ ಅಡ್ಡಿಪಡಿಸಲಾಗುತ್ತಿದೆ ಮತ್ತು ಬಾವಿಯ ನೀರು ಬಳಸುವ ವಿಚಾರದಲ್ಲೂ ತಾರತಮ್ಯ ಎದುರಿಸುತ್ತಿದ್ದೇವೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಕುಟುಂಬದ ಮೇಲೆ ಹಲ್ಲೆ, ಜಾತಿನಿಂದನೆ ಆರೋಪ
50 ವರ್ಷದ ಲೋಟಾ ಅಹಿರ್ವಾರ್ ಅವರು, ನವೆಂಬರ್ 18ರಂದು ಗ್ರಾಮದ ಹಲವು ವ್ಯಕ್ತಿಗಳು ತಮ್ಮ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಸೊಸೆಯಂದಿರನ್ನು ಗುರಿಯಾಗಿಸಿಕೊಂಡು ಕೆಲವು ಗ್ರಾಮಸ್ಥರು ಅಶ್ಲೀಲ ಹಾಡುಗಳನ್ನು ಹಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳು ಅಥವಾ ಕೌಟುಂಬಿಕ ಸಮಾರಂಭಗಳಲ್ಲಿ ಮಹಿಳೆಯರು ಕುದುರೆ ಸವಾರಿ ಮಾಡುವುದಕ್ಕೂ ಮತ್ತು ಕುಟುಂಬದ ಸದಸ್ಯರು ಚಪ್ಪಲಿ ಧರಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಬಾವಿಯ ನೀರು ಬಳಸುವ ವಿಚಾರದಲ್ಲಿಯೂ ತಾರತಮ್ಯ ಮತ್ತು ಅವಮಾನ ಎದುರಿಸುತ್ತಿದ್ದೇವೆ ಎಂದು ಕುಟುಂಬ ದೂರಿದೆ. ಆರೋಪಿಗಳಲ್ಲಿ ಒಬ್ಬರು ಬಾವಿಯನ್ನು ಉದ್ದೇಶಪೂರ್ವಕವಾಗಿ ಕಲುಷಿತಗೊಳಿಸಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನವೆಂಬರ್ 18ರಂದು ಭಗವಾನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಗಿ ಕುಟುಂಬ ತಿಳಿಸಿದೆ. ದೂರಿನ ಆಧಾರದ ಮೇಲೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ನಾಲ್ವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ದೂರು ನೀಡಿದ ಬಳಿಕವೂ ಬೆದರಿಕೆ: ಕುಟುಂಬದ ಆರೋಪ
ಪೊಲೀಸರಿಗೆ ದೂರು ನೀಡಿದ ಬಳಿಕವೂ ಆರೋಪಿಗಳಿಂದ ಬೆದರಿಕೆಗಳು ಮುಂದುವರಿದಿವೆ ಎಂದು ಕುಟುಂಬ ಆರೋಪಿಸಿದೆ. ಟ್ರ್ಯಾಕ್ಟರ್ ಹರಿಸಿ ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ತಮ್ಮ ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ತಿಕ ಮಾಸದ ಸ್ನಾನದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಮಹಿಳೆಯರು, ತಂಬಿಗೆಯಲ್ಲಿ ನೀರು ಹಿಡಿದು ಎಸ್ಪಿ ಕಚೇರಿಗೆ ಆಗಮಿಸಿದ್ದರು. ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಹಕ್ಕು ನೀಡಬೇಕು ಮತ್ತು ಆರೋಪಿಗಳಿಂದ ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


