2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ಹಿಂದಿನ ‘ದೊಡ್ಡ ಸಂಚು’ ಆರೋಪಕ್ಕೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತರಾದ ಶರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 25ರ ಬುಧವಾರ ನಡೆಸುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್ನ ಕಲಾಪಗಳ ಪಟ್ಟಿಯ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನು ಒಳಗೊಂಡ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಇಬ್ಬರೂ ಜಾಮೀನು ಕೋರಿದ್ದಾರೆ. ವಿಚಾರಣಾ ಪ್ರಕ್ರಿಯೆಯಲ್ಲಿ ರಕ್ಷಿತ ಸಾಕ್ಷಿಗಳ ವಿಚಾರಣೆಯನ್ನು ಪ್ರಾಸಿಕ್ಯೂಷನ್ ಇನ್ನೂ ನಡೆಸಿಲ್ಲ ಮತ್ತು ಸುಪ್ರೀಂ ಕೋರ್ಟ್ ವಿಧಿಸಿರುವ ಒಂದು ವರ್ಷದ ನಿರ್ಬಂಧದ ಅವಧಿ ಮುಕ್ತಾಯಗೊಳ್ಳುವ ಹಂತದಲ್ಲಿದೆ ಎಂದು ಅವರು ವಾದಿಸಿದ್ದಾರೆ.
ಇಮಾಮ್ ಸಲ್ಲಿಸಿರುವ ಅರ್ಜಿಯಲ್ಲಿ, 2020ರ ಸೆಪ್ಟೆಂಬರ್ 25ರಂದು ಆರೋಪಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ 18 ಆರೋಪಿಗಳು ವಿಚಾರಣೆ ಎದುರಿಸುತ್ತಿದ್ದಾರೆ. ಪ್ರಾಸಿಕ್ಯೂಷನ್ ಒಟ್ಟು 900ಕ್ಕೂ ಹೆಚ್ಚು ಸಾಕ್ಷಿಗಳನ್ನು ಉಲ್ಲೇಖಿಸಿದ್ದು, ಅವರಲ್ಲಿ 47 ಮಂದಿ ರಕ್ಷಿತ ಸಾಕ್ಷಿಗಳಾಗಿದ್ದಾರೆ ಎಂದು ತಿಳಿಸಲಾಗಿದೆ.
ಖಾಲಿದ್ ಕೂಡ ತಮ್ಮ ಅರ್ಜಿಯಲ್ಲಿ ರಕ್ಷಿತ ಸಾಕ್ಷಿಗಳ ವಿಚಾರಣೆ ನಡೆಸದಿರುವುದನ್ನು ಪ್ರಸ್ತಾಪಿಸಿದ್ದಾರೆ. ಒಂದು ವರ್ಷದ ನಿರ್ಬಂಧದ ಅವಧಿ ಮುಕ್ತಾಯಗೊಂಡ ನಂತರವೂ ತಮ್ಮನ್ನು ಜೈಲಿನಲ್ಲಿ ಮುಂದುವರಿಸುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಲಿದೆ ಎಂದು ಅವರು ವಾದಿಸಿದ್ದಾರೆ.
ವಿಚಾರಣಾಧೀನ ಕೈದಿಯಾಗಿ ಆರು ವರ್ಷ ಮತ್ತು ಒಂಬತ್ತು ತಿಂಗಳು ಕಳೆದಿದ್ದರೂ, ಪ್ರಾಸಿಕ್ಯೂಷನ್ ಈವರೆಗೆ ಒಬ್ಬನೇ ಒಬ್ಬ ಸಾಕ್ಷಿಯ ವಿಚಾರಣೆಯನ್ನೂ ಪೂರ್ಣಗೊಳಿಸಿಲ್ಲ ಎಂದು ಇಮಾಮ್ ಅರ್ಜಿಯಲ್ಲಿ ತಿಳಿಸಿದ್ದಾರೆ.
2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗಳ ಹಿಂದಿನ ‘ದೊಡ್ಡ ಸಂಚು’ ಆರೋಪಕ್ಕೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಖಾಲಿದ್ ಮತ್ತು ಇಮಾಮ್ಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 30ರಂದು ನಿರಾಕರಿಸಿತ್ತು.
‘ನ್ಯಾಯಾಂಗ ಶಿಸ್ತು’ ಪಾಲಿಸುವ ಬದ್ಧತೆ ಇರುವುದರಿಂದ, ಸುಪ್ರೀಂ ಕೋರ್ಟ್ ಜನವರಿ 5ರಂದು ನೀಡಿದ್ದ ಆದೇಶವನ್ನು ತಾನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ರಕ್ಷಿತ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ನಂತರ ಅಥವಾ ಒಂದು ವರ್ಷದ ಅವಧಿ ಮುಗಿದ ನಂತರ, ಇವೆರಡರಲ್ಲಿ ಯಾವುದು ಮೊದಲೋ ಆ ಸಂದರ್ಭದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಸೂಚಿಸಿತ್ತು.
ಬಂಧನದ ನಂತರ ಮೂರನೇ ಬಾರಿಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಜುಲೈ 4ರಂದು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಖಾಲಿದ್ ಮತ್ತು ಇಮಾಮ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಜನವರಿ 5ರಂದು ನೀಡಿದ್ದ ಆದೇಶವನ್ನು ಪಾಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಹೀಗಾಗಿ, ಜಾಮೀನು ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸುವುದಾಗಲಿ ಅಥವಾ ಯಾವುದೇ ಪರಿಹಾರ ನೀಡುವುದಾಗಲಿ ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯ ಹೇಳಿತ್ತು.
ಜನವರಿಯಲ್ಲಿ ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ, ಇತರ ಸಹ ಆರೋಪಿಗಳಿಗಿಂತ ಖಾಲಿದ್ ಮತ್ತು ಇಮಾಮ್ ಪಾತ್ರಗಳು ಭಿನ್ನವಾಗಿವೆ. ಅವರು ಆರೋಪಿತ ಸಂಚಿನ ‘ಮಾಸ್ರ್ ಮೈಂಡ್’ಗಳು ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ಹೈಕೋರ್ಟ್ ಉಲ್ಲೇಖಿಸಿತ್ತು.
2020ರ ಫೆಬ್ರವರಿ ಗಲಭೆಗಳ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಖಾಲಿದ್ ಮತ್ತು ಇಮಾಮ್ ಕೂಡ ಸೇರಿದ್ದಾರೆ ಎಂಬ ಆರೋಪದಡಿ ಅವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಗಲಭೆಗಳಲ್ಲಿ 53 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
2019ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರರ ನೋಂದಣಿ (ಎನ್ಸಿಆರ್) ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಹಿಂಸಾಚಾರ ಭುಗಿಲೆದ್ದಿತ್ತು.
ವಿದ್ಯಾರ್ಥಿ ಕಾರ್ಯಕರ್ತ ಖಾಲಿದ್ ಸೈಫಿ ಮತ್ತು ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಇತರರ ವಿರುದ್ಧವೂ ಈ ದೊಡ್ಡ ಸಂಚಿನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ಘಟಕ ಈ ಪ್ರಕರಣದ ತನಿಖೆ ನಡೆಸುತ್ತಿದೆ.
2020ರ ಆಗಸ್ಟ್ 25ರಂದು ಇಮಾಮ್ ಅವರನ್ನು ಬಂಧಿಸಲಾಗಿತ್ತು. ಅದೇ ವರ್ಷದ ಸೆಪ್ಟೆಂಬರ್ 13ರಂದು ಖಾಲಿದ್ ಅವರನ್ನು ಬಂಧಿಸಲಾಗಿತ್ತು.
2025ರ ಸೆಪ್ಟೆಂಬರ್ 2ರಂದು ಹೈಕೋರ್ಟ್ನ ವಿಭಾಗೀಯ ಪೀಠವು ಖಾಲಿದ್ ಮತ್ತು ಇಮಾಮ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು.
ಜನವರಿ 5ರಂದು ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿದ್ದರೂ, ಪ್ರಕರಣದ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಆಗ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನು ಒಳಗೊಂಡ ಪೀಠವು, ಖಾಲಿದ್ ಮತ್ತು ಇಮಾಮ್ ವಿರುದ್ಧ ಯುಎಪಿಎ ಅಡಿಯಲ್ಲಿ ಮೇಲ್ನೋಟಕ್ಕೆ ಪ್ರಕರಣವಿದೆ ಎಂದು ಅಭಿಪ್ರಾಯಪಟ್ಟಿತ್ತು.
ವಿಚಾರಣೆಯಲ್ಲಿನ ವಿಳಂಬವನ್ನು ಮುಂದಿಟ್ಟುಕೊಂಡು ಜಾಮೀನು ಕೋರುವ ಅವರ ವಾದವನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್, 2020ರಿಂದ ಜೈಲಿನಲ್ಲಿರುವ ಖಾಲಿದ್ ಮತ್ತು ಇಮಾಮ್, ರಕ್ಷಿತ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ನಂತರ ಅಥವಾ ಆದೇಶದ ದಿನಾಂಕದಿಂದ ಒಂದು ವರ್ಷ ಕಳೆದ ಬಳಿಕ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು.
ಮೇ 22ರಂದು ಸುಪ್ರೀಂ ಕೋರ್ಟ್ ಇದೇ ಪ್ರಕರಣದ ಸಹ ಆರೋಪಿಗಳಾದ ಅಬ್ದುಲ್ ಖಾಲಿದ್ ಸೈಫಿ ಮತ್ತು ತಸ್ಲೀಂ ಅಹ್ಮದ್ ಅವರಿಗೆ ಆರು ತಿಂಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಯುಎಪಿಎ ಕಾಯ್ದೆಯಡಿ ಜಾಮೀನು ಪಡೆಯಲು ಇರುವ ಕಠಿಣ ಷರತ್ತುಗಳ ಹಿನ್ನೆಲೆಯಲ್ಲಿ, ವಿಚಾರಣಾಧೀನ ಕೈದಿಗಳನ್ನು ದೀರ್ಘಕಾಲ ಬಂಧನದಲ್ಲಿಡುವ ವಿಚಾರವನ್ನು ಹೆಚ್ಚಿನ ನ್ಯಾಯಮೂರ್ತಿಗಳನ್ನು ಒಳಗೊಂಡ ದೊಡ್ಡ ಪೀಠದ ಪರಿಶೀಲನೆಗೆ ಒಪ್ಪಿಸಿತ್ತು.


