ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿರುವುದರಿಂದ ತಾಯ್ನಾಡಿಗೆ ಮರಳಲು ಡಿಸೆಂಬರ್ 16ರ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಗಳಿಸಿದ ದಿನದ ಸ್ಮರಣಾರ್ಥ ಆಚರಿಸುವ ವಿಜಯ ದಿನದಂದೇ ಅವರು ತವರಿಗೆ ಮರಳುವ ಯೋಜನೆ ರೂಪಿಸಿದ್ದಾರೆ.
ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಬೃಹತ್ ಜನಾಂದೋಲನದ ಪರಿಣಾಮವಾಗಿ 15 ವರ್ಷಗಳ ಆಡಳಿತ ಅಂತ್ಯಗೊಳಿಸಿ, 2024ರ ಆಗಸ್ಟ್ 5ರಂದು ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತಕ್ಕೆ ತೆರಳಿದ್ದರು.
ಮಂಗಳವಾರ ತಮ್ಮ ವಾಪಸಾತಿಯ ದಿನಾಂಕವನ್ನು ಪ್ರಕಟಿಸಿರುವ ಹೇಳಿಕೆಯಲ್ಲಿ, ಹಾಲಿ ಪ್ರಧಾನಿ ತಾರಿಖ್ ರೆಹಮಾನ್ ಅವರು ರಾಷ್ಟ್ರೀಯ ವಿಮಾನಯಾನದ ಮೂಲಕ ತಮ್ಮನ್ನು ತವರಿಗೆ ಕರೆತರಲು ವ್ಯವಸ್ಥೆ ಮಾಡಬೇಕೆಂದು ಹಸೀನಾ ಮನವಿ ಮಾಡಿದ್ದಾರೆ.
“2024ರ ಆಗಸ್ಟ್ 5ರಂದು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶದ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿತ್ತು. ಇದೀಗ ದೆಹಲಿಯಿಂದ ಢಾಕಾಗೆ ಮರಳಲು ವಿಮಾನ ಸಾರಿಗೆ ವ್ಯವಸ್ಥೆ ಮಾಡುವಂತೆ ಅವರು ಸರ್ಕಾರವನ್ನು ಕೋರಿದ್ದಾರೆ” ಎಂದು ಅವರ ವಕ್ತಾರ ಸೈಯದ್ ಮೊಝಮ್ಮೆಲ್ ಅಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


