ಭಾರತದ ಪವಿತ್ರ ಭೂಮಿಯನ್ನು ಚೀನಿಯರಿಗೆ ಬಿಟ್ಟುಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಚೀನಾದ ಎದುರು ನಿಲ್ಲಲಾಗದ ಹೇಡಿ. ಏಕೆ ಭಾರತದ ಭೂಪ್ರದೇಶವನ್ನ ಬಿಟ್ಟುಕೊಡಲಾಯಿತು ಎಂದು ಮೋದಿ ಮತ್ತು ರಕ್ಷಣಾ ಸಚಿವರು ಉತ್ತರಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಸೈನ್ಯವು ಈಗ ಫಿಂಗರ್ 3 ನಲ್ಲಿ ಬೀಡುಬಿಡಲಿದೆ ಎಂದು ನಾವು ಕಂಡುಕೊಂಡಿದ್ದೇವೆ. ಫಿಂಗರ್ 4 ನಮ್ಮ ಪ್ರದೇಶವಾಗಿದೆ. ನಾವು ಅಲ್ಲಿರಬೇಕಿತ್ತು. ಈಗ ನಾವು ಫಿಂಗರ್ 4 ರಿಂದ ಫಿಂಗರ್ 3 ಗೆ ಸ್ಥಳಾಂತರಗೊಂಡಿದ್ದು ಏಕೆ? ಏಕೆ ನಮ್ಮ ಪ್ರದೇಶವನ್ನು ಬಿಟ್ಟುಕೊಡಲಾಯಿತು? ಇದರಿಂದ ಭಾರತವು ಏನು ಪಡೆಯುತ್ತದೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೈನ್ಯವು ತನ್ನ ಕಠಿಣ ಶ್ರಮದಿಂದ ಅದನ್ನು ಸಂಪಾದಿಸಿತ್ತು. ಆದರೆ ಇಂದು ಅದು ಹಿಂದಕ್ಕೆ ಸರಿಯಬೇಕಾಗಿದೆ. ಆದರೆ ಚೀನಿಯರು ಮಾತ್ರ ಒಂದಿಂಚೂ ಹಿಂದೆ ಸರಿಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ದೇಶದ ಭೂಪ್ರದೇಶವನ್ನು ರಕ್ಷಿಸುವುದು ಪ್ರಧಾನಮಂತ್ರಿಯ ಜವಾಬ್ದಾರಿಯಾಗಿದೆ. ಅದನ್ನು ಹೇಗೆ ಮಾಡುತ್ತಾರೆ ಎಂಬುದು ಅವರ ಸಮಸ್ಯೆಯಾಗಿದೆ. ಪ್ರಧಾನಿ ಚೀನಿಯರ ಎದುರು ನಿಲ್ಲಲು ಸಾಧ್ಯವಿಲ್ಲದ ಹೇಡಿ. ಅವರು ನಮ್ಮ ಸೈನ್ಯವನ್ನು ದೂಷಿಸುತ್ತಿದ್ದಾರೆ. ನಮ್ಮ ಸೈನ್ಯದ ತ್ಯಾಗಕ್ಕೆ ದ್ರೋಹ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
Live- राष्ट्रीय सुरक्षा में मोदी सरकार की विफलता के बारे में मेरी प्रेस वार्ता। https://t.co/pLUQdKfzj0
— Rahul Gandhi (@RahulGandhi) February 12, 2021
ನಿನ್ನೆ ರಕ್ಷಣಾ ಸಚಿವರು ಪೂರ್ವ ಲಡಾಕ್ ಪರಿಸ್ಥಿತಿ ಕುರಿತು ಹೇಳಿಕೆ ನೀಡಿದ್ದಾರೆ. ಈಗ ಮೋದಿ ನಮ್ಮ ಪ್ರದೇಶವನ್ನು ಚೀನಿಯರಿಗೆ ಏಕೆ ಬಿಟ್ಟುಕೊಟ್ಟಿದ್ದಾರೆ ಎಂಬುದಕ್ಕೆ ಉತ್ತರ ಕೊಡುತ್ತಾರೆಯೇ? 2020ರ ಏಪ್ರಿಲ್‌ನಿಂದ ಯಥಾಸ್ಥಿತಿಯನ್ನು ಮುಂದುವರೆಸಬೇಕೆಂದು ಅಂದುಕೊಳ್ಳಲಾಗಿತ್ತು. ಆದರೆ ಚೀನಿಯರು ಪ್ಯಾಂಗಂಗ್ ಸರೋವರದ ಬಳಿ ಬಂದು ಕುಳಿತಿದ್ದಾರೆ. ಕೈಲಾಸ್ ರೇಂಜ್ ಅನ್ನು ವಾಪಸ್ ಏಕೆ ಕೊಡಲಾಗಿದೆ? ಇದು 100% ಹೇಡಿತನವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಇದರ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಮಾಡಲು ನಮಗೆ ಅವಕಾಶ ನೀಡುವುದಿಲ್ಲ ಎಂಬುದು ನಮಗೆ ಖಾತ್ರಿ ಇದೆ. ಚೀನಾದ ಪಡೆಗಳು ನಮ್ಮ ದೇಶದೊಳಕ್ಕೆ ನುಸುಳಿವೆ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಆದರೂ ಮೋದಿ ಏನು ಮಾಡುತ್ತಿಲ್ಲ ಎಂದರೆ ಏನರ್ಥ? ಇದಕ್ಕಾಗಿಯೇ ಅವರು ಆಡಳಿತ ನಡೆಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ನನಗೆ ಭಾರತೀಯ ಸೈನ್ಯ, ವಾಯುಸೇನೆ, ನೌಕದಳ, ಭಾರತೀಯ ಜನರ ಮೇಲೆ ನಂಬಿಕೆ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನಡವಳಿಕೆಯ ಮೇಲೆ ನಂಬಿಕೆ ಇಲ್ಲ ಎಂದು ರಾಹುಲ್ ತಿಳಿಸಿದ್ದಾರೆ.
ಇದನ್ನೂ ಓದಿ: ನಾವಿಬ್ಬರು, ನಮಗಿಬ್ಬರು ಎಂದು 4 ಜನರು ದೇಶ ಆಳುತ್ತಿದ್ದಾರೆ: ರಾಹುಲ್ ಗಾಂಧಿ



Hagaadare Neharu